ಕುಂಬಳೆ ಟೋಲ್ ಪ್ಲಾಝಾ ವಿರೋಧಿ ರಿಟ್ ಅರ್ಜಿ: ಅಂತಿಮ ವಿಚಾರಣೆ ಮತ್ತು ತೀರ್ಪು ಜನವರಿ 21ಕ್ಕೆ ಮುಂದೂಡಿಕೆ
RB NEWS
Bureau Report
ಕುಂಬಳೆ ಟೋಲ್ ಪ್ಲಾಝಾ ವಿರೋಧಿ ರಿಟ್ ಅರ್ಜಿ: ಅಂತಿಮ ವಿಚಾರಣೆ ಮತ್ತು ತೀರ್ಪು ಜನವರಿ 21ಕ್ಕೆ ಮುಂದೂಡಿಕೆ
ತಿರುವನಂತಪುರಂ : ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಟೋಲ್ ಪ್ಲಾಝಾ ನಿರ್ಮಾಣ ಹಾಗೂ ಟೋಲ್ ವಸೂಲಾತಿಗೆ ವಿರೋಧವಾಗಿ ಕ್ರಿಯಾ ಸಮಿತಿ ಸಲ್ಲಿಸಿರುವ ರಿಟ್ ಅರ್ಜಿಯ ಅಂತಿಮ ವಾದ ಆಲಿಸುವಿಕೆ ಹಾಗೂ ತೀರ್ಪನ್ನು ಹೈಕೋರ್ಟ್ ಜನವರಿ 21ಕ್ಕೆ ಮುಂದೂಡಿದೆ.
ಪ್ರಕರಣವನ್ನು ಪರಿಗಣಿಸಲು ನಿಗದಿಪಡಿಸಲಾಗಿದ್ದರೂ, ನ್ಯಾಯಾಲಯದ ಸಮಯ ವಿಳಂಬದ ಕಾರಣ ವಿಚಾರಣೆ ಸಾಧ್ಯವಾಗದೆ, ಕೇಸನ್ನು ಜನವರಿ 21ರಂದು ಮರುಪರಿಗಣಿಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಕುಂಬಳೆ ಟೋಲ್ ಪ್ಲಾಝಾ ನಿರ್ಮಾಣ ಕಾಮಗಾರಿಯನ್ನು ಹೈಕೋರ್ಟ್ನ ಏಕಸದಸ್ಯ ಪೀಠ ಮಧ್ಯಂತರ ಆದೇಶದ ಮೂಲಕ ತಡೆಯಾಜ್ಞೆ ನೀಡಿ ಸ್ಥಗಿತಗೊಳಿಸಿತ್ತು. ನಂತರ ಅಂತಿಮ ತೀರ್ಪಿನಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಕಾಮಗಾರಿ ಮುಂದುವರಿಸಲು ಅನುಮತಿ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಟೋಲ್ ವಿರೋಧಿ ಕ್ರಿಯಾ ಸಮಿತಿ ಡಿವಿಷನ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು. ಡಿವಿಷನ್ ಪೀಠದ ವಿಚಾರಣೆಯ ವೇಳೆ, ಹೆದ್ದಾರಿ ಪ್ರಾಧಿಕಾರಕ್ಕೆ ಟೋಲ್ ವಸೂಲಾತಿಗೆ ಕೇಂದ್ರ ಸರ್ಕಾರದಿಂದ ಇನ್ನೂ ಅನುಮತಿ ಲಭಿಸಿಲ್ಲ ಎಂಬುದನ್ನು ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ ಉಲ್ಲೇಖಿಸಿತ್ತು. ಈ ಹಿನ್ನೆಲೆಯಲ್ಲಿ ಅಂತಿಮ ತೀರ್ಪು ನೀಡಲು ನಿನ್ನೆ ಪ್ರಕರಣವನ್ನು ಪರಿಗಣಿಸಲಾಗಿತ್ತಾದರೂ, ನ್ಯಾಯಾಲಯದ ಸಮಯಾಭಾವದಿಂದ ವಿಚಾರಣೆ ನಡೆಯದೆ ಜನವರಿ 21ಕ್ಕೆ ಮುಂದೂಡಲಾಗಿದೆ.