ಕೃಷ್ಣನಿಗೆ ಅಷ್ಟು ಜನ ಹೆಂಡತಿಯರಿರುವುದು ಸಮಂಜಸವೇನು?
ಕುತೂಹಲಕಾರಿ ಪ್ರಶ್ನೆಯಿದು!
ಕ್ರಿ.ಪೂ 3114 ರಲ್ಲಿ ಶ್ರೀ ಕೃಷ್ಣ ಜನನ ವಾಗಿದೆ.
ದಶಾವತಾರಗಳಲ್ಲಿ 9ನೆಯ ಅವತಾರವಿದು.
9 ನೆಯ ಸಂಖ್ಯೆಯನ್ನು ಬ್ರಹ್ಮ ಸಂಖ್ಯೆ ಎನ್ನುತ್ತಾರೆ.
ಶ್ರೀ ಕೃಷ್ಣನ ಭಕ್ತರು 9 ನ್ನು ಅದೃಷ್ಟ ಸಂಖ್ಯೆಯಾಗಿ ಭಾವಿಸುತ್ತಾರೆ.
ಶ್ರೀ ವೇದವ್ಯಾಸರಿಗೆ 9ನೇ ಸಂಖ್ಯೆಗೆ ಅವಿನಾಭಾವವಿದೆ.
ಪರಮಾತ್ಮನ ಅವತಾರಗಳಲ್ಲಿ ಕೃಷ್ಣಾವತಾರಕ್ಕೆ ಇರುವ ಪ್ರಾಧ್ಯಾನತೆ ಬೇರೆ ಅವತಾರಗಳಿಗೆಯಿಲ್ಲ.
“ನಾನೇ ದೇವರು” ಎಂದು ಹೇಳಿದ ಮಹಾವತಾರವಿದು.
“ಕೃಷ್ಣಸ್ತ್ತು ಭಗವಾನ್ ಸ್ವಯಂ”
ದೇವಾದಿ ದೇವನಾದ ಪರಮಾತ್ಮನೇ ಕೃಷ್ಣನಾಗಿ ಅವತಾರ ತಾಳಿದನೆಂದು ಕೃಷ್ಣಭಕ್ತರೆಲ್ಲರೂ ಖಚಿತವಾಗಿ ನಂಬುತ್ತಾರೆ.ಭಾರತ ದೇಶದಲ್ಲೇ ಅಲ್ಲ ;ವಿದೇಶಗಳಲ್ಲಿಯೂ ಕೃಷ್ಣ ಮಂದಿಗಳು ಕೃಷ್ಣ ಭಕ್ತರು ಲಕ್ಷೋಪಲಕ್ಷ ಜನರಿದ್ದಾರೆ .ಭಾರತ ದೇಶದಲ್ಲಿ ಶ್ರೀರಾಮನಿಗೆ ಮಂದಿರಗಳು ಜಾಸ್ತಿ ಇದ್ದರೆ .ಕೃಷ್ಣನಿಗೆ ಭಕ್ತರು ಜಾಸ್ತಿ ಇದ್ದಾರೆ.
ಶ್ರೀಕೃಷ್ಣನಂತಹ ಭೋಗಿ ಶ್ರೀಕೃಷ್ಣನoತಹ ಯೋಗಿ ಯಾರೂ ಇಲ್ಲ.
ದ್ವಾರಕಾ ಪತಿಯಾದ ಕೃಷ್ಣನಿಗೆ ಎಂಟು ಜನ ಪಟ್ಟದ ರಾಣಿಯರು ಹದಿನಾರು ಸಾವಿರ ಹೆಂಡತಿಯರು ಇದ್ದಾರೆಂದರೆ ಕೇಳಿದವರು ನಿಬ್ಬೆ ರಗಾಗುತ್ತಾರೆ.
ಕಲಿಯುಗದಲ್ಲಿಯೂ ಅತಿ ಹೆಚ್ಚು ಹೆಂಡತಿಯರು ಇರುವ ರಾಜರು ಚಕ್ರವರ್ತಿಗಳು ಇದ್ದರು.
ಇತಿಹಾಸದ ಪಾಠಗಳಲ್ಲಿ ತಿಳಿದೇ ಇದ್ದೇವೆ.
ಭಾರತ ದೇಶದ ಲಡಕ್ ಪ್ರಾಂತ್ಯದಲ್ಲಿ ಈಗಲೂ ಬಹುಭಾರ್ಯತ್ವ ನಡೆಯುತ್ತಿದೆ. ಚಿರಾಪುಂಜಿಯಲ್ಲಿ ವಾಸಿಸುವ ಗಿರಿಜನರಲ್ಲಿಯೂ ಬಹುಬಾರ್ಯತ್ವ ಸಾಧಾರಣವಾಗಿದೆ. ಹಿಮಾಲಯ ಪ್ರಾಂತ್ಯದ ಆದಿವಾಸಿ ಜನರು ಬಹುಬಾರ್ಯತ್ವವನ್ನು ಶ್ರೀಮಂತಿಕೆ ಎಂದು ಭಾವಿಸುತ್ತಾರೆ.
ಬಹುಭಾರ್ಯತ್ವವು ದ್ವಾಪರಯುಗದಲ್ಲಿ ತಪ್ಪಿಲ್ಲ. ಪಾಂಡು ರಾಜನಿಗೂ ಇಬ್ಬರು ಹೆಂಡತಿಯರಿದ್ದರು. ಧೃತರಾಷ್ಟ್ರನ ತಂದೆ ವಿಚಿತ್ರವೀರನಿಗೂ ಇಬ್ಬರು ಹೆಂಡತಿಯರು ಭೀಷ್ಮನ ತಂದೆ ಶಾಂತನು ಮಹಾರಾಜನಿಗೂ ಇಬ್ಬರು ಹೆಂಡತಿಯರು ಶ್ರೀ ಕೃಷ್ಣನ ತಂದೆ ವಸುದೇವನಿಗೆ ಆರು ಮಂದಿ ಹೆಂಡತಿಯರು.
16,000 ಯುವತಿಯರನ್ನು ಶ್ರೀಕೃಷ್ಣನು ಮದುವೆಯಾದ ಕಾರಣವೇನೆಂದರೆ-
ನರಕನೆಂಬ ರಾಕ್ಷಸನು ಕ್ಷುದ್ರ ದೇವತಾ ಉಪಾಸಕನಾಗಿ ಪ್ರಜಾ ಕಂಟಕನಾಗಿ ಯುವತಿ ಅಪಹರಣಕಾರನಾಗಿ ಭಾರತಾ ವನಿಯನ್ನು (ಸುವಿಶಾಲವೆಂದರೆ ಭಾರತ ,ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಮಾಲ್ಡೀವ್ಸ್, ನೇಪಾಳ, ಶ್ರೀಲಂಕಾ, ಬರ್ಮಾ ಟಿಬೆಟ್ ಎಲ್ಲಾ ದೇಶಗಳು ಸುವಿಶಾಲ ಭಾರತ)
ಪೀಡಿಸುತ್ತಿರುವಾಗ ಸತ್ಯಭಾಮ ಸಮೇತನಾಗಿ ನರಕನ ಮೇಲೆ ಯುದ್ಧಕ್ಕೆ ಹೋಗಿ ನರಕನನ್ನು ಕೊಂದು ಲೋಕಪೀಡೆಯನ್ನು ತೊಲಗಿಸಿದನು. ನರಕನ್ನು ಕ್ಷುದ್ರ ದೇವತಾ ಪೂಜೆಗೆ ಬಲಿಕೊಡುವುದಕ್ಕಾಗಿ ತನ್ನ ಮಾಯಾವಿದ್ಯೆಯಿಂದ 16000 ಕ್ಷತ್ರಿಯ ಯುವತಿಯರನ್ನು ಅಪಹರಿಸಿ ತಂದಿದ್ದನು. ಅವರೆಲ್ಲರನ್ನು ಪಾತಾಳದಲ್ಲಿ ಬಂಧಿಸಿಟ್ಟಿದ್ದನು. ಶ್ರೀಕೃಷ್ಣನು ಆ ಯುವತಿಯರಿಗೆಲ್ಲರಿಗೂ ಬಂಧಮುಕ್ತಿ ಮಾಡಿಸಿ ಅವರವರ ರಾಜ್ಯಕ್ಕೆ ಕಳಿಸುವಂತೆ ನರಕನ ಮಗನಿಗೆ ಆಜ್ಞೆ ಮಾಡಿದನು. ಆ ಯುವತಿಯರೆಲ್ಲರೂ ಅವರವರ ತವರು ಮನೆಗಳಿಗೆ ಹೋಗಲು ಇಷ್ಟಪಡದೆ ಆತ್ಮಹತ್ಯೆ ಕಾರ್ಯಕ್ಕೆ ಸಿದ್ದರಾಗಿದ್ದರು. ಯಾಕೆಂದರೆ ಅಪಹರಣಕ್ಕೊಳಗಾದವರನ್ನು ಆ ಕಾಲದಲ್ಲಿ ಯಾರು ಮದುವೆಯಾಗುತ್ತಿರಲಿಲ್ಲ ಕೃಷ್ಣ ಸತ್ಯಭಾಮೆಯರು ಎಷ್ಟು ಹೇಳಿದರು ಪ್ರಯೋಜನವಾಗಲಿಲ್ಲ ಆ ಸಮಯಕ್ಕೆ ದೇವೇಂದ್ರ ನಾರದಾದಿ ದೇವತೆಗಳು ಅಲ್ಲಿಗೆ ಬಂದರು. ಯಾರ ಮಾತನ್ನು ಯುವತಿಯರು ಕೇಳಲು ಸಿದ್ದರಿಲ್ಲದ ಸಮಯದಲ್ಲಿ ಸತ್ಯಭಾಮೆಯು ಯುವತಿಯರಿಗೆ ಒಂದು ಆಶ್ವಾಸನೆ ನೀಡಿದಳು.
“ಯಾರು ಆತ್ಮಹತ್ಯೆ ಮಾಡಿಕೊಳ್ಳುವುದು ಬೇಡ ಎಲ್ಲರನ್ನು ದ್ವಾರಕಾ ನಗರಕ್ಕೆ ಕರೆದುಕೊಂಡು ಹೋಗುತ್ತೇವೆ. ನಿಮಗೆ ಮದುವೆ ಆಗುವುದಿಲ್ಲವೆಂಬ ಚಿಂತೆ ಬೇಡ ನಿಮ್ಮೆಲ್ಲರಿಗೂ ದ್ವಾರಕ ಪ್ರಭುಗಳೇ ಪತಿದೇವರು ಆಗುತ್ತಾರೆ’.
ಸತ್ಯಭಾಮೆಯ ಅಭಯದ ಮಾತುಗಳು ಕೇಳಿದ 16 ಸಾವಿರದ ಕುಮಾರಿಯರಿಗೆ ಸಂತೋಷಕ್ಕೆ ಪಾರವೇ ಇರಲಿಲ್ಲ. ಕೃಷ್ಣನು ಸತ್ಯಭಾಮೆಯ ಆಶ್ವಾಸನೆ ಕೇಳಿ ಗಾಬರಿಯಾದಾಗ, ದೇವೇಂದ್ರನು ವಾಸುದೇವ ! “ಈ ರಾಜಕನ್ನಿಕೆಯರೆಲ್ಲರೂ ಕಾರಣ ಜನ್ಮ ರಾಗಿದ್ದಾರೆ. ನಿನ್ನ ಸ್ನೇಹವನ್ನು ಬಯಸಿದ ದೇವಲೋಕವಾಸಿಗಳೇ ಇವರು! ಸತ್ಯಭಾಮೆಯ ಬಾಯಿಯಿಂದ ಬ್ರಹ್ಮದೇವನೇ ಈ ಮಾತನ್ನು ಹೇಳಿಸಿದ್ದಾನೆ ಎಂದರು”.
ದೇವೇಂದ್ರನ ಮಾತಿಗೆ ನಾರದ ಮಹರ್ಷಿಯು ಶೃತಿ ಸೇರಿಸಿದ ಮುಗ್ಧ ಕನ್ಯೆಯರ ಪ್ರಾಣಗಳನ್ನು ಕಾಪಾಡುವುದಕ್ಕಾಗಿ ಕೃಷ್ಣನು ಅಂಗೀಕರಿಸಲೇಬೇಕಾಯಿತು.
ಈ ವಿಧವಾಗಿ 16 ಸಾವಿರ ಕ್ಷತ್ರಿಯ ಕನ್ಯೆಯರು ಕೃಷ್ಣನ ಕೈಹಿಡಿದರು. ಕೃಷ್ಣನ ಸತಿಯರಾದರು. ಸತ್ಯಭಾಮೆಯ ಆಶ್ವಾಸನೆ ನೆರವೇರಿತು!
ನಮಗೆ ಹೆಂಡತಿ ಅಂದ ಕೂಡಲೇ ಕಾಮದ ಸಂಕೇತವೇ ಮನಸ್ಸಿನಲ್ಲಿ ಹೊಳೆಯುತ್ತದೆ. ಹೆಂಡತಿ ಎಂದರೆ ಸ್ನೇಹಿತೆ! ಶ್ರೇಯೋಭಿಲಾಷಿ, ಸಹವಾಸಿ ,ಸಲಹೆಗಾರ್ತಿ.
ಕೃಷ್ಣನ 16,000 ಹೆಂಡತಿಯರು ಕಾಮಕ್ಕಾಗಿ, ಸುಖಕ್ಕಾಗಿ ಕೃಷ್ಣನ ಸತಿಯರಾಗಲಿಲ್ಲ. ಕೇವಲ ಭಕ್ತಿ ಭಾವನೆಯಿಂದಲೇ ಕೃಷ್ಣನ ಕೈ ಹಿಡಿದಿದ್ದಾರೆ. ಪರಮ ದಿವೋತ್ತಮ ಪುರುಷನಾದ ಶ್ರೀ ಕೃಷ್ಣನನ್ನು ನಮ್ಮೊಂದಿಗೆ ಹೋಲಿಸಿ ನೋಡಿಕೊಂಡರೇ ಹೇಗೆ ?
“ಯದ್ಭಾವಂ ತದ್ಭವತಿ”

ಯಾರನ್ನಾಗಲಿ ಯಾವುದನ್ನಾಗಲಿ ನಾವು ಯಾವ ದೃಷ್ಟಿಯಿಂದ ನೋಡುತ್ತೇವೆಯೋ ಹಾಗೆಯೇ ಕಾಣಿಸುತ್ತಾರೆ. ಇದು ಮಾನವನ ಮನಸ್ಥಿತಿ!
ದೇವರಿಗೆ 10 ಕೈಗಳಿರಬಹುದು. 100 ಕಣ್ಣು ಇರಬಹುದು ಆನೆಯ ಮುಖದ ಗಣೇಶನಿಗೆ ಸಣ್ಣ ಇಲಿಯೇ ವಾಹನ.
ನಮ್ಮದು ಯಾವುದೇ ತಕರಾರಿಲ್ಲ. ಕೃಷ್ಣನ ಹೆಂಡತಿಯ ಬಗ್ಗೆ ತಕರಾರು ನಮ್ಮ ಮನಸ್ಸಿನಲ್ಲಿ ಯಾಕೆ ಹುಟ್ಟಿದೆ ?
ಶ್ರೀ ಕೃಷ್ಣನು 406 ವರ್ಷಗಳು ಜೀವಿಸಿದ್ದಾನೆ 16,008 ಜನ ಹೆಂಡತಿಯರ ಜೊತೆ ಸಂಸಾರ ಮಾಡಿದ ಕೃಷ್ಣನು ಒಂದು ಲಕ್ಷ ಅರವತ್ತು ಸಾವಿರದ ಎಂಬತ್ತು ಮಂದಿ ಮಕ್ಕಳಿಗೆ ತಂದೆಯಾಗಿದ್ದಾನೆ. ಆಶ್ಚರ್ಯವಾಗಿದೆಯಲ್ಲವೇ ?! ಶ್ರೀಕೃಷ್ಣನ ಸಂಸಾರವು ಬಹುರಮ್ಯವಾಗಿ ನಡೆದಿದೆ. ಪ್ರತಿದಿನವೂ ಪ್ರತಿ ರಾತ್ರಿ ಎಲ್ಲಾ ಹೆಂಡತಿಯರ ಮನೆಯಲ್ಲಿ ಇರುತ್ತಿದ್ದನು.
ಪ್ರತಿಯೊಬ್ಬರು ಅವರೇ ಶ್ರೀ ಕೃಷ್ಣನ ಪ್ರೀತಿಯ ಹೆಂಡತಿ ನಾನೇ ಅಂದುಕೊಳ್ಳುತ್ತಿದ್ದರು. ಶ್ರೀ ಕೃಷ್ಣನ ಲೀಲಾ ವಿನೋದಗಳನ್ನು ನೋಡಿ ಬ್ರಹ್ಮದೇವನೇ ಅಚ್ಚರಿಯಾಗುತ್ತಿದ್ದನಂತೆ!
ಶ್ರೀ ಕೃಷ್ಣನ ಶಿಖೆಯಲ್ಲಿ ತಲೆಯ ಮೇಲೆ ನವಿಲುಗರಿ ಯಾಕೆ ಇರುತ್ತದೆ ಗೊತ್ತಿದೆ ಏನೋ? ಕೃಷ್ಣನು ಕಾಮುಕನಲ್ಲವೆಂದು ತಿಳಿಸಲಿಕ್ಕೆ!
ಸೃಷ್ಢಿಯ ಪ್ರಾಣಿಕೋಟಿಗಳಲ್ಲಿ ಹೆಣ್ಣು ಗಂಡಿನ ಸಂಭೋಗವಿಲ್ಲದ ಜೀವಿಗಳೆಂದರೆ ನವಿಲುಗಳು ಮಾತ್ರ. 16008 ಜನ ಹೆಂಡತಿಯರ ಜೊತೆ ಸಂಸಾರ ಮಾಡಿದ ಕೃಷ್ಣನು ಕಾಮುಕನಲ್ಲವೆಂದು ತಿಳಿಸಲಿಕ್ಕೆ ತಲೆಯ ಮೇಲೆ ನವಿಲ ಗರಿಯನ್ನು ಇಟ್ಟಿದ್ದಾರೆ ನಮ್ಮ ಪೂರ್ವಜರು.
ಪರಮ ಶೃಂಗಾರ ಪುರುಷನಾಗಿ ಕಾಣಿಸುವ ಕೃಷ್ಣನು ಮಹಾಯೋಗಿ!
ಆಸ್ತಿಕ ನಾಸ್ತಿಕರಿಗೂ ಸಹ ಕೃಷ್ಣನ ಶೃಂಗಾರ ರೂಪವೇ ಕಣ್ಣಲ್ಲಿ ಕಾಣುತ್ತದೆ. ಹೌದಲ್ಲವೇ? ಯಾವ ಅವತಾರ ಮೂರ್ತಿಗೂ ಇಲ್ಲದಷ್ಟು ಹೆಂಡತಿ ಕೃಷ್ಣನಿಗೆ ಇದ್ದಾರೆ?
ಇಷ್ಟು ಮಂದಿ ಹೆಂಡತಿಯರು ಇರುವ ಕೃಷ್ಣನು ಕಾಮುಕನೇ?
ನಾಸ್ತಿಕರೇ ಅಲ್ಲ ಆಸ್ತಿಕರು ಸಹ ಈ ವಿಷಯದಲ್ಲಿ ಅಯೋಮಯಕ್ಕೀಡಾಗುತ್ತಾರೆ. ಶ್ರೀಕೃಷ್ಣನ ತತ್ವವನ್ನು ಯಾರು ತಪ್ಪಾಗಿ ಭಾವಿಸಬಾರದೆಂದು, ಕೃಷ್ಣನು ಭೋಗಿಯಂತೆ ಕಾಣುವ ಯೋಗೀಶ್ವರನೆಂದೂ ತಿಳಿಸುವುದಕ್ಕಾಗಿಯೇ ಕೃಷ್ಣನ ಶಿಖೆಯಲ್ಲಿ ನವಿಲು ಪಿಂಚವಿರುತ್ತದೆ. ಪವಿತ್ರತಾ ಸೂಚಕವಾಗಿ ಗೋಮಾತೆ ಕೃಷ್ಣನ ಜೊತೆಯಲ್ಲಿಯೇ ಇರುವುದನ್ನು ನೋಡಬಹುದು.
ನವಿಲು ಪವಿತ್ರತೆಗೆ ಚಿಹ್ನೆ!
ದೈವ ಸೃಷ್ಟಿಯಲ್ಲಿ ಗಂಡು ಹೆಣ್ಣು ಕಲೆತು ಸಂಭೋಗ ಮಾಡದಿರುವ ಪ್ರಾಣಿಯೆಂದರೆ ನವಿಲುಒಂದೇ! ಗಂಡು ನವಿಲು ಗರಿಬಿಚ್ಚಿ ಕುಣಿಯುವಾಗ ಕಣ್ಣಿನಿಂದ ನೀರು ಬರುತ್ತದೆ.
ಗಂಡು ನವಿಲಿನ ಕಣ್ಣೀರನ್ನು ಹೆಣ್ಣು ನವಿಲು ಕುಡಿದು ಮೊಟ್ಟೆಗಳನ್ನು ಇಡುತ್ತದೆ. ತದನಂತರ ಮರಿಗಳಾಗುತ್ತವೆ. ನಂತರ ಗಂಡು ನವಿಲು, ಹೆಣ್ಣು ನವಿಲು ಸೇರಿ ಸಂಸಾರ ಮಾಡುತ್ತವೆ. ಆದರೆ ಶರೀರ ಸಂಪರ್ಕವಿರುವುದಿಲ್ಲ.
ಪವಿತ್ರವಾದ ದಾಂಪತ್ಯ ಇದು. ಈ ಪವಿತ್ರ ಪಕ್ಷಿಯ ಪಿಂಚಗಳನ್ನು ಕೃಷ್ಣನು ಧರಿಸಿದ ಕಾರಣವಿದೆ. ಆದ್ದರಿಂದ ಕೃಷ್ಣನನ್ನು ಶಿಖ ಪಿಂಚಮೌಳಿ ಎಂದು ಕರೆಯುತ್ತಾರೆ.
ಪವಿತ್ರವಾಗಿಯೇ ಕೃಷ್ಣ ಮಾಯಲೀಲೆಗಳಿಂದ ಸಾವಿರಾರು ಹೆಂಡತಿಯರ ಜೊತೆ ಸಂಸಾರ ಮಾಡಿದ್ದನು.
ಕೃಷ್ಣನು ಭೋಗಿಗಳಲ್ಲಿ ಭೋಗಿ
ಯೋಗಿಗಳಲ್ಲಿ ಯೋಗಿ
ಬ್ರಹ್ಮಚಾರಿಗಳಲ್ಲಿ ಬ್ರಹ್ಮಚಾರಿ
ಸಂಸಾರಿಗಳಲ್ಲಿ ಸಂಸಾರಿ
ದಶಾವತಾರಗಳಲ್ಲಿ ಕೃಷ್ಣಾವತಾರವೇ ಸಂಪೂರ್ಣ ಅವತಾರ.
ಹಾಲು ಕುಡಿಯುವ ವಯಸ್ಸಿನಿಂದಲೇ ರಾಕ್ಷಸ ಸಂಹಾರವನ್ನು ಪ್ರಾರಂಭಿಸಿದ ಮಹಿಮಾವತಾರವಿದು. ಕೃಷ್ಣ ತತ್ವವೂ ಬೇಗ ತಿಳಿಯುವುದಿಲ್ಲ ವಾಸನೆ ನೋಡಿದ ಮಾತ್ರಕ್ಕೆ ಪಾಯಸದ ರುಚಿ ತಿಳಿಯಬಹುದೇ ಕೃಷ್ಣ ತತ್ವವು ಹಾಗೆ
ನಮೋ ಬ್ರಹ್ಮಣ್ಯ ದೇವಾಯ
ಸರ್ವಜೀವ ಹಿತಾಯಚ
ಜಗದ್ದಿತಾಯ ಕೃಷ್ಣಾಯ
ಗೋವಿಂದಾಯ ನಮೋನಮಃ
ಶಾರದಾ ದೇವಿಯ ಪಕ್ಕದಲ್ಲಿ ಗಂಡು ನವಿಲು ಇರುತ್ತದೆ. ಇದಕ್ಕೇನು ಕಾರಣವೆಂದರೆ ನವಿಲು ಪರಮ ಪವಿತ್ರ ಪಕ್ಷಿ
ನವಿಲುಗಳಿಗೆ ಎಲ್ಲಾ ಪ್ರಾಣಿಗಳಂತೆ ಗಂಡು ಹೆಣ್ಣಿನ ಸಂಭೋಗವಿರುವುದಿಲ್ಲ. ಜಗತ್ ಸೃಷ್ಟಿಯ ವಿಚಿತ್ರವಿದು ವಿದ್ಯಾ ವಿಜ್ಞಾನಿಗಳು ಪರಮ ಪವಿತ್ರವೆಂದು ತಿಳಿಸಲಿಕ್ಕೆ.
ಸರಸ್ವತಿ ಮಾತೆಯ ಸನ್ನಿಧಾನದಲ್ಲಿ ನವಿಲು ಇರುವಂತೆ ಚಿತ್ರಿಸಿರುತ್ತಾರೆ.
ಮಾಧವನು ಮಾನವನಾಗಿ ಹುಟ್ಟಿ ಮನುಷ್ಯ ಭಾವದಿಂದಲೇ ಮಹಾಮಹಿಮೆಗಳನ್ನು ತೋರಿಸಿದ ಅವತಾರವೇ ಕೃಷ್ಣ ಅವತಾರ. ಎಲ್ಲಾ ಅವತಾರಗಳಿಗೂ ಕೃಷ್ಣಾವತಾರಕ್ಕೂ ಬಹು ವ್ಯತ್ಯಾಸವಿದೆ. ಈ ಅವತಾರದ ಪ್ರತ್ಯೇಕತೆ ವಿಶಿಷ್ಟತೆ ವಿಶಾಲತೆ ದಶಾವತಾರಗಳಲ್ಲಿ ಯಾವ ಅವತಾರಕ್ಕೂ ಇಲ್ಲ. ಕೃಷ್ಣನ ಬಾಲ್ಯ ಚೇಷ್ಟೆಗಳು, ರಾಸಲೀಲೆಗಳು, ದುಡುಕು ಕಾರ್ಯಗಳು, ರಾಕ್ಷಸ ವಧೆಗಳು, ರಾಜಕೀಯ ಚಾತುರ್ಯಗಳು, ಜಾಣತನಗಳು ದುಷ್ಟಶಿಕ್ಷಣಗಳು ಶಿಷ್ಟ ರಕ್ಷಣೆಗಳು, ದೈವತಾ ಕಾರ್ಯಗಳು, ನಾಯಕ ಲಕ್ಷಣಗಳು, ಕಾರ್ಯ ಸಾಧನೆಗಳು, ಸಾಹಸಗಳು, ಸರಸಗಳು, ಮತ್ತೊಂದು ಯಾವ ಅವತಾರದಲ್ಲಿಯೂ ಕಾಣಲು ಸಿಗುವುದಿಲ್ಲ.
ಶ್ಲೋ || ನಮ: ಕೃಷ್ಣಾಯ ದೇವಾಯ ಬ್ರಹ್ಮಣೇನಂತ ಮೂರ್ತಯೇ
ಯೋಗೀಶ್ವರಾಯ ಯೋಗಾಯ
ತ್ವಾ ಮಹಂ ಶರಣಂ ಗತಃ|
“ಧರ್ಮ ವಿಚಾರಣೆ ಧರ್ಮ ವಿವರಣೆ ಬಿಟ್ಟು ನನ್ನನ್ನು ಶರಣ ಹೊಂದಿದವರನ್ನು ನಾನು ಸರ್ವ ಪಾಪಗಳಿಂದಲೂ ವಿಮುಕ್ತಿಗೊಳಿಸಿ ರಕ್ಷಿಸುತ್ತೇನೆ. ನಾನೇ ದೇವರು! ಆದಿ ಮಧ್ಯಾಂತರದ ಪರಮಾತ್ಮನೂ ನಾನೇ! ಎಲ್ಲವೂ ನನ್ನಲ್ಲಿ ಹುಟ್ಟಿ ನನ್ನಲ್ಲಿಯೇ ಲೀನವಾಗುತ್ತಿದೆ. ನಾನಲ್ಲದ್ದು ಯಾವುದು ಇಲ್ಲ. ನಾನಿಲ್ಲದ್ದು ಎಲ್ಲಿಯೂ ಇಲ್ಲ. ಎಲ್ಲಾ ಪ್ರಾಣಿಗಳಲ್ಲಿಯೂ ನಾನೇ ಇದ್ದೇನೆ. ಸಮದೃಷ್ಟಿ ಇರುವವರಿಗೆ ಮಾತ್ರ ನನ್ನ ಇರುವಿಕೆ ತಿಳಿಯುತ್ತದೆ. ನನಗೆ ಜಾತಿಯಿಲ್ಲ! ಮತವಿಲ್ಲ! ಆಚಾರವಿಲ್ಲ! ಅಸ್ಪೃಶ್ಯತೆ ಇಲ್ಲ! ರೂಪವಿಲ್ಲ ,ಹೆಸರಿಲ್ಲ ಅಗ್ನಿ, ಆಕಾಶ, ಭೂಮಿ, ನೀರು, ಬೆಳಕು ಎಲ್ಲವೂ ನಾನೇ! ನನ್ನ ನಂಬಿದವರಿಗೂ ನಂಬದೇ ಇರುವವರಿಗೂ, ನಾನು ರಕ್ಷಕನಾಗಿದ್ದೇನೆ. ಸೃಷ್ಟಿ ಮತ್ತು ನಾಶ ನನ್ನಿಂದಲೇ ನಡೆಯುತ್ತಿರುತ್ತದೆ” ಎಂದು ಹೇಳಿದ ಅವತಾರ ಮೂರ್ತಿ ಶ್ರೀ ಕೃಷ್ಣನೊಬ್ಬನೇ!
ಇದೇ ಕೃಷ್ಣಾವತಾರದ ವಿಶಿಷ್ಟತೆ! ಪ್ರತ್ಯೇಕತೆ!!
ಕೃಷ್ಣಂ ವಂದೇ ಜಗದ್ಗುಮ್

- ಡಾ.ಮಾಲತಿ ಪೈ M A M Ed M Phil PHD




































