ಕಾರ್ಕಳ: ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಎಐ ಕ್ಯಾಮೆರಾ ಕಣ್ಣು
ಸಚಿತ್ರ ವರದಿ : ಗಣೇಶ್ ನಾಯಕ್ ಸಾಣೂರು

ಚಿತ್ರ: ದೂಪದಕಟ್ಟೆಯಲ್ಲಿ ಅಳವಡಿಸಲಾದ ಎಐ ಆಧಾರಿತ ಕ್ಯಾಮೆರಾ.
ಕಾರ್ಕಳ: ಈವರೆಗೆ ಪೊಲೀಸರ ಕಣ್ತಪ್ಪಿಸಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದ್ದ ವಾಹನ ಸವಾರರಿಗೆ ಈಗ ಕಷ್ಟದ ದಿನಗಳು ಎದುರಾಗಲಿವೆ. ವಿಶೇಷವಾಗಿ ದ್ವಿಚಕ್ರ ವಾಹನ ಚಾಲಕರು ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ರಸ್ತೆಯನ್ನು ತಪ್ಪಿಸಿ ಬೇರೆ ಮಾರ್ಗದಲ್ಲಿ ಸಂಚರಿಸಿ ತಪ್ಪಿಸಿಕೊಳ್ಳುತ್ತಿದ್ದ ಸಂದರ್ಭಗಳು ಸಾಮಾನ್ಯವಾಗಿದ್ದವು. ಆದರೆ ಇನ್ನು ಮುಂದೆ ಅದಕ್ಕೆ ಅವಕಾಶ ಕಡಿಮೆಯಾಗಲಿದೆ.
ಕಾರ್ಕಳ ತಾಲೂಕಿನ ದೂಪದಕಟ್ಟೆ (ಪಡುಬಿದ್ರಿ–ಕಾರ್ಕಳ) ರಾಜ್ಯ ಹೆದ್ದಾರಿಯಲ್ಲಿ ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಸ್ಮಾರ್ಟ್ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಇನ್ನೂ ಎರಡು–ಮೂರು ದಿನಗಳಲ್ಲಿ ಅವು ಕಾರ್ಯಾರಂಭಗೊಳ್ಳಲಿವೆ. ಈ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘಿಸುವ ವಾಹನಗಳ ಚಿತ್ರ ಹಾಗೂ ವಾಹನದ ನೋಂದಣಿ ಸಂಖ್ಯೆಯನ್ನು ಸ್ಪಷ್ಟವಾಗಿ ಸೆರೆಹಿಡಿಯಲಿವೆ.
ಜಿಲ್ಲೆಯಲ್ಲಿ ಅಪಘಾತಗಳು ಹಾಗೂ ಸಂಚಾರ ನಿಯಮ ಉಲ್ಲಂಘನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಗುರುತಿಸಲಾದ ಎಂಟು ಪ್ರಮುಖ ರಸ್ತೆಗಳ ಮೇಲೆ ರಸ್ತೆ ಸುರಕ್ಷತೆಗಾಗಿ ಎಐ ಆಧಾರಿತ ಸ್ಮಾರ್ಟ್ ಎನ್ಫೋರ್ಸ್ಮೆಂಟ್ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಇಲಾಖೆ ಮುಂದಾಗಿದೆ.
ನೇರವಾಗಿ ಮೊಬೈಲ್ಗೆ ನೋಟಿಸ್
ಈ ಎಐ ಕ್ಯಾಮೆರಾಗಳು ಸುಮಾರು ಒಂದು ಕಿಲೋಮೀಟರ್ ದೂರದಿಂದಲೇ ಬರುತ್ತಿರುವ ವಾಹನಗಳನ್ನು ಗಮನಿಸಿ, ನಿಯಮ ಉಲ್ಲಂಘನೆ ನಡೆದರೆ ಅದರ ವೀಡಿಯೋ ಮತ್ತು ಫೋಟೋಗಳನ್ನು ಸೆರೆ ಹಿಡಿದು ಕೇಂದ್ರ ನಿಯಂತ್ರಣ ಕೊಠಡಿಗೆ ಕಳುಹಿಸುತ್ತವೆ. ಅದರ ಆಧಾರದ ಮೇಲೆ ಆ ವಾಹನದ ವಿರುದ್ಧ ಸ್ವಯಂ ಚಾಲಿತ ಡಿಜಿಟಲ್ ಚಲನ್ ಸಿದ್ಧಪಡಿಸಲಾಗುತ್ತದೆ.
ಅದನ್ನು ವಾಹನ ಮಾಲೀಕರ ಇಮೇಲ್ ಅಥವಾ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುತ್ತದೆ. ಡಿಜಿಟಲ್ ಚಲನ್ ಜೊತೆಗೆ ಉಲ್ಲಂಘನೆಯ ಫೋಟೋ ಮತ್ತು ವೀಡಿಯೋ ಸಾಕ್ಷ್ಯವೂ ಸೇರಿರುತ್ತದೆ. ಅಲ್ಲದೆ, ವಾಹನ ಮಾಲೀಕರು ಆನ್ಲೈನ್ ಮೂಲಕ ದಂಡ ಪಾವತಿಸುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.
ಸಿಸಿಟಿವಿ ಕ್ಯಾಮೆರಾಗಳು ಸಂಚಾರ ನಿಯಮ ಉಲ್ಲಂಘನೆಯ ದೃಶ್ಯಗಳನ್ನು ದಾಖಲಿಸುವುದರಿಂದ ಠಾಣೆಯಲ್ಲೇ ಕುಳಿತು ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಮಾಲೀಕರಿಗೆ ನೋಟಿಸ್ ಜಾರಿಯಾಗುತ್ತದೆ. ಬಳಿಕ ಅವರು ಠಾಣೆ ಅಥವಾ ನ್ಯಾಯಾಲಯದಲ್ಲಿ ಹಾಜರಾಗಿ ದಂಡ ಪಾವತಿಸಬೇಕಾಗುತ್ತದೆ.
ಪೊಲೀಸರ ತಪಾಸಣೆಯ ಅವಶ್ಯಕತೆ ಕಡಿಮೆ
ಈ ರೀತಿಯ ಎಐ ಕ್ಯಾಮೆರಾಗಳ ಬಳಕೆಯಿಂದಾಗಿ ಪೊಲೀಸರೇ ರಸ್ತೆಗಳಲ್ಲಿ ವಾಹನಗಳನ್ನು ತಡೆದು ದಂಡ ವಿಧಿಸುವ ಅವಶ್ಯಕತೆ ಕಡಿಮೆಯಾಗಲಿದೆ. ಜೊತೆಗೆ ವೀಡಿಯೋ ಮತ್ತು ಫೋಟೋ ಸಾಕ್ಷ್ಯಗಳಿರುವುದರಿಂದ ನಿಯಮ ಉಲ್ಲಂಘಿಸಿಲ್ಲ ಎಂದು ಹೇಳುವ ಅವಕಾಶವೂ ಕಡಿಮೆಯಾಗಲಿದೆ.
ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳುವುದು ನಿಶ್ಚಿತ ಎಂದು ಕಾರ್ಕಳ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸಂಚಾರ ನಿಯಮ ಪಾಲನೆಯಿಂದ ಇತರರ ಜೀವ ಉಳಿಸುವುದರ ಜೊತೆಗೆ ನಮ್ಮ ಜೀವ–ಜೀವನವನ್ನೂ ಸುರಕ್ಷಿತವಾಗಿಟ್ಟುಕೊಳ್ಳಬಹುದು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಟ್ರಾಫಿಕ್ ಪೊಲೀಸರು ಇಲ್ಲವೆಂದುಕೊಂಡು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ನಿರ್ಲಕ್ಷ್ಯವಾಗಿ ಸಂಚರಿಸುತ್ತಿದ್ದವರಿಗೆ ಪೊಲೀಸ್ ಇಲಾಖೆ ಎಚ್ಚರಿಕೆಯ ಸಂದೇಶ ನೀಡಿದೆ.



































