ಡಾ.ನಾ. ಮೊಗಸಾಲೆಯವರು ಮ್ಯಾಗೆಸ್ಸೆ ಪ್ರಶಸ್ತಿಗೆ ಅರ್ಹರು
-ಡಿ. ಎ. ಶಂಕರ್


ಕಾರ್ಕಳ : ಕನ್ನಡ ಸಂಘ ಕಾಂತಾವರ ಅದರ ಸ್ಥಾಪಕಾಧ್ಯಕ್ಷರಾಗಿ ಅಭೂತಪೂರ್ವ ಸೇವೆಗೈದ ಡಾ.ನಾ. ಮೊಗಸಾಲೆ ಅವರಿಗೆ ಅಂತಾರಾಷ್ಟ್ರೀಯ ಮ್ಯಗೆಸ್ಸೆ ಪ್ರಶಸ್ತಿ ದೊರಕಬೇಕು ಎಂದು ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಪ್ರೊ। ಡಾ। ಡಿ. ಎ. ಶಂಕರ್ ಮೈಸೂರು ಅವರು ಹೇಳಿದರು.
ಹಿರಿಯ ಲೇಖಕ,ಕವಿಯೂ ಆಗಿರುವ ಪ್ರೊ। ಡಿ. ಎ. ಶಂಕರ್ ಅವರು ಮಂಗಳೂರು,ಪಾಂಡಿಚೇರಿ ವಿ. ವಿ. ಗಳಲ್ಲಿ ಮೊದಲ ಎಮರಿಟಸ್ ಪ್ರೊಫೆಸರ್ ಆಗಿ ಸೇವೆಗೈದವರು.
ಶಿವಮೊಗ್ಗ ಜಿಲ್ಲೆಯ ಹೆಗ್ಗೋಡು ಊರಿನ ಹೆಸರು, ಪರಿಚಯ ಕೂಡ ಯಾರಿಗೂ ಇದ್ದಿರಲಿಲ್ಲ. ಡಾ।ಕೆ. ವಿ. ಸುಬ್ಬಣ್ಣರಿಂದಾಗಿಯೇ ಅದು ಇಡೀ ಪ್ರಪಂಚಕ್ಕೆ ಪರಿಚಯಿಸಲ್ಪಟ್ಟಿತು. ಮ್ಯಗೆಸ್ಸೆ ಪ್ರಶಸ್ತಿಯ ಪ್ರಯೋಜನವನ್ನು ಕೆ. ವಿ. ಸುಬ್ಬಣ್ಣ ಅವರು ಹೆಗ್ಗೋಡಿನ ಅಭಿವೃದ್ಧಿಗೆ ಬಳಸಿದರು. ಅವರ ನೀನಾಸಂ ನಾಟಕ ರಂಗವು ಹೆಗ್ಗೋಡನ್ನು ನಾಡಿಗೆ ಹೇಗೆ ಪರಿಚಯಿಸಿತೊ ಹಾಗೆಯೇ ನಾ. ಮೊಗಸಾಲೆಯವರ ಕಾಂತಾವರದ ಕನ್ನಡ ಸಂಘವು ಕಾಂತಾವರವನ್ನು ಇಡೀ ನಾಡಿಗೆ ಪರಿಚಯಿಸಿತು. ಕನ್ನಡ ಸಂಘವನ್ನು ಕಟ್ಟಿಕೊಂಡು ಮಾಡಿರುವ ಐವತ್ತು ವರ್ಷಗಳ ನಿರಂತರ ಸಾಧನೆಯಲ್ಲಿ ಕಾಂತಾವರ ಎಲ್ಲ ಮಟ್ಟದಲ್ಲೂ ಅಭಿವೃದ್ಧಿ ಕಂಡಿತು.
ಡಾ.ನಾ .ಮೊಗಸಾಲೆಯವರಿಗೆ ಮ್ಯಾಗೆಸ್ಸೆ ಪ್ರಶಸ್ತಿ ದೊರಕುವುದಕ್ಕೆ ಈ ನಾಡು ,ಈ ರಾಜ್ಯವು ಯೋಗ್ಯವಾದ ರೀತಿಯಲ್ಲಿ ಮ್ಯಾಗೆಸ್ಸೆ ಪ್ರಶಸ್ತಿ ಆಯ್ಕೆ ಸಮಿತಿಗೆ ಪರಿಚಯ ಕಳುಹಿಸಿಕೊಡಬೇಕಾಗಿರುವುದು ಅಗತ್ಯವಾಗಿದೆ .ಹಾಗೆ ಮಾಡದಿದ್ದರೆ ಅದು ಕಾಂತಾವರಕ್ಕೆ ಮಾಡಿದ ಅನ್ಯಾಯವಾಗುತ್ತದೆ ಎಂದು ಡಾ।ಶಂಕರ್ ಹೇಳಿದರು.
ಕನ್ನಡದ ಒಬ್ಬ ಕವಿಯ ಹೆಸರಿನಲ್ಲಿ ಕಾವ್ಯ ಪ್ರಶಸ್ತಿಯನ್ನು ರಚಿಸಿರುವುದು ಅದೊಂದು ಮೆಚ್ಚಗೆಪಡುವಂಥ ಅಪರೂಪದ ಅದ್ಭುತ ಪರಿಕಲ್ಪನೆಯಾಗಿದೆ. ಕವಿ ತನ್ನ ಮನಸ್ಸೊಳಗಿರುವ ರಹಸ್ಯಗಳನ್ನು ಕಾವ್ಯದ ರೂಪದಲ್ಲಿ ಪ್ರಕಟಿಸುವುದೇ ಕಾವ್ಯವಾಗಿ ಬರೆಯಲ್ಪಡುತ್ತದೆ.ಅದಕ್ಕಾಗಿಯೇ ಕವಿಯು ಕಾವ್ಯ,ಕವನವನ್ನು ರಚಿಸುತ್ತಾನೆ ಎಂದು ಪ್ರೊ। ಡಾ।ಡಿ. ಎ. ಶಂಕರ್ ಹೇಳಿದರು. ತನ್ನ ಕೃತಿಗೆ ಮುದ್ದಣ ಕಾವ್ಯ ಪ್ರಶಸ್ತಿ ಒದಗಿಬಂದಿರುವುದಕ್ಕೆ ಅವರು ಅತಿಯಾದ ಸಂತಸವನ್ನು ತನ್ನ ಹೃದಯಸ್ಪರ್ಶಿ ಮಾತಿನೊಂದಿಗೆ ವ್ಯಕ್ತಪಡಿಸಿದರು.
ಕ. ಸಾ.ಪ. ದ ಮಾಜಿ ಅಧ್ಯಕ್ಷ ,ಧರ್ಮದರ್ಶಿ ಡಾ।ಹರಿಕೃಷ್ಣ ಪುನರೂರು ಅವರು ಮುದ್ದಣ ಕಾವ್ಯ ಪ್ರಶಸ್ತಿ ಪ್ರದಾನ ಮಾಡಿದರು. ಆ ಪ್ರಶಸ್ತಿಯ ಪ್ರಾಯೋಜಕರು ಕೂಡ ಅವರೇ ಆಗಿರುತ್ತಾರೆ.
ಕನ್ನಡ ಸಂಘ ಕಾಂತಾವರ ಅದರ ಐವತ್ತರ ಸಂಭ್ರಮದ ಸರದಿ ಕಾರ್ಯಕ್ರಮಗಳಲ್ಲಿ ಮೂರನೆಯದಾಗಿರುವ ಮುದ್ದಣ ಸಾಹಿತ್ಯೋತ್ಸವವು ಮಾ.15ರಂದು ಕಾಂತಾವರದ ಕನ್ನಡ ಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮುದ್ದಣ ಕಾವ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಧರ್ಮದರ್ಶಿ ಡಾ।ಹರಿಕೃಷ್ಣ ಪುನರೂರು ಸಭಾಧ್ಯಕ್ಷತೆ ವಹಿಸಿದ್ದು ಪ್ರಸಿದ್ದ ಕವಿ ಹಾಗೂ ಪ್ರಾಧ್ಯಾಪಕರಾಗಿರುವ ಪ್ರೊ। ಟಿ. ಯೆಲ್ಲಪ್ಪ,ಬೆಂಗಳೂರು ಅವರು ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. “ನಾಡಿಗೆ ನಮಸ್ಕಾರ”ಗ್ರಂಥಮಾಲೆಯ ನೂತನ ಒಂಭತ್ತು ಕೃತಿಗಳನ್ನು ಡಾ। ಎ. ಸುಬ್ಬಣ್ಣ ರೈ(ವಿಶ್ರಾಂತ ಪ್ರಾಧ್ಯಾಪಕ, ಕನ್ನಡ ವಿ. ವಿ. ಹಂಪಿ )ಅವರು ಬಿಡುಗಡೆಗೊಳಿಸಿದರು. ನಾಡಿಗೆ ನಮಸ್ಕಾರ ಗ್ರಂಥಮಾಲೆಯ ಸಂಪಾದಕ ಡಾ।ಬಿ. ಜನಾರ್ದನ ಭಟ್ (ನಿವೃತ್ತ ಪ್ರಾಂಶುಪಾಲ ಸರಕಾರಿ ಜ್ಯೂ. ಕಾಲೇಜು,ಬೆಳ್ಮಣ್ )ಮುಖ್ಯ ಅತಿಥಿಯಾಗಿದ್ದರು. ಡಾ। ಡಿ. ಎ. ಶಂಕರ್ (ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತರು)ಯು. ವಿಶ್ವನಾಥ ಶೆಣೈ(ಅಧ್ಯಕ್ಷರು ಸಂಸ್ಕೃತಿ ವಿಶ್ವಪ್ರತಿಷ್ಠಾನ ಸಮಿತಿ,ಉಡುಪಿ ಹಾಗೂ ಗೌರವಾಧ್ಯಕ್ಷರು ಕನ್ನಡ ಸಂಘ ಕಾಂತಾವರ ಐವತ್ತರ ಸಂಭ್ರಮ ಸಮಿತಿ )ಕೆ. ಶ್ರೀಪತಿ ಭಟ್ (ಧನಲಕ್ಷ್ಮೀ ಗೇರು ಉದ್ಯಮಿ, ಸದಸ್ಯ ಕನ್ನಡ ಸಂಘದ ಸುವರ್ಣ ಸಂಭ್ರಮ ಸಮಿತಿ)ಅವರುಗಳು ಗೌರವ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಕನ್ನಡ ಸಂಘದ ಗೌರವಾಧ್ಯಕ್ಷ ಡಾ.ನಾ. ಮೊಗಸಾಲೆ ಸ್ವಾಗತಿಸಿದರು. ಸದಾನಂದ ಪೂಜಾರಿ ಬೆಳುವಾಯಿ ಅವರು ಪ್ರಾಸ್ತಾವಿಕ ಭಾಷಣಗೈದರು. ಕನ್ನಡ ಸಂಘದ ಪ್ರಧಾನ ಕಾರ್ಯದರ್ಶಿ ಸದಾನಂದ ನಾರಾವಿ ಕಾರ್ಯಕ್ರಮ ನಿರೂಪಿಸಿದರು.







ಪ್ರಶಸ್ತಿ ಪುರಸ್ಕೃತರು
——————————
ಮುಳಿಯ ಶಂಕರ ಭಟ್ಟ ‘ಗಮಕ ಕಲಾ ಪ್ರವಚನ ಪ್ರಶಸ್ತಿ’. ಪದ್ಯಾಣ ಗಣಪತಿ ಭಟ್ಟ ‘ಗಮಕ ಕಲಾ ವಾಚನ ಪ್ರಶಸ್ತಿ’, ಕಾರ್ಕಳ ದಾಮೋದರ ಆಚಾರ್ಯ ‘ ಶಿಲ್ಪಕಲಾ ಪ್ರಶಸ್ತಿ’, ಶಕುಂತಳಾ ಭಟ್,ಹಳೆಯಂಗಡಿ, ಸಾಹಿತ್ಯ ಕ್ಷೇತ್ರದ ಜೀವನಾನ ಸಾಧನೆ ಪ್ರಶಸ್ತಿಯನ್ನು ಈ ಸಮಾರಂಭದಲ್ಲಿ ಪ್ರದಾನಗೈದು ಸಮ್ಮಾನ ಮಾಡಲಾಯಿತು.
ಈ ತನಕ ಒಟ್ಟು ಸುಮಾರು 369 ಪುಸ್ತಕ ಪ್ರಕಟ ಮಾಡಿದ “ನಾಡಿಗೆ ನಮಸ್ಕಾರ” ಗ್ರಂಥಮಾಲೆಯು ಪ್ರಕಟಿಸಿರುವ ಒಂಭತ್ತು ಪುಸ್ತಕಗಳ ಲೇಖಕರು ಹಾಗೂ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ದತ್ತಿನಿಧಿ ಪ್ರವೃತ್ತಕರುಗಳನ್ನು, ಸಂಪಾದಕ ಡಾ। ಬಿ. ಜನಾರ್ದನ ಭಟ್, ಕಾಂತಾವರ ಕನ್ನಡ ಸಂಘದ ಆದಿಯಿಂದಲೂ ಪೋಷಕ,ಪ್ರೋತ್ಸಾಹಕನಾಗಿ ಬರುತ್ತಿರುವ ಡಾ। ಹರಿಕಷ್ಣ ಪುನರೂರು, ಐವತ್ತು ವರ್ಷಗಳ ನಿರಂತರ ಸೇವೆಯೊಡನೆ ಸಾರ್ಥಕತೆ ಕಾಣಿಸಿದ ಸಂಘದ ಸಂಸ್ಥಾಪಕ ಡಾ.ನಾ. ಮೊಗಸಾಲೆ ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಮುದ್ದಣ ಕಾವ್ಯ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ।ಡಿ. ಎ. ಶಂಕರ್ ,ಮೈಸೂರು

ಅಖಿಲ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ।ಹರಿಕೃಷ್ಣ ಪುನರೂರು ಅವರ ಪ್ರಾಯೋಜಕತ್ವದ ನಂದಳಿಕೆಯ ವರಕವಿ ಮುದ್ದಣನ ಹೆಸರಿನಲ್ಲಿ ಕನ್ನಡ ಸಂಘವು ನೀಡುತ್ತಿರುವ “ಮುದ್ದಣ ಕಾವ್ಯ ಪ್ರಶಸ್ತಿ”ಯನ್ನು ತಮ್ಮ “ ಇರುವೆಯಂತೆ ನನ್ನೊಡನೆ”ಎಂಬ ಹಸ್ತಪ್ರತಿಗೆ (2025)ಪಡೆದಿರುವ ಪ್ರೊ। ಡಿ. ಎಸ್. ಶಂಕರ್ ಅವರು ಶಿವಮೊಗ್ಗದ ತೀರ್ಥಹಳ್ಳಿ ಮೂಲದವರು. ನಮ್ಮ ನಡುವಿನ ಹಿರಿಯ ಲೇಖಕ ಮತ್ತು ಕವಿಗಳು. ಮೈಸೂರು ಮತ್ತು ಇಂಗ್ಲೇಂಡಿನಲ್ಲಿ ಷಫೀಲ್ಡ್ ವಿ. ವಿ. ಗಳಲ್ಲಿ ವ್ಯಾಸಂಗ ಮಾಡಿದ್ದ ಅವರು ಯು. ಜಿ. ಸಿ. ಸಂಶೋಧನಾ ಫೆಲೋ, ಬ್ರಿಟಿಷ್ ಕೌನ್ಸಿಲ್ ಸ್ಕಾಲರ್ಶಿಪ್ ಶಾಸ್ತ್ರಿ ಇಂಡೊಕೆನಡಿಯನ್ ಪ್ಯಾಕಲ್ಟಿ ಫೆಲೋ, ಬ್ರಿಟಿಶ್ ಕೌನ್ಸಿಲ್ ಸ್ಕಾಲರ್ ಶಿಪ್ ಫೆಲೋ,ಬ್ರಿಟಿಷ್ ಕೊಲಂಬಿಯ ವಿ. ವಿ. ಫೆಲೋ, ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ ಸ್ಟಡಿ ಶಿಮ್ಲಾ ಮೊದಲಾದವುಗಳ ಗೌರವದ ಸಾರ್ಥಕ್ಯ ಪಡೆದವರು. ಮಂಗಳೂರು,ಪಾಂಡಿಚೇರಿ ವಿ. ವಿ. ಗಳ ಮೊದಲ ಎನರ್ಟಸ್ ಪ್ರೊಫೆಸ್ಸರ್ ಆಗಿ ಸೇವೆಗೈದವರು.
ಆಳವಾದ ವಿಮರ್ಷಕ ಪ್ರಜ್ಞೆ ಮತ್ತು ಅಪರೂಪದ ಒಳನೋಟಗಳುಳ್ಳ ಲೇಕಖರು . ಮೈಸೂರು ವಿ. ವಿ. ಯ “ವಿಷಯ ವಿಶ್ವಕೋಶ “ದ ಸಂಪಾದಕರು.ಕರ್ನಾಟಕ ಸರಕಾರದ ಕನಕದಾಸ ಸಮಗ್ರ ಕೃತಿಗಳ ಅನುವಾದ ಯೋಜನೆಯ ಪ್ರಧಾನ ಸಂಪಾದಕರಾಗಿದ್ದವರು, ಅವರಿಗೆ ಕುವೆಂಪು ಭಾಷಾಭಾರತಿ ಜೀವಮಾನ ಸಾಧನಾ ಪ್ರಶಸ್ತಿ,ವರ್ಧಮಾನ ಪ್ರಶಸ್ತಿ,ಕರ್ನಾಟಕ ನಾಟಕ ಅಕಾಡಮಿಯ ಅತ್ಯುತ್ತಮ ಅನುವಾದ ಪ್ರಶಸ್ತಿ, ಕನ್ನಡ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ವಿ ಸೀ ಸಂಪದ ಸಾಧಕ ಪ್ರಶಸ್ತಿಗಳೆ ಮೊದಲಾದವುಗಳು ಬಂದಿವೆ. ಅವರ ಕೆಲವು ಕೃತಿಗಳು ಇಂಗ್ಲೀಷ್ ಅನುವಾದಕ್ಕಾಗಿ ಜಾಗತಿಕ ಮನ್ನಣೆ ಪಡೆದಿವೆ.ಅವರ ಪ್ರಹಸನಗಳು ಏಕಾಂಕ ಹಾಗೂ ವಿಷಾದದ ನಾಟಕಗಳು ಹಲವು ಬಾರಿ ರಂಗವೇರಿ ಜನಮನ್ನಣೆಯನ್ನು ಪಡೆದಿವೆ. ಅವರ “(ಸಮಗ್ರ ಕಾವ್ಯ ಸಂಪುಟ)ಹಿಡಿದ ಹಾದಿಯ ಆಚೀಚೆ” ಬಹಳ ಮುಖ್ಯವಾದ ಕವನ ಸಂಕಲನವಾಗಿದೆ.


























