ಕಾರ್ಕಳ : ಉತ್ತರ ಕರ್ನಾಟಕದಿಂದ ಧರ್ಮಸ್ಥಳ ಚಿಕ್ಕಮಗಳೂರು ಬೆಂಗಳೂರು ಮುಂತಾದ ಊರುಗಳಿಗೆ ಕಾರ್ಕಳ ಮಾರ್ಗನಾಗಿ ಸಂಚರಿಸುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ಬಂಡೀಮಠ ಬಸ್ ನಿಲ್ದಾಣಕ್ಕೆ ಮಾತ್ರ ಸೀಮಿತವಾಗಿರುವುದರಿಂದ ಬಸ್ ಪ್ರಯಾಣಿಕರಿಗೆ ಬಹಳಷ್ಟು ತೊಂದರೆಯಾಗಿದೆ.
ಮೂಡುಬಿದಿರೆ ಕಡೆಯಿಂದ ಕಾರ್ಕಳದತ್ತ ಬರುವ ಸಾರಿಗೆ ಬಸ್ಸುಗಳು ಭವಾನಿ ಮಿಲ್ ಬಳಿ ಎಡಕ್ಕೆ ಕ್ರಮಿಸಿ ಬಂಡೀಮಠ ನಿಲ್ದಾಣಕ್ಕೆ ಹೋಗುತ್ತಿವೆ.
ಅದೂ ಕೂಡಾ ಅಲ್ಲಿ ತನಕ ಯಾವನೇ ಪ್ರಯಾಣಿಕ ಸಿಗುವುದಿಲ್ಲ.ಇನ್ನು ನಿಲ್ದಾಣಕ್ಕೆ ಹೋಗಲು ಕಾಬೆಟ್ಟು ಶಾಲೆ ಮಾರ್ಗದಲ್ಲಿ ಕದ್ದು ಹೋಗುವ ಹಾಗೆ ಹೋಗುವುದು.ಮೂಡುಬಿದಿರೆ ಕಡೆ ಹೋಗುವಾಗಲೂ ಅದೇ ರೀತಿಯಲ್ಲಿ ಒಳ ಮಾರ್ಗವನ್ನು ಕ್ರಮಿಸಿ ಸಂಚರಿಸುವುದು.
ಉಡುಪಿ,ಕುಂದಾಪುರಕ್ಕೆ ಬೇರೆ ಬಸ್ ಇವೆಯೆಂದರೂ ಮಿಕ್ಕುಳಿದ ದೂರದ ಊರುಗಳಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ರಾಜ್ಯ ಸಾರಿಗೆ ಸಂಸ್ಥೆಯ ಕಡೆಯಿಂದ ಕಿರುಕುಳವೇ ಆಗುತ್ತಿದೆ ಎನ್ನಬಹುದು.
ಹುಬ್ಬಳ್ಳಿ ಗದಗ ಬೈಲಹೊಂಗಲ ಮುಂತಾದ ಕಜೆಯವರು ಕಾರ್ಕಳಕ್ಕೆ ಬಂದಾಗ ಬಂಡೀಮಠದಲ್ಲಿ ಇಳಿದು ಆಕಾಶ ಮೊದಲು ನಂತರ ಆಟೋ ಇತ್ಯಾದಿಯನ್ನು ಕಾಣಲೇಬೇಕಾದ ನಷ್ಟದ ಪರಿಸ್ಥಿತಿ.
ಪ್ರತೀ ಬಸ್ ಕೂಡಾ ಕಾರ್ಕಳದ ಖಾಸಗಿ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಅನುಕೂಲವನ್ನು ಸಂಸ್ಥೆ ಮಾಡಿಕೊಡಬೇಕಾಗಿದೆ.
ಕಾರ್ಕಳದ ಮೇಲಿನ ನಿಲ್ದಾಣದಲ್ಲಿ ಖಾಸಗಿ ಬಸ್ಸುಗಳು ಪಾರ್ಕ್ ಮಾಡುವುದರ ಬದಲು ರಾಜ್ಯ ಸಾರಿಗೆ ಬಸ್ಸುಗಳು ಬಂದು ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸುವುದಕ್ಕೆ ಅವಕಾಶ ಮಾಡಿಕೊಳ್ಳಬೇಕು.
ಭವಾನಿ ಮಿಲ್ ವೃತ್ತದಿಂದ ಬಂಡೀಮಠ ನಿಲ್ದಾಣದವರೆಗೆ ಯಾವನೇ ಪ್ರಯಾಣಿಕರ ಲಭ್ಯತೆ ಇಲ್ಲದೆ ಓಡುವುದಕ್ಕಿಂತ ಕಾರ್ಕಳ ಪೇಟೆಗೆ ಬಂದಲ್ಲಿ ಕನಿಷ್ಠ ಐದಾರು ಮಂದಿ ಯಾದರೂ ಪ್ರತೀ ಬಸ್ಸಿಗೆ ದೊರಕುತ್ತಾರೆ. ಅದರಿಂದ ಸಂಸ್ಥೆಗೂ ಲಾಭ ದೊರೆಯುತ್ತದೆ.
ಕಾರ್ಕಳದ ಶಾಸಕ ವಿ.ಸುನೀಲ್ ಕುಮಾರ್ ಆ ಬಗ್ಗೆ ಯೋಚಿಸಿದ್ದಾರೊ ಇಲ್ಲವೋ ಎಂದು ಪರಾಮರ್ಶೆ ಮಾಡುವುದಕ್ಕಿಂತ ಅಲ್ಲಿನ ಪ್ರಬುದ್ಧ ನಾಗರಿಕರು,ಸಮಾಜಮುಖಿ ನಾಯಕರು ಚಿಂತಿಸುವುದು ತುಂಬಾ ಅಗತ್ಯವಾಗಿದೆ.
ಶಾಸಕ ಸುನಿಲ್ ವಿ. ಕುಮಾರ್ ಅವರು ಕೂಡಾ ತಮ್ಮ ರಾಜಕೀಯ ಇಚ್ಚಾಶಕ್ತಿಯನ್ನು ಸಾರ್ವಜನಿಕರ ಅನುಕೂಲಕ್ಕೆ ಬಳಸಿಕೊಳ್ಳುವುದೂ ಅನಿವಾರ್ಯವೆನ್ನಬೇಕಾಗುತ್ತದೆ.
ಖಾಸಗಿ ಬಸ್ಸಿನವರ ಬೇಡಿಕೆಗಳು,ಲಾಬ್ಬಿಗಳು ನಾಗರಿಕ ಹಿತಕ್ಕಾಗಿರದೆ ವರ್ಷದಿಂದ ವರ್ಷಕ್ಕೆ ಅವೈಜ್ಞಾನಿಕವಾಗಿ ಪ್ರಯಾಣ ದರ ಹೆಚ್ಚಿಸುತ್ತಿದ್ದಾರೆ.
ಸರಕಾರದ ನೀತಿ ನಿಯಮವನ್ನೆಲ್ಲ ಗಾಳಿಗೆ ತೂರಿ ಸ್ವಂತ ತೀರ್ಮಾನದಲ್ಲೆ ಬಸ್ ಪ್ರಯಾಣ ದರ ನಿಗದಿ ಮಾಡುತ್ತಾರೆ. ಹಾಗಿರುವಾಗ ಜನಪ್ರಿಯ ಶಾಸಕರು,ಮಾಜಿ ಸಚಿವರು ಆಗಿರುವ ಸುನಿಲ್ ವಿ. ಕುಮಾರ್ ಅವರು ನಾಗರಿಕರ ಹಿತ ಕಾಪಾಡುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ.
ಈ ಮಾರ್ಗದಲ್ಲಿ ಸಂಚರಿಸುವ ರಾಜ್ಯ ಸಾರಿಗೆಯ ಎಲ್ಲ ಬಸ್ಸುಗಳು ಕಾರ್ಕಳ ಪೇಟೆಯನ್ನು ಬಳಸಿಕೊಂಡು ಮುಂದುವರಿಯಬೇಕಾಗಿದೆ.
-ವಿ. ಕೆ. ವಾಲ್ಪಾಡಿ





































