ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ; ವ್ಯವಸ್ಥಾಪನ
ಸಮಿತಿಯಿಂದ ಮಲೆಕುಡಿಯರನ್ನು ಕೈಬಿಟ್ಟ ಸರಕಾರ: ತೀವ್ರ ಆಕ್ರೋಶ
ಮಲೆಕುಡಿಯ ಜನಾಂಗದವರ ಮೂಲ ಆರಾಧನೆ ಕೇಂದ್ರ
ಕಾರ್ಕಳ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವ್ಯವಸ್ಥಾಪನ ಸಮಿತಿಗೆ ಮಲೆ ಕುಡಿಯರನ್ನು ಸೇರ್ಪಡೆಗೊಳಿಸಬೇಕೆಂದು ರಾಜ್ಯ ಮಲೆಕುಡಿಯರ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ಅವರು ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವು ಪ್ರಸಿದ್ಧ ಕ್ಷೇತ್ರ ವಾಗಿ ನಾಡಿನಲ್ಲೆಡೆ ಚಿರಪರಿಚಿತವಾಗಿದೆ. ನಾಗದೇವರ ಮೂಲ ಆರಾಧನಾ ಸ್ಥಳವಾಗಿದ್ದು ಇಲ್ಲಿನ ಮೂಲ ನಿವಾಸಿಗಳಾಗಿರುವ ಮಲೆಕುಡಿಯ ಸಮುದಾಯಕ್ಕೆ ಸೇರಿರುವ ದೇವಸ್ಥಾನವೆಂಬ ಹಿನ್ನೆಲೆಯನ್ನು ಹೊಂದಿದೆ. ಮಲೆಕುಡಿಯ ವಂಶಸ್ಥರಾದ ಕುಕ್ಕೆ ಮತ್ತು ಲಿಂಗ ಅನ್ನುವ ಇಬ್ಬರು ದೈವೀ ಪುರುಷರು ಶ್ರೀ ಕ್ಷೇತ್ರದ ಸ್ಥಾಪನೆಗೆ ಕಾರಣಕರ್ತರಾಗಿದ್ದಾರೆ. ಕಾಲ ನಂತರದಲ್ಲಿ ದೇವಸ್ಥಾನವು ಸರಕಾರದ ಆಡಳಿತ ಕೊಳಪಟ್ಟು ಉತ್ತಮ ರೀತಿಯಲ್ಲಿ ನಿರ್ವಹಣೆಗೊಂಡು ಮುನ್ನಡೆಯುತ್ತಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೂ ಮಲೆಕುಡಿಯ ಸಮುದಾಯಕ್ಕೂ ಅವಿನಾಭಾವ ನಂಟು ಇರುವುದನ್ನು ನಾವು ಕಾಣಬಹುದು ಎಂದು ತಿಳಿಸಿದ್ದಾರೆ.
ಪೂಜಾ ಕೈಂಕರಗಳು ನೆರವೇರುವಲ್ಲಿ ಮಲೆಕುಡಿಯರ ಪಾತ್ರ ಮಹತ್ವದ್ದಾಗಿದೆ. ಶ್ರೀ ಕ್ಷೇತ್ರದ ದೇವರ ಪರಿಚಾರಕ ವೃತ್ತಿಯಿಂದ (ಬುಟ್ಟಿಚಾಕರಿ) ಉತ್ಸವ ಕಾರ್ಯಗಳು, ಸಾಂಗೋಪವಾಗಿ ನೆರವೇರಲು ಮಲೆಕುಡಿಯರು ನಾನಾ ರೀತಿಯಲ್ಲಿ ಶ್ರಮಪಡುತ್ತಾರೆ. ದೈವದ ನೇಮೋತ್ಸವ ಕಾರ್ಯಕ್ರಮದಲ್ಲಿ ಮಲೆಕುಡಿಯರ ಪಾತ್ರ ಪ್ರಮುಖವಾಗಿದೆ. ಅಷ್ಟಮಿಯಂದು ಶ್ರೀ ದೇವಳದಲ್ಲಿ ನಡೆಯುವ ಪಲ್ಲಕ್ಕಿ ಉತ್ಸವವನ್ನು ನೆರವೇರಿಸುವುದೇ ಮಲೆಕುಡಿಯ ಸಮುದಾಯದವರು. ಮುಖ್ಯವಾಗಿ ಶ್ರೀ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ದೇವರ ಬ್ರಹ್ಮ ರಥವನ್ನು ಕಟ್ಟುವ ಕಾರ್ಯವನ್ನು ಮಲೆ ಕುಡಿಯರೆ ನಿರ್ವಹಿಸುತ್ತಿದ್ದು ಈ ಕುರಿತಾದ ಕಟ್ಟು ಕಟ್ಟಲೆಗಳನ್ನು ಅನೂ ಚಾ ನವಾಗಿ ನಮ್ಮ ಸಮುದಾಯದವರು ಪಾಲಿಸಿಕೊಂಡು ಬಂದಿರುತ್ತಾರೆ ಎಂಬ ಮಾಹಿತಿಯನ್ನು ಒದಗಿಸಿದ್ದಾರೆ.
ಧಾರ್ಮಿಕ ವಿಧಿ ವಿಧಾನವಾದ ಅಷ್ಟಮಂಗಳದಲ್ಲಿಯೂ ಈ ಸಂಬಂಧವಾಗಿ ಅನೇಕ ವಿಚಾರಗಳು ಪ್ರಸ್ತಾಪವಾಗಿದ್ದು ಮೂಲ ನಿವಾಸಿಗಳಾದ ಮಲೆಕುಡಿಯರು ಮತ್ತು ದೇವಸ್ಥಾನಕ್ಕೆ ಪರಂಪರಾಗತವಾಗಿ ಇರುವ ಭಾಂದವ್ಯವನ್ನು ತಿಳಿಸುತ್ತದೆ. ಶ್ರೀದೇವರ ಸೇವೆ ಅಲ್ಲದೆ ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಮಲೆಕುಡಿಯರು ದುಡಿಯುತ್ತಿದ್ದಾರೆ. ಈ ಎಲ್ಲಾ ಕಾರಣದ ಹಿನ್ನೆಲೆಯಿಂದಾಗಿ ಇದುವರೆಗಿನ ಕಾರ್ಯ ನಿರ್ವಹಿಸುತ್ತಿದ್ದ ಸಮಿತಿಗಳಲ್ಲಿ ಮಲೆ ಕುಡಿಯರಿಗೆ ಕನಿಷ್ಠ ಒಂದು ಸದಸ್ಯತ್ವ ಸ್ಥಾನವನ್ನು ಕಾಯ್ದಿರಿಸುವುದರ ಜೊತೆಗೆ ಮೀಸಲಾಗಿಡಲಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ.
ಆದರೆ ಈ ಸಾಲಿನ ಹೊಸ ಸಮಿತಿಯಲ್ಲಿ ಸಮುದಾಯದ ಮಂದಿಯ ಹೆಸರನ್ನು ಕೈ ಬಿಡಲಾಗಿದೆ ಎಂಬ ಮಾಹಿತಿ ಇದ್ದು. ಸರ್ಕಾರ ಮತ್ತೊಮ್ಮೆ ಮರು ಪರಿಶೀಲನೆ ಮಾಡಿ ಮಲೆಕುಡಿಯರ ಹೆಸರನ್ನು ಸೇರ್ಪಡೆ ಮಾಡಿ ಪಟ್ಟಿ ಅಂತಿಮಗೊಳಿಸಿ ವ್ಯವಸ್ಥಾಪನ ಸಮಿತಿಯನ್ನು ಘೋಷಣೆ ಮಾಡಬೇಕು. ಸರಕಾರ ಪದೇ ಪದೇ ಅರಣ್ಯಾಧಾರಿತ ಬುಡಕಟ್ಟು ಜನರ, ಆದಿವಾಸಿಗಳ ಪರ ಎಂಬುದಾಗಿ ಹೇಳುತ್ತಿರುವಾಗ ಈ ವಿಚಾರದಲ್ಲಿ ಕೂಡ ಅರಣ್ಯ ಮೂಲ ಬುಡಕಟ್ಟು ಜನಾಂಗವಾದ ಮಲೆಕುಡಿಯರಿಗೆ ವ್ಯವಸ್ಥಾಪನ ಸಮಿತಿಯಲ್ಲಿ ಒಂದು ಸ್ಥಾನವನ್ನು ಕೊಟ್ಟು ನ್ಯಾಯವನ್ನು ಒದಗಿಸಬೇಕೆಂದು ಆಗ್ರಹಿಸಿದರು.
ಪ್ರಮುಖವಾಗಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮಲೆಕುಡಿಯರಿಲ್ಲದ ಸಮಿತಿಯು ಪೂರ್ಣ ಪ್ರಮಾಣದ ಸಮಿತಿಯಾಗಿರಲು ಸಾಧ್ಯವಿಲ್ಲ. ಹಾಗಾಗಿ ಕಾನೂನು ಹೋರಾಟಕ್ಕೆ ಅವಕಾಶ ಮಾಡಿಕೊಡದೆ ದೊಡ್ಡ ಮಟ್ಟದಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಮ್ಮ ಜನಾಂಗದವರಿಗೆ ಅವಕಾಶ ಮಾಡಿಕೊಟ್ಟು ಗೊಂದಲಕ್ಕೆ ತೆರೆ ಎಳೆಯಬೇಕಾಗಿ ಸಮಸ್ತ ಮಲೆ ಕುಡಿಯರ ಪರವಾಗಿ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಈದು ರಾಜ್ಯ ಸರಕಾರವನ್ನು ಆಗ್ರಹಿಸಿದರು.
ಕುಕ್ಕೆ ಸುಬ್ರಹ್ಮಣ್ಯ : ಸರ್ವ ಧರ್ಮಿಯರು ಆರಾಧಿಸುತ್ತಾ ಆದಾಯಗಳಿಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದುಕೊಂಡಿರುವ ನಾಗಾರಾಧನೆಯ ಶ್ರದ್ಧಾಕೇಂದ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ವ್ಯವಸ್ಥಾಪನಾ ಸಮಿತಿಯ ಸದಸ್ಯರಾಗಲು ಹಲವು ಸಮಯಗಳಿಂದ ಭಾರೀ ಕಸರತ್ತುಗಳು ನಡೆಯುತ್ತಿದ್ದವು.
ಕುಕ್ಕೆ ಸುಬ್ರಹ್ಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಲು ಸರ್ಕಾರದ ಹಂತದಲ್ಲಿ ಉತ್ಸುಕತೆ ಹೊಂದಿರುವ ಬಗ್ಗೆ ಮಾಹಿತಿ ಹರಿದಾಡಿತ್ತು. ಈ ಬೆಳವಣಿಗೆ ನಡುವೆ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಒಂದು ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ಅಭಿವೃದ್ಧಿ ಪ್ರಾಧಿಕಾರ ರಚನೆಗೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಸರ್ಕಾರವು ಎಂದಿನಂತೆ ವ್ಯವಸ್ಥಾಪನಾ ಸಮಿತಿ ರಚನೆಗೆ ಮುಂದಾಗಿತ್ತು.

ಬಳಿಕದ ಬೆಳವಣಿಗೆಯಲ್ಲಿ ಅರ್ಜಿ ಆಹ್ವಾನಿಸಲಾಗಿತ್ತು. ಅರ್ಜಿ ಸಲ್ಲಿಸಿ ಹಲವಾರು ಆಕಾಂಕ್ಷಿಗಳು ರಾಜ್ಯ ಮಟ್ಟದ ಪ್ರಭಾವಿ ರಾಜಕೀಯ ನಾಯಕರ ಮೂಲಕ ಲಾಬಿ ನಡೆಸುತ್ತಿರುವ ಬಗ್ಗೆಯೂ ಸುದ್ದಿಗಳು ಹರಿದಾಡುತ್ತಿದ್ದವು.
ಇದೀಗ ವ್ಯವಸ್ಥಾಪನಾ ಸಮಿತಿ ಎನ್ನಲಾದ ಪಟ್ಟಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮೂಲಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ನೂತನ ವ್ಯವಸ್ಥಾಪನಾ ಸಮಿತಿ ಶೀಘ್ರದಲ್ಲಿಯೇ ರಚನೆಗೊಳ್ಳುವ ಸಂಭವವಿದೆ ಎನ್ನಲಾಗುತ್ತಿದೆ.
ವ್ಯವಸ್ಥಾಪನಾ ಸಮಿತಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಜರಾಯಿ ಸಚಿವ ರಾಮ ಲಿಂಗಾ ರೆಡ್ಡಿ ಅವರಿಗೆ ನೀಡಿದ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಪಟ್ಟಿಯಲ್ಲಿ ಅಶೋಕ್ ನೆಕ್ರಾಜೆ, ಹರೀಶ್ ಇಂಜಾಡಿ, ಎನ್. ಜಯಪ್ರಕಾಶ್ ರೈ, ಲೀಲಾ ಮನಮೋಹನ್, ಪ್ರವೀಣ ರೈ ಮರುವಂಜ, ಡಾ.
ಬಿ ರಘು, ಅಜಿತ್ ಪೂಜಾರಿ ಕಡಬ, ಮಹೇಶ್ ಕುಮಾರ್ ಕರಿಕ್ಕಳ ಹಾಗೂ ಪ್ರಧಾನ ಅರ್ಚಕರ ಹೆಸರುಗಳು ಉಲ್ಲೇಖವಾಗಿದೆ.





















