ಕಾರ್ಕಳ ರಸ್ತೆ ಅಭಿವೃದ್ಧಿ ಟೆಂಡರ್‌ ಪೂರ್ಣ: ಶೀಘ್ರ ಕಾಮಗಾರಿಗೆ ಚಾಲನೆ – ಸಚಿವ ಸತೀಶ್ ಜಾರಕಿಹೊಳಿ

Picture of RB NEWS

RB NEWS

Bureau Report

ಕಾರ್ಕಳ ರಸ್ತೆ ಅಭಿವೃದ್ಧಿ ಟೆಂಡರ್‌ ಪೂರ್ಣ: ಶೀಘ್ರ ಕಾಮಗಾರಿಗೆ ಚಾಲನೆ – ಸಚಿವ ಸತೀಶ್ ಜಾರಕಿಹೊಳಿ


ಕಾರ್ಕಳ: ಕಾರ್ಕಳ ಎಸ್‌ಕೆ ಬಾರ್ಡರ್‌ ಮೂಲಕ ಕಳಸವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖಾ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಜುಲೈ 15ರಂದು ತೀರ್ಥಹಳ್ಳಿ–ಉಡುಪಿ ರಾಜ್ಯ ಹೆದ್ದಾರಿ 27ರ ಆಗುಂಬೆ ಘಾಟಿ ವೀಕ್ಷಣೆಗೆ ಆಗಮಿಸಿದ್ದ ಅವರು, ಕಾರ್ಕಳ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾರ್ಕಳದಿಂದ ಮಾಳ ಎಸ್‌ಕೆ ಬಾರ್ಡರ್‌ ಮೂಲಕ ಮೂಡಿಗೆರೆಯಾಗಿ ಕಳಸ ಸಂಪರ್ಕಿಸುವ ರಸ್ತೆ ದುರಸ್ತಿ ಬಗ್ಗೆ ಸ್ಪಷ್ಟನೆ ನೀಡಿದರು. ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದರು.
ಅನುದಾನ ವಿಚಾರ ರಾಜಕೀಯ ಆರೋಪ: ಸಚಿವರ ತಿರುಗೇಟು
ಕಾರ್ಕಳ ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಸರಕಾರದಿಂದ ಅನುದಾನ ನೀಡಲಾಗುತ್ತಿಲ್ಲ ಎಂಬ ಸ್ಥಳೀಯ ಶಾಸಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, “ಅನುದಾನವಿಲ್ಲದೇ ಕಾಯಿ ಒಡೆದು ಗುದ್ದಲಿ ಪೂಜೆ ನಡೆದಿತ್ತೆ? ಇವೆಲ್ಲ ರಾಜಕೀಯ ಹೇಳಿಕೆಗಳು. ನಮ್ಮ ಪಕ್ಷದ ಶಾಸಕರಿರುವ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ, ಬಿಜೆಪಿ ಶಾಸಕರಿರುವ ಕಡೆ ಕಡಿಮೆ ಅನುದಾನ ನೀಡಲಾಗಿದೆ. ನಾವು ಶಾಸಕರಾಗಿದ್ದಾಗ ನಮಗೂ ಅನುದಾನ ನೀಡಲಾಗಿರಲಿಲ್ಲ” ಎಂದು ತಿರುಗೇಟು ನೀಡಿದರು.
ಮಹಾಮಸ್ತಕಾಭಿಷೇಕಕ್ಕೆ ಸರಕಾರದ ಬೆಂಬಲ ಖಚಿತ
2027ರಲ್ಲಿ ನಡೆಯಲಿರುವ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕದ ಬಗ್ಗೆ ಮಾತನಾಡಿದ ಅವರು, “ಇದು ಸರಕಾರಿ ಕಾರ್ಯಕ್ರಮವಾಗಿರುವುದರಿಂದ ಸರಕಾರ ಅನುದಾನ ನೀಡುವುದು ಖಚಿತ. ಹಿಂದಿನ ಸರಕಾರಗಳಂತೆ ನಮ್ಮ ಸರಕಾರವೂ ಈ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸಲಿದೆ” ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ಪ್ರತಿಕ್ರಿಯೆ
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದ ಆಕಾಂಕ್ಷೆ ಮತ್ತು ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಸಚಿವರು, “ಯಾರೇ ಆಗಲಿ ನಮ್ಮವರೇ. ಎಲ್ಲರೂ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ” ಎಂದು ಹೇಳಿದರು. ಸಚಿವ ಸಂಪುಟ ವಿಸ್ತರಣೆ ಕುರಿತು ಮಾತನಾಡಿ, “ಇನ್ನೆರಡು-ಮೂರು ದಿನಗಳಲ್ಲಿ ನಡೆಯುವ ಸಾಧ್ಯತೆ ಇದೆ” ಎಂದು ಸೂಚನೆ ನೀಡಿದರು.
ಈ ವೇಳೆ ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕೊಡವೂರು, ಮುಖಂಡರಾದ ರಕ್ಷಿತ್ ಶಿವರಾಂ, ಉದಯ ಶೆಟ್ಟಿ ಮುನಿಯಾಲು, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ್ ಭಟ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಪುರಸಭಾ ಮಾಜಿ ಅಧ್ಯಕ್ಷರು ಸುಭಿತ್ ಎನ್.ಆರ್., ಪ್ರತಿಮಾ ರಾಣೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾನುಭಾಸ್ಕರ್, ಮಾಲಿನಿ ರೈ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು. ಬಳಿಕ ಸಚಿವರು ಇಲಾಖಾಧಿಕಾರಿಗಳು ಮತ್ತು ಪಕ್ಷದ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top