ಕಾರ್ಕಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ವಿ. ಸುನಿಲ್ ಕುಮಾರ್
RB NEWS
Bureau Report
ಕಾರ್ಕಳ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾದ ಶಾಸಕ ವಿ. ಸುನಿಲ್ ಕುಮಾರ್
ಬೆಂಗಳೂರು: ಕಾರ್ಕಳ ವಿಧಾನಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿ ಹಾಗೂ ಐತಿಹಾಸಿಕ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಸಿದ್ಧತೆ ಕುರಿತು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಸುದೀರ್ಘವಾಗಿ ಚರ್ಚಿಸಿದರು. ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಐತಿಹಾಸಿಕ ಮಹಾಮಸ್ತಕಾಭಿಷೇಕವು 2027ರ ಫೆಬ್ರವರಿ 18ರಿಂದ ಹತ್ತು ದಿನಗಳ ಕಾಲ ನಡೆಯಲಿದ್ದು, ದೇಶ-ವಿದೇಶಗಳಿಂದ ಅಪಾರ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರು ಕಾರ್ಕಳಕ್ಕೆ ಆಗಮಿಸುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕರ್ಕಳದಲ್ಲಿ ಅಗತ್ಯ ಮೂಲಸೌಕರ್ಯ ಹಾಗೂ ಸಾರ್ವಜನಿಕ ಸೌಲಭ್ಯಗಳನ್ನು ಕಲ್ಪಿಸಲು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಸುನಿಲ್ ಕುಮಾರ್ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಇದೇ ವೇಳೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಪ್ರಗತಿಯಲ್ಲಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಬಾಕಿ ಇರುವ ಅನುದಾನಗಳ ಬಿಡುಗಡೆ ಹಾಗೂ ಹೊಸ ಅಭಿವೃದ್ಧಿ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಕುರಿತು ಮುಖ್ಯಮಂತ್ರಿಗಳೊಂದಿಗೆ ವಿವರವಾಗಿ ಚರ್ಚಿಸಲಾಯಿತು. ಇದಲ್ಲದೆ, ಸೆಪ್ಟೆಂಬರ್ 18, 2026ರಂದು ಮಂಗಳೂರಿನಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ, ಕರಾವಳಿ ಜಿಲ್ಲೆಗಳ ಸಮಗ್ರ ಹಾಗೂ ದೀರ್ಘಕಾಲಿಕ ಅಭಿವೃದ್ಧಿಗೆ ಪೂರಕವಾಗುವ ಶಾಶ್ವತ ಯೋಜನೆಗಳನ್ನು ರೂಪಿಸುವಂತೆ ಮುಖ್ಯಮಂತ್ರಿಗೆ ಶಾಸಕ ಸುನಿಲ್ ಕುಮಾರ್ ಮನವಿ ಮಾಡಿದರು. ಮುಖ್ಯಮಂತ್ರಿಗಳ ಮುಂದೆ ಮಂಡಿಸಿದ ಪ್ರಮುಖ ಬೇಡಿಕೆಗಳು ಕಾರ್ಕಳದ ಐತಿಹಾಸಿಕ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ. ಕಾರ್ಕಳ ಪುರಸಭಾ ವ್ಯಾಪ್ತಿ ಹಾಗೂ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ. ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ. ಕರಾವಳಿ ಜಿಲ್ಲೆಗಳ ಕಂಬಳ ಕ್ರೀಡಾಕೂಟಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಮನವಿ. ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ಅಭಿವೃದ್ಧಿ ಹಾಗೂ ಪ್ರವಾಸೋದ್ಯಮಕ್ಕೆ ಹೆಚ್ಚಿನ ಉತ್ತೇಜನ. ಐತಿಹಾಸಿಕ ರಾಮಸಮುದ್ರ ಕೆರೆ ಮತ್ತು ಉದ್ಯಾನವನ ಅಭಿವೃದ್ಧಿ. ವರಂಗ ಚತುರ್ಮುಖ ಕೆರೆ–ಬಸದಿಯ ಅಭಿವೃದ್ಧಿ. ಹೆಬ್ರಿ ತಾಲ್ಲೂಕಿನ ನಾಡ್ಪಾಲು ಗ್ರಾಮದ ಕೂಡ್ಲು ಫಾಲ್ಸ್ ಅಭಿವೃದ್ಧಿ. ಹಿರಿಯಡ್ಕ–ಕಾರ್ಕಳ–ಜೋಡು ರಸ್ತೆ–ಮಿಯ್ಯಾರು–ಬಜಗೋಳಿ ಮಾರ್ಗವಾಗಿ ಗುರುವಾರಕೆರೆವರೆಗೆ ರಸ್ತೆ ಅಭಿವೃದ್ಧಿ. ಯುವ ಸಮುದಾಯಕ್ಕೆ ಸ್ವಯಂ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಕಾರ್ಕಳದಲ್ಲಿ ಶಿಲ್ಪಕಲೆ ಹಾಗೂ ಫರ್ನಿಚರ್ ಹಬ್ ಸ್ಥಾಪನೆ. ಹೆಬ್ರಿ ಸಮುದಾಯ ಆರೋಗ್ಯ ಕೇಂದ್ರವನ್ನು 100 ಹಾಸಿಗೆಗಳ ತಾಲ್ಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವುದು. ಕಾರ್ಕಳ ನರ್ಸಿಂಗ್ ಕಾಲೇಜಿಗೆ ನೂತನ ಕಟ್ಟಡ ನಿರ್ಮಾಣ. ಕಾರ್ಕಳ ಜವಳಿ ಪಾರ್ಕ್ ಯೋಜನೆ ಅಭಿವೃದ್ಧಿ. ಹೆಬ್ರಿ ತಾಲ್ಲೂಕಿನ ಬೆಳಂಜೆ ಗ್ರಾಮದ ಎಕ್ಕೋಡು ಬಳಿ ಏತ ನೀರಾವರಿ ಯೋಜನೆ ಅನುಷ್ಠಾನ. ಕಾರ್ಕಳ ಕ್ಷೇತ್ರದ ಅಭಿವೃದ್ಧಿಯ ಜೊತೆಗೆ ಕರಾವಳಿ ಜಿಲ್ಲೆಗಳ ದೀರ್ಘಕಾಲಿಕ ಪ್ರಗತಿಗೆ ಅಗತ್ಯವಿರುವ ಮೂಲಸೌಕರ್ಯ ಯೋಜನೆಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಮುಖ್ಯಮಂತ್ರಿಗಳಲ್ಲಿ ಒತ್ತಾಯಿಸಿದ್ದಾರೆ. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ದೇಶ-ವಿದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳು ಆಗಮಿಸಲಿರುವುದರಿಂದ, ಈ ಬಾರಿ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕೆಂಬ ಬೇಡಿಕೆ ಮಹತ್ವ ಪಡೆದುಕೊಂಡಿದೆ.