ಕುಟುಂಬ ಕಲಹದ ನಡುವೆ ತಂದೆಯ ಕತ್ತಿ ಇರಿತಕ್ಕೆ ಪ್ಲಸ್–ಟು ವಿದ್ಯಾರ್ಥಿನಿ ಬಲಿ : ಚಿಕಿತ್ಸೆ ಫಲಕಾರಿಯಾಗದೇ ಗಾಯಾಳು ಮೃತ್ಯು

Picture of RB NEWS

RB NEWS

Bureau Report


ಮಂಜೇಶ್ವರ ತಾಲೂಕಿನ ತುಮಿನಾಡು ಹಿಲ್ ಟೋಪ್ ಪ್ರದೇಶದಲ್ಲಿ ಸೋಮವಾರ ಸಂಜೆ ನಡೆದ ದಾರುಣ ಘಟನೆಯಲ್ಲಿ, ಪ್ಲಸ್–ಟು ವಿದ್ಯಾರ್ಥಿನಿಯಾಗಿದ್ದ 18 ವರ್ಷದ ಯುವತಿ ತನ್ನದೇ ತಂದೆಯ ಕತ್ತಿ ಇರಿತಕ್ಕೆ ಬಲಿಯಾಗಿ ಮೃತಪಟ್ಟಿದ್ದಾಳೆ. ಕುಟುಂಬ ಕಲಹ ಹಾಗೂ ಸೊತ್ತು ವಿವಾದವೇ ಈ ದುರ್ಘಟನೆಗೆ ಕಾರಣವೆಂದು ಪೊಲೀಸ್ ವಿಚಾರಣೆಯಿಂದ ಬೆಳಕಿಗೆ ಬಂದಿದೆ.
ಕುಂಜತ್ತೂರು ಸರಕಾರಿ ಹೈಸ್ಕೂಲು ಸಮೀಪದ ತುಮಿನಾಡು ಹಿಲ್ ಟೋಪ್ ನಿವಾಸಿ ಜುಮೈಲ (18) ಮೃತ ಯುವತಿ. ಈ ಪ್ರಕರಣದಲ್ಲಿ ಆಕೆಯ ತಂದೆ ಉಮ್ಮರ್ ಫಾರೂಖ್ ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿದಿದೆ.


ವಿಚ್ಛೇದನ ಮಾತುಕತೆ ವೇಳೆ ಗಲಾಟೆ
ಪೊಲೀಸ್ ಮೂಲಗಳ ಪ್ರಕಾರ, ಉಮ್ಮರ್ ಫಾರೂಖ್ ಮತ್ತು ಪತ್ನಿ ತಾಹಿರಾ ನಡುವೆ ದೀರ್ಘಕಾಲದಿಂದ ದಾಂಪತ್ಯ ವಿರಸವಿದ್ದು, ಇತ್ತೀಚೆಗೆ ಕುಟುಂಬ ಕಲಹ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಮಸ್ಯೆ ಬಗೆಹರಿಸಲು ಸೋಮವಾರ ಸಂಜೆ ಉಭಯ ಕಡೆಯ ಸಂಬಂಧಿಕರು ಒಟ್ಟಾಗಿ ಮಾತುಕತೆ ನಡೆಸಿದ್ದರು. ಮಾತುಕತೆಯ ವೇಳೆ ಗಂಡ–ಹೆಂಡತಿ ವಿಚ್ಛೇದನಕ್ಕೂ ಒಪ್ಪಿಗೆ ವ್ಯಕ್ತವಾಗಿತ್ತು.
ಆದರೆ ವಿಚ್ಛೇದನದ ಭಾಗವಾಗಿ, ಉಮ್ಮರ್ ಫಾರೂಖ್ ತನ್ನ ಕುಟುಂಬದ ಸೊತ್ತಾಗಿ ಪಡೆದಿದ್ದು ನಂತರ ಪತ್ನಿಯ ಹೆಸರಿಗೆ ದಾಖಲೆ ಮಾಡಿದ್ದ 10 ಸೆಂಟ್ಸ್ ಜಮೀನನ್ನು ಮರಳಿ ತನ್ನ ಹೆಸರಿಗೆ ಬರೆಸಬೇಕೆಂದು ಬೇಡಿಕೆ ಇಟ್ಟಿದ್ದಾನೆ. ಇದಕ್ಕೆ ತಾಹಿರಾ ಹಾಗೂ ಆಕೆಯ ಸಹೋದರ ಷೇಕುಂಞಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಆ ಜಮೀನು ಮಗಳ ಶಿಕ್ಷಣ ಮತ್ತು ಭವಿಷ್ಯಕ್ಕಾಗಿ ಅಗತ್ಯವೆಂದು ವಾದಿಸಿದ್ದಾರೆ.
ಕತ್ತಿ ದಾಳಿ, ಮಧ್ಯೆ ಬಂದ ಮಗಳು
ಈ ವಿಚಾರದಲ್ಲಿ ಮಾತಿನ ಚಕಮಕಿ ತೀವ್ರಗೊಂಡು, ಉದ್ವಿಗ್ನನಾದ ಉಮ್ಮರ್ ಫಾರೂಖ್ ಕತ್ತಿಯಿಂದ ಷೇಕುಂಞಿಯ ಮೇಲೆ ದಾಳಿ ನಡೆಸಲು ಮುಂದಾಗಿದ್ದಾನೆ. ಆ ಸಮಯದಲ್ಲಿ ಶಾಲೆಯಿಂದ ಮನೆಗೆ ಬಂದಿದ್ದ ಮಗಳು ಜುಮೈಲ ಇಬ್ಬರ ಜಗಳದ ಮಧ್ಯೆ ನಿಂತಿದ್ದಾಳೆ. ಈ ವೇಳೆ ಉಮ್ಮರ್ ಫಾರೂಖ್ ಕೈಯಲ್ಲಿದ್ದ ಕತ್ತಿ ಜುಮೈಲಗೆ ತಾಗಿದ್ದು, ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಲ್ಲಿ ಷೇಕುಂಞಿಗೂ ಕತ್ತಿ ಇರಿತದಿಂದ ಗಾಯಗಳಾಗಿವೆ.
ಆಸ್ಪತ್ರೆಗೂ ಮುನ್ನವೇ ಸಾವಿನ ಸುದ್ದಿ
ಗಾಯಾಳುಗಳನ್ನು ತಕ್ಷಣ ಉಪ್ಪಳ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬಳಿಕ ಮಂಗಳೂರು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜುಮೈಲ ಮೃತಪಟ್ಟಿದ್ದಾಳೆ. ಘಟನೆಯ ಸುದ್ದಿ ತಿಳಿದಂತೆ ಸ್ಥಳೀಯರಲ್ಲಿ ಶೋಕ ಆವರಿಸಿದೆ.
ಮದ್ಯಪಾನ ಅಮಲು ಶಂಕೆ
ಆರೋಪಿ ಉಮ್ಮರ್ ಫಾರೂಖ್ ಘಟನೆಯ ವೇಳೆ ಮದ್ಯಪಾನ ಅಮಲಿನಲ್ಲಿದ್ದನೆಂದು ಶಂಕಿಸಲಾಗಿದೆ. ವಿದೇಶದಲ್ಲಿದ್ದ ಆತ ಸುಮಾರು ಎರಡು ತಿಂಗಳ ಹಿಂದಷ್ಟೇ ಊರಿಗೆ ವಾಪಸ್ಸಾಗಿದ್ದಾನೆ. ಹೇಳಿಕೆ ದಾಖಲಿಸಿಕೊಂಡ ಬಳಿಕ ಆತನನ್ನು ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.

ಕೊಲೆಗೀಡಾದ ಷೇಕುಂಞಿ

ತುಮಿನಾಡು ಹಿಲ್ ಟೋಪ್ ದುರಂತ: ಮೃತರ ಸಂಖ್ಯೆ ಎರಡಕ್ಕೆ ಏರಿಕೆ
ಮಂಜೇಶ್ವರ: ಮಂಜೇಶ್ವರ ತಾಲೂಕಿನ ತುಮಿನಾಡು ಹಿಲ್ ಟೋಪ್‌ನಲ್ಲಿ ಸೊತ್ತು ವಿವಾದಕ್ಕೆ ಸಂಬಂಧಿಸಿದ ಕುಟುಂಬ ಕಲಹದಲ್ಲಿ ನಡೆದ ಹಿಂಸಾತ್ಮಕ ಘಟನೆಯಲ್ಲಿ ಕೊಲೆಗೀಡಾದವರ ಸಂಖ್ಯೆ ಎರಡಕ್ಕೆ ಏರಿಕೆಯಾಗಿದೆ.
ನಿನ್ನೆ ಸಂಜೆ ತಂದೆಯಿಂದಲೇ ಕತ್ತಿ ಇರಿತಕ್ಕೆ ಬಲಿಯಾದ ಪ್ಲಸ್–ಟು ವಿದ್ಯಾರ್ಥಿನಿ ಜುಮೈಲಾಳ ಚಿಕ್ಕಪ್ಪನಾದ ಷೇಕುಂಞಿ, ಇರಿತದಿಂದ ಗಂಭೀರವಾಗಿ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು, ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ದಾಂಪತ್ಯ ಕಲಹ ಮತ್ತು ಸೊತ್ತು ತರ್ಕದ ಹಿನ್ನೆಲೆ ಉಮರ್ ಫಾರೂಖ್ ತನ್ನ ಪತ್ನಿಯ ತಂಗಿಯ ಪತಿ ಷೇಕುಂಞಿಯ ಮೇಲೆ ಕತ್ತಿಯಿಂದ ದಾಳಿ ನಡೆಸಿ ಕೊಲೆಗೈಯ್ಯಲು ಯತ್ನಿಸಿದ್ದಾನೆ. ಈ ವೇಳೆ ಜಗಳ ತಡೆಯಲು ಮಧ್ಯೆ ಬಂದ ಮಗಳು ಜುಮೈಲ ಹಾಗೂ ಷೇಕುಂಞಿ ಇಬ್ಬರಿಗೂ ಕತ್ತಿ ಇರಿತದಿಂದ ಗಂಭೀರ ಗಾಯಗಳಾಗಿದ್ದವು.
ಗಾಯಗೊಂಡ ಮಗಳು ಜುಮೈಲ ನಿನ್ನೆ ಸಂಜೆಲೇ ಮೃತಪಟ್ಟಿದ್ದರೆ, ಷೇಕುಂಞಿ ಇಂದು ಬೆಳಿಗ್ಗೆ ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ಇದರಿಂದ ಈ ದಾರುಣ ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ.
ಇಬ್ಬರ ಮೃತದೇಹಗಳನ್ನು ಇಂದು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಪೋಸ್ಟ್‌ಮಾರ್ಟಂ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಆರೋಪಿ ಉಮರ್ ಫಾರೂಖ್ ಪೊಲೀಸ್ ಕಸ್ಟಡಿಯಲ್ಲಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top