ಕೆ.ವಸಂತ ಬಂಗೇರ ಅವರ ವ್ಯಕ್ತಿತ್ವ ಚಿತ್ರಣ ವಸಂತ ವಿನ್ಯಾಸ
ವಸಂತ ಬಂಗೇರರ ಕೋಟ್ಯಾಂತರ ಸಾಲಗಳು ಬಹುಪಾಲು ಜನರಿಗೇ ಹೋದದ್ದು. ಕೆಲವು ಜನಗಳು ಬಸ್ಸ್ಟಾಂಡಲ್ಲಿ ಬಸ್ಸಿಗೆ ಕಾಯ್ತಾ ಬಸ್ ಬರಲು ಇನ್ನೂ ತಡ ಎಂದರೆ ಸೀದ ಬಂಗೇರ್ರ ಆಫೀಸಿಗೆ ಬರುವುದು. ಇಪ್ಪತ್ತು ರುಪಾಯಿಯಾದರೂ ಸಿಗ್ತದೆ ಅವನಿಗೆ. ಲಾಭ.
ವಧುವಿನ ಕಡೆಯಿಂದ ಆಮಂತ್ರಣ ಕೊಡಲು ಬಂದರೆ ಒಂದು ಸಾವಿರ ರುಪಾಯಿ ಕೊಡುವ ಪದ್ಧತಿ ಇತ್ತು. ಕಡೆಗದು ಎಲ್ಲಿ ವರೆಗೆ ಹೋಯಿತು ಎಂದರೆ ಕಾಸರಗೋಡಿನಿಂದೆಲ್ಲ ಆಮಂತ್ರಣ ಪತ್ರಿಕೆ ಕೊಡಲು ಬರಲು ಶುರುವಾಯಿತು.
ಅವರ ಕಛೇರಿಯಲ್ಲಿದ್ದವರು ಒಬ್ಬರು ನನಗೆ ಕೊಟ್ಟ ಮಾಹಿತಿ. ಒಮ್ಮೆ ಯಾರೋ ಮಗಳ ಮದುವೆಗೆ ಹಣ ಕೇಳಲು ಬಂದರಂತೆ. ” ಎಷ್ಟು ಬೇಕು?” ಎಂದರು. “ಎರಡು ಲಕ್ಷ” ಎಂದರು. “ಅಷ್ಟೆಲ್ಲ ಸಾಧ್ಯವೆ ಇಲ್ಲ” ಎಂದರು ಇವರು. ಕಡೆಗೆ ಐವತ್ತು ಸಾವಿರ ಕೊಟ್ಟರು. ಅವನು ತಗೊಂಡು ಹೋದ. ಅವನು ಹೋದ ಮೇಲೆ ಇವರು ಅಲ್ಲಿದ್ದವರ ಬಳಿ,”ಒಂದೂವರೆ ಉಳಿಯಿತು” ಎಂದರಂತೆ.
ಅವರ ಕಾಲೇಜಿನ ಉಪನ್ಯಾಸಕರು ಇನ್ಕ್ರಿಮೆಂಟ್ ಕೇಳಿದರಂತೆ. “ನಾನಾ ರೀತಿ ಲೆಕ್ಕ ಹಾಕಿದೆ. ಊಹೂಂ. ಕೊಡಲು ಸಾಧ್ಯವೆ ಇಲ್ಲ ಎನಿಸಿತು” ಎಂದರು. “ಮತ್ತೇನು ಮಾಡಿದಿರಿ?” ಎಂದು ನಾನು ಕೇಳಿದೆ. “ಲೆಕ್ಕ ಹಾಕುವುದನ್ನು ನಿಲ್ಲಿಸಿದೆ. ಇನ್ಕ್ರಿಮೆಂಟ್ ಕೊಟ್ಟೆ” ಎಂದರು.
ಬಂಗೇರ್ರ ತಂದೆ ಜಮೀನ್ದಾರ್ರು. ಬರಲು ಬಾಕಿ ಇರುವ ಗೇಣಿಯ ದಾಖಲೆ ಪುಸ್ತಕಗಳನ್ನೆಲ್ಲ ತಂದೆ ಇವರ ಕೈಗೆ ಕೊಟ್ಟು,”ನನ್ನ ನಂತರ ಇದನ್ನು ವಸೂಲಿ ಮಾಡಲು ಹೋಗಬಾರದು” ಎಂದರಂತೆ. ಬಂಗೇರ್ರು ಸೀದಾ ಆ ಎಲ್ಲ ಪುಸ್ತಕಗಳನ್ನು ಅಲ್ಲೆ ಉರಿತಿದ್ದ ಒಲೆಗೆ ಹಾಕಿ,”ವಸೂಲಿ ಮಾಡ್ಲಿಕೆ ಇಲ್ಲ ಎಂದ ಮೇಲೆ ಪುಸ್ತಕ ಯಾಕಿರುವುದು” ಎಂದರಂತೆ.
ಮತ್ತೊಮ್ಮೆ ಗೇಣಿ ಕೊಡಲಾಗದೆ ಒಬ್ಬ ಒಕ್ಕಲಿನವರು ರಾತ್ರೋ ರಾತ್ರಿ ಊರು ಬಿಡಲು ಸಿದ್ಧತೆ ಮಾಡಿದ್ದು ಗೊತ್ತಾಯಿತು. ಇವರು ರಾತ್ರಿಯೇ ಹೋಗಿ,” ನಮಗೆಂತ ನೀವು ಶಾಪ ಕೊಡುವುದಾ. ನಿಮ್ಮ ಎಲ್ಲ ಬಾಕಿ ವಜಾ. ಎಲ್ಲಿಗೂ ಹೋಗಬೇಡಿ. ಆದಾಗ ಆದಷ್ಟು ಗೇಣಿ ಕೊಡಿ” ಎಂದರಂತೆ. ಆಮೇಲೆ ಒಕ್ಕಲು ಮಸೂದೆ ಬಂತು. ಭೂಮಿ ಉಳುವವರದ್ದಾಯಿತು. ಆ ಮನೆಯವರು ಮಾತ್ರ ಗೇಣಿ ಕೊಡಲು ಬಂದರು. ಇವರು ತಗೊಳ್ಳಿಲ್ಲ. ಬಂಗೇರ್ರ ತಾಯಿಯ ಬಳಿ ಅವರು ದೂರು ಕೊಟ್ಟರು. ಕಡೆಗೆ ಸಾಂಕೇತಿಕವಾಗಿಯೇನೋ ತಗೊಂಡರು. ಈಗಲೂ ಆ ಮನೆಯವರ ಸಂತತಿಯವರು ಇದ್ದಾರೆ.
ಹಿಂದೆ ಬಂಗೇರ್ರು ನ್ಯಾಯ ಪಂಚಾಯ್ತಿ ಮಾಡಿ ಸಮಸ್ಯೆ ಬಿಡಿಸ್ತಾ ಇದ್ದರು. ಆಗೆಲ್ಲ ದುಡ್ಡು ಕೊಡಬೇಕಾದವನ ಬಳಿ ದುಡ್ಡಿಲ್ಲದಿದ್ದರೆ ಇವರೇ ಅವನ ಪರವಾಗಿ ಕೊಡುತ್ತಿದ್ದರು.
ಒಮ್ಮೆ ಅವರ ಪತ್ನಿ ಹಾಲು ಮಾರಾಟದಲ್ಲಿ ಬಂದ ಹಣವನ್ನು ಫ್ರಿಜ್ ಮೇಲೆ ಇಟ್ಟಿದ್ದರಂತೆ. ಯಾವುದೊ ಮಹಿಳೆ ಬಂದು ಮಕ್ಕಳ ಫೀಸಿಗೆ ಹಣ ಕೇಳಿದರು.ಇವರು ಸೀದ ಹೋಗಿ ಫ್ರಿಜ್ ಮೇಲಿದ್ದ ಹಣ ತಂದು ಕೊಟ್ಟರಂತೆ. ಇಂತಾದ್ದೆಲ್ಲ ಬಹಳವಿದೆ.
ಅವರಿಗೊಂದು ಅಭ್ಯಾಸ ಇತ್ತು. ಎಡಗೈ ಮುಷ್ಠಿ ಹಿಡಿದು ಬಲಗೈ ಬೆರಳಲ್ಲಿ ಮುಷ್ಠಿಗೆ ತಾಳ ಹಾಕುವುದು. ಆ ಪೊಸಿಷನ್ ನಲ್ಲಿ ಅವರು ಇದ್ದರೆ ಯಾರಾದರೂ ಒಬ್ಬನಿಗೆ ಗತಿ ಕಾಣಿಸಿದರು ಎನ್ನುವುದು ಗ್ಯಾರಂಟಿ. ಬೆರಳಲ್ಲಿ ತಾಳ ಹಾಕುತ್ತಾ ಯೋಚಿಸುವ ಪದ್ಧತಿ ಅದು.
ಸಿಟ್ಟು ಬಂದರೆ ಸಿಕ್ಕಾಪಟ್ಟೆ ಬೈಲಿಕಿತ್ತು ಅವರು. ಅವರ ಪಿ.ಎ. ನನಗೆ ಹೇಳಿದ ಘಟನೆ. ಒಮ್ಮೆ ಇಂಜಿನಿಯರ್ ಬಂದರು. ಇವರು ಹಿಗ್ಗಾ ಮುಗ್ಗಾ ತರಾಟೆಗೆ ತಗೊಂಡು ಇನ್ನು ನನ್ನ ಆಫೀಸಿಗೆ ಬರಬಾರದು ನೀವು ಎಂದರು. ಅವರು ಹೋಗುವಾಗ ಇನ್ನು ಒಂದು ವಾರ ಬರ್ಲಿಕಿಲ್ಲ ಇವರು ಎಂದು ಪಿ.ಎ. ಯೋಚಿಸಿದರು. ಹನ್ನೊಂದು ವರೆ ವೇಳೆಗೆ ಸಾಹೇಬ್ರು ಚಾ ಕುಡಿಯಲು ಕೆಳಗೆ ಹೋಗಿ ಬರುವಾಗ ಅವರ ಹಿಂದಿನಿಂದ ಇಂಜಿನಿಯರ್ ಇದ್ದಾರೆ! ನಗುನಗುತ್ತಾ ಬರ್ತಾ ಇದ್ದಾರೆ. ಸಾಹೇಬ್ರು ” ಬನ್ನಿ ಬನ್ನಿ ಕೂತ್ಕೊಳ್ಳಿ” ಎಂದರು. ಇಂಜಿನಿಯರ್ ಕೆಲಸ ಮುಗಿಸಿ ಹೊರಟರೆ ಸಾಹೇಬ್ರು,” ಅವಸರ ಏನಿದೆ, ಸ್ವಲ್ಪ ಕೂತ್ಕೊಳೀಪ” ಎನ್ನುವುದನ್ನು ನೋಡಿ ನನಗೆ ಸುಧಾರಿಸಿಕೊಳ್ಳಲು ಸಮಯ ಬೇಕಾಯಿತು ಎಂದು ಪಿ. ಎ. ಹೇಳಿದ್ದರು.
ಒಮ್ಮೆ ನಮ್ಮ ಶಾಲೆಗೆ ಬಂದವರು ಮಕ್ಕಳ ಬಳಿ ಓಪನ್ ಆಗಿ,” ನೋಡಿ. ನಮ್ಮ ಮಾತನ್ನು ನೀವು ಕೇಳಬಾರದು. ನಾವು ಭ್ರಷ್ಠರು. ಆದ್ದರಿಂದ ನೀವು ಶಿಕ್ಷಕರ ಮಾತನ್ನು ಕೇಳಬೇಕು” ಎಂದಿದ್ದರು.
ಎಲ್. ಎಚ್. ನಲ್ಲಿ ಒಬ್ಬ ಗಂಗಯ್ಯ ಎಂದು ಇದ್ದಾರೆ. ಇವರು ಎಂ.ಎಲ್.ಏ ಆದ ಲಾಗಾಯ್ತು ಅವರೇ ಅಲ್ಲಿ ಇವರ ಸಹಾಯಕ. ಒಮ್ಮೆ ಎಲ್.ಎಚ್.ನಲ್ಲಿ ನನ್ನ ಬಳಿ,” ಈ ಗಂಗಯ್ಯನಿಗೆ ನಾನೊಂದು ಸೈಕಲ್ ಕೊಡಿಸಿದೆ. ಆದರೆ ಅವನು ಹೋಗುವುದು ಕಾರಲ್ಲಿ. ಇನ್ನು ಫ್ಲೈಟ್ ಬೇಕು ಎನ್ನದಿದ್ದರೆ ಸಾಕು” ಎಂದರು.ಮತ್ತೆ ಸ್ವಲ್ಪ ಹೊತ್ತಲ್ಲಿ ಗಂಗಯ್ಯ ಹೊರಟರು. ಸಾಹೇಬ್ರು,”ಯಾವುದರಲ್ಲಿ ಹೋಗ್ತಿಯಾ?” ಎಂದರು. “ನೀವು ಕೊಡಿಸಿದ ಫ್ಲೈಟ್ನಲ್ಲಿ” ಎಂದು ಅವರ ಉತ್ತರ. ಕೆಲಸದವರಿಗೆ ಅಷ್ಟು ಸ್ವಾತಂತ್ರ್ಯ ಉಂಟು.
ಬೆಳ್ತಂಗಡಿಯಲ್ಲಿ ಮಂಗನಕಾಯಿಲೆ ಬಂದಾಗ ಕಾಯಿಲೆಗೆ ನಷ್ಟ ಪರಿಹಾರ ಕೊಡದಿದ್ದರೆ ಕಾಯಿಲೆಗೆ ಕಾರಣವಾದ ಉಣುಗನ್ನು ಇಲ್ಲೆ ಬಿಡ್ತೇನೆ ಎಂದು ಒಂದು ಕರಡಿಗೆಯಲ್ಲಿ ಉಣುಗನ್ನು ತುಂಬಿಕೊಂಡು ವಿಧಾನ ಸಭೆಗೆ ಹೋಗಿದ್ದರು. ಕಾಯಿಲೆಗೆ ಪರಿಹಾರ ಸಿಕ್ಕಿತು. ವಿರೋಧ ಪಕ್ಷದವರಾಗಿದ್ದರೂ ರಾಮಕೃಷ್ಣ ಹೆಗಡೆಯವರಿಗೆ ಬಂಗೇರ್ರು ‘ನೀಲಿಕಣ್ಣಿನ ಹುಡುಗ’. ನನ್ನ ಪುಸ್ತಕದಲ್ಲಿ ‘ ನೀಲಿ ಕಣ್ಣಿನ ಹುಡುಗ’ ಎನ್ನುವ ಒಂದು ಚಾಪ್ಟರೇ ಇದೆ.
ವಿಶಿಷ್ಠ ವ್ಯಕ್ತಿತ್ವದ ಮನುಷ್ಯ ಅವರು. ಅವರು ತೆರವಾಗಿಸಿದ ಜಾಗ ಖಾಲಿಯೇ. ಅದನ್ನು ಭರ್ತಿ ಮಾಡಲು ಯಾರಿಗೂ ಸಾಧ್ಯವಿಲ್ಲ.
(ಅರವಿಂದ ಚೊಕ್ಕಾಡಿಯವರ ವಸಂತ ವಿನ್ಯಾಸ ಪುಸ್ತಕದಿಂದ)
- ಅರವಿಂದ ಚೊಕ್ಕಾಡಿ.





































