


ಗೂಡ್ಸ್ ವಾಹನ ಡಿಕ್ಕಿ: ರಸ್ತೆ ಬದಿ ನಿಂತುಕೊಂಡಿದ್ದ ವ್ಯಕ್ತಿ ದಾರುಣ ಮೃತ್ಯು
ಕಾರ್ಕಳ: ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಂತುಕೊಂಡಿದ್ದ ವ್ಯಕ್ತಿಯೋರ್ವ ದಾರುಣ ರೀತಿಯಲ್ಲಿ ಮೃತಪಟ್ಟ ಘಟನೆ ಅಜೆಕಾರು ಸಮೀಪದ ಗುಡ್ಡೆಯಂಗಡಿ ಬಳಿಯ ಓಟೆಹಳ್ಳ ಸೇತುವೆಯ ಬಳಿ ಶನಿವಾರ ಮುಂಜಾನೆ 7 ಗಂಟೆ ಸುಮಾರಿಗೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಆಸೈ ತಂಬಿ(21) ಎಂದು ಗುರುತಿಸಲಾಗಿದೆ.

ಕಾರ್ಕಳ ಕಡೆಯಿಂದ ಹೆಬ್ರಿ ಕಡೆಗೆ ಅತಿವೇಗವಾಗಿ ಹೋಗುತ್ತಿದ್ದ ಕೊರಿಯರ್ ಕಂಪೆನಿಯ ಗೂಡ್ಸ್ ವಾಹನ ರಸ್ತೆ ಬಲಭಾಗಕ್ಕೆ ಬಂದು ವ್ಯಕ್ತಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಹುಬ್ಬಳ್ಳಿಯ ಹಾನಗಲ್ ಗೆ ಸಾಗುತ್ತಿದ್ದ ವಾಹನದ ಚಾಲಕನಿಗೆ ಮುಂಜಾನೆ ನಿದ್ದೆಗಣ್ಣಿನಲ್ಲಿ ಈ ಅಪಘಾ ಸಂಭವಿಸಿದೆ ಎನ್ನಲಾಗಿದೆ.

ಗಾಯಾಳುವನ್ನು ಅಜೆಕಾರು ಪ್ರಾಥಮಿಕ ಆರೋಗ್ಯ ಕೇಂದ್ರದ 108 ಸಿಬ್ಬಂದಿಗಳಾದ ಸ್ಟಾಫ್ ನರ್ಸ್ ದೇವಿಕಾ ಹಾಗೂ ಪೈಲಟ್ ಕಿಶೋರ್ ಕುಮಾರ್ ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







































