ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಹರಿದುಬಂದ ಭಕ್ತಸಾಗರ

Picture of RB NEWS

RB NEWS

Bureau Report


ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವದ ನಾಲ್ಕನೇ ದಿನವಾದ ಬುಧವಾರ ಮುಖ್ಯ ದಿನವಾಗಿದ್ದು, ಬೆಳಗ್ಗೆಯಿಂದ ರಾತ್ರಿ ತನಕ ಸಾವಿರಾರು ಭಕ್ತರು ಪುಣ್ಯಕ್ಷೇತ್ರಕ್ಕೆ ಹರಿದುಬಂದರು. ಪವಾಡ ಪುರುಷ ಸಂತ ಲಾರೆನ್ಸ್ ಅವರ ಶಕ್ತಿಯುತ ಮಧ್ಯಸ್ಥಿಕೆಯಲ್ಲಿ ದೇವರಿಗೆ ತಮ್ಮ ಬೇಡಿಕೆಗಳನ್ನು ಸಮರ್ಪಿಸಿ, ಪಡೆದ ಕೃಪೆಗಳಿಗಾಗಿ ಕೃತಜ್ಞತೆ ಸಲ್ಲಿಸಿದರು.
ಭಕ್ತರ ಭಾರೀ ಸಂಖ್ಯೆಯ ಹಿನ್ನೆಲೆ ವಾಹನ ಸಂಚಾರವನ್ನು ದೂರದಲ್ಲೇ ನಿಯಂತ್ರಿಸಲಾಗಿದ್ದು, ಭಕ್ತರು ಸುಮಾರು ಒಂದು ಕಿಲೋಮೀಟರ್ ನಡೆದುಕೊಂಡು ಬಸಿಲಿಕೆಗೆ ಆಗಮಿಸಿದರು. ಸಾಂಪ್ರದಾಯಿಕವಾಗಿ ಬಲಿಪೂಜೆಗೆ ಮುನ್ನ ಪಾಪನಿವೇದನಾ ಸಂಸ್ಕಾರ ಸ್ವೀಕರಿಸಲು ಭಕ್ತರು ದೀರ್ಘ ಸಾಲಿನಲ್ಲಿ ನಿಂತಿದ್ದು, ದಿನಪೂರ್ತಿ ಸಾಲುಗಳು ಮುಂದುವರಿದವು.
ಸ್ಥಳದಲ್ಲಿದ್ದ ಯಾಜಕರು ರೋಗಿಗಳು ಹಾಗೂ ಮಕ್ಕಳ ಮೇಲೆ ಹಸ್ತಾರ್ಪಣೆ ಮಾಡಿ ಅವರ ಆರೋಗ್ಯ ಮತ್ತು ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಮಹೋತ್ಸವದ ಅಂಗವಾಗಿ ಎರಡು ಪ್ರಮುಖ ಬಲಿಪೂಜೆಗಳು ಜರುಗಿದವು. ಬೆಳಿಗ್ಗೆಯ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ನೆರವೇರಿಸಿದರು. ಸಂಜೆಯ ಬಲಿಪೂಜೆಯನ್ನು ಅಜಿರ್‌ನ ನೂತನ ಧರ್ಮಾಧ್ಯಕ್ಷರಾದ ಪರಮಪೂಜ್ಯ ಡಾ. ಜಾನ್ ಕಾರ್ವಾಲೋ ಅವರು ನೆರವೇರಿಸಿದರು.
ಉಪದೇಶದಲ್ಲಿ “ನಾನು ನಿಮ್ಮನ್ನು ಪ್ರೀತಿಸಿದ್ದೇನೆ” ಎಂಬ ಮಹೋತ್ಸವದ ಸಂದೇಶವನ್ನು ವಿವರಿಸಿದ ಅವರು, ಕ್ರಿಸ್ತನ ನಿರ್ವ್ಯಾಜ ಪ್ರೀತಿಯನ್ನು ಅನುಭವಿಸಿ, ಅದನ್ನು ದೀನದಲಿತರೊಂದಿಗೆ ಹಂಚಿಕೊಳ್ಳಬೇಕೆಂದು ಕರೆ ನೀಡಿದರು.
ಇತರ ಬಲಿಪೂಜೆಗಳನ್ನು ವಿವಿಧ ಯಾಜಕರು ನೆರವೇರಿಸಿದರು. ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೋ ಅವರು ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಅತ್ತೂರು ಪುಣ್ಯಕ್ಷೇತ್ರದ ಧರ್ಮಗುರುಗಳು, ಸಹಾಯಕ ಯಾಜಕರು, ಸ್ವಯಂಸೇವಕರು ಹಾಗೂ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು. ಬಸಿಲಿಕಾದ ಭವಿಷ್ಯ ಯೋಜನೆಗಳಿಗೆ ಭಕ್ತರ ಪ್ರಾರ್ಥನೆಗಳನ್ನು ವಿನಂತಿಸಿದರು.
ಕುಂದಾಪುರ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಅವರು ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಮಹೋತ್ಸವಕ್ಕೆ ಶುಭಾಶಯ ಕೋರಿದರು.
ಗುರುವಾರ ಸಂಪ್ರದಾಯದಂತೆ “ಕೃತಜ್ಞತೆಯ ತಾಯಿ” ಮಾತೆ ಮೇರಿಯವರ ಗೌರವಾರ್ಥ ಬಲಿಪೂಜೆ ನಡೆಯಲಿದೆ. ಸಂಜೆ 6 ಗಂಟೆಯ ಬಲಿಪೂಜೆಯೊಂದಿಗೆ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳು ಸಮಾಪ್ತಿಗೊಳ್ಳಲಿದ್ದು, ಬಳಿಕ “ಜಗತ್ ಜ್ಯೋತಿ” ಯಕ್ಷಗಾನ ಪ್ರದರ್ಶನ ಜರುಗಲಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top