ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ರವರ ಬಂಡವಾಳವೇ ಸುಳ್ಳಿನ ಕಂತೆಗಳು : ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು
ಕಾರ್ಕಳ: ಶಾಸಕ ಸುನೀಲ್ ಕುಮಾರ್ ಅವರ ಬಂಡವಾಳವೇ ಸುಳ್ಳಿನ ಕಂತೆಗಳು. ಅವರು ರಾಜಕೀಯ ಪ್ರವೇಶ ಪಡೆದಿರುವುದು ಆ ಮೂಲಕವಾಗಿದೆ. ಅಂದು ಸುಚೇತಾ ಶೆಟ್ಟಿ ಕೊಲೆ ಪ್ರಕರಣವನ್ನು ತನ್ನ ದಾಳಕ್ಕೆ ಬಳಸಿ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿಯವರ ತೇಜೋವಧೆ ಮಾಡಿದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪರಯೋಜನೆಗಳಿಗೆ ಮಸಿಬಡಿಯುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ನೇರ ವಾಗ್ದಾಳಿ ನಡೆಸಿದರು.
ಅವರು ಜೂ 23 ರ ಬೆಳಿಗ್ಗೆ ಕಾರ್ಕಳದ ಬಸ್ಸು ನಿಲ್ದಾಣದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ನಡೆಸಿದ ಪ್ರತಿಭಟನೆಗೆ ಪ್ರತಿಯಾಗಿ ಸಂಜೆ ವೇಳೆಗೆ ಅದೇ ಜಾಗದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಿದ ಶಾಸಕ ಸುನೀಲ್ ಕುಮಾರ್ ರವರ ಸುಳ್ಳು ಆರೋಪ ಹಾಗೂ ಶಾಸಕರ ವೈಫಲ್ಯ ಮತ್ತು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಬಿಜೆಪಿ ಯುವ ಮೋರ್ಚ ಮುಖಂಡನ ಬಂಧನಕ್ಕೆ ಆಗ್ರಹಿಸಿ ಧರಣಿ ಸತ್ಯಾಗ್ರಹದ ಸಭೆಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಪಂಚ ಗ್ಯಾರಂಟಿಗಳ ಯಶಸ್ಸನ್ನು ಸಹಿಸಲಾಗದೇ ಬಿಜೆಪಿ ಯವರು ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾರ್ಕಳವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿಸಲಾಗುವುದು ಎಂದ ಶಾಸಕರು ಪರಶುರಾಮ ಥೀಮ್ ಪಾರ್ಕ್ ವಿಚಾರದಲ್ಲಿ ಧಾರ್ಮಿಕ ಭಾವನೆಗೆ ದ್ರೋಹ ಬಗೆದಿದ್ದಾರೆ ಎಂದರು.
ಹಿರಿಯ ನಾಗರಿಕರ ಪಿಂಚಣಿ ಯೋಜನೆ ರದ್ದಾಗುತ್ತದೆ ಎಂದು ಅಮಾಯಕ ಜನರನ್ನು ಸುಳ್ಳು ಹೇಳಿ ಪ್ರತಿಭಟನೆಗೆ ಕರೆದ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಪಿಂಚಣಿ ರದ್ದಾಗಿರುವುದಕ್ಕೆ ನಿಮ್ಮಲ್ಲಿ ಆದೇಶ ಇದೆಯೇ ಎಂದು ಪ್ರಶ್ನಿಸಿದರು.ಅಕ್ರಮ ಸಕ್ರಮ ಯೋಜನೆಯ ಅರ್ಜಿಗಳು ಬಿಜೆಪಿ ಸರ್ಕಾರದ ಅವಧಿಯಲ್ಲಿ ತಿರಸ್ಕೃತವಾಗಿದ್ದರೂ ಶಾಸಕರು ಈಗ ಕಾಂಗ್ರೆಸ್ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು.

ಜಿಲ್ಲಾ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಮಾತನಾಡಿ,ವಿದ್ಯುತ್ ಬೆಲೆ ಏರಿಕೆಗೆ ಈ ಹಿಂದಿನ ಬಿಜೆಪಿ ಸರಕಾರವೇ ಕಾರಣ. ಸುನೀಲ್ ಕುಮಾರ್ ಇಂದನ ಸಚಿವರಾಗಿದ್ದ ಅವದಿಯಲ್ಲಿ ಕೇಂದ್ರದಲ್ಲಿ ಅವರದ್ದೇ ಸರಕಾರವಿದ್ದರೂ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಕಲ್ಲಿದ್ದಲು ಸರಬರಾಜು ಮಾಡುವಲ್ಲಿ ವಿಫಲರಾಗಿದ್ದರು. ಇದರಿಂದ ವಿಧ್ಯುತ್ ಉತ್ಪಾದನೆ ಕಡಿಮೆಯಾಗಿ ನಿಗಮ ನಷ್ಟ ಅನುಭವಿಸಿತು. ಇದನ್ನು ಸರಿ ತೂಗಲು ರಾಜ್ಯ ವಿದ್ಯುತ್ ಉತ್ಪಾದನಾ ನಿಗಮದ ಬೇಡಿಕೆಯಂತೆ ಇವರದ್ದೇ ಅವಧಿಯಲ್ಲಿ ಯುನಿಟ್ ದರ ಏರಿಸಲಾಗಿತ್ತು. ಸರಕಾರದ ಜನಪರ ಸಾಧನೆಗಳನ್ನು ಸಹಿಸದೇ ಬಿಜೆಪಿ ಕಾಂಗ್ರೆಸ್ ಸರಕಾರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದರು.

ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಮಾತನಾಡಿ, ವಿದ್ಯುತ್ ದರ ಏರಿಕೆಯ ಪಿತಾಮಹ ಶಾಸಕ ವಿ.ಸುನೀಲ್ ಕುಮಾರ್ ಎಂಬುವುದು ಇಡೀ ರಾಜ್ಯದ ಜನತೆಗೆ ಗೊತ್ತಿರುವ ವಿಚಾರವಾಗಿ. ಬಿಜೆಪಿ ಸರಕಾರದಲ್ಲಿ ಅಂತಿಮ ಅವಧಿಯಲ್ಲಿ ಇಂಧನ ಸಚಿವರಾಗಿದ್ದ ವಿ.ಸುನೀಲ್ ಕುಮಾರ್ ವಿದ್ಯುತ್ ದರ ಏರಿಕೆಗೆ ಹಸಿರು ನಿಶಾನೆ ತೋರಿಸಿದರು. ಅದು ಅನುಷ್ಠಾನಗೊಂಡಿರುವುದು ನಂತರದ ದಿನಗಳ ಎಂಬುವುದನ್ನು ಅವರು ಮರೆಯಬಾರದು. ಶಾಸಕ ಸುನೀಲ್ ಕುಮಾರ್ ಸಚಿವರಾಗಿದ್ಧ ಅವಧಿಯಲ್ಲಿ ಪುರಸಭೆ ವ್ಯಾಪ್ತಿಯಲ್ಲಿನ 13 ಕೋಟಿ ವೆಚ್ಚದ ಒಳಚರಂಡಿ ಅಸಮರ್ಪಕ ಕಾಮಗಾರಿ ನಡೆಸದ ಪರಿಣಾಮ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದು, ಕುಡಿಯುವ ನೀರಿನ ಬಾವಿಗಳು ಮಾಲಿನ್ಯಗೊಂಡಿದೆ. ಈ ದೃಶ್ಯಾವಳಿಯು ರಥಬೀದಿಯಲ್ಲಿ ನಡೆದಿದೆ. ಹೀಗಿದ್ದರೂ ಅಮೃತ ಯೋಜನೆಯ ಕಾಮಗಾರಿಯನ್ನು ಅವರಿಗೆ ನೀಡುವ ಮೂಲಕ ಕಾರ್ಕಳ ಪುರಸಭಾ ನಾಗರಿಕರ ಬಾಳಿಗೆ ವಿಷವಾಗಿ ಪರಿಣಮಿಸಿದೆ.
ಆಶ್ರಯ ಯೋಜನೆಯು ಕಾಂಗ್ರೆಸ್ ಕೊಡುಗೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ ಎಂದರು. ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡ ಬೇಕಾಗಿದ್ದ ಶಿಕ್ಷಕನೊಬ್ಬ ಲೈಂಗಿಕ ಕ್ರಿಯೆಗೆ ಪ್ರಚೋದನೆ ನೀಡಿದ್ದು ಆತ ಭಾರತೀಯ ಜನತಾ ಪಾರ್ಟಿಯ ಯುವ ಮೋರ್ಚಾದ ಮುಖಂಡನೆಂಬ ಕಾರಣಕ್ಕಾಗಿ ಬಿಜೆಪಿ ಮುಖಂಡರು ರಕ್ಷಿಸುವ ಕಾರ್ಯ ನಡೆಸುತ್ತಿದ್ದಾರೆ. ಇದು ಸಮಾಜಕ್ಕೆ ಮಾರಕವಾಗಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಎಚ್ಚೆತ್ತುಕೊಳ್ಳುವ ಅಗತ್ಯ ಇದೆ ಎಂದರು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ ಭಟ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುಧಾಕರ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ ಸುಧಾಕರ ಕೋಟ್ಯಾನ್, ಸುಭೀತ್, ಎನ್.ಆರ್, ಜಾರ್ಜ್ ಕ್ಯಾಸ್ಟಲಿನೋ ಮಹಿಳಾ ಘಟಕದ ಪ್ರಮುಖರು ಮುಂತಾದವರು ಉಪಸ್ಥಿತರಿದ್ದರು


























