ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಕೋಳಿ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವು ವಿಕೋಪಕ್ಕೆ ತಿರುಗಿ ಪರಸ್ಪರ ಹಲ್ಲೆಗೆ ಕಾರಣವಾದ ಘಟನೆ ವರದಿಯಾಗಿದೆ. ಈ ಪ್ರಕರಣ ಸಂಬಂಧ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಹಾಗೂ ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ. ಮಾರ್ಚ್ 26ರಂದು ರಾತ್ರಿ ಸುಮಾರು 8 ಗಂಟೆಗೆ ಅಂದಾರು ಗ್ರಾಮದ ಮುತ್ತುಪಾಡಿಯಲ್ಲಿ ಈ ಘಟನೆ ನಡೆದಿದೆ. ಹರೀಶ್, ಸುಧೀರ್, ದುರ್ಗಾ, ಗುರುದೀಶ್ ಮತ್ತು ಪ್ರತಾಪ್ ಸೇರಿದಂತೆ ಸುಮಾರು 15 ಜನರ ಗುಂಪು ಕಾರು ಮತ್ತು ಬೈಕ್ಗಳಲ್ಲಿ ಆಗಮಿಸಿ ಸುದರ್ಶನ್ ಶೆಟ್ಟಿಯವರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ. ಈ ವೇಳೆ ಜಗಳವನ್ನು ತಡೆಯಲು ಮುಂದಾದ ಪದ್ಮಾ ಮತ್ತು ಆಕಾಶ್ ಅವರ ಮೇಲೂ ಹರೀಶ್ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡುತ್ತಾ ಹಲ್ಲೆ ನಡೆಸಿದನೆಂದು ತಿಳಿದುಬಂದಿದೆ. ಈ ಗಲಾಟೆಯಲ್ಲಿ ಆಕಾಶ್ ಅವರಿಗೆ ಗಾಯಗಳಾಗಿರುವುದಾಗಿ ವರದಿಯಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸುತ್ತಿದ್ದಾರೆ.