ಕಾರ್ಕಳ ರಾಮಸಮುದ್ರಕ್ಕೆ ಕೇಂದ್ರದಿಂದ ಮೂರು ಕೋಟಿ ಅನುದಾನ

ಕಾರ್ಕಳದ ರಾಮಸಮುದ್ರ ಅಭಿವೃದ್ಧಿ ಕಾಮಗಾರಿಗಾಗಿ ಕೇಂದ್ರದ ಅಮೃತ2.0 ಯೋಜನೆಯಡಿಯಲ್ಲಿ ಮೂರು ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿರುವುದು ಬಹುವರ್ಷಗಳ ಬೇಡಿಕೆಗೆ ಮೊದಲ ಸ್ಪಂದನ ದೊರಕಿದಂತಾಗಿದೆ.
ರಾಮಯಮುದ್ರದ ಅಭಿವೃದ್ಧಿಯಾದಲ್ಲಿ ಕಾರ್ಕಳ ಪುರನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆಯೇ ಉಲ್ಬಣಿಸುವುದಿಲ್ಲ ಎನ್ನುವ ವಾಸ್ತವ ವಿಚಾರದ ಅರಿವು ಇದ್ದರೂ ಸಹ ಅದರ ಸ್ವಚ್ಚತೆಯನ್ನು ಕಾಪಾಡಿಕೊಳ್ಳುವಲ್ಲಿ ಮಾಡಬೇಕಾಗಿರುವ ತಡೆ ಇತ್ಯಾದಿಗಳೇ ದೊಡ್ಡ ವೆಚ್ಚದ್ದಾಗಿರುವುದೇ ಅನುದಾನ ಪಡೆಯುವುದಕ್ಕೆ ಹಿನ್ನಡೆಯಾಗಿತ್ತು.
ಕಾರ್ಕಳದ ಹೃದಯಬಾಗದಲ್ಲಿರುವ ಆನೆಕೆರೆಯನ್ನು ಅಭಿವೃದ್ಧಿಗೊಳಿಸುವಲ್ಲಿ ಮುಂದಾಗುತ್ತಿರುವಾಗಲೇ ತನ್ನ ಡೈರಿಯ ಮತ್ತೊಂದು ಪುಟದಲ್ಲಿ ರಾಮಸಮುದ್ರ ಅಭಿವೃದ್ಧಿಯ ಯೋಚನೆಯ ವಿಚಾರವನ್ನೂ ಬರೆದಿಟ್ಟಿದ್ದ ಶಾಸಕ ಸುನಿಲ್ ಕುಮಾರ್ ಕನಸಿಗೆ ಕೇಂದ್ರ ಸರಕಾರದ ಅಮೃತ 2.0 ಯೋಜನೆಯಿಂದ ಒಂದು ಹಂತವಾಗಿ ಮೂರು ಕೋಟಿ ರೂಪಾಯಿ ಅನುದಾನ ಬಂದಿರುವುದು ಕನಸು ನನಸಾಗತೊಡಗಿತೆಂದೇ ಹೇಳಬಹುದು.
ಸುಮಾರು ಐವತ್ತು ಕೋಟಿಗಳಷ್ಟು ಅಂದಾಜು ವೆಚ್ಚದ ರೂಪುರೇಷೆಗಳ ಕಾಮಗಾರಿ ಯೋಜನೆಗಳನ್ನು ತಯಾರಿಸಿ ಕೊಟ್ಟಿದ್ದಕ್ಕೆ ಪ್ರಥಮ ಚುಂಬನದಲ್ಲಿಯೆ ಮೂರು ಕೋಟಿ ಬಂದಿರುತ್ತದೆ.
ಕಾರ್ಕಳದ ನಾಗರಿಕರಿಗೆ ಕುಡಿಯುವ ನೀರಿನ ಸಮಸ್ಯೆ ಬಲವಾಗಿ ಕಾಡುತ್ತಲೇ ಬಂದಿದೆ. ಉದಯವಾಣಿ ದಿನಪತ್ರಿಕೆಯ ಅಂದಿನ ವರದಿಗಾರನಾಗಿದ್ದ ಕೆ. ಪಿ. ಕೆ. ಪೈಯವರು ರಾಮಸಮುದ್ರ ಸ್ವಚ್ಛತೆ ಹಾಗೂ ಅಭಿವೃದ್ಧಿಯ ತುರ್ತು ಅಗತ್ಯಗಳ ಕುರಿತು ವರ್ಷದಲ್ಲಿ ಒಂದು ಸಚಿತ್ರ ವರದಿ ಬರೆಯುತ್ತಲೇ ಇದ್ದರು. ಪ್ರಕೃತಿಯ ಕೊಡುಗೆಯಾಗಿದ್ದ ರಾಮಸಮುದ್ರದ ಬಗೆಗಿನ ಅವರ ಕಾಳಜಿ ಮತ್ತು ದೂರದೃಷ್ಠಿಯಂತೂ ಅಪಾರವಾಗಿತ್ತು.
ಇದೀಗ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಶಿಫಾರಸಿನಲ್ಲಿ ರಾಮಸಮುದ್ರ ಸ್ವಚ್ಚತೆ ಹಾಗೂ ಅಭಿವೃದ್ಧಿಯ ಕೆಲಸಕ್ಕೆ ಕೇಂದ್ರದ ಅಮೃತ 2.0 ಯೋಜನೆಯಲ್ಲಿ ಅನುದಾನ ದೊರಕಿದ್ದರೂ, ಏನೇ ಕಾಮಗಾರಿ ಪ್ರಾರಂಭವಾದರೂ ಶ್ಲಾಘನೆ/ಅಭಿನಂದನೆಯ ಒಂದು ಪಾಲು ಕೆ ಪಿ ಕೆ ಪೈಯವರಿಗೆ ಸಂದಾಯವಾಗಬೇಕು.
ಪುರಸಭೆಯ ಉಸ್ತುವಾರಿಯಲ್ಲಿ ಮಾಡುವ ಈ ಕಾಮಗಾರಿಯ ಬಹಳ ಜವಾಬ್ದಾರಿಯಿಂದ ನಡೆಯಬೇಕಾಗಿದೆ.ಕಾರ್ಕಳದ ಜನರ ನಿರೀಕ್ಷೆಗೆ ಗೆಲುವು ದೊರೆತ ಸಂಭ್ರಮವು ಯಾವುದೇ ಕುಂದುಕೊರತೆಗಳಿಗೆ ಸ ಸಿಕ್ಕದಂತಾಗಲಿ.
-ವಿ. ಕೆ. ವಾಲ್ಪಾಡಿ






































