ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026 :ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಡನೀರು ಶ್ರೀಗಳು
RB NEWS
Bureau Report
ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026 :ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಡನೀರು ಶ್ರೀಗಳು
ಕಾಸರಗೋಡು: ಕನ್ನಡ ಭವನದಲ್ಲಿ ಫೆಬ್ರವರಿ 22ರಂದು ಭಾನುವಾರ ಬೆಳಿಗ್ಗೆ 7ರಿಂದ ರಾತ್ರಿ 10ಗಂಟೆಯವರೆಗೆ ನಡೆಯಲಿರುವ “ಕಾಸರಗೋಡು–ಕರ್ನಾಟಕ ಚುಟುಕು ಸಾಹಿತ್ಯ ಸಮ್ಮೇಳನ 2026”ರ ಆಮಂತ್ರಣ ಪತ್ರಿಕೆಯನ್ನು ಫೆಬ್ರವರಿ 16ರಂದು ಎಡನೀರು ಶ್ರೀಮಠದಲ್ಲಿ ಎಡನೀರು ಮಠದ ಮಾಠಾಧಿಪತಿ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡುಗಡೆಗೊಳಿಸಿ ಶುಭಾಶೀರ್ವಾದ ನೀಡಿದರು. ಭಾನುವಾರ ನಡೆಯುವ ಸಮ್ಮೇಳನವು ನಾಡೋಜ ಡಾ. ಕೃಷ್ಣಪ್ರಸಾದ್ ಕೂಡ್ಲು ಅವರ ಸರ್ವಾಧ್ಯಕ್ಷತೆಯಲ್ಲಿ, ಡಾ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಕನ್ನಡ ಭವನದ ಪ್ರಾಯೋಜಕತ್ವದಲ್ಲಿ ನಡೆಯಲಿದೆ. ಕನ್ನಡ ಭವನದ ಅಂಗ ಸಂಸ್ಥೆಯಾದ “ಕೇರಳ ರಾಜ್ಯ–ಕನ್ನಡ ಚುಟುಕು ಸಾಹಿತ್ಯ ಪರಿಷತ್”ನ ವರ್ಷಾಚರಣೆಯ ಪ್ರಯುಕ್ತ ಪರಿಷತ್ತಿನ ಜಿಲ್ಲಾ ಘಟಕಗಳ ಸಹಕಾರದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವು ಬೆಳಿಗ್ಗೆ 7 ಗಂಟೆಗೆ ಭಜನೆಯೊಂದಿಗೆ ಪ್ರಾರಂಭವಾಗಲಿದ್ದು, 8.30ಕ್ಕೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಯಲಿದೆ. 9 ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಈ ಸಂದರ್ಭದಲ್ಲಿ ಗೋವಿನಾಳ ಗದಗದ ಶ್ರೀ ಶ್ರೀ ರಮೇಶ್ ಗುರೂಜಿ ಹಾಗೂ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳ ಆಶೀರ್ವಚನ ನಡೆಯಲಿದೆ. ಸ್ವಾಮೀಜಿಗಳಿಗೆ ವಿಶೇಷ ಸಮ್ಮೇಳನ ಗೌರವವೂ ಪ್ರದಾನ ಮಾಡಲಾಗುವುದು. ಸಮ್ಮೇಳನದಲ್ಲಿ ಮಹಾನ್ ಕವಿ–ಸಾಹಿತಿಗಳಿಗೆ “ಕವಿ ಕಾವ್ಯ ವಿಭೂಷಣ ರಾಷ್ಟ್ರೀಯ ಪ್ರಶಸ್ತಿ” ಪ್ರದಾನ, ಉಚಿತ ನೇತ್ರ ತಪಾಸಣಾ ಶಿಬಿರ, ಉಚಿತ ಸಾರ್ವಜನಿಕ ವಾಚನಾಲಯ ಲೋಕಾರ್ಪಣೆ, ಕವಿಗೋಷ್ಠಿ, ವಿಚಾರ ಸಂಕಿರಣ, ನೃತ್ಯ–ಗಾನ ವೈಭವ, ಪರಿಷತ್ತಿನ ಕಾರ್ಯಕರ್ತರು ಮತ್ತು ಕವಿಗಳಿಗೆ “ಕವಿರತ್ನ ಪ್ರಶಸ್ತಿ”, ಕನ್ನಡ ಭವನ ಜಿಲ್ಲಾ ಘಟಕಗಳ ಪದಾಧಿಕಾರಿಗಳು ಹಾಗೂ ಕನ್ನಡ ಮುಖಂಡರಿಗೆ “ಕನ್ನಡ ಪಯಸ್ವಿನಿ ಪ್ರಶಸ್ತಿ” ಪ್ರದಾನ, ಪುಸ್ತಕ ಬಿಡುಗಡೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದಲ್ಲಿ ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಕಾರ್ಯಕ್ರಮದ ರೂಪುರೇಖೆಗಳನ್ನು ವಿವರಿಸಿದರು. ಉಪಾಧ್ಯಕ್ಷ ಶಂಕರ ಜೆ.ಪಿ.ನಗರ ನಿರೂಪಣೆ ಮಾಡಿದರು. ಗೌರವಾಧ್ಯಕ್ಷ ಪ್ರದೀಪ್ ಬೇಕಲ್ ಹಾಗೂ ಕನ್ನಡ ಭವನ ರೂವಾರಿಗಳಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂಧ್ಯಾರಾಣಿ ಟೀಚರ್ ಸ್ವಾಮೀಜಿಗಳಿಗೆ ಫಲಪುಷ್ಪ ನೀಡಿ ಶುಭಾನುಗ್ರಹ ಕೋರಿದರು. ನಿರ್ದೇಶಕ ಜಗನ್ನಾಥ್ ಶೆಟ್ಟಿ ವಂದಿಸಿದರು.