ಕಾರ್ಕಳ : ಗಂಡನಿಂದಲೇ ಮಾರಾಣಾಂತಿಕ ಹಲ್ಲೆ – ಚಿಕಿತ್ಸೆ ಫಲಿಸದೇ ಮಹಿಳೆ ಸಾವು

Picture of RB NEWS

RB NEWS

Bureau Report

ಆರೋಪಿ ಸುನೀಲ್ ಕುಮಾರ್


ಕಾರ್ಕಳ: ಗಂಡನಿಂದಲೇ ಮಾರಾಣಾಂತಿಕವಾಗಿ ಹಲ್ಲೆಗೊಳಗಾಗಿ ಜೀವನ್ಮರಣ ಸ್ಥಿತಿಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ದಾರುಣವಾಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ.
ಘಟನೆಯ ವಿವರ :
ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗುಮ್ಮೆತ್ತು ನಿವಾಸಿ ಗೀತಾ (ವಯಸ್ಸು ವಿವರ ಲಭ್ಯವಿಲ್ಲ) ಮೃತಪಟ್ಟ ದುರ್ದೈವಿ ಮಹಿಳೆ.
ದಿನಾಂಕ 27/01/2026 ರಂದು ಬೆಳಿಗ್ಗೆ 9:50 ಗಂಟೆ ಸುಮಾರಿಗೆ ಗೀತಾ ಮತ್ತು ಅವರ ಗಂಡ ಸುನೀಲ್ ಕುಮಾರ್ ಇವರ ನಡುವೆ ಸಂಸಾರಿಕ ವಿಚಾರಕ್ಕೆ ಸಂಬಂಧಿಸಿ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಸುನೀಲ್ ಕುಮಾರ್ ಈತನು ಗೀತಾ ಅವರನ್ನು ಕೊಲ್ಲುವ ಉದ್ದೇಶದಿಂದ ಯಾವುದೋ ಆಯುಧದಿಂದ ಹಣೆಗೆ ಹಾಗೂ ಗದ್ದಕ್ಕೆ ಹೊಡೆದು ತೀವ್ರವಾಗಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಗಾಯಾಳು ಗೀತಾ ಅವರನ್ನು ತಕ್ಷಣ ಮಂಗಳೂರಿನ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಸಂಬಂಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 10/2026 ರಂತೆ ಕೊಲೆಗೆ ಯತ್ನ ಪ್ರಕರಣ ದಾಖಲಿಸಿಕೊಂಡು, ಆರೋಪಿ ಸುನೀಲ್ ಕುಮಾರ್ (44), ತಂದೆ: ದಿವಂಗತ ಗೋಪಾಲ ಪೂಜಾರಿ, ವಾಸ: ಶ್ವೇತ ನಿವಾಸ, ಗುಮ್ಮೆತ್ತು, ನೂರಾಳ್ ಬೆಟ್ಟು, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇತನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
ಗಂಭೀರ ಗಾಯಗಳು :
ಮುಂದುವರಿದು, ಅತ್ತಾವರದ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಗೀತಾ ಅವರನ್ನು ವೈದ್ಯರು ಪರಿಶೀಲಿಸಿದಾಗ, ಆಕೆಯ ಎದೆಯ ಭಾಗದ ಮೂಳೆಗಳು ಮುರಿದಿದ್ದು ಹಾಗೂ ಹೊಟ್ಟೆಯ ಒಳಭಾಗಕ್ಕೆ ತೀವ್ರ ಗಾಯಗಳಾಗಿರುವುದು ದೃಢಪಟ್ಟಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 02/02/2026 ರಂದು ಬೆಳಿಗ್ಗೆ 5:46 ಗಂಟೆಗೆ ಗೀತಾ ಮೃತಪಟ್ಟಿರುತ್ತಾರೆ.
ಈ ಹಿನ್ನೆಲೆಯಲ್ಲಿ, ಈಗಾಗಲೇ ದಾಖಲಾಗಿದ್ದ ಕೊಲೆಗೆ ಯತ್ನ ಪ್ರಕರಣವನ್ನು ಕೊಲೆ ಪ್ರಕರಣವಾಗಿ ಪರಿವರ್ತಿಸಿ, ಪ್ರಕರಣದ ಕಾನೂನು ಕಲಂ 109 BNS ಅನ್ನು 103(1) ಭಾರತೀಯ ನ್ಯಾಯ ಸಂಹಿತೆ, 2023 ರಂತೆ ತಿದ್ದುಪಡಿ ಮಾಡಿ ತನಿಖೆ ಮುಂದುವರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top