[t4b-ticker]

ಟೆಂಪೋ ಢಿಕ್ಕಿ – ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಪ್ರಾಣಾಪಾಯದಿಂದ ಪಾರು

Picture of RB NEWS

RB NEWS

Bureau Report

ಕಾರ್ಕಳ, ಜು. 23: ತಾಲೂಕು ಕಚೇರಿ ಸಮೀಪದ ಸರ್ವಜ್ಞ ವೃತ್ತದಿಂದ ನಕ್ರೆ ಕಡೆಗೆ ತೆರಳುವ ರಸ್ತೆಯಲ್ಲಿ ಟಾಟಾ ಎಸಿ ಟೆಂಪೋ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪತ್ರಕರ್ತ ಬಾಲಕೃಷ್ಣ ಭೀಮಗುಳಿ ಅವರು ಪ್ರಾಣಾಪಾಯದಿಂದ ಪಾರಾದ ಘಟನೆ ಗುರುವಾರ ಸಂಭವಿಸಿದೆ.

ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕ್ರಿಯೇಟಿವ್ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ಬಿಪಿನ್ ಚಂದ್ರಲಾಲ್ ನಕ್ರೆ ಅವರನ್ನು ಅವರ ನಿವಾಸಕ್ಕೆ ಕಾರಿನಲ್ಲಿ ಬಿಟ್ಟು ವಾಪಸಾಗುತ್ತಿದ್ದ ವೇಳೆ ಈ ಅಪಘಾತ ನಡೆದಿದೆ.

ಪರಪ್ಪು ಸೇತುವೆ ದಾಟಿ ಸ್ವಲ್ಪ ದೂರ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ಒಂದು ಕಾರು ನಿಲ್ಲಿಸಲಾಗಿತ್ತು. ಇದೇ ವೇಳೆ ಎದುರು ದಿಕ್ಕಿನಿಂದ ಅತಿವೇಗದಲ್ಲಿ ಬಂದ ಶ್ರೀದೇವಿ ಫರ್ನಿಚರ್ಸ್‌ನ ಟಾಟಾ ಎಸಿ ಟೆಂಪೋ ನಿಯಂತ್ರಣ ತಪ್ಪಿ ಭೀಮಗುಳಿ ಅವರ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಪಕ್ಕದ ಕಮರಿಗೆ ಜಾರಿದ್ದು, ಚಾಲಕನ ಬದಿಯ ಭಾಗ ಸಂಪೂರ್ಣ ನುಜ್ಜುಗುಜ್ಜಾಗಿದೆ. ಟಾಟಾ ಎಸಿ ವಾಹನಕ್ಕೂ ಹಾನಿಯಾಗಿದೆ.

ಅದೃಷ್ಟವಶಾತ್, ಎರಡೂ ವಾಹನಗಳಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಟಾಟಾ ಎಸಿ ವಾಹನದ ಅತಿವೇಗವೇ ಅಪಘಾತಕ್ಕೆ ಪ್ರಮುಖ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಇದೇ ಸ್ಥಳದಲ್ಲಿ ರಸ್ತೆ ಬದಿಯಲ್ಲಿ ಅಸುರಕ್ಷಿತವಾಗಿ ವಾಹನಗಳನ್ನು ನಿಲ್ಲಿಸುವ ಪ್ರವೃತ್ತಿಯಿಂದ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದ್ದು, ಈ ರೀತಿಯ ವಾಹನ ಸವಾರರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಅಲ್ಲದೆ, ಶ್ರೀದೇವಿ ಫರ್ನಿಚರ್ ಮಾಲೀಕತ್ವದ ಟಾಟಾ ಎಸಿ ಟೆಂಪೋವನ್ನು ಚಾಲಕ ಅತಿವೇಗದಲ್ಲಿ ಚಲಾಯಿಸುತ್ತಿರುವ ಬಗ್ಗೆ ದೂರುಗಳೂ ಕೇಳಿಬಂದಿವೆ.

ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top