ಕ್ರಿಯೇಟಿವ್ ಕಾಲೇಜಿನಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ
RB NEWS
Bureau Report
ಕ್ರಿಯೇಟಿವ್ ಕಾಲೇಜಿನಲ್ಲಿ “ಅಕ್ಷರಯಾನ” ಯುವ ಬರಹಗಾರರ ಸಮ್ಮೇಳನ
ಕಾರ್ಕಳ: ಯುವ ಲೇಖಕರು ತಮ್ಮಲ್ಲಿನ ಪ್ರತಿಭೆ, ಸೃಜನಶೀಲತೆಗಳನ್ನು ಬಳಸಿಕೊಂಡು ತಮ್ಮ ಆಸಕ್ತಿಯ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಲು ಅಣಿಗೊಳ್ಳಬೇಕು ಎಂದು ಶಾಸಕ ವಿ.ಸುನೀಲ್ ಕುಮಾರ್ ಹೇಳಿದರು.
ಯುವ ಮತ್ತು ಪ್ರತಿಭಾವಂತ ಬರಹಗಾರರನ್ನು ಪ್ರೋತ್ಸಾಹಿಸಲು ಕ್ರಿಯೇಟಿವ್ ಪುಸ್ತಕ ಮನೆ ಹಾಗೂ ವಿಕಾಸ ಸೇವಾ ಸಂಸ್ಥೆ ಕಾರ್ಕಳ ಇದರ ಸಹಯೋಗದಲ್ಲಿ ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜಿನ ಸಪ್ತಸ್ವರ ವೇದಿಕೆಯಲ್ಲಿಯುವ ಬರಹಗಾರರ ಸಮ್ಮೇಳನ “ಅಕ್ಷರಯಾನ – ಬರವಣಿಗೆಯ ಮೆರವಣಿಗೆ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ಎಸ್ಎಲ್ರವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಲೇಖಕ, ನಟ ಮತ್ತು ನಿರ್ದೇಶಕ ಪ್ರಕಾಶ್ ಬೆಳವಾಡಿ ಮಾತನಾಡಿ, ಸಾಹಿತಿಗಳು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡರೆ ಸಾಹಿತ್ಯಕ್ಷೇತ್ರ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದರು.
ರಂಗ ಕಲಾವಿದ, ನಟ ಮತ್ತು ನಿರ್ದೇಶಕ ಎಸ್ಎನ್ ಸೇತುರಾಮ್ ಮಾತನಾಡಿ, ಪಠ್ಯೇತರ ಚಟುವಟಿಕೆಗಳು ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿ. ಚಿಕ್ಕ ವಯಸ್ಸಿನಲ್ಲಿಯೇ ಸಾಹಿತ್ಯದ ಬೀಜ ಬಿತ್ತಿದರೆ ಜೀವನಪರ್ಯಂತ ಬೆಳೆಯುವ ಶಕ್ತಿ, ಆತ್ಮವಿಶ್ವಾಸ, ಜ್ಞಾನ ಲಭಿಸುತ್ತದೆ ಎಂದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ ಯುವಜನಾಂಗವನ್ನು ಚಿಂತನೆಗೆ, ಯೋಚನೆಗೆ ಹಚ್ಚುವ ಕಾರ್ಯಕ್ರಮವಾಗಿದೆ. ಅಮೂರ್ತ ಭಾವನೆಗಳಿಗೆ ಭಾಷೆಯ ಮೂಲಕ ಮೂರ್ತರೂಪವನ್ನು ಕೊಡುವ ಪ್ರಯತ್ನ ಮಾಡಿ ಎಂದರು.
ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದಿಂದ ವಿ ರವಿಶಂಕರ ಹೆಗಡೆರವರ ಶ್ರೀ ಭಾರತ ಸಾವಿತ್ರೀ, ಸುದೀಕ್ಷಾಎಸ್ ಪೈ ರವರ ಬಚ್ಚಿಟ್ಟ ಭಾವಗಳು, ಕೆ ಅಶೋಕ್ಕುಮಾರ್ರವರ ಸೂರ್ಯಾಯ ನಮಃ, ಅನುಬೆಳ್ಳೆ ಕಾವ್ಯನಾಮಾಂಕಿತ ರಾಘವೇoದ್ರ ಬಿ ರಾವ್ರವರ ಬ್ಲ್ಯಾಕ್ಕಾಫಿ, ರಾಜೇಂದ್ರ ಭಟ್ರವರ ರಾಜಪಥ ಎಂಬ ಐದು ಪುಸ್ತಕಗಳು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಂಡಿತು.
ಪ್ರತಾಪ್ ಸಿಂಹರವರು " ನನ್ನ ಬರವಣಿಗೆ, ನನ್ನ ಬದ್ಧತೆ " ಎಂಬ ವಿಚಾರದ ಕುರಿತು, ಎಸ್ಎನ್ ಸೇತುರಾಮ್ರವರು "ಕನ್ನಡ ಸಾಹಿತ್ಯದ ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದ ಬಗ್ಗೆ ಹಾಗೂ ಪ್ರಕಾಶ್ ಬೆಳವಾಡಿರವರು " ಸಾಹಿತ್ಯದ ಮೂಲಕ ರಾಷ್ಟ್ರೀಯ ಪ್ರಜ್ಞೆ " ಎಂಬ ವಿಷಯದ ಕುರಿತು ಸಂವಾದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಕಾರ್ಯಕ್ರಮದ ಸಮನ್ವಯಕಾರರಾಗಿ ಪ್ರಕಾಶ್ ಮಲ್ಪೆಖ್ಯಾತ ವಾಗ್ಮಿಗಳು ಮತ್ತು ಚಿಂತಕರು, ಅವಿನಾಶ್ಕಾಮತ್ ನಿರೂಪಕರು ಮತ್ತು ಪತ್ರಕರ್ತರು, ರಾಜೇಂದ್ರ ಭಟ್ ಅಂಕಣಕಾರರು ಪಾಲ್ಗೊಂಡರು.
ಸಮಾರೋಪ
ಪ್ರಕಾಶ್ ಬೆಳವಾಡಿಯವರ ಅಧ್ಯಕ್ಷತೆಯಲ್ಲಿ ಅಕ್ಷರಯಾನ ಬರವಣಿಗೆಯ ಮೆರವಣಿಗೆ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪ್ರಭಾಕರ ಶೆಟ್ಟಿ ಕೊಂಡಳ್ಳಿ ಮಾತನಾಡಿ, ವೃತ್ತಿ ಯಾವುದೇ ಇರಲಿ, ವ್ಯಕ್ತಿಯ ಪ್ರವೃತ್ತಿ ತುಂಬ ಮುಖ್ಯ ಎಂದರು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹಸಂಸ್ಥಾಪಕರು, ಪ್ರಾಂಶುಪಾಲ ವಿದ್ವಾನ್ ಗಣಪತಿ ಭಟ್ ಮಾತನಾಡಿ ಮನಸ್ಸಿನ ಭಾವನೆ, ನೋವು, ನಲಿವು, ವೇದನೆಗಳನ್ನು ಶಬ್ದ ರೂಪದಲ್ಲಿ ಪ್ರಕಟ ಮಾಡುವವರಿಗೆ ಮಾತ್ರ ಸಾಹಿತ್ಯ ಬರೆಯಲು ಸಾಧ್ಯವಾಗುತ್ತದೆ ಎಂದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಕಾಶ್ ಬೆಳವಾಡಿಯವರು ಬರಹಗಾರರು ಮಾನವೀಯ ಕಾಳಜಿ, ಕಳಕಳಿಯೊಂದಿಗೆ ಸೂಕ್ಷ್ಮ ಸಂವೇದನಾಶೀಲರಾಗಿ ಸಾಹಿತ್ಯ ರಚಿಸಿ ವರ್ತಮಾನದ ವಾರಸುದಾರರಿಗೆ ಮಾರ್ಗದರ್ಶನ ಮಾಡುವಂತಾಗಬೇಕು ಎಂದರು. ಸಹಸಂಸ್ಥಾಪಕ ಅಶ್ವತ್ಎಸ್ಎಲ್, ಆದರ್ಶ ಎಂ ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅತ್ಯುತ್ತಮ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಕೊಡಲಾಯಿತು. ಪುಸ್ತಕ ಮನೆ ಪ್ರಕಾಶನದ ವತಿಯಿಂದ ಎಲ್ಲಾ ಬಗೆಯ ಸಾಹಿತ್ಯ ಕೃತಿಗಳ ಪ್ರದರ್ಶನ ಮತ್ತು ಮಾರಾಟವನ್ನು ಏರ್ಪಡಿಸಿ, ಹಲವರು ಇದರ ಸದುಪಯೋಗವನ್ನು ಪಡೆದುಕೊಂಡರು.