ಕ್ಲಾಸ್ ರೂಂ ಗೆ ನುಗ್ಗಿದ ಭಗ್ನಪ್ರೇಮಿಯಿಂದ ಇರಿತ
ಕಾರ್ಕಳ : ಶಿಕ್ಷಣ ಕಾಶಿ ಎಂದೇ ಕರೆಯಿಸಿಕೊಂಡಿರುವ ಮೂಡುಬಿದಿರೆ ಆಳ್ವಾಸ್ ಕಾಲೇಜಿನ ಕ್ಲಾಸ್ ರೂಂ ನಲ್ಲಿ ಭಗ್ನಪ್ರೇಮಿಯೊಬ್ಬ ತನ್ನ ಪ್ರಿಯತಮೆಗೆ ಚೂರಿ ಇರಿದು ಕೊಲೆಗೆ ಪ್ರಯತ್ನಿಸಿದ ಘಟನೆ ಸೋಮವಾರದಂದು ನಡೆದಿದೆ.
ಕೃತ್ಯ ಎಸಗಿ ಪೊಲೀಸರ ಬಂಧನಕ್ಕೆ ಒಳಗಾದವನು ತುಮಕೂರು ಮೂಲದ ಮಂಜುನಾಥ್ ಎಂದು ತಿಳಿದುಬಂದಿದೆ.
ಗಾಯಾಳು ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜುನಾಥ್ ನಿಗೂ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ನಡುವೆ ಪ್ರೇಮಾಂಕುರವಾಗಿತ್ತು. ವಿದ್ಯಾರ್ಥಿನಿ ಕೂಡ ತುಮಕೂರು ಮೂಲದವಳಾಗಿದ್ದು ಪಿಯುಸಿವರೆಗೆ ಇವರಿಬ್ಬರು ಜೊತೆಯಾಗಿಯೇ ಆಳ್ವಾಸ್ ನಲ್ಲಿ ಕಲಿಯುತ್ತಿದ್ದರು.
ಹುಡುಗ ಆ ನಂತರ ಕಾಲೇಜು ಬಿಟ್ಟಿದ್ದು, ಈಕೆ ವಿದ್ಯಾಬ್ಯಾಸ ಮುಂದುವರಿಸಿದ್ದಳು. ಇವರ ನಡುವಿನ ಪ್ರೇಮದ ವಿಚಾರ ಹುಡುಗಿ ಮನೆಯವರಿಗೆ ತಿಳಿದಿದ್ದು ಆಕೆಯ ಬಳಿಯಿದ್ದ ಮೊಬೈಲ್ ವಶಪಡಿಸಿಕೊಂಡಿದ್ದರು ಎನ್ನಲಾಗಿದೆ.
ತನ್ನ ಪ್ರೀತಿ ಪ್ರೇಮ ಅರ್ಧದಲ್ಲೇ ಮೊಟಕುಗೊಂಡ ಹಿನ್ನೆಲೆಯಲ್ಲಿ ಪ್ರಿಯಕರ ಮಂಜುನಾಥ್ ವಿದ್ಯಾರ್ಥಿನಿ ವಿರುದ್ಧ ಸೇಡಿನ ಮನೋಭಾವ ಬೆಳೆಸಿಕೊಂಡಿದ್ದ. ತನ್ನ ಪ್ರೇಯಸಿಯ ಭೇಟಿಗಾಗಿ ನೇರ ತುಮಕೂರಿನಿಂದ ಮೂಡಬಿದ್ರೆಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದನು.
ಈತನ ಭೇಟಿಗೆ ನಿರಾಕರಿಸಿದ ವಿದ್ಯಾರ್ಥಿನಿ ನಡೆಯಿಂದ ಕುಪಿತಗೊಂಡ ಮಂಜುನಾಥ್ ನೇರವಾಗಿ ತರಗತಿಗೆ ನುಗ್ಗಿ ಕತ್ತರಿಯಿಂದ ಇರಿದಿದ್ದಾನೆ. ಕೂಡಲೇ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳು ಆತನನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದ್ದು ಮೂಡಬಿದ್ರೆ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.
ಇರಿತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.














