

ಕಾಪು ಪ್ರಾಧಿಕಾರದ ದಿಶೆಯಿಂದ ಮನೆ ನಿರ್ಮಾಣ ಗಗನಕುಸುಮ

ಕಾರ್ಕಳ: ಕಾರ್ಕಳದ ಜನರಿಗೆ ಏಕವಿನ್ಯಾಸನಕ್ಷೆ ಗ್ರಾಮ ಪಂಚಾಯತ್ನಲ್ಲಿ ಲಭಿಸುತ್ತಿತ್ತು. ಅದಕ್ಕೆ ರೂ. 2000 ಪಾವತಿಸುತ್ತಿದ್ದರೆ ಸಾಕಾಗುತ್ತಿತ್ತು. ಆದರೆ ಆ ಕೆಲಸವು ಇದೀಗ ಕಾಪು ಪ್ರಾಧಿಕಾರಕ್ಕೆ ಹೋಗಿ ರೂ. 20,000 ಖರ್ಚು ಮಾಡಬೇಕಾಗಿದೆ. ಮನೆಕಟ್ಟುವವರು ಹತ್ತಾರು ಬಾರಿ ಕಾಪು ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ಬಂದರೂ ಪರವಾನಿಗೆ ಸಿಗುತ್ತಿಲ್ಲ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಬಿ.ಮಣಿರಾಜಶೆಟ್ಟಿ ಆರೋಪಿಸಿದ್ದಾರೆ.

ಬೈಲೂರು ಮಹಿಷ ಮರ್ದಿನಿ ಸಭಾಭವನದಲ್ಲಿನಡೆದ ಬೈಲೂರು ಮಹಾಶಕ್ತಿ ಕೇಂದ್ರದ ಬೂತ್ ಅಧ್ಯಕ್ಷರು-ಜನಪ್ರತಿನಿಧಿಗಳು ಮತ್ತು ಪಕ್ಷದಪ್ರಮುಖರ ಸಭೆಯಲ್ಲಿ ಅವರು ಮಾತನಾಡುತ್ತಾ, ಕಾಂಗ್ರೆಸ್ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೀರಾ ತೊಂದರೆಯಾಗುತ್ತಿದ್ದುಅಭಿವೃದ್ಧಿ ಶೂನ್ಯವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇರುವಾಗ ಲೆಕ್ಕವಿಲ್ಲದಷ್ಟು ರಸ್ತೆಗಳು, ಸೇತುವೆಗಳು ಮಂಜೂರಾಗಿದ್ದು ಈ ಬಾರಿ ಕನಿಷ್ಠ ತೀರಾ ಅಗತ್ಯದ ಕೆಲಸಗಳಿಗೂ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್ನ ಕೆಲ ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರವು, ಅಧಿಕಾರಿಗಳು ಜನರನ್ನು ಸುಲಿಗೆ ಮಾಡುತ್ತಿದೆ. ಇದೊಂದು ಪಿಕ್ ಪಾಕೆಟ್ ಎಂಬುದಾಗಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.
ಇದೇ ಸಂದರ್ಭದಲ್ಲಿ ಶಾಸಕ ವಿ. ಸುನಿಲ್ ಕುಮಾರ್, ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರಹೆಗ್ಡೆ, ಜಿಲ್ಲಾಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್ ಪೂಜಾರಿ, ಶಕ್ತಿಕೇಂದ್ರ ಅಧ್ಯಕ್ಷ ಸಂದೀಪ್ ಅಮೀನ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು.




































