ಮೂಡುಬಿದಿರೆ ಫೆ. 14: ಹೊಸ್ಮಾರು–ಮೂಡುಬಿದಿರೆ ರಸ್ತೆಯ ಪಡುಕೊಣಾಜೆಯ ಹೌದಾಲು ಬಳಿ ಇಂದು ಬೆಳಿಗ್ಗೆ ಸುಮಾರು 8.30ರ ಸುಮಾರಿಗೆ ಟಿಪ್ಪರ್ ಲಾರಿ ಹಾಗೂ ಮೋಟಾರ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಮೂಡುಬಿದಿರೆಯತ್ತ ಸಾಗುತ್ತಿದ್ದ ಬೈಕ್ ಮತ್ತು ಶಿರ್ತಾಡಿಯತ್ತ ಬರುತ್ತಿದ್ದ ‘ಕಟೀಲೇಶ್ವರಿ’ ಹೆಸರಿನ ಟಿಪ್ಪರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ಬೈಕ್ ಸವಾರ ವಾಲ್ಪಾಡಿ ಪೆರಿಬೆಟ್ಟುವಿನ ವಿದಿಬ್ ಮಡಿವಾಳ ಅವರಿಗೆ ಕೈ ಮೂಳೆ ಮುರಿತ ಸೇರಿದಂತೆ ಗಂಭೀರ ಗಾಯಗಳಾಗಿವೆ. ಗಾಯಾಳುವನ್ನು ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಅವರು ಮೂಡುಬಿದಿರೆ ರೋಟರಿ ಶಾಲೆಯ ಶಿಕ್ಷಕರಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.