ಕಾರ್ಕಳ ಪುರಸಭೆ: ಸಮಬಲದಲ್ಲಿ ಹೋರಾಟದಲ್ಲಿ ವಿಜಯದ ಮಾಲೆ ಬಿಜೆಪಿ ಬಗಲಿಗೆ?!
ಕಾರ್ಕಳ : ಕಾಂಗ್ರೆಸ್ -ಬಿಜೆಪಿ ಸದಸ್ಯರು ಸಮಬಲ ಹೊಂದಿದ್ದು, ಪಕ್ಷೇತರ ಸದಸ್ಯರ ಮತ ನಿರ್ಣಯವಾಗಿದ್ದರೂ, ಸಂಸದ ಹಾಗೂ ಶಾಸಕರ ಬಲದೊಂದಿಗೆ ಕಾರ್ಕಳ ಪುರಸಭೆ ಬಿಜೆಪಿ ಪಾಲಾಗುವುದು ಖಚಿತವಾಗಿದೆ.

ಕಾರ್ಕಳ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಪುರಸಭಾ ಸದಸ್ಯರಾಗಿದ್ದಾರೆ. ನಂತರದ ದಿನಗಳಲ್ಲಿ ಅವರನ್ನು ಬಿಜೆಪಿ ಮರು ಸೇರ್ಪಡೆ ಪ್ರಯತ್ನಗಳು ನಡೆದಿತ್ತಾದರೂ, ಮುಕ್ತಕಂಠದಿಂದ ಪಕ್ಷಕ್ಕೆ ಬರಮಾಡಿಕೊಳ್ಳುವಲ್ಲಿ ಬಿಜೆಪಿ ನಾಯಕರು ವಿಫಲಗೊಂಡಿದ್ದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗುರುತಿಸಿಕೊಂಡಿದ್ದ ಶ್ರೀರಾಮ ಸೇನೆಯ ಪರಮೋಚ್ಚ ನಾಯಕ ಪ್ರಮೋದ್ ಮುತಾಲಿಕ್ ಪರ ಚುನಾವಣೆ ಪ್ರಚಾರ ದಲ್ಲಿ ಲಕ್ಷ್ಮೀನಾರಾಯಣ ಮಲ್ಯ ತೊಡಗಿಸಿಕೊಂಡಿದ್ದರು.
ಲಕ್ಷೀನಾರಾಯಣ ಮಲ್ಯ ಅವರ ಮತ ಪ್ರಸ್ತಾಕ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಮಹತ್ವ ಪಾತ್ರವಾಗಿದ್ದರೂ, ಸಂಸದ ಹಾಗೂ ಶಾಸಕ ಇವರಿಗೂ ಮತಚಲಾಯಿಸುವ ಅಧಿಕಾರ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸುಗಮ ಹಾದಿಯಾಗಿದೆ.
ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ಬಿಜೆಪಿಯ ನಿಕಟಪೂರ್ವ ಅಧ್ಯಕ್ಷೆ ಸುಮಾ ಕೇಶವ್ ಹಾಗೂ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್, ಮಾಜಿ ಅಧ್ಯಕ್ಷೆ ಶೋಭಾ ಆರ್. ದೇವಾಡಿಗ, ಸ್ಥಾಯೀ ಸಮಿತಿಯ ಮಾಜಿ ಅಧ್ಯಕ್ಷ ಯೋಗೀಶ್ ದೇವಾಡಿಗ, ಪ್ರಶಾಂತ ಕೋಟ್ಯಾನ್, ಪ್ರದೀಪ್ ರಾಣೆ, ಶಶಿಕಲಾ ಶೆಟ್ಟಿ, ಮಮತಾ ಪೂಜಾರಿ, ನೀತಾ ಆಚಾರ್ಯ, ಮೀನಾಕ್ಷಿ ಗಂಗಾಧರ್, ಭಾರತಿ ಅಮೀನ್ ಇವರೆಲ್ಲರೂ ಅರ್ಹರಾಗುತ್ತಾರೆ.
ಬಿಜೆಪಿಯ 11 ಮಂದಿ ಸದಸ್ಯರ ಪೈಕಿ ಶೋಭಾ ಆರ್. ದೇವಾಡಿಗ, ಯೋಗೀಶ್ ದೇವಾಡಿಗ, ಶೋಭಾ ಹಿರಿಯ ಸದಸ್ಯರು. 2018ರಲ್ಲಿ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತಾದರೂ ಮೀಸಲಾತಿ ಘೋಷಣೆಯಲ್ಲಿ ವಿಳಂಬವಾಗಿ 2019ರಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಗೊಂಡಿತ್ತು. ಆಗ ಬಿಜೆಪಿಯ ಸುಮಾ ಕೇಶವ್ ಅಧ್ಯಕ್ಷರಾಗಿ, ಪಲ್ಲವಿ ಪ್ರವೀಣ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಎರಡೂವರೆ ವರ್ಷ ಆಡಳಿತ ನಡೆಸಿದ್ದರು. ಆ ಬಳಿಕ 15 ತಿಂಗಳಿನಿಂದ ಕುಂದಾಪುರ ಸಹಾಯಕ ಆಯುಕ್ತರು
ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು.
ಕಾಂಗ್ರೆಸ್ ಪಕ್ಷವು ನೇರವಾಗಿ ಸ್ವರ್ಧಾಕಣಕ್ಕೆ ತಮ್ಮ ಸದಸ್ಯರನ್ನು ಇಳಿಸುತ್ತಾರೆಯೋ ಅಥವಾ ಅವಿರೋಧ ಆಯ್ಕೆಗೆ ಅವಕಾಶ ಮಾಡಿಕೊಡುತ್ತಾರೆಯೋ ಎಂಬುವುದನ್ನು ಕಾದು ನೋಡಬೇಕಾಷ್ಟೇ.
ನಾಮನಿದೇಶನ ಸದಸ್ಯರು
ರಾಜ್ಯದಲ್ಲಿ ಆಡಳಿತರೂಢ ಪಕ್ಷದ ನಿರ್ದೇಶನದಂತೆ ಕಾರ್ಕಳ ಪುರಸಭೆಗೆ ಐವರು ನಾಮನಿರ್ದೇಶನ ಸದಸ್ಯರು ಚುನಾಯಿತರಾಗಲಿದ್ದಾರೆ.
ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷಕ್ಕಿಂತ ಪ್ರತಿಪಕ್ಷದ ಸದಸ್ಯರ ಸಂಖ್ಯೆ ಹೆಚ್ಚಾಗಲಿದ್ದಾರೆ.
ಬಲಾಬಲ
23 ಸದಸ್ಯರನ್ನು ಹೊಂದಿರುವ ಕಾರ್ಕಳ ಪುರಸಭೆಯಲ್ಲಿ 11 ಮಂದಿ ಬಿಜೆಪಿ, 11 ಮಂದಿ ಕಾಂಗ್ರೆಸ್ ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ.














