ಕೋಟೆಕಣಿಯಲ್ಲಿ ಮನೆ,ಕಾರು ದರೋಡೆ: ಮೂಲ್ಕಿಯಲ್ಲಿ ಕಾರು ತೊರೆದು ಹೋದ ದುಷ್ಕರ್ಮಿಗಳು
ಮಂಗಳೂರು : ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಣಿಯ ಮನೆಯಲ್ಲಿ ದರೋಡೆ ನಡೆಸಿ ಅಲ್ಲಿದ್ದ ಕಾರೊಂದನ್ನು ಎಗರಿಸಿ ಮೂಲ್ಕಿ ಸಮೀಪದಲ್ಲಿ ತೊರೆದು ಹೋದ ಘಟನೆ ನಡೆದಿದೆ.
ಮುಲ್ಕಿಯಲ್ಲಿ ಇಂದು ಬೆಳಗ್ಗೆ ಕಾರೊಂದು ಪತ್ತೆಯಾಗಿದ್ದು, ಅದು ಉರ್ವಾಸ್ಟೋರ್ ಕೋಟೆಕಣಿ ಮನೆಯಿಂದ ದರೋಡೆ ಆಗಿತ್ತು ಎಂಬುವುದು ದೃಢ ಪಟ್ಟಿದೆ.
ನಗರದ ಉರ್ವಸ್ಟೋರ್ ಸಮೀಪದ ಕೋಟೆಕಣಿ ಒಂದನೇ ಕ್ರಾಸ್ ನಲ್ಲಿ ಮನೆಯೊಂದಕ್ಕೆ ಇಂದು ಮುಂಜಾನೆ ದರೋಡೆಕೋರರು ನುಗ್ಗಿದ್ದಾರೆ. ಈ ವೇಳೆ ಮನೆಮಂದಿಗೆ ಹಲ್ಲೆಗೈದು ಚಿನ್ನಾಭರಣ, ಕಾರನ್ನು ದರೋಡೆಗೈದು ಅದೇ ಕಾರಿನಲ್ಲಿ ಮುಲ್ಕಿಯ ವರೆಗೆ ಪ್ರಯಾಣಿಸಿ ಆಧಿದನ್ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಳಿ ಕಾರನ್ನು ತೊರೆದು ಹೋಗಿದ್ದಾರೆ.
ಅಪರಿಚಿತ ಕಾರೊಂದು ಹೆದ್ದಾರಿ ಪಕ್ಕದ ಸರ್ವಿಸ್ ರಸ್ತೆಯಲ್ಲಿ ಪತ್ತೆಯಾಗಿರುವ ಕಾರಣ ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳು




ಮಂಗಳವಾರ ನಸುಕಿನ ಜಾವದಲ್ಲಿ ಈ ಘಟನೆ ನಡೆದಿದೆ. 4 ಮಂದಿ ದರೋಡೆಕೋರರ ತಂಡ ಉರ್ವ ಕೊಟ್ಟಾರದ ಬಳಿಯ ಕೋಟೆಕಣಿಯ ಮನೆಗೆ ನುಗ್ಗಿ ಕಿಟಕಿ ಕತ್ತರಿಸಿ ದರೋಡೆ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕೋಟೆಕಣಿ ಒಂದನೇ ಕ್ರಾಸ್ ನ ಕರೀಷ್ಮಾ ಎನ್ನುವ ಮನೆಯಲ್ಲಿ ದರೋಡೆ ನಡೆದಿದೆ. ವಿಕ್ಟರ್ ಮೆಂಡೋನ್ಸಾ (71) ಪ್ಯಾಟ್ರಿಷಾ ಮೆಂಡೋನ್ಸಾ (60) ದಂಪತಿಗಳಿಬ್ಬರು ಮಾತ್ರ ಮನೆಯಲ್ಲಿ ಉಳಿದಿದ್ದರು, ಮಕ್ಕಳಿಬ್ಬರು ವಿದೇಶದಲ್ಲಿದ್ದಾರೆ.
ಬೆಡ್ ರೂಂನ ಕಿಟಿಕಿ ಕಟ್ ಮಾಡಿಕೊಂಡು ರಾತ್ರಿ 1.45 ರಿಂದ ನಾಲ್ಕು ಗಂಟೆಯ ವರೆಗೆ ದರೋಡೆ ಮಾಡಿದ್ದಾರೆ. ದಂಪತಿಗಳಿಬ್ಬರಿಗೂ ಹಲ್ಲೆ ನಡೆಸಿರುವ ಕಾರಣ ಗಾಯಾಳುಗಳಿಬ್ಬರು ಎ ಜೆ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಮನೆಯವರಿಗೆ ಮಾರಕಾಯುಧ ತೋರಿಸಿ ಬೆದರಿಸಿ ದರೋಡೆ ಕೃತ್ಯ ನಡೆಸಿದ್ದಾರೆ. ಬಳಿಕ ಮನೆಯ ಕಾರಿನ ಕೀ ಕಸಿದಿರುವ ದರೋಡೆಕೋರರು ಆ ಕಾರಿನಲ್ಲಿ ಉಡುಪಿಯತ್ತ ತೆರಳಿದ್ದಾರೆ. ಬಳಿಕ ಮನೆ ಮಾಲೀಕರ ಕಾರು ಮೂಲ್ಕಿಯಲ್ಲಿ ಪತ್ತೆಯಾಗಿದೆ.
ಹೆಜಮಾಡಿ ಟೋಲ್ ಗೇಟ್ ಮುನ್ನ ಕಾರು ನಿಲ್ಲಿಸಿ ಅವರ ಕಾರಿನಲ್ಲಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ದರೋಡೆಗೈದ ಸೊತ್ತುಗಳ ಮೌಲ್ಯ ಇನ್ನೂ ತಿಳಿದು ಬಂದಿಲ್ಲ.
ಕಾರಿನೊಳಗೆ ಮೊಬೈಲ್ ಒಂದು ಪತ್ತೆಯಾಗಿದ್ದು, ಇದು ಯಾರ ಮೊಬೈಲ್ ಎಂದು ತಿಳಿದು ಬಂದಿಲ್ಲ. ಪೊಲೀಸರ ಮಾಹಿತಿ ಪ್ರಕಾರ ಇದು ದರೋಡೆಕೋರರ ಮೊಬೈಲ್ ಅವಸರದಲ್ಲಿ ಕಾರಿನಲ್ಲೇ ಬಾಕಿಯಾಗಿರುವ ಸಾಧ್ಯತೆ ಇದೆ. ಉರ್ವ ಠಾಣೆಯ ಪೋಲಿಸರು ತನಿಖೆಯನ್ನು ನಡೆಸುತ್ತಿದ್ದಾರೆ.




































