
ಕುಖ್ಯಾತಿ ಗರುಡ ಗ್ಯಾಂಗ್ ಸದಸ್ಯ ಇಸಾಕ್ ಗೆ ಗುಂಡೇಟು !
ಮಣಿಪಾಲ: ನೆಲಮಂಗಲ ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗರುಡ ಗ್ಯಾಂಗ್ ಸದಸ್ಯನಾಗಿರುವ ಆರೋಪಿ ಇಸಾಕ್ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ.



ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಬುಧವಾರ ಸಂಜೆ ಮಣಿಪಾಲ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಹಿರಿಯಡಕದ ಬಳಿ ಇಸಾಕ್ ಕಾಲಿಗೆ ಗುಂಡೇಟು ತಗುಲಿದ್ದು, ಕಾರ್ಯಾಚರಣೆ ವೇಳೆ ಇಬ್ಬರು ಪಿಎಸ್ಐ ಹಾಗೂ ಓರ್ವ ಪೇದೆಗೆ ಗಾಯವಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
ಬೆಂಗಳೂರಿನ ನೆಲಮಂಗಲದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೆಲವು ದಿನಗಳಿಂದ ಆರೋಪಿಗಾಗಿ ಶೋಧ ನಡೆಸುತ್ತಿದ್ದರು. ಇತ್ತೀಚಿಗೆ ಮಣಿಪಾಲದಲ್ಲಿ ಆರೋಪಿಯು ಪೋಲಿಸರಿಂದ ಕ್ಷಣಾರ್ಧಲ್ಲಿ ತಪ್ಪಿಸಿಕೊಂಡು ಹಲವು ವಾಹನಗಳಿಗೆ ಅಪಘಾತ ಮಾಡಿ ಅವಾಂತರ ಸೃಷ್ಟಿಸಿದ್ದ. ಹಿರಿಯಡಕದಲ್ಲಿ ನಡೆದ ಕಾರ್ಯಾಚರಣೆ ವೇಳೆ ಆರೋಪಿ ಕಾಲಿಗೆ ಗುಂಡೇಟು ತಗುಲಿದ್ದು ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆ ವಿವರ:
ಮಣಿಪಾಲ ಠಾಣಾ ಅಪರಾಧ ಕ್ರಮಾಂಕ 35/25 ರಲ್ಲಿ ಆರೋಪಿ ಇಸಾಕ್ ಹಾಗೂ ಇತರರ ಬಂಧನಕ್ಕಾಗಿ ಮಣಿಪಾಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್, ಮಲ್ಪೆ ವೃತ್ತ ನಿರೀಕ್ಷಕರು ಹಾಗೂ ಇತರ ಅಧಿಕಾರಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವನ್ನು ರಚಿಸಲಾಗಿತ್ತು.
ಈ ತಂಡವು ಆರೋಪಿತರ ಜಾಡನ್ನು ಹಿಡಿದು, ಈ ದಿನ (ದಿನಾಂಕ 12/03/25) ಮಧ್ಯಾಹ್ನ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಆರೋಪಿ ಇಸಾಕ್ ಸೇರಿದಂತೆ ಒಟ್ಟು ನಾಲ್ಕು ಜನರನ್ನು ದಸ್ತಗಿರಿ ಮಾಡಲಾಗಿರುತ್ತದೆ. ಈ ಎಲ್ಲಾ ನಾಲ್ಕು ಆರೋಪಿಗಳನ್ನು ಚನ್ನರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಮಣಿಪಾಲಕ್ಕೆ ಕರೆತರುತ್ತಿದ್ದರು.
ಉಡುಪಿ ಜಿಲ್ಲೆಯ ಹಿರಿಯಡಕ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆ ಅಂಗಡಿ ಬಳಿ, ಸುಮಾರು 7.15ಕ್ಕೆ ಆರೋಪಿ ಇಸಾಕನು ತನಗೆ ತುರ್ತಾಗಿ ವಾಂತಿ ಬರುತ್ತಿದೆ. ಮೂತ್ರ ವಿಸರ್ಜನೆ ಮಾಡಲೇಬೇಕೆಂದು ಹಠ ಮಾಡಿ, ಕರೆತರುತ್ತಿದ್ದ ವಾಹನವನ್ನು ನಿಲ್ಲಿಸಿದ್ದು, ಮೂತ್ರ ವಿಸರ್ಜನೆ ನಂತರ ಏಕಾಏಕಿ ಈತನೊಂದಿಗೆ ಇದ್ದ ಉಡುಪಿ ಪೊಲೀಸ್ ನಗರ ಪೊಲೀಸ್ ಠಾಣೆಯ ಸಿಬ್ಬಂದಿಯವರನ್ನ ತಳ್ಳಿ ಅವರ ಮೇಲೆ, ಆತನ ಕೈಗೆ ಅಳವಡಿಸಲಾಗಿದ್ದ ಲೀಡಿಂಗ್ ಚೈನ್ ಅನ್ನು ಬಳಸಿ ಬಲವಾಗಿ ಸುತ್ತಿ ದುಡ್ಡಿರುತ್ತಾನೆ, ನಂತರದಲ್ಲಿ ಇಬ್ಬರು ಪೊಲೀಸ್ ಉಪನಿರೀಕ್ಷಕರುಗಳು ಹಿಡಿಯಲು ಪ್ರಯತ್ನಿಸಿದಾಗ ಅವರಿಗೆ ಬಲವಾಗಿ ಒದ್ದು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುತ್ತಾನೆ.
ಹೀಗೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಾಗ ಆತನ ಲೀಡಿಂಗ್ ಚೈನ್ ಕರೆ ತರುತ್ತಿದ್ದ ವಾಹನದ ಎದುರಿನ ಗ್ಲಾಸಿಗೆ ಬಡಿದು, ಗ್ಲಾಸ್ ಒಡೆದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಗಾಯಗಳಾಗಿರುತ್ತದೆ.
ನಂತರದಲ್ಲಿ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಅವರು ಎಚ್ಚರಿಕೆ ನೀಡಿದ್ದು, ಕೇಳದೇ ಇದ್ದಾಗ ಗಾಳಿಯಲ್ಲಿ ಗುಂಡು ಹಾರಿಸುತ್ತಾರೆ. ಆದರೂ ಕೂಡ ಇಸಾಕ್ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿ ಇಸಾಕ್ ಕಾಲಿಗೆ ಗುಂಡು ಹಾರಿಸಲಾಗಿರುತ್ತದೆ. ಗಾಯಗೊಂಡ ಆರೋಪಿ ಇಸಾಕ್ ಹಾಗೂ ಗಾಯಗೊಂಡ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪ್ರಸ್ತುತ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ.






































