ಕುಂಬಳೆ ರಾಷ್ಟ್ರೀಯ ಹೆದ್ದಾರಿ ಟೋಲ್ ಗೇಟ್ ಸ್ಥಾಪನೆ ಕಾಮಗಾರಿ ತಾತ್ಕಾಲಿಕ ತಡೆ ಹಿಡಿಯಲು ನಿರ್ಧಾರ : ಕೇಂದ್ರ – ರಾಜ್ಯ ಸರಕಾರದ ತೀರ್ಮಾನದಂತೆ ಮುಂದಿನ ನಿರ್ಣಯ

ಕಾಸರಗೋಡು: ಕುಂಬಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸ್ಥಾಪಿಸಲುದ್ದೇಶಿಸಿದ ಟೋಲ್ ಗೇಟ್ ಕಾಮಗಾರಿಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲು ಜಿಲ್ಲಾಧಿಕಾರಿಗಳ ಜತೆ ಜನಪ್ರತಿನಿಧಿಗಳು ನಡೆಸಿದ ಸಭೆಯಲ್ಲಿ ನಿರ್ಣಯಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರಕಾರದ ತೀರ್ಮಾನಗಳ ವಿಧೇಯ ಟೋಲ್ ಗೇಟ್ ಸ್ಥಾಪಿಸುವ ಕಾಮಗಾರಿ ಮುಂದುವರಿಸಿದರೆ ಸಾಕೆಂದು ಸಭೆ ನಿರ್ಧರಿಸಿದೆ.
ಜಿಲ್ಲಾಧಿಕಾರಿ ಕೆ.ಇಂಬುಶೇಖರನ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾ.ಹೆದ್ದಾರಿ ಪ್ರಾಧಿಕಾರದ ಪ್ರತಿನಿಧಿಗಳು ಮತ್ತು ಕಾಮಗಾರಿಯ ಗುತ್ತಿಗೆ ವಹಿಸಿರುವ ಊರಾಳುಂಗಲ್ ಸಂಸ್ಥೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಶಾಸಕರಾದ ಎನ್.ಎ.ನೆಲ್ಲಿಕುನ್ನ್, ಸಿ ಎಚ್.ಕುಂಞಂಬು, ಎ.ಕೆ.ಎಂ.ಅಶ್ರಫ್, ಸಂಸದ ರಾಜಮೋಹನ್ ಉಣ್ಣಿತ್ತಾನ್, ರಾ ಹೆದ್ದಾರಿ ಯೋಜನಾ ನಿರ್ದೇಶಕ ಉಮೇಶ್.ಕೆ.ಗಾರೂಂ ಪಾಲ್ಗೊಂಡಿದ್ದರು.

ಕುಂಬಳೆಯ ಟೋಲ್ ಗೇಟ್ ಸ್ಥಾಪನೆಯ ಸಮಸ್ಯೆ, ವಿವಾದಗಳ ಕುರಿತು ಸರಕಾರದ ಜತೆ ಚರ್ಚಿಸಲು ಕಾಸರಗೋಡು ಜಿಲ್ಲೆಯ ಐವರು ಶಾಸಕರ ನಿಯೋಗ ಇದೇ ವಾರ ತಿರುವನಂತಪುರಕೆ ತೆರಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದೇ ವೇಳೆ ಸಂಸದ ರಾಜಮೋಹನ್ ಉಣ್ಣಿತಾನ್ ದೆಹಲಿಗೆ ತೆರಳಿ ಕೇಂದ್ರ ಸಾರಿಗೆ , ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ ವಿಷಯ ಮಂಡಿಸಿ, ಚರ್ಚಿಸಲು ಸಭೆ ತೀರ್ಮಾನಿಸಿದೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಪ್ರಸ್ತುತ ವಿಷಯಕ್ಕೆ ಸಂಬಂಧಿಸಿ ದೊರೆಯುವ ಉತ್ತರದ ಬಳಿಕ ಟೋಲ್ ಗೇಟ್ ಸ್ಥಾಪನೆ ಸಂಬಂಧಿಸಿ ಮುಂದಿನ ನಿರ್ಣಯವಾಗಲಿದೆಯೆಂದು ಸಭೆಯಲ್ಲಿ ನಿರ್ಧರಿಸಲಾಗಿದೆ.
ಕೇಂದ್ರ -ರಾಜ್ಯ ಸರಕಾರದ ತೀರ್ಮಾನಗಳ ತನಕ ಟೋಲ್ ಗೇಟ್ ನಿರ್ಮಾಣ ಕಾಮಗಾರಿ ನಡೆಸದಂತೆ ಕಾಮಗಾರಿ ತಡೆ ಹಿಡಿಯಲು ಸಭೆ ತೀರ್ಮಾನಿಸಿದೆ.
ಹೇಳುವುದು ಒಂದು ಮಾಡುವುದು ಇನ್ನೊಂದು
ಪ್ರತಿ 60 ಕಿ.ಮೀ.ಗೆ ಒಂದರಂತೆ ಟೋಲ್ಗೇಟ್ ಇರಬೇಕು’ ಎಂದು ಸಂಸತ್ ಅಧಿವೇಶನದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿಕೆ ನೀಡಿದ್ದರು. ಸ್ಥಳ ಪರಿಶೀಲನೆ ನಡೆಸಿದಾಗ, ಈ ನಿಯಮ ಸಚಿವರ ಭಾಷಣಕ್ಕಷ್ಟೇ ಸೀಮಿತವಾದಂತಿದೆ. ಸಚಿವರಿಗೂ ತಪ್ಪು ಮಾಹಿತಿ ಇರುವುದು ಎದ್ದು ಕಾಣುತ್ತದೆ.
ಕರ್ನಾಟಕದ ಗಡಿಭಾಗವಾದ ತಲಪ್ಪಾಡಿಯಲ್ಲಿ ಈಗಾಗಲೇ ಟೋಲ್ ಗೇಟ್ ಕಾರ್ಯಚರಿಸುತ್ತಿದೆ. ಇಲ್ಲಿಂದ ಬರೀ 23 ಕಿ.ಮೀ ದೂರದೊಳಗಾಗಿ ಕುಂಬಳೆಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಲಾದ ಲೋಟ್ ಗೇಟ್ ಇದೆ.

ವಾಹನ ಪ್ರಯಾಣಿಕರಿಗೆ ಈ ಟೋಲ್ ಗೇಟ್ ನಿಂದ ಕಿಸೆಗೆ ಕತ್ತರಿ ಹಾಕಲು ಕೇಂದ್ರ ಸರಕಾರದ ಪ್ರಯೋಕತ್ವದಲ್ಲಿ ನಡೆಯುತ್ತಿರುವ ಕುರಿತು ಯು ಡಿ ಎಫ್, ಎಲ್ ಡಿ ಎಫ್ ಪಕ್ಷಗಳ ಕೂಟ ಪ್ರಬಲ ವಿರೋಧ ವ್ಯಕ್ತಪಡಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿ ಎ ಕೂಟ ಇದು ವರೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇರುವುದು ಗಮನಾರ್ಹವಾಗಿದೆ.

ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಯೋಜನೆಯ ಕಾಲಘಟ್ಟದಲ್ಲಿ ಚೇರ್ಕಳ ಭಾಗದಲ್ಲಿ ಟೋಲ್ ಗೇಟ್ ಸ್ಥಾಪನೆಯ ಪ್ರಸ್ತಾಪ ಇರಿಸಲಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪೂರ್ಣ ಗೊಳುವ ಪೂರ್ವದಲ್ಲಿ ಕುಂಬಳೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಟೋಲ್ ಗೇಟ್ ತೆರೆಯುವ ಯೋಜನೆ ನಡೆದಿದೆ. ಅದಕ್ಕೆ ಪೂರಕವಾಗಿ ಟೋಲ್ ಗೇಟ್ ಸ್ತಾಪನೆಯ ಕಾಮಗಾರಿಯೂ ಭರದಿಂದ ಸಾಗುತ್ತಿದೆ.

ಇಂತಹ ಎಡವಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪರಿಸರದಲ್ಲಿ ನಡೆದಿತ್ತು. ತಾತ್ಕಾಲಿಕವಾಗಿ ಟೋಲ್ ಗೇಟ್ ಕಾರ್ಯಚರಿಸುತ್ತಾ ವಾಹನಗಳ ಮೇಲೆ ಹಾಕಲಾಗಿದ್ದ ಸುಂಕವು ಟೆಂಡರ್ ದಾರರ ಪಾಲಾಗಿತ್ತು. ಇದರ ವಿರುದ್ಧವಾಗಿ ಡಿವೈಎಫ್ಐ ನೇತೃತ್ವದಲ್ಲಿ ಸಮಾನ ಮನಸ್ಕರು ಕಾನೂನು ಬದ್ಧ ಹೋರಾಟದ ಪರಿಣಾಮವಾಗಿ ಜಿಲ್ಲಾಡಳಿತವು ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಿರುವುದನ್ನು ಸ್ಮರಿಸಬಹುದು.






































