ಗ್ಯಾಂಗ್ ವಾರ್: ಸರಕಾರದ ವಿರುದ್ಧ ಮುಗಿಬಿದ್ದ ಹಾಲಿ,ಮಾಜಿ ಶಾಸಕರು

Picture of RB NEWS

RB NEWS

Bureau Report

ಕಾರ್ಕಳ : ಶಿಕ್ಷಣ ಕ್ಷೇತ್ರ ಮಣಿಪಾಲದಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾರ್ ನಡೆಸಿದ್ದಾರೆ. ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ಕಾದಾಡಿದ್ದಾರೆ. ಕ್ರಿಮಿನಲ್ ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬುದಕ್ಕೆ ಇದೊಂದು ಜ್ವಲಂತ ಉದಾಹರಣೆಯಾಗಿದೆ ಎಂದು ಶಾಸಕ ಹಾಗೂ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.

ಉಡುಪಿ, ದಕ್ಷಿಣ ಕನ್ನಡದಂಥ‌ ಜಿಲ್ಲೆಗಳಲ್ಲಿ ಮಾತ್ರವಲ್ಲ ಇಡಿ ರಾಜ್ಯದಲ್ಲಿ ಈಗ ಕಾನೂನು- ಸುವ್ಯವಸ್ಥೆ ಕುಸಿದು ಬಿದ್ದಿದೆ. ಪೊಲೀಸ್ ಠಾಣೆಗಳನ್ನು ರಾಜಕೀಯ ದ್ವೇಷ ತೀರಿಸಿಕೊಳ್ಳುವ ಅಸ್ತ್ರವಾಗಿ ಬಳಸಿಕೊಳ್ಳುವುದಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದ್ದರ ಪರಿಣಾಮವಾಗಿ ಇಂದು ಕ್ರಿಮಿನಲ್ ಗಳು ವಿಜೃಂಭಿಸುವಂತಾಗಿದೆ.ಇದು ಗೃಹ ಇಲಾಖೆ ಹಾಗೂ ಗೃಹ ಸಚಿವರ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಸಿದ್ದರಾಮಯ್ಯನವರೇ ದಕ್ಷಿಣ ಕನ್ನಡ ಜಿಲ್ಲೆಗೆ ಆಗಮಿಸಿರುವ ನಿಮಗೆ ಸ್ವಾಗತ. ಆದರೆ ಇಲ್ಲಿಂದ ಹೊರಡುವುದಕ್ಕೆ ಮೊದಲು ಕೆಲ ಪ್ರಶ್ನೆಗಳಿಗೆ ಉತ್ತರಿಸಿ ಹೋಗಿ.

  • ಕಾನೂನು-ಸುವ್ಯವಸ್ಥೆ ಕಾಪಾಡಲಾರದ ಗೃಹ ಸಚಿವರಿಂದ ಎಂದು ರಾಜೀನಾಮೆ ಪಡೆಯುತ್ತೀರಿ ?
  • ಪೊಲೀಸ್ ಠಾಣೆಯನ್ನು ಆಳುವ ಸರ್ಕಾರದ ಆಳಾಗಿಸಿಕೊಂಡಿರುವುದಕ್ಕೆ ಎಂದು ಮುಕ್ತಾಯ ಹಾಡುತ್ತೀರಿ ?
  • ಕ್ರಿಮಿನಲ್ ಗಳಿಗೂ ನಿಮ್ಮ ಸರ್ಕಾರಕ್ಕೂ ಒಳ ಒಪ್ಪಂದ ಏರ್ಪಟ್ಟಿದ್ದರೆ ಮಾಸಿಕ ಹಫ್ತಾ ಎಷ್ಟು ನಿಗದಿ ಮಾಡಿದ್ದೀರಿ ?
  • ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಪೊಲೀಸರ ಕೈ ಕಟ್ಟಿ ಹಾಕಿದ್ದೀರಾ ?
  • ಜನರ ಶಾಂತಿ- ನೆಮ್ಮದಿ ಕಾಪಾಡಲಾರದ ಸರ್ಕಾರ ಅಧಿಕಾರದಲ್ಲಿದ್ದು ಪ್ರಯೋಜನವುಂಟೇ ?
  • ಕ್ರಿಮಿನಲ್ ಗಳ ಅಟ್ಟಹಾಸ ನಿಲ್ಲಿಸದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲು ಭಯವೇಕೆ ?
    *ಸಿದ್ದರಾಮಯ್ಯನವರೇ ನಿಮಗೊಂದು ನೇರ ಸವಾಲು ಈ ಘಟನೆಗೆ ಕಾರಣವಾದ ಗ್ಯಾಂಗ್ ಸ್ಟಾರ್ ಗಳನ್ನು ಎಷ್ಟು ಗಂಟೆಯೊಳಗೆ ಬಲಿ ಹಾಕುತ್ತೀರಿ ? ಸಣ್ಣ ಕಾರಣಕ್ಕೆ ಶಾಸಕರ ನ್ನು ಬಂದಿಸಲು ದಂಡು ಕಳುಹಿಸುವ ನಿಮ್ಮ ಸರ್ಕಾರಕ್ಕೆ ಪುಂಡರನ್ನು ಬಂದಿಸುವ ಗಂಡೆದೆ ಇಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ಉಡುಪಿ : ಮಣಿಪಾಲ – ಉಡುಪಿ ರಸ್ತೆಯಲ್ಲಿ ರಾತ್ರಿಯಲ್ಲಿ ರಾಜಾರೋಷವಾಗಿ ರೌಡಿಗಳು ಗ್ಯಾಂಗ್ ವಾ‌ರ್ ನಡೆಸಿದ್ದಾರೆ ಎನ್ನಲಾದ ಘಟನೆ ತುಂಬಾ ಆತಂಕಕಾರಿಯಾಗಿದೆ. ಇದನ್ನು ಪೊಲೀಸ್‌ ಇಲಾಖೆ ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಆಗ್ರಹಿಸಿದ್ದಾರೆ.

ಸಿನಿಮೀಯ ರೀತಿಯಲ್ಲಿ ಕಾರುಗಳನ್ನು ಬಳಸಿ ರಸ್ತೆ ಮದ್ಯೆ ಕಾದಾಡಿದ್ದಾರೆ ಎಂದರೆ ಕ್ರಿಮಿನಲ್ ಗಳಿಗೆ ಆಳುವ ಸರ್ಕಾರದ ಕಾನೂನಿನ ಭಯ ಇಲ್ಲದಂತಾಗಿದೆ ಎಂಬೂದಕ್ಕೆ ಇದೊಂದು ಜ್ವಲಂತ ಸಾಕ್ಷಿಯಾಗಿದೆ.

ಪ್ರಜ್ಞಾವಂತ ನಾಗರಿಕ ಸಮಾಜದ ಉಡುಪಿಯಲ್ಲಿ ಇಂತಹ ದುಷ್ಕೃತ್ಯಗಳು ನಡೆಯುತ್ತದೆ ಎಂದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ಮುಂದಿನ ದಿನಗಳಲ್ಲಿ ಕೋಮು ಸಂಘರ್ಷಕ್ಕೂ ಎಡೆಮಾಡಿಕೊಡಬಹುದು.

ಆದ್ದರಿಂದ ಪೊಲೀಸ್ ಇಲಾಖೆ ಯಾವುದೇ ಪ್ರಭಾವಕ್ಕೆ ಒಳಗಾಗದೆ ಇದರ ಹಿಂದಿರುವ ಎಲ್ಲಾ ದುಷ್ಕರ್ಮಿಗಳ ಹೆಡೆಮುರಿಕಟ್ಟಿ ಕಠಿಣವಾದ ಕಾನೂನು ಕ್ರಮ ಜರುಗಿಸಬೇಕು. ಸರ್ಕಾರವು ಈ ಘಟನೆಯ ಬಗ್ಗೆ ಗಮನಹರಿಸಿ ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಕಡಿವಾಣ ಹಾಕದಿದ್ದಲ್ಲಿ ಬೀದಿಗೆ ಇಳಿದು ಹೋರಾಟ ಮಾಡುವ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top