ಕಾರ್ಕಳದಲ್ಲಿ ಹುಲ್ಲುಗಾವಲು ಬೆಂಕಿ : 6 ಗಂಟೆಗಳ ಕಾರ್ಯಾಚರಣೆ

Picture of RB NEWS

RB NEWS

Bureau Report


ಕಾರ್ಕಳ : ಕಾರ್ಕಳ ತಾಲ್ಲೂಕಿನ ಸಾಣೂರು ಗ್ರಾಮ ವ್ಯಾಪ್ತಿಯ ಇಂದಿರಾನಗರದಲ್ಲಿ ಸುಮಾರು 8 ಎಕರೆ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 6 ಗಂಟೆಗಳ ನಿರಂತರ ಕಾರ್ಯಾಚರಣೆ ನಡೆಸಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಂದಿರಾನಗರ ಪ್ರದೇಶದಲ್ಲಿ ಸುಮಾರು 300 ಮನೆಗಳು ಇದ್ದು, ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಆಳೆತ್ತರದ ಹುಲ್ಲುಗಿಡಗಳು ಬೆಳೆಯಿಕೊಂಡಿದ್ದವು. ಆಕಸ್ಮಿಕವಾಗಿ ತಗುಲಿದ ಬೆಂಕಿ ವೇಗವಾಗಿ ವ್ಯಾಪಿಸಿ ಇಡೀ ಪ್ರದೇಶವನ್ನು ಆವರಿಸಿತು. ಇದರಿಂದ ಸ್ಥಳೀಯರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಬೆಳಿಗ್ಗೆ ಸುಮಾರು 10.30ರ ಸುಮಾರಿಗೆ ಅಗ್ನಿಶಾಮಕ ಠಾಣೆಗೆ ಮಾಹಿತಿ ತಲುಪಿದ ತಕ್ಷಣ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರು. ಬಳಿಕ ಹರಸಾಹಸ ಪಟ್ಟು ಸುಮಾರು 6 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಸಂಜೆ 4.30ರ ವೇಳೆಗೆ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸುವಲ್ಲಿ ಯಶಸ್ವಿಯಾದರು.
ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಅಚ್ಚುತ ಕರ್ಕೆರಾ, ಹರಿಪ್ರಸಾದ್ ಶೆಟ್ಟಿಗಾರ ಹಾಗೂ ಚಾಲಕರಾದ ಜಯಮೂಲ್ಯ, ನಿತ್ಯಾನಂದ ಮತ್ತು ಬಸವರಾಜ್ ಭಾಗವಹಿಸಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top