ಮೂಡುಬಿದಿರೆ : ಮೂಡುಬಿದಿರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಕೆ. ಅಬ್ದುಲ್ ಬಶೀರ್ (ಅಲಿಯಾಸ್ ಅರ್ಗ ಬಶೀರ್) ಎಂಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 50 ವರ್ಷದ ಈತನ ವಿರುದ್ಧ ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಒಟ್ಟು ಸುಮಾರು 17 ಪ್ರಕರಣಗಳು ದಾಖಲಾಗಿವೆ. ನ್ಯಾಯಾಲಯದಿಂದ ಬಂಧನ ಹಾಗೂ ಉದ್ಗೋಷಣಾ ವಾರಂಟ್ ಹೊರಡಿಸಲಾಗಿದ್ದ ಕಾರಣ, ಆತ ತನ್ನ ಮೂಲ ಊರಾದ ತೆಂಕಮಿಜಾರು ಬಿಟ್ಟು ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಏಪ್ರಿಲ್ 18ರಂದು ಸಂಜೆ ಪೊಲೀಸರ ದಾಳಿ ವೇಳೆ ಆತ ಬಂಧನಕ್ಕೊಳಗಾದನು. ಆರೋಪಿಯ ವಿರುದ್ಧ ಗೋಹತ್ಯೆ ನಿಷೇಧ, ಜಾನುವಾರು ಸಂರಕ್ಷಣೆ, ಕೊಲೆ ಯತ್ನ, ದರೋಡೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆಗಳಡಿ ಹಲವು ಗಂಭೀರ ಪ್ರಕರಣಗಳಿವೆ. ಮೂಡುಬಿದಿರೆ, ಬಜ್ಪೆ, ಮಂಗಳೂರು ಗ್ರಾಮಾಂತರ, ಧರ್ಮಸ್ಥಳ, ಬೆಳ್ತಂಗಡಿ ಮತ್ತು ಕಳಸ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.