
ಕೋಡಿಕ್ಕಲ್‌ನಲ್ಲಿ ದ್ವಿಚಕ್ರ ವಾಹನ ಕಳವು: 40ಕ್ಕೂ ಅಧಿಕ ಪ್ರಕರಣಗಳ ಆರೋಪಿಯ ಬಂಧನ
ಮಂಗಳೂರು, ಆ.19: ನಗರದ ಊರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕ್ಕಲ್‌ನಲ್ಲಿ ಮನೆಯ ಎದುರು ಪಾರ್ಕ್ ಮಾಡಿದ್ದ ದ್ವಿಚಕ್ರ ವಾಹನ ಕಳವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಉಳ್ಳಾಲದ ಮಹಮ್ಮದ್ ಫೈಜಲ್ ಎಂದು ಗುರುತಿಸಲಾಗಿದೆ. ಜುಲೈ 24ರಂದು ಕೋಡಿಕ್ಕಲ್‌ನಲ್ಲಿ ಮನೆಯ ಎದುರು ಪಾರ್ಕ್ ಮಾಡಿದ್ದ KA-19-EB-2226 ನೋಂದಣಿ ಸಂಖ್ಯೆಯ ಹೊಂಡಾ ಡಿಯೋ ಸ್ಕೂಟರ್ ಕಳವಾಗಿರುವ ಕುರಿತು ಊರ್ವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆರೋಪಿಯ ಚಲನವಲನ ಹಾಗೂ ಚಹರೆಯನ್ನು ಗುರುತಿಸಿ ಆತನ ಜಾಡು ಪತ್ತೆಹಚ್ಚಿದ್ದಾರೆ. ಬಳಿಕ ಆಗಸ್ಟ್ 18ರಂದು ಕಾರ್ಯಾಚರಣೆ ನಡೆಸಿದ ಪೊಲೀಸರು ಕಳವಾದ ವಾಹನವನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ತನಿಖೆಯಲ್ಲಿ ಬಂಧಿತ ಮಹಮ್ಮದ್ ಫೈಜಲ್ ವಿರುದ್ಧ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 40ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ತಿಳಿದುಬಂದಿದೆ. ಅಲ್ಲದೆ, ಮಂಗಳೂರು ನಗರದ ಉತ್ತರ ಪೊಲೀಸ್ ಠಾಣೆ, ಕೊಣಾಜೆ, ಉಳ್ಳಾಲ, ಮೂಡುಬಿದಿರೆ, ಬಂಟ್ವಾಳ ಹಾಗೂ ಮಣಿಪಾಲ ಪೊಲೀಸ್ ಠಾಣೆಗಳಲ್ಲಿ ಆರೋಪಿಯ ವಿರುದ್ಧ ದಸ್ತಗಿರಿ ವಾರೆಂಟ್‌ಗಳು ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳವು ಪ್ರಕರಣದ ತನಿಖೆಯನ್ನು ಊರ್ವಾ ಪೊಲೀಸರು ಮುಂದುವರಿಸಿದ್ದು, ಆರೋಪಿಯ ಹಿಂದಿನ ಪ್ರಕರಣಗಳು ಹಾಗೂ ಇತರ ಕೃತ್ಯಗಳ ಬಗ್ಗೆಯೂ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.





































