ಚಿಕ್ಕಮಗಳೂರು: ಮುಖ್ಯವಾಹಿನಿಗೆ ಬಂದ 6 ಮಂದಿ ನಕ್ಸಲೀಯರ ವಿಚಾರಣೆ
ಬೆಂಗಳೂರು : 2025 ಜನವರಿ 8ರಂದು ಮುಖ್ಯವಾಹಿನಿಗೆ ಬಂದಿರುವ ಆರು ಮಂದಿ ನಕ್ಸಲರನ್ನು ಚಿಕ್ಕಮಗಳೂರು ಪೊಲೀಸರು ಗುರುವಾರ (ಜ.16) ತಮ್ಮ ವಶಕ್ಕೆ ಪಡೆದುಕೊಂಡು, ವಿಚಾರಣೆಗಾಗಿ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮ್ಮುಖದಲ್ಲಿ ನಕ್ಸಲೀಯರು ಮುಖ್ಯವಾಹಿನಿಗೆ ಬಂದ ಬಳಿಕ ಅವರನ್ನು ಪೊಲೀಸರು ಬೆಂಗಳೂರಿನ ಎನ್ಐಎ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ 6 ಮಂದಿಗೆ ಜನವರಿ 30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಈ ಹಿನ್ನೆಲೆ ಅವರು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದರು.
ಈ ಎಲ್ಲಾ ಬೆಳವಣಿಗೆಯ ನಡುವೆ ನಕ್ಸಲರನ್ನು ವಿಚಾರಣೆಗೆ ಒಳಪಡಿಸಲು ತಮ್ಮ ವಶಕ್ಕೆ ನೀಡುವಂತೆ ಚಿಕ್ಕಮಗಳೂರು ಪೊಲೀಸರು ಎನ್ಐಎ ನ್ಯಾಯಾಲಯವನ್ನು ಕೋರಿದ್ದರು. ಪೊಲೀಸರ ಮನವಿ ಪುರಸ್ಕರಿಸಿದ ನ್ಯಾಯಾಲಯ, ಆರು ಮಂದಿ ಶರಣಾಗತಿ ನಕ್ಸಲೀಯರನ್ನು 6 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಿದೆ.
ಗುರುವಾರ ರಾತ್ರಿಯೇ ಆರು ಮಂದಿಯನ್ನು ಪೊಲೀಸರು ಚಿಕ್ಕಮಗಳೂರಿಗೆ ಕರೆದೊಯ್ದಿದ್ದಾರೆ. ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಮತ್ತು ಇನ್ಸ್ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಮುಖ್ಯವಾಹಿನಿಗೆ ಬಂದಿರುವ ಲತಾ ಮುಂಡಗಾರು, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರೆಪ್ಪ ಅರೋಲಿ, ಕೆ. ವಸಂತ (ತಮಿಳುನಾಡು) ಮತ್ತು ಟಿ.ಎನ್ ಜಿಷಾ (ಕೇರಳ) ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.
ಲತಾ ಮುಂಡಗಾರು ವಿರುದ್ಧ ಕರ್ನಾಟಕದಲ್ಲಿ 65 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 43 ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯಲ್ಲಿವೆ. ವನಜಾಕ್ಷಿ ವಿರುದ್ಧ ಒಟ್ಟು 25 ಪ್ರಕರಣಗಳಿದ್ದು, ಈ ಪೈಕಿ 19 ಚಿಕ್ಕಮಗಳೂರು ಜಿಲ್ಲೆಯಲ್ಲಿ ದಾಖಲಾಗಿವೆ. ಸುಂದರಿ ಕುತ್ಲೂರು ವಿರುದ್ದ 23 ಪ್ರಕರಣಗಳಿದ್ದು, 3 ಚಿಕ್ಕಮಗಳೂರಿನಲ್ಲಿದೆ. ಮಾರೆಪ್ಪ ಅರೋಪಿ ವಿರುದ್ದ ರಾಜ್ಯದಲ್ಲಿ 13 ಪ್ರಕರಣಗಳಿವೆ. ಈ ಪೈಕಿ ಚಿಕ್ಕಮಗಳೂರಿನಲ್ಲಿ 3 ದಾಖಲಾಗಿವೆ. ಕೇರಳದ ಜಿಷಾ ಮತ್ತು ತಮಿಳುನಾಡಿನ ವಸಂತ ವಿರುದ್ದ ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ನಕ್ಸಲರ ವಿರುದ್ಧ ಬಹುತೇಕ ಪ್ರಕರಣಗಳು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಮತ್ತು ಶೃಂಗೇರಿ ಠಾಣೆಗಳಲ್ಲಿ ದಾಖಲಾಗಿವೆ.

































