ಗ್ರಹಣ ದೋಷ ಪರಿಹಾರ

Picture of RB NEWS

RB NEWS

Bureau Report

ಸೂರ್ಯ ,ಚಂದ್ರ ಗ್ರಹಣ ಸ್ಪರ್ಶಗೊಂಡಾಗ ದೈವಸ್ಥಾನ ಹಾಗೂ ದೇವಸ್ಥಾನದ ಜಾತ್ರೆ,ಉತ್ಸವ ಕಾರ್ಯಕ್ರಮ ನೆರವೇರುತ್ತಿದ್ದರೆ ಅಲ್ಲಿಯೂ ಗ್ರಹಣ ಶುದ್ಧೀಕರಣ ಮಾಡುವ ಪದ್ಧತಿ ಲಾಗಾಯ್ತಿಂದ ಆಚರಣೆಯಲ್ಲಿದೆ.
ತುಳುನಾಡಿನ ಹೆಚ್ಚಿನ ದೈವ ಹಾಗೂ ದೇವಸ್ಥಾನದಲ್ಲಿ ಧ್ವಜಸ್ತಂಭ ನೆಟ್ಟಿರುತ್ತದೆ. ಅದನ್ನು ತುಳಭಾಷಿಕರು ಕೊಡಿಮರ ಅನ್ನುತ್ತಾರೆ. ಉತ್ಸವ,ಜಾತ್ರೆ,ಆಯನ ಸಂದರ್ಭದಲ್ಲಿ ಬಟ್ಟೆಯಿಂದ ಮಾಡಿದ ಗರುಡ ಧ್ವಜ ಅಥವಾ ಗರುಡ ರೂಪವಾಗಿರುವ ಬೆಳ್ಳಿಯ ಆಕಾರವನ್ನು ಧ್ವಜಸ್ತಂಭದ ತುದಿಗೆ ಶಾಸ್ತ್ರೋಕ್ತವಾಗಿ ಏರಿಸುತ್ತಾರೆ.

ಅಷ್ಟು ಎತ್ತರದಲ್ಲಿ ಇರುವಂಥದ್ದು,ನಾಲ್ಕೂ ದಿಕ್ಕುಗಳನ್ನು ನೋಡುವುದಕ್ಕೆ ಸಾಧ್ಯವಾಗುವುದು ಗರುಡ ಹಕ್ಕಿಗೆ ಮಾತ್ರ ಸಾಧ್ಯವೆನ್ನುವ ಅರ್ಥದಲ್ಲಿ ಆ ಬೆಳ್ಳಿಯಿಂದ ರಚಿಸಿದ ರೂಪಕ್ಕೆ ಅಥವಾ ಭಕ್ತಿಯ ಧ್ವಜಕ್ಕೆ ಗರುಡ ಅಂತ ಹೇಳುವುದಷ್ಟೆ. ಗರುಡ ಪಕ್ಷಿಯು ವಿಷ ಜಂತುಗಳನ್ನು ನೆಲದಿಂದ ಎತ್ತಿಕೊಂಡು ತಿನ್ನುತ್ತದೆ,ಆ ಕಾರಣದಿಂದ ಅದು ಪರೋಕ್ಷವಾಗಿ ಅಮೃತ ಸುರಿಸಿದ ಹಾಗೆ ಅನ್ನುವ ಭಕ್ತಿಪೂರ್ಣವಾದ ನಂಬಿಕೆಯೂ ಬೆಳೆದು ಬಂದಿರುವುದರಿಂದ ಅದು ,ಗರಡನು ಬಂದು ಕೂರುವ ಜಾಗ ಅಂತ ಕೊಡಿಮರಕ್ಕೆ ಬಹಳ ಪ್ರಾಶಸ್ತ್ಯವಿದೆ. ಆ ಧ್ವಜಸ್ತಂಭದ ತುದಿಯಲ್ಲಿ ಗರುಡ ವಾಹನ ಸವಾರನಾಗಿರುವ ಮಹಾವಿಷ್ಣುವಿನ ಸಾನಿಧ್ಯವೂ ಆಗಿರುತ್ತದೆ ಅಂತಲೇ ಅದು ಮತ್ತಷ್ಟು ಶ್ರೇಷ್ಠ ಹಾಗೂ ಇಡೀ ವಾಸ್ತುಮೂಲೆಗಳೊಳಗಿನ ವಠಾರದ ಅತಿ ಶ್ರೇಷ್ಠ ಜಾಗವೂ ಆಗಿರುತ್ತದೆ.

ಗರಡನು ವಿಷವನ್ನು ನುಂಗುತ್ತ ಅಮೃತಧಾರೆ ಸುರಿಸುತ್ತಿರುತ್ತಾನೆ ಎಂದು ನಾವು ಅಂದುಕೊಳ್ಳುತ್ತೇವೆ. ಯಾವುದೇ ದೇವಸ್ಥಾನಕ್ಕೂ ಸಹ ಧ್ವಜಸ್ತಂಭವೇ ಪರಮ ಶ್ರೇಷ್ಠವಾದುದು. ದೇವಸ್ಥಾನವನ್ನು ಅಥವಾ ದೈವಸ್ಥಾನದ ಒಳ ಪ್ರವೇಶಕ್ಕೆ ಮೊದಲು ಧ್ವಜಸ್ತಂಭದ ತುದಿಗೆ ಕಣ್ಣು ಹಾಯಿಸಿ ,ಮನಸಿನಲ್ಲೆ ವಂದಿಸಿ ನಂತರ ಗೋಪುರ ಪ್ರವೇಶ ಮಾಡುವುದು,ಗರ್ಭಗುಡಿಗೆ ಪ್ರದಕ್ಷಿಣೆ ಹಾಕುವುದು ಶಾಸ್ತ್ರೋಕ್ತ ಕ್ರಮ. ಅದನ್ನು ಅನೇಕರಿಗೆ ಯಾರೂ ತಿಳಿಹೇಳಿರುವುದಿಲ್ಲ. ಅಲ್ಲಿ ಗರುಡನಿರುವುದರಿಂದ ನಮ್ಮಲ್ಲಿನ ವಿಷಕಾರಿ ಭಾವನೆಗಳೆಲ್ಲವನ್ನೂ ಅವನಿಗೊಪ್ಪಿಸಿ ಪರಿಶುದ್ಧರಾಗಿ ಒಳಗೆ ಪ್ರವೇಶಿಸುತ್ತಿದ್ದೇವೆ ಎಂಬ ಮನಸಿನ ಸಂಕಲ್ಪ ನಮ್ಮದಾಗುತ್ತದೆ. ಅಥವಾ ನಮ್ಮಲ್ಲಿನ ಕಲ್ಮಶವನ್ನು ಕಿತ್ತು ಶುದ್ಧೀಕರಿಸು ಎಂದು ಪ್ರಾರ್ಥಿಸಿಕೊಳ್ಳುತ್ತೇವೆ. ಮಂಗಳಾರತಿಯ ಬೆಂಕಿಯ ನಾಲಗೆಯ ಮೇಲೆ ನಮ್ಮೆರಡೂ ಅಂಗೈಯನ್ನು ಸವರುವುದು ಕೂಡ ನಮ್ಮ ಕೈ ,ಮನದಲ್ಲಿನ ಕೆಟ್ಟದ್ದೆಲ್ಲವೂ ಸುಟ್ಟುಬಿಡಲಿ ಎನ್ನುವ ಕಾರಣಕ್ಕೆ.

ಒಮ್ಮೆ ಧ್ವಜಾರೋಹಣವಾಗಿರುವುದನ್ನು ದಿನದ ಗ್ರಹಣಮೋಕ್ಷವಾದ ತಕ್ಷಣ ಪುರೋಹಿತರ ಸೂಕ್ತ ವಿಧಿವಿಧಾನಗಳ ಮೂಲಕ,ಅವರ ನಿರ್ದೇಶನದಂತೆ ಗರುಡ ಧ್ವಜವನ್ನು ಕೊಡಿಮರದ ತುದಿಯಿಂದ ಕೆಳಗಿಳಿಸಿ ಪುರೋಹಿತರ ಉಪಚಾರದ ಬಳಿಕ ಮತ್ತೆ ಆರೋಹಣ ಮಾಡಲಾಗುತ್ತದೆ. ಗ್ರಹಣ ಕಾಲದಲ್ಲಿ ಭ್ರಷ್ಟವಾಗಿದೆ ಎನ್ನುವ ಒಂದೇ ಅರ್ಥದಲ್ಲಿ ಮರುಶುದ್ಧೀಕರಣ ಅಷ್ಟೆ.
ಇನ್ನೊಂದು ಸಂಗತಿಯೇನೆಂದರೆ, ಗರುಡ ಎಂದು ಕರೆಯಲ್ಪಡುವ ಮನುಷ್ಯ ರೂಪದ ಆ ಆಕಾರವನ್ನು( ಹಿಂದೆ ಬಟ್ಟೆಯಿಂದ ರಚಿಸುತ್ತಿದ್ದರು.ಮೂಡುಬಿದ್ರೆಯಲ್ಲಿ ರಾಮಕೃಷ್ಣ ಟೈಲರ್ ಅದನ್ನು ಮಾಡಿಕೊಡುವುದಿತ್ತು) ನೆಲಕ್ಕೆ ಸ್ಪರ್ಶಗೊಳ್ಳದಂತೆ ಎಚ್ಚರಿಕೆಯಿಂದ ಹಿಡಿದುಕೊಳ್ಳುವುದು. ಉಳಿದ ಸಮಯದಲ್ಲೂ ಅದನ್ನು ಸಂಬಂಧಿತ ಭಂಡಾರ ಕೋಣೆಯಲ್ಲಿ ಅಟ್ಟಕ್ಕೆ ನೇತುಹಾಕಿಯೇ ಇಡುವುದು.
ಅದರ ಕಾಲು ನೆಲಕ್ಕೆ ತಾಗಿದರೆ ಆ ಕ್ಷಣದಲ್ಲೇ ಅದು ಬ್ರಹ್ಮರಾಕ್ಷಸನ ರೂಪತಾಳುವುದಂತೆ.ಅಲ್ಲಿಂದ ಓಡಾಡುವುದಕ್ಕೆ ಶುರುಮಾಡುವುದಂತೆ. ಅದನ್ನೆಲ್ಲ ಬಾಲ್ಯದಲ್ಲಿ ನಾವು ಕೇಳಿಸಿಕೊಳ್ಳುತ್ತಿದ ಕತೆ! ಒಟ್ನಲ್ಲಿ ಆ ಗರಡುನ ಶಕ್ತಿ ಮತ್ತು ಪ್ರಭಾವವನ್ನು ಭಯಭಕ್ತಿಯ ಒಪ್ಪದಲ್ಲಿ ಕಾಪಾಡಿಕೊಳ್ಳುವುದು. ನೆಲಕ್ಕೆ ಸ್ಪರ್ಶವಾಗಿರುವ ಘಟನೆ ಗೊತ್ತಿಲ್ಲ!


-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top