ಪುಣೆ: ವಿಚಾರವಾದಿ ಡಾ. ದಾಭೋಲ್ಕರ್ ಹತ್ಯೆ ಪ್ರಕರಣದಲ್ಲಿ ನ್ಯಾಯಾಲಯ ನೀಡಿದ ತೀರ್ಪನ್ನು ನಾವು ಗೌರವಿಸುತ್ತೇವೆ. ಈ ತೀರ್ಪಿನ ಪ್ರಕಾರ ಸನಾತನದ ಸಾಧಕರು ನಿರ್ದೋಷಿಗಳೆಂದು ಸಾಬೀತಾಗಿದೆ. ಈ ಮೂಲಕ ಸನಾತನ ಸಂಸ್ಥೆಯನ್ನು ಹಿಂದು ಭಯೋತ್ಪಾದಕ ಎಂದು ಸಾಬೀತುಪಡಿಸುವ ‘ಅರ್ಬನ್ ನಕ್ಸಲೀಯರ’ ಸಂಚು ವಿಫಲವಾಗಿದೆ ಎಂದು ಸನಾತನ ಸಂಸ್ಥೆಯ ವಕ್ತಾರ ಚೇತನ್ ರಾಜಹಂಸ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಪುಣೆ ಸಿ.ಬಿ.ಐ. ವಿಶೇಷ ನ್ಯಾಯಾಲಯವು ಸನಾತನ ಸಂಸ್ಥೆಯ ಸಾಧಕ ವಿಕ್ರಮ್ ಭಾವೆ ಮತ್ತು ಹಿಂದು ಜನಜಾಗೃತಿ ಸಮಿತಿಗೆ ಸಂಬಂಧಿಸಿದ ಡಾ.ವೀರೇಂದ್ರ ಸಿಂಹ ತಾವಡೆ ಇವರನ್ನು ನಿರ್ದೋಷಿಗಳೆಂದು ಮುಕ್ತಗೊಳಿಸಿದೆ, ಜತೆಗೆ ಹಿಂದು ವಿಧಿಜ್ಞ ಪರಿಷತ್ತಿನ ನ್ಯಾಯವಾದಿ ಸಂಜೀವ ಪುನಾಳೇಕರ್ ಅವರನ್ನು ಸಹ ನಿರ್ದೋಷಿಯೆಂದು ಖುಲಾಸೆಗೊಳಿಸಿದೆ. ಈ ಅಪರಾಧದಲ್ಲಿ ಸೇರಿಸಿದ್ದ `ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಯುಎಪಿಎ ಕಾಯ್ದೆಯನ್ನು’ ಸಹ ರದ್ದುಗೊಳಿಸಲಾಗಿದೆ.
ಈ ಕಾಯ್ದೆಯನ್ನು ಹಾಕಿ ಸನಾತನ ಸಂಸ್ಥೆಯನ್ನು ಕೇಸರಿ ಭಯೋತ್ಪಾದಕ ಎಂದು ತೋರಿಸಿ ನಿರ್ಬಂಧಿಸುವ ಷಡ್ಯಂತ್ರ ರಚಿಸಲಾಗಿತ್ತು, ಈ ಷಡ್ಯಂತ್ರವೂ ಈಗ ವಿಫಲವಾಗಿದೆ ಎಂದು ಹೇಳಿದ್ದಾರೆ.ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಹಿಂದುತ್ವವಾದಿಗಳಾದ ಸಚಿನ್ ಅಂದುರೆ ಮತ್ತು ಶರದ ಕಳಸ್ಕರ್ ಅವರು ಸನಾತನ ಸಂಸ್ಥೆ ಜತೆ ನೇರವಾಗಿ ಸಂಬಂಧ ಹೊಂದಿಲ್ಲದಿದ್ದರೂ ಅಥವಾ ಸನಾತನ ಸಂಸ್ಥೆಯ ಪದಾಧಿಕಾರಿಗಳಲ್ಲದಿದ್ದರೂ, ಅವರನ್ನೂ ಈ ಪ್ರಕರಣದಲ್ಲಿ ಸಿಲುಕಿಸಿರುವ ಸಾಧ್ಯತೆಯದೆ ಎಂದು ನಮಗೆ ಅನಿಸುತ್ತಿದೆ. ಹಾಗಾಗಿ ಈ ಪ್ರಕರಣದ ವಕೀಲರು ಹೇಗೆ ಇಂದು ಇತರರನ್ನು ನಿರಪರಾಧಿಯೆಂದು ಮುಕ್ತಗೊಳಿಸಿದರೋ ಅದೇ ರೀತಿ ಈ ಪ್ರಕರಣವನ್ನು ಉಚ್ಚ ನ್ಯಾಯಾಲಯಕ್ಕೆ ಕೊಂಡೊಯ್ದು ಅವರನ್ನು ನಿರಪರಾಧಿಯೆಂದು ಮುಕ್ತಗೊಳಿಸಲು ಹೋರಾಟ ನಡೆಸುವುದಾಗಿ ಘೋಷಿಸಿದರು.


























