ಕಾರ್ಕಳದ ಹಿರಿಯ ವಕೀಲ ಎಂ. ಕೆ. ವಿಜಯ ಕುಮಾರ್ ನಿಧನ

Picture of RB NEWS

RB NEWS

Bureau Report

ಕಾರ್ಕಳದ ಹಿರಿಯ ವಕೀಲ ಮಿಜಾರು ಕನಕಬೆಟ್ಟು ವಿಜಯ ಕುಮಾರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ನ್ಯಾಯಾಲಯದಲ್ಲಿ ವಾದ ಮಂಡನೆ ಮಾಡುವುದರಲ್ಲಿ ನಿಸ್ಸೀಮನಾಗಿದ್ದು ಗೆಲುವು ಪಡೆಯುತ್ತಿದ್ದ ಅವರು ಜಿಲ್ಲೆ ಹಾಗೂ ಹೊರ ಜಿಲ್ಲೆಯಲ್ಲೂ ಪರಿಚಿತರಾಗಿದ್ದರು. ಅವರಲ್ಲಿದ್ದ ವಿಶಿಷ್ಟವಾದ ವಾದಮಂಡನೆ , ಗೆಲುವು ಮತ್ತು ಅದಕ್ಕೆ ಪೂರಕವಾದ ಧ್ವನಿಯಿಂದಾಗಿ ಅವರು ಜನಪ್ರಿಯನಾಗಿದ್ದರು. ಅವರುಗೆ ಕರ್ನಾಟಕ ರಾಜ್ಯೋತ್ಸವ ಸನ್ಮಾನ ಪ್ರಶಸ್ತಿ ಗೌರವ ದೊರಕಿತ್ತು.


ಅವರು ಕಾರ್ಕಳ ಮತ್ತು ನ್ಯಾಯಾಲಯದೊಳಗೆ ಎಂಕೆ ಎಂದೇ ಪ್ರಸಿದ್ಧರಾಗಿದ್ದರು.


ಉತ್ತಮ ವಾಗ್ಮಿಯಾಗಿದ್ದ ಅವರನ್ನು ಜಿಲ್ಲೆಯಾದ್ಯಂತ ಆಕರ್ಷಿಸಿತ್ತು. ಎಲ್ಲ ಊರುಗಳಲ್ಲೂ ಬಹಳ ಸಂಖ್ಯೆಯಲ್ಲಿ ಅವರ ಕಕ್ಷಿದಾರರುಗಳಿದ್ದರು.

ದೊಡ್ಡ ಕಾರ್ಯಕ್ರಮಗಳಿಗೆ ಅವರನ್ನು ಆಮಂತ್ರಿಸುವುದೇ ಅವರ ಬಗೆಗಿನ ಅತಿಯಾದ ಬೇಡಿಕೆಯಾಗಿತ್ತು. ಮೊನ್ನೆ ಮೊನ್ನೆವರೆಗೂ ಅಭಿಮಾನಿಗಳು ಆಮಂತ್ರಿಸುವುದನ್ನು ಅವರು ನಿರಾಕರಿಸುತ್ತಿರಲಿಲ್ಲ. ಅಭಿಮಾನಿಗಳಿರುವ ಊರಿನ ಜನತೆಗೆ ನಿರಾಸೆ ಕೊಡಬಾರದು ಎಂಬ ನಿಟ್ಟಿನಲ್ಲಿ ಅವರು ಒಪ್ಪಿಕೊಳ್ಳುತ್ತಿದ್ದರು. ನೀವು ಬಾರದಿದ್ದರೆ ನಿಮ್ಮ ಅನುಕೂಲವಾದ ದಿನಾಂಕ ತಿಳಿಸಿ ಅಂದಿಗೇ ಕಾರ್ಯಕ್ರಮ ಮಾಡುತ್ತೇವೆ ಎಂದು ಕೇಳಿಕೊಂಡದ್ದೂ ಇದೆ. ಅವರ ಹಿರಿಯರ ಮನೆ ಮಿಜಾರು ಕನಕಬೆಟ್ಟುವಿನಲ್ಲಿ ಬಹುಮುಖ್ಯವಾದ ಕೌಟುಂಬಿಕ ಕಾರ್ಯಕ್ರಮವಿದ್ದ ದಿನದಂದೇ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭಿಮಾನದ ಪ್ರಸಂಗವೊಂದು ನಡೆದಿತ್ತು. ಅಂಥ ಕೆಲವು ಸಂಗತಿಗಳನ್ನು ಅವರು ಎರಡು ವರ್ಷಗಳ ಹಿಂದೆ ಮುದ್ರಾಡಿಯಲ್ಲಿ ಏರ್ಪಟ್ಟಿದ್ದ ಡಾ. ಎಂ ಎಸ್. ರಾವ್ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿ ಭಾಷಣದಲ್ಲಿ ಹೇಳಿಕೊಂಡಿದ್ದರು. ಎಂ ಕೆ ವಿ ಕೆ ಯವರು ಭಾರೀ ಪ್ರಮಾಣದಲ್ಲಿ ಅಭಿಮಾನಿ ವರ್ಗವನ್ನು ಗಳಿಸಿಕೊಂಡಿದ್ದರು ಎಂಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.
ಅವರ ಮಾತುಗಳಲ್ಲಿ ಹಾಸ್ಯದ ತುಣುಕುಗಳು ಜಾಸ್ತಿ. ಭಾಷಣ ಯಾವುದೇ ವಿಷಯಕ್ಕೆ ಸಂಬಂಧಿಸಿರುವುದೇ ಆಗಿರಲಿ ನ್ಯಾಯಾಂಗದ ಕುರಿತಾದ ಕೆಲವು ಪ್ರಮುಖ ವಿಷಯವನ್ನು ಪ್ರಸ್ತಾಪಿಸದೆ ಮಾತು ಮುಗಿಸುತ್ತಿರಲಿಲ್ಲ, ಅದೊಂದು ದಾಖಲೆ.


ಎಂ. ಕೆ. ವಿ. ಕೆ. ಯವರು ತಮ್ಮ ಮಾತುಗಳಲ್ಲಿ ನಿಷ್ಠೂರತೆಯನ್ನು ತೋರುತ್ತಿದ್ದವರು. ಆ ಕ್ಷಣದ ಕೆಲವು ಘಟನೆಗಳನ್ನೂ ಹೇಳದೆ ಬಾಕಿ ಮಾಡದವರು.ಅದನ್ನು ಹಾಸ್ಯದ ಲೇಪನದಲ್ಲಿ ಖಾರ ಮಿಶ್ರಣಗೊಳಿಸಿಯೇ ಹೇಳುವುದು ಅವರ ಜಾಯಮಾನವಾಗಿತ್ತು.

ಕಾರ್ಕಳ ಜೈನ ಮಠದ ಜೀರ್ಣೋದ್ಧಾರ ಕೆಲಸದ ಪೂರ್ವಭಾವಿ ಮಹಾಸಭೆ,ಜೈನ ಸಮಾವೇಶದಲ್ಲಿ ಅವರು ಮಾತಾನ್ನಾಡಿದ್ದು ಹೀಗೆ,
“ಇಂದಿನ ಸಮಾವೇಶದ ಆಮಂತ್ರಣ ಪತ್ರಿಕೆ ಓದಿದಾಗ ನನಗೆ ಅತಿದೊಡ್ಡ ನೋವು,ದಿಗ್ಭ್ರಮೆಯಾಗಿತ್ತು .ಅದೇನೆಂರೆ, ನಾನು ಮತ್ತು ಎಂ. ಎನ್. ರಾಜೇಂದ್ರ ಕುಮಾರ್ ಇಬ್ಬರೂ ಇದೇ ಪರಿಸರ ಮತ್ತು ಊರಿನವರಾಗಿದ್ದೇವೆ , ನಮ್ಮನ್ನು ವಿಶೇಷ ಆಹ್ವಾನಿತರು ಎಂದು ಬರೆದಿದ್ದಾರೆ….”
ಕಾರ್ಯಕ್ರಮ ಸಂಯೋಜಕರು ತೋರಿಸಿಕೊಂಡಿದ್ದ ಅತಿಬುದ್ಧಿವಂತಿಕೆಯನ್ನು ಎಂ. ಕೆ. ಯವರು ಹಾಸ್ಯಲೇಪನದಿಂದಲೇ ತಿವಿದರು. ಅಲ್ಲಿ ವೇದಿಕೆಯಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸಹಿತ ಧರ್ಮಪೀಠಾಧಿಪತಿಗಳು ಇನ್ನಿತರರು ಆಸೀನರಾಗಿದ್ದರು.
ಅದು ಎಂ. ಕೆ. ಯವರ ನೇರವಾಗಿ ಮಾತನ್ನಾಡುವ ಗುಣಸ್ವಭಾವ.
ಶ್ರೀಮಂತ ವಕೀಲನೆಂದೇ ಜನರ ಆಡುಮಾತಿನಲ್ಲಿ ಹೇಳಿಸಿಕೊಳ್ಳುತ್ತಿದ್ದ ಅವರು ಖಂಡಿತವಾಗಿಯೂ ಶ್ರೀಮಂತನೇ ಹೌದು. ಕೊಡುಗೈದಾನಿಯಾಗಿದ್ದರು. ಬಹಳ ಎತ್ತರದ ಗಂಭೀರವಾದ ದೇಹ ರಚನೆ ಹೊಂದಿಲ್ಲದ ಅವರು ತನ್ನ ವಾಕ್ಚಾತುರ್ಯದಿಂದಾಗಿ ಬಹು ಆಕರ್ಷಿತರಾಗಿದ್ದರು. ಯಾವುದೇ ಸಮಾರಂಭದ ಸಭೆಗೆ ಆಗಮಿಸಿದಾಗ ಸಭಿಕರು ಅವರಿಗೆ ಗೌರವದಿಂದ ನಮಸ್ಕರಿಸುತ್ತಿದ್ದರು. ಸದಾ ಹಸ್ನುಖ್ಯಾಗಿರುತ್ತಿದ್ದ ಅವರು ಯಾವನೇ ವ್ಯಕ್ತಿ ನಮಸ್ಕರಿಸಿದರೂ ಅದನ್ನು ತಾತ್ಸಾರಗೊಳಿಸದೆ ಪ್ರತಿವಂದಿಸುವ ಮಾನವೀಯ ಸ್ಪಂದನಾಶೀಲತೆ ಅವರ ವ್ಯಕ್ತಿತ್ವದಲ್ಲಿ ಅಡಗಿತ್ತು ಎನ್ನುವುದು ವಿಶೇಷ. ಸಮಾರಂಭದಲ್ಲಿ ಊಟ ಮಾಡುವಾಗಲೂ ಅದೇ ಜಾಗದಲ್ಲಿ ಕೂರಬೇಕೆಂದಿಲ್ಲದೆ ಎಲ್ಲಾದರೂ ಒಂದು ಕಡೆ ಕುಳಿತು ಉಂಡೇಳುತ್ತಿದ್ದ ಸರಳ ವ್ಯಕ್ತಿತ್ತ್ವ . 1977 ರಲ್ಲಿ ಜನತಾ ಪಕ್ಷದೊಡನೆ ರಾಜಕೀಯ ಆರಂಭಿಸಿದ್ದ ಅವರು ರಾಮಕೃಷ್ಣ ಹೆಗಡೆಯವರ ಪ್ರಭಾವಕ್ಕೊಳಗಾದವರಾಗಿದ್ದರು. ಆ ನಂತರ ಪುನಃ ಬಿಜೆಪಿಗೆ ಸೇರಿದರು. ಕಾರ್ಕಳದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮೂರು ನಾಲ್ಕು ಬಾರಿ ಸ್ಪರ್ಧಿಸಿದ್ದರು.

ಅವರ ಸಹಾಯಕ ವಕೀಲನಾಗಿ ಕೆಲಸ ಮಾಡಿದ್ದ ಅನೇಕ ಮಂದಿ ವಕೀಲರು ದೇಶದ ಉದ್ದಗಲದಲ್ಲೂ ಉನ್ನತ ಸ್ಥಾನಮಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸುಪ್ರೀಮ್ ಕೋರ್ಟಿನ ನಿವೃತ್ತ ನ್ಯಾಯಾಧೀಶ, ಆಂಧ್ರಪ್ರದೇಶದ ರಾಜ್ಯಪಾಲನಾಗಿರುವ ಎಂ. ಅಬ್ದುಲ್ ನಝೀರ್ ಅವರು ಕೂಡ ಎಂ. ಕೆ. ಜೊತೆ ಸಹಾಯಕ ವಕೀಲನಾಗಿ ಕೆಲಸ ಮಾಡಿದವರಾಗಿದ್ದಾರೆ.
ನನಗೂ ತುಂಬಾ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದವರು. ಅವರ ಅಗಲಿಕೆ ನಾಗರಿಕ ಸಮಾಜಕ್ಕೆ ಬಹಳ ದುಃಖವನ್ನು ತರಿಸಿದೆ. ನಿಧನ ಕಾಲಕ್ಕೆ ಅವರಿಗೆ ಎಂಭತ್ತೆರಡು ವರ್ಷ ವಯಸ್ಸಾಗಿತ್ತು.ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.


-ವಿ. ಕೆ. ವಾಲ್ಪಾಡಿ

–ಛಾಯಾಚಿತ್ರಗಳು: ದ್ವಾರಕ ನಿರಂಜನ್

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top