ಕೆಂಪುಕಲ್ಲು ಹಾಗೂ ಗಣಿಗಾರಿಕೆಗಳಿಗೆ ಅಂಕುಶ; ಕರಾವಳಿ ಅಭಿವೃದ್ಧಿಗೆ ತೊಡಕು : ಹೋರಾಟದ ಹಾದಿಗಿಳಿದ ಎಡವಾದಿಗಳು
ಮಂಗಳೂರು : ಕಳೆದ ಮೂರು ತಿಂಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ಕೊಡುತ್ತಿದ್ದ ಕಟ್ಟಡ ಮತ್ತು ನಿರ್ಮಾಣ ರಂಗದ ಕೆಲಸ ಕಾರ್ಯಗಳು ಬಹುತೇಕ ಸ್ಥಗಿತಗೊಂಡಿವೆ. ಅಕ್ರಮವಾಗಿ ಕೆಂಪು ಕಲ್ಲು ಮತ್ತು ಮರಳು ಗಣಿಗಾರಿಕೆಯನ್ನು ತಡೆಯುವ ಅಧಿಕಾರಿಗಳ ಕ್ರಮವನ್ನು ಖಂಡಿಸಿ ಎಡರಂಗದಿಂದ ಹೋರಾಟ ನಡೆಸಲು ತೀರ್ಮಾನಿಸಿದೆ.
ಈ ಕುರಿತು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ (ಸಿಐಟಿಯು)ದ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಾಮಗಾರಿಗೆ ಕಚ್ಚಾ ವಸ್ತುಗಳ ಲಭ್ಯವಿಲ್ಲದ ಸ್ಥಿತಿ ನಿರ್ಮಾಣಗೊಂಡಿದೆ. ಕಾನೂನು ಬದ್ದ ಮರಳುಗಾರಿಕೆ ಮತ್ತು ಕೆಂಪು ಕಲ್ಲು ಗಣಿಗಾರಿಕೆಗೆ ವ್ಯವಸ್ಥೆ ಮಾಡುವಲ್ಲಿ ಕರ್ನಾಟಕ ರಾಜ್ಯ ಸರಕಾರ ವಿಫಲವಾಗಿದೆ ಎಂದಿದ್ದಾರೆ.
ಪ್ರಸ್ತುತ ಸಮಸ್ಯೆಯಿಂದ ಜಿಲ್ಲೆಯಲ್ಲಿ ಕೆಂಪುಕಲ್ಲು ಮತ್ತು ಮರಳು ಲಭ್ಯವಿಲ್ಲದೇ ಕಟ್ಟಡ ಮತ್ತು ನಿರ್ಮಾಣ ರಂಗದ ಕೆಲಸಗಳು ಸ್ಥಗಿತ ಗೊಂಡಿವೆ. ಈ ರಂಗದಲ್ಲಿ ಕೆಲಸ ಮಾಡುವ ವಿವಿಧ ನಮೂನೆಯ ಕಾರ್ಮಿಕರಿಗೆ ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಅವರು ಮತ್ತು ಅವರ ಮನೆ ಮಂದಿ ಜೀವನ ನಿರ್ವಹಣೆ ಮಾಡುವುದು ತ್ರಾಸದಾಯಕವಾಗಿದೆ. ಜನಸಾಮಾನ್ಯರು ತಮ್ಮ ವಸತಿಗಾಗಿ ಮನೆಕಟ್ಟುವ ಯೋಜನೆ ಸ್ಥಗಿತಗೊಂಡು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಲಾರಿಗಳಲ್ಲಿ ದುಡಿಯುವ ಕಾರ್ಮಿಕರು, ಲಾರಿ ಮಾಲಿಕರು, ಅಂಗಡಿ – ಮುಗ್ಗಟ್ಟುಗಳ ಮಾಲೀಕರು, ಕೆಲಸಗಾರರು, ಇತರೆ ವ್ಯಾಪಾರಿಗಳು ಮತ್ತು ಆರ್ಥಿಕ ಸಂಸ್ಥೆಗಳು ದೊಡ್ಡ ಪ್ರಮಾಣದಲ್ಲಿ ತೊಂದರೆಗೊಳಗಾಗಿದ್ದಾರೆ. ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಮರಳಿನ ಸಂಗ್ರಹ ಸಾಕಷ್ಟಿದ್ದರೂ ಅದರ ವಿತರಣೆಯ ವ್ಯವಸ್ಥೆ ಸರಳೀಕೃತವಾಗಿಲ್ಲದೆ ಅದರ ಹತ್ತಿರ ಸರಿಯಲು ಆಸಕ್ತಿ ಇಲ್ಲದಾಗಿದೆ. ಲಭ್ಯ ಇರುವ ಮರಳು ಮತ್ತು ಕೆಂಪು-ಕಪ್ಪು ಕಲ್ಲು ಅತ್ಯಂತ ದುಬಾರಿ ಅಗಿದೆ. ಅಕ್ರಮ ಮರಳುಗಾರಿಕೆ, ಅಕ್ರಮ ಕೆಂಪು-ಕಪ್ಪು ಕಲ್ಲಿನ ಗಣಿಗಾರಿಕೆ ಮತ್ತು ಸಾಗಾಟ ನಿಷೇಧಿಸಿರುವುದು ಒಳ್ಳೆಯ ಬೆಳವಣಿಗೆ. ಅದರ ಒಟ್ಟಿಗೆ ಕಾನೂನುಬದ್ದ ಮರಳುಗಾರಿಕೆ, ಕೆಂಪು ಕಲ್ಲು, ಜಲ್ಲಿ ಪೂರೈಕೆ ಮಾಡಲು ವ್ಯವಸ್ಥೆಯೂ ಆಗಬೇಕಾಗಿದೆ. ಈಗಾಗಲೇ ಬೀದಿ ಪಾಲಾಗಿರುವ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಬದುಕಿನ ಪ್ರಶ್ನೆಯೂ ಪ್ರಮುಖ ಆದ್ಯತೆ ಆಗಬೇಕಾಗಿದೆ ಎಂದು ಸರಕಾರವನ್ನು ಒತ್ತಾಯಿಸಿದರು.
ಈ ನಿಟ್ಟಿನಲ್ಲಿ ಹಲವಾರು ಸುತ್ತಿನ ಮನವಿ, ಪ್ರತಿಭಟನೆ ಹೋರಾಟಗಳು ನಡೆದು ಸರಕಾರದ ಮೇಲೆ ಒತ್ತಡ ಹೇರಿಕೆ ಮಾಡಲಾಗಿದ್ದರೂ ಸರಕಾದ ಕ್ರಮಗಳೂ ಶೂನ್ಯವಾಗಿದೆ. ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ ಎಂಬ ವರದಿಗಳು ಬರುತ್ತಿವೆ. ಆದರೆ ಸಮಸ್ಯೆ ಪರಿಹಾರ ಕಾಣುತ್ತಿಲ್ಲ ಎಂದು ಆರೋಪಿಸಿದರು.
ಜಿಲ್ಲೆಯ ಪ್ರಮುಖ ಕಾರ್ಮಿಕ ಸಂಘಟನೆಗಳಾದ ಸಿಐಟಿಯು ಮತ್ತು ಎಐಟಿಯುಸಿ ಗೆ ಸೇರಿರುವ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಘಟನೆಗಳು ಜಂಟಿ ಹೋರಾಟ ನಡೆಸಲು ಉದ್ದೇಶಿಸಲಾಗಿದೆ.
ಬೇಡಿಕೆಗಳು
• ಕರಾವಳಿ ಜಿಲ್ಲೆಗಳಲ್ಲಿ ಸರಾಗವಾಗಿ ಮತ್ತು ಸರಳವಾಗಿ ಮರಳು ಪೂರೈಕೆ ಆಗುವಂತೆ ಕರಾವಳಿ ಮರಳು ನೀತಿಯನ್ನು ರೂಪಿಸಬೇಕು.
• ಪರಿಸರ ಸ್ನೇಹಿ ಮರಳುಗಾರಿಕೆ ಹಾಗೂ ನಿಯಮಬದ್ಧ ಕೆಂಪು ಕಲ್ಲು ಮತ್ತು ಕಪ್ಪು ಕಲ್ಲು ಗಣಿಗಾರಿಕೆಗೆ ಅವಕಾಶ ನೀಡಬೇಕು.
• ಜನಸಾಮಾನ್ಯರಿಗೆ ಕೈಗೆಟಕುವ ದರದಲ್ಲಿ ಮರಳು, ಕೆಂಪು ಕಲ್ಲು, ಕಪ್ಪು ಕಲ್ಲು ಮತ್ತು ಜಲ್ಲಿ ಸಿಗುವಂತಾಗಬೇಕು. ಮನೆಕಟ್ಟಲು ಬೇಕಾಗುವ ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ಯಾವುದೇ ಅಡೆತಡೆ ಉಂಟಾಗದಂತೆ ಕ್ರಮಕೈಗೊಳ್ಳಬೇಕು.
• ಕಟ್ಟಡ ಮತ್ತು ನಿರ್ಮಾಣ ರಂಗದ ಕರ್ಮಿಕರು ಕೆಲಸವಿಲ್ಲದೆ ತೊಂದರೆಗೆ ಒಳಗಾಗಿದ್ದು ಅವರಿಗೆ ಕಲ್ಯಾಣ ಮಂಡಳಿಯಿಂದ ಪರಿಹಾರ ತಿಂಗಳಿಗೆ ರೂ 10,000 ನೀಡ ಬೇಕು.
• ಕೇರಳದ ಮಾದರಿಯಲ್ಲಿಯೇ ರಾಜಧನ ಪಾವತಿಸುವ ವ್ಯವಸ್ಥೆ ಆಗಬೇಕು.
• ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಪ್ರಾಮಾಣಿಕವಾಗಿ ದಕ್ಷತೆಯಿಂದ ಕಾರ್ಯ ನಿರ್ವಾಹಣೆ ಮಾಡಬೇಕು.
2025 ಆಗಸ್ಟ್ 18 ಸೋಮವಾರ ದಿನದಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ಜ್ಯೋತಿ ವ್ರತ್ತದ ಬಳಿಯಿಂದ ಸಿಐಟಿಯು ಮತ್ತು ಎಐಟಿಯುಸಿ ಗೆ ಸೇರಿರುವ ಕಟ್ಟಡ ಮತ್ತು ನಿರ್ಮಾಣ ರಂಗದ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರ ಬೃಹತ್ ಮೆರವಣಿಗೆ ಹೊರಟು ಮಿನಿ ವಿಧಾನ ಸೌಧದ ಮುಂದುಗಡೆ ಪ್ರತಿಭಟನಾ ಪ್ರದರ್ಶನ ನಡೆಸಲು ನಿರ್ಣಯಿಸಲಾಗಿದೆ. ಈ ಹೋರಾಟದಲ್ಲಿ ಇತರೆ ವಿಭಾಗದ ಸಂಘಟನೆಗಳು ಕೂಡಾ ಬೆಂಬಲ ನೀಡಲಿವೆ. ರಾಜ್ಯ ಸರಕಾರ ತುರ್ತು ಕ್ರಮ ಜರುಗಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಸರಕಾರವನ್ನು ಎಚ್ಚರಿಸಿದರು.






































