ಕಾರ್ಕಳ : ವಿಶ್ವ ಜಲ ದಿನಾಚರಣೆ
ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜಲ ದಿನಾಚರಣೆ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಕಾರ್ಯಕ್ರಮವು ಮಾ. 22ರಂದು ಕಾರ್ಕಳ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಕಚೇರಿಯಲ್ಲಿ ಜರಗಿತು.
ಕಾರ್ಕಳ ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಿಟ್ಟೆ ಸಮಾರಂಭವನ್ನು ಉದ್ಘಾಟಿಸಿ, ಜೀವಜಲವನ್ನು ಸಂರಕ್ಷಿಸಲು ವಿಶ್ವ ಸಂಸ್ಥೆಯು ಮಾರ್ಚ್22ನ್ನು ವಿಶ್ವ ಜಲ ದಿನವನ್ನಾಗಿ ಘೋಷಿಸಿತು. ಇದರ ಪರಿಣಾಮವಾಗಿ ಜೀವಜಲವನ್ನು ಸಂರಕ್ಷಿಸಲು ಸರಕಾರಗಳು ಕೈಗೊಂಡ ಹಲವಾರು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ವಕೀಲ ಸುರೇಶ್ ಪೂಜಾರಿ ಮಾತನಾಡಿ, ಸರಕಾರದಿಂದ ನೀರಿನ ಬಗ್ಗೆ ಸಿಗುವಂತಹ ಸವಲತ್ತುಗಳು ಅಂದರೆ ಬಚ್ಚಲುಗುಂಡಿ, ಇಂಗು ಗುಂಡಿ, ಕೃಷಿ ಹೊಂಡ ಹಾಗೂ ಇತರ ನೀರಿನ ಮೂಲಗಳಾದ ನಲ್ ಜಲ್ ಯೋಜನೆಯ ಬಗ್ಗೆ ಹಾಗೂ ಕೆರೆ ಪುನಕ್ಷೇತನ ಹಾಗೂ ಕುಡಿಯುವ ನೀರಿನ ಘಟಕಗಳ ಬಗ್ಗೆ ಹಾಗೂ ನ್ಯಾಯಾಲಯದಲ್ಲಿ ದೊರೆಯುವ ಸುಲಭ (ಉಚಿತ) ಕಾನೂನುಗಳ ಬಗ್ಗೆ ಲೋಕಅದಾಲತ್ ಬಗ್ಗೆ ವಿವರವಾಗಿ ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ಕರಾವಳಿ ಮತ್ತು ಬಯಲುಸೀಮೆಯ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ನೀರಿನ ಅಭಾವ ತೀಕ್ಷ್ಣವಾಗಿದೆ. ಆದುದರಿಂದ ಆ ಜಿಲ್ಲೆಗಳಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಲ್ಲಿ 825 ಕೆರೆಗಳನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ಉತ್ತರಕರ್ನಾಟಕದ ಜಿಲ್ಲೆಯ ಜನರ ನೀರಿನ ಸಮಸ್ಯೆ ದೂರವಾಗಿದೆ. ನಾವು ಪಾತ್ರೆ ತೊಳೆಯುವಾಗ ಎಷ್ಟು ನೀರು ಬೇಕು ಅಷ್ಟೇ ನೀರನ್ನು ಟ್ಯಾಪ್ ನಿಂದ ಉಪಯೋಗಿಸಿಕೊಂಡು ಟ್ಯಾಪನ್ನು ಬೇಕಾಬಿಟ್ಟಿ ಓಪನ್ ಇಡಬಾರದು. ಈ ರೀತಿಯಾಗಿ ಜಾಗೃತೆ ವಹಿಸಿ ಜೀವಜಲವನ್ನು ಮುಂದಿನ ಪೀಳಿಗೆಗೆ ಕೊಂಡು ಹೋಗಬೇಕೆಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ನ ಯೋಜನಾಧಿಕಾರಿ ಹೇಮಲತಾ ಸ್ವಾಗತಿಸಿದರು. ಗೀತಾ ಹೆಗ್ಡೆ ಮೇಲ್ವಿಚಾರಕರು ಕಾರ್ಕಳ ವಲಯ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಹೆಗ್ಡೆ ಜ್ಞಾನವಿಕಾಸ ಸಮನ್ವಯಾಧಿಕಾರಿಗಳು ವಂದನಾರ್ಪಣೆಗೈದರು.





















