ಜನರ ಪ್ರೀತಿ ಪಾತ್ರರಾಗಿದ್ದ ರಾಜಣ್ಣ…






ಕುದುರೆ ಮುಖ ಅದಿರು ಸಂಸ್ಥೆ ನಿರ್ಮಾಣ ಸಂದರ್ಭದಲ್ಲಿ ಹಾಗೂ ನಂತರವೂ ಅದೇ ಕಂಪೆನಿಯ ಕೆಲಸಗಳನ್ನು ಗುತ್ತಿಗೆ ಪಡೆಯುತ್ತ ಎತ್ತರಕ್ಕೆ ಬೆಳೆದ ಡಿ. ಆರ್. ರಾಜು ಅವರ ಸದ್ಗುಣಗಳಿಂದಾಗಿ ಚಿಕ್ಕಮಗಳೂರು ಜಿಲ್ಲೆಯೊಳಗೇ ಬಹಳಷ್ಟು ಮಂದಿಯ ಸ್ನೇಹ ಸಂಪರ್ಕ ಗಳಿಸಿಕೊಳ್ಳುವುದರೊಂದಿಗೆ ಬಹಳ ಪರಿಚಿತ ವ್ಯಕ್ತಿಯಾಗಿ ಕಾಣಿಸಿಕೊಳ್ಳತೊಡಗಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಂಥದ್ದಾದ ಪರಿಚಯ ,ಸ್ನೇಹ ಬೆಳೆಸಿಕೊಂಡವರನ್ನು ಅಲ್ಲಿಯ ಕೆಲವು ಮುಖಂಡರು ರಾಜಕೀಯಕ್ಕೆ ಸೇರುವಂತೆ ಪ್ರಚೋದಿಸಿದರು. ಜೆಡಿಎಸ್ ಗೆ ಬರಬೇಕೆಂದು ಕೆಲವರು,ಅದಾಗಲೇ ಹುಟ್ಚಿಕೊಂಡಿದ್ದ ಎಸ್. ಬಂಗಾರಪ್ಪನವರ ಕೆ. ಸಿ. ಪಿ. ಗೆ ಬರಬೇಕೆಂದು ಕೆಲವರು ಎಳೆದಾಡತೊಡಗಿದರು . ಅಂತೂ ಅವರು ಬಂಗಾರಪ್ಪನವರನ್ನೇ ಭೇಟಿ ಮಾಡಿ ಪಕ್ಷಕ್ಕೆ ಸೇರ್ಪಡೆಯಾದರು ಮಾತ್ರವಲ್ಲದೆ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕೆ. ಸಿ. ಪಿ. ಅಭ್ಯರ್ಥಿಯಾಗಿಯೂ ಚುನಾವಣೆಯಲ್ಲಿ ಸ್ಪರ್ಧಿಸಿದರು. ಅದರ ನಂತರ ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲೂ ಬಂಗಾರಪ್ಪನವರ ಸಮಾಜವಾದಿ ಪಕ್ಷದ ಸೈಕಲ್ ಚಿಹ್ನೆಯಡಿ ಸ್ಪರ್ಧಿಸಿದರು.
ಅವರ ರಾಜಕೀಯ ಚಟುವಟಿಕೆ ಅಷ್ಟೊಂದು ಗಟ್ಟಿಯಾಗಿರಲಿಲ್ಲ, ಅದು ಅವರಿಗೆ ಹೇಳಿ ಮಾಡಿಸಿದ್ದೂ ಅಲ್ಲ. ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿಯೆ ಇದ್ದುದರಿಂದ ಒಮ್ಮೆ ಬಿಜೆಪಿಗೂ ಸೇರಿಕೊಂಡಿದ್ದರು.
ಮೂಲತಃ ಕೊಡಗು ಜಿಲ್ಲೆಯವರಾಗಿದ್ದ ಅವರಿಗೆ ಕಾರ್ಕಳದ ಸಮಗ್ರ ಪರಿಚಯ ಮಾಡಿಕೊಳ್ಳುವುದಕ್ಕೆ ಕಾರಣ ಪುರುಷ ಎಸ್. ಬಂಗಾರಪ್ಪನವರು. ಬಂಗಾರಪ್ಪನವರ ಸೂಚನೆಯಂತೆ, ಕಾರ್ಕಳದಲ್ಲಿ ಮುದ್ರಣಾಲಯ ಮತ್ತು ವಾರಪತ್ರಿಕೆ ನಡೆಸುತ್ತಿದ್ದ ಎಂ. ಹರಿಶ್ಚಂದ್ರ ಹೆಗ್ಡೆಯವರ ಭೇಟಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸಮಸ್ತ ಕಾರ್ಕಳ ಕ್ಷೇತ್ರಕ್ಕೆ ಪರಿಚಯ ಮಾಡಿಕೊಂಡರು.
ಡಿ. ಆರ್. ರಾಜು ಅವರು ಪ್ರಭಾವಿ ರಾಜಕಾರಣಿಯಾಗಿ ಮೆರೆಯುವುದಕ್ಕೆ ಅವರಿಂದ ಸಾಧ್ಯವಾಗಲಿಲ್ಲ. ಅವರಲ್ಲಿನ ಮುಗ್ಧತೆ ಹಾಗೂ ಮಾನವತಾವಾದಗಳು ಅವರನ್ನು ಮುಖವಾಡ ಧರಿಸಿಕೊಂಡು ಜನರ ಮುಂದೆ ಓಡಾಡುವುದಕ್ಕೆ ಅನುವುಮಾಡಿಕೊಡಲಿಲ್ಲ.
ಕಾರ್ಕಳದಲ್ಲಿಯೇ ಜಾಗ ಖರೀದಿಸಿ ಮನೆ ನಿರ್ಮಿಸಿ ,ಬಹಳ ಅದ್ದೂರಿಯಿಂದ ಗೃಹಪ್ರವೇಶ ಕಾರ್ಯಕ್ರಮವನ್ನು ಮಾಡಿಸಿದ್ದರು.
ನಂತರದ ವರ್ಷಗಳಲ್ಲಿ ಮೂಡಿಗೆರೆ ಸಮೀಪ ಸಣ್ಣದಾದ ಕಾಫಿ ತೋಟವೊಂದನ್ನು ಖರೀದಿಸಿ ಅಲ್ಲಿಯೂ ಪುಟ್ಟ ಬಂಗಲೆ ನಿರ್ಮಿಸಿ ಅಭಿವೃದ್ಧಿ ಮಾಡಿದ್ದರು.ಕಾರ್ಕಳದಲ್ಲಿನ ಬಿಲ್ಲವ ಸಮುದಾಯ ಸಂಘದ ಅಧ್ಯಕ್ಷರಾಗಿ ಬಹಳಷ್ಟು ಸಾಮಾಜಿಕ ಶೈಕ್ಷಣಿಕ ಹಾಗೂ ಧಾರ್ಮಿಕ ಚಟುವಟಿಕೆಗಳು,ಕೆಲಸಗಳನ್ನು ಮಾಡಿಸಿದ್ದಾರೆ. ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ಕೊಡುವುದು, ಬಡ ಕುಟುಂಬದ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ ಮಾಡುವುದು,ಮನೆ ಕಟ್ಚುವುದಕ್ಕೆ ,ರಿಪೇರಿಗೆ ಹಾಗೆ ಅನೇಕ ರೀತಿಯಲ್ಲಿ ಸಾರ್ವಜನಿಕ ಸೇವೆ ಮಾಡಿಕೊಂಡು ಬಂದಿದ್ದರು. ಯಾರಿಗೇ ಸಹಾಯ ಮಾಡುವಾಗಲೂ ಜಾತಿ ಪರಿಗಣಿಸಿದವರಲ್ಲ ಎನ್ನುವುದೇ ಅವರಲ್ಲಿನ ದೊಡ್ಡ ಗುಣವಾಗಿತ್ತು.
ಯಾರೊಡನೆಯೂ ಜಗಳ ಮಾಡದೆ, ತಾರಕ ಸ್ವರದಿಂದ ಮಾತನ್ನಾಡದೆ ಸಹನಾಮೂರ್ತಿಯಂತೆಯೇ ಜನರೊಡನೆ ಬೆರೆತುಕೊಂಡಿದ್ದರು.
ಕಾಂಗ್ರೆಸ್ ಪಕ್ಷದಲ್ಲಿ ಸೇರಿದ್ದು ಅದರಲ್ಲಿ ಅಂಥದ್ದಾದ ಜವಾಬ್ದಾರಿಯ ಹುದ್ದೆ ಪಡೆದವರಲ್ಲವಾದರೂ ಪಕ್ಷಕ್ಕಾಗಿ ತುಂಬಾ ದುಡಿದಿದ್ದಾರೆ ಚುನಾವಣೆ ಸಮಯದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ತನ್ನದೇ ಶಕ್ತಿಯಾನುಸಾರ ಧನ ಸಹಾಯ ಮತ್ತು ಪ್ರಚಾರ ಕಾರ್ಯ ಮಾಡುತ್ತ ಬರುತ್ತಿದ್ದರು. ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರೊಂದಿಗೂ ಅಷ್ಟೇ ಬಾಂಧವ್ಯ ಬೆಳೆಸಿಕೊಂಡಿದ್ದರು. ಸಹಾಯ,ಸಹಕಾರ ಕೋಡುತ್ತಿದ್ದರು.
ಡಿ. ಆರ್. ರಾಜು ಅವರು ಸಮಾಜದ ಬಹುದೊಡ್ಡ ಆಸ್ತಿಯಂತೆ ಇದ್ದರು. ಸಮಾಜದ ಬಡಜನರ ಆಪತ್ಭಾಂಧವನಾಗಿದ್ದರು. ಕೈ ಬೀಸಿ ಕರೆದು ಕೈ ನೀಡಿ ಕೊಡುತ್ತಿದ್ದ ಒಬ್ಬ ಮಾನವತಾವಾದಿಯಾಗಿದ್ದರು. ತನ್ನ ಬಗ್ಯೆ ಯಾವುದೇ ಪ್ರಚಾರ ಮಾಡಿಕೊಳ್ಳದೆ ಸಾಮಾನ್ಯನಂತೆಯೇ ಜನರೊಡನೆ ಸ್ನೇಹಜೀವಿಯಾಗಿದ್ದ ಡಿ. ಆರ್. ರಾಜು ಅವರು “ ರಾಜಣ್ಣ” ಎಂದೇ ಜನರ ಪ್ರೀತಿಪಾತ್ರರಾಗಿದ್ದರು.
ಡಿ. ಆರ್. ರಾಜು ಅವರ ಅಗಲಿಕೆಯನ್ನು ಯಾವ ರೀತಿಯಲ್ಲೂ ಒಪ್ಪಿಕೊಳ್ಳುವುದಕ್ಕೆ ತುಂಬಾ ಕಷ್ಟ. ಆದರೆ ನಾಡಿನ ಲಕ್ಷಾಂತರ ಮಂದಿಯ ಎದೆಯಾಳದಲ್ಲಿ ಶಾಶ್ವತ ನೆಲೆ ಪಡೆದಿದ್ದಾರೆ ಅನ್ನುವುದಂತೂ ಸೂರ್ಯನಷ್ಟೇ ಸತ್ಯ.
ಭಾವಪೂರ್ಣ ಶ್ರದ್ಧಾಂಜಲಿ
-ವಿ. ಕೆ. ವಾಲ್ಪಾಡಿ














