




ಗ್ರಾಹಕರಿಗೆ ಅನ್ಯಾಯವಾದರೆ ನ್ಯಾಯಾಲಯಕ್ಕೆ ಮೊರೆಹೋಗಿ ತಮ್ಮ ಹಕ್ಕು ಪಡೆಯಬಹುದು -ಕೋಮಲ ಆರ್ . ಸಿ (ನ್ಯಾಯಾಧೀಶರು)
ಕಾರ್ಕಳ : ಅವಶ್ಯಕ ವಸ್ತುಗಳನ್ನು ಖರೀದಿಸುವ ಗ್ರಾಹಕನು ಬಹಳ ಜಾಗರೂಕತೆವಹಿಸಬೇಕು. ವಸ್ತುವಿನ ಬೆಲೆ, ಬಳಕೆಯ ಅವಧಿ, ಗುಣಮಟ್ಟ ಇವುಗಳನ್ನು ಪರಿಶೀಲಿಸ ಬೇಕು. ಗ್ರಾಹಕನಿಗೆ ತುಂಬಾ ಹಕ್ಕು ಇರುತ್ತದೆ. ಆದಾಗ್ಯೂ ಏನಾದರೂ ಗ್ರಾಹಕನಿಗೆ ಅನ್ಯಾಯವಾದರೆ ನ್ಯಾಯಾಲಯದಲ್ಲಿ ದಾವೆಹೂಡಿ ತನ್ನ ಹಕ್ಕನ್ನು ಪಡೆದುಕೊಳ್ಳಬಹುದು ಎಂದು ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರು ಕೋಮಲ ಆರ್.ಸಿ. ಸಲಹೆ ನೀಡಿದರು.
ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.) ಕಾರ್ಕಳ, ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜು, ಸಾಣೂರು ಇದರ ಸಂಯುಕ್ತ ಆಶ್ರಯದಲ್ಲಿ ಡಿ.24ರಂದು ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನಾಚರಣೆ ಪ್ರಯುಕ್ತ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಕಾರ್ಕಳ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ ಮಾತನಾಡಿ, 1962ರಿಂದ ಗ್ರಾಹಕರ ಹಕ್ಕಿನ ಬಗ್ಗೆ ಹೆಚ್ಚು ಅರಿವು ಮೂಡಲಾರಂಭಿಸುತ್ತಾ ಬಂದಿದೆ ಎಂದು ತಿಳಿಸಿದರು.
ಹಲವಾರು ಬಾರಿ ಗ್ರಾಹಕರ ಹಕ್ಕುಗಳನ್ನು ಗ್ರಾಹಕರ ನ್ಯಾಯಾಲಯಗಳು ಎತ್ತಿ ಹಿಡಿದು ಪರಿಹಾರ ಕೊಡಿಸಿ ತಪ್ಪಿತಸ್ಥ ಕಂಪನಿಗಳಿಗೆ ದಂಡ ವಿಧಿಸಿದ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ನ್ಯಾಯವಾದಿ ಸವಿತಾ ಮಾತನಾಡಿ, ಗ್ರಾಹಕರ ಹಕ್ಕುಗಳ ಕಾಯ್ದೆ, ಗ್ರಾಹಕ ಹಕ್ಕುಗಳ ಬಗ್ಗೆ ಇರುವ ಗ್ರಾಹಕರ ನ್ಯಾಯಾಲಯಗಳು ಮತ್ತು ನ್ಯಾಯಾಲಯಕ್ಕೆ ಹೋಗಬೇಕಾದ ಕಾಲಾವಕಾಶಗಳ ಬಗ್ಗೆ ವಿವರಗಳ ಮಾಹಿತಿ ನೀಡಿದರು.
ಸರಕಾರಿ ಪದವಿ ಪೂರ್ವ ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಅಶೋಕ್ ಶೆಟ್ಟಿ ಸಾಣೂರು ಅಧ್ಯಕ್ಷತೆ ವಹಿಸಿದ್ದರು.
ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಸುಚೇತ ಕಾಮತ್ ಸ್ವಾಗತಿಸಿದರು.
ಆಂಗ್ಲ ಭಾಷಾ ಉಪನ್ಯಾಸಕಿ ಡಾ. ಸುಮತಿ ನಿರೂಪಿಸಿ ವಂದನಾರ್ಪಣೆಗೈದರು.







































