ಕುಖ್ಯಾತ ಕಳ್ಳನ ಬಂಧನ
ಉಡುಪಿ : ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಮತ್ತು ಬೈಂದೂರು ಪೊಲೀಸ್ ಠಾಣಾ ಸರಹದ್ದಿನಲ್ಲಿ ನಡೆದ ಮೂಕಾಂಬಿಕಾ ಸಹಕಾರಿ ಸೇವಾ ಸಂಘ ಸೊಸೈಟಿ ದರೋಡೆ ಪ್ರಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಡುಬಿದ್ರಿ ಠಾಣಾ ಪೊಲೀಸರು ದ.ಕ ಜಿಲ್ಲೆಯ ಪುತ್ತೂರು ಬನ್ನೂರಿನ ನೌಶಾದ್ (ಹಾಲಿ ವಾಸ ಮಡಿಕೇರಿ ಜಿಲ್ಲೆಯ ಕುಶಾಲನಗರ) ಎಂಬಾತನನ್ನು ಬಂಧಿಸಿದ್ದಾರೆ.
ಪಡುಬಿದ್ರೆ ಠಾಣಾ ವ್ಯಾಪ್ತಿಯಲ್ಲಿ ನೆಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪುತ್ತೂರು ಬನ್ನೂರಿನ ನೌಶಾದ್ ರೂ. 80,000 ಮೌಲ್ಯದ ಒಂದು ಪವನ್ ಚಿನ್ನ ಹಾಗೂ ರೂ. 32,000 ನಗದನ್ನು ವಶಪಡಿಸಿಕೊಂಡಿರುತ್ತಾರೆ.
ಕುಖ್ಯಾತ ಅಂತರಜಿಲ್ಲಾ ಕಳ್ಳ ಬಂಟ್ವಾಳ ಗೂಡಿನಬಳಿ ರಫೀಕ್ ಎಂಬಾತನ ಸಹಚರನಾಗಿದ್ದು, ಆತನೊಂದಿಗೆ ಸೇರಿ ಇತ್ತೀಚೆಗೆ ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ಅರೆಶಿರೂರು ಎಂಬಲ್ಲಿ ಶ್ರೀ ಮೂಕಾಂಬಿಕ ವ್ಯವಸಾಯ ಸಹಕಾರಿ ಸೇವಾ ಸಂಘ ಸೊಸೈಟಿಯ ಕಳ್ಳತನ ಪ್ರಯತ್ನ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.
ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳ್ಳತನ ಪ್ರಕರಣದ ಬಳಿಕ ರಫೀಕ್ ಹಾಗೂ ಇತರರೊಂದಿಗೆ ಸೇರಿಕೊಂಡು ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಿನ್ನದ ಅಂಗಡಿ ದರೋಡೆ ಪ್ರಕರಣ, ತಲಘಟ್ಟಪುರ ಠಾಣಾ ವ್ಯಾಪ್ತಿಯಲ್ಲಿ ಎಲೆಕ್ಟ್ರಿಕ್ ಅಂಗಡಿಯಲ್ಲಿ ತಾಮ್ರದ ತಂತಿ ಕಳವು ಪ್ರಕರಣ, ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃಷಿ ಸಹಕಾರಿ ಸೇವಾ ಸಂಘ ದರೋಡೆ ಪ್ರಯತ್ನ ಪ್ರಕರಣ ನಲ್ಲಿ ಭಾಗಿಯಾಗಿದ್ದು ಸದರಿ ಪೊಲೀಸ್ ಠಾಣೆಯ ಪೊಲೀಸರು ಇವರ ತಲಾಶಿಯಲ್ಲಿ ಇರುತ್ತಾರೆ.
ಈತನ ಮೇಲೆ ಮೇಲ್ಕಾಣಿಸಿದ ಪ್ರಕರಣಗಳನ್ನು ಹೊರತುಪಡಿಸಿ ಇದಕ್ಕೂ ಹಿಂದೆ ದ.ಕ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು, ಅಲ್ಲಿ ದಸ್ತಗಿರಿ ವಾರಂಟ್ ಇರುತ್ತದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಗಾಂಜಾ ಸೇವನೆ ಪ್ರಕರಣ ದಾಖಲಾಗಿದ್ದು ಅಲ್ಲಿ ದಸ್ತಗಿರಿ ವಾರಂಟು ಇರುತ್ತದೆ ಅಲ್ಲದೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿದ್ದು, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ.
ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ರವರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸದಾನಂದ ಎಸ್ ನಾಯಕ್ ರವರ ಮಾರ್ಗದರ್ಶನದಂತೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವಧ ಮತ್ತು ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕ ಸಕ್ತಿವೇಲು( ಕಾ.ಸು) ಅನಿಲ್ ಕುಮಾರ್(ತನಿಖೆ), ಶಿರ್ವ ಪೊಲೀಸ್ ಠಾಣಾ ಎಸ್ ಐ ಮಂಜುನಾಥ ಮರಬಧ ಮತ್ತು ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಕಾನ್ಸ್ಟೇಬಲ್ ಸಂದೇಶ್ ಕುಮಾರ್, ಕಾಪು ವೃತ್ತ ಕಚೇರಿಯ ಸಿಬ್ಬಂದಿ ಜೀವನ್ ಕುಮಾರ್, ಶಿರ್ವ ಪೊಲೀಸ್ ಠಾಣಾ ಸಿಬ್ಬಂದಿ ಬಸವನಗೌಡ, ಅಜೆಕಾರು ಪೋಲಿಸ್ ಠಾಣಾ ಸಿಬ್ಬಂದಿಯವರಾದ ಹೆಡ್ ಕಾನ್ಸ್ಟೇಬಲ್ ಸತೀಶ್ ಮತ್ತು ಪ್ರದೀಪ್ ಶೆಟ್ಟಿ, ಕಾರ್ಕಳ ಎ ಎಸ್ ಪಿ ಕಚೇರಿಯ ಸಿಬ್ಬಂದಿ ಪಿಸಿ ಶಿವಾನಂದ ಪೂಜಾರಿ ರವರು ಕಳ್ಳತನದ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ ನೌಶಾದ್ ನನ್ನು ಮಂಗಳೂರಿನಲ್ಲಿ ವಶಕ್ಕೆ ಪಡೆದು ದಸ್ತಗಿರಿ ಮಾಡಿದ್ದಾರೆ.
ಈ ದಿನ ಉಡುಪಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನಕ್ಕೆ ವಿಧಿಸಿರುತ್ತದೆ.



































