ಕಾರ್ಕಳ : ನಾವಿಂದು ಸ್ಥಳೀಯ ಮಹಾನ್ ಸಾಹಿತಿಯೊಬ್ಬರನ್ನು ಮರೆತೆವೆಂದರೆ ನಮ್ಮ ಅಸ್ಮಿತೆಯನ್ನೇ ಮರೆತಹಾಗೆ. ಪ್ರಾದೇಶಿಕ ಚೈತನ್ಯವನ್ನು, ಸಾಂಸ್ಕೃತಿಕ ವಿವರಗಳನ್ನು ಸಾಹಿತಿಗಳು ಕಟ್ಟಿಕೊಡುತ್ತಾರೆ. ಅವರ ಬರಹಗಳು ಸಮಕಾಲೀನ ಹಲವು ಏರುಪೇರುಗಳಿಗೆ ಸ್ಪಂದಿಸಿ ರಾಷ್ಟೀಯ ಹಿತಾಸಕ್ತಿಗೆ ಅನುಗುಣವಾಗಿ ಒಂದರ್ಥದಲ್ಲಿ ಉತ್ತರಗಳೇ ಆಗಿರುತ್ತವೆ. ಅವುಗಳನ್ನು ಇಂದಿನ ವಿದ್ಯಾರ್ಥಿ ಸಮೂಹಕ್ಕೆ ಉಣಬಡಿಸುವುದು ಇಂದಿನ ನಮ್ಮಂತಹ ಹಿರಿಯರ ಆದ್ಯ ಕರ್ತವ್ಯ. ವಿದ್ಯಾರ್ಥಿಗಳಿಗೆ ಸಾಹಿತಿಗಳು, ಅವರ ಬರಹಗಳು ಹತ್ತಿರವಾದರೆ ಸಾಮಾಜಿಕ ವ್ಯವಸ್ಥೆಯ ತಿಳುವಳಿಕೆ ಪಡೆದಂತಾಗುತ್ತದೆ. ಕಾರ್ಕಳ ತಾಲೂಕಿನ ಕಾಂತಾವರದ ಸಾಹಿತಿ ಡಾ. ನಾ ಮೊಗಸಾಲೆಯವರು ಕರ್ನಾಟಕದ ಅತಿ ಶ್ರೇಷ್ಠ ಬರಹಗಾರ. ಅವರು ಶಿವರಾಮ ಕಾರಂತರ ನಂತರದಲ್ಲಿ ಆ ಸ್ಥಾನವನ್ನು ತುಂಬಿ ಕಾರಂತರಿಗಿಂತಲೂ ಹೆಚ್ಚು ಗಾಢವಾಗಿ ವಾಸ್ತವಾಂಶಗಳನ್ನು ತಮ್ಮ ಗದ್ಯಬರಹಗಳಲ್ಲಿ ತುಂಬಿಕೊಟ್ಟವರು. ಈ ಹಿರಿಯ ಸಾಹಿತಿಯ ಕೃತಿಗಳ ಕುರಿತಾಗಿ ಚಿಂತನ – ಮಂಥನ ನಡೆಯುತ್ತಿರುವುದು ನಿಜವಾಗಲೂ ಸಂತೋಷಕರ ಸಂಗತಿ. ಆದರೂ ನಾ.ಮೊಗಸಾಲೆ ಅವರಿಗೆ ಸಿಗಬೇಕಾದ ಮನ್ನಣೆ, ಗೌರವ ಕಡಿಮೆಯೆಂದೇ ಹೇಳಬೇಕು ಎಂಬುದಾಗಿ ಪುತ್ತೂರು ವಿವೇಕಾನಂದ ಸ್ವಾಯತ್ತ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ, ಪ್ರಸ್ತುತ ಪರೀಕ್ಷಾಂಗ ಕುಲಸಚಿವರಾದ ಡಾ. ಎಚ್.ಜಿ. ಶ್ರೀಧರ್ ಅವರು ಹೇಳಿದರು.

ನಂತರ ನಡೆದ ಗೋಷ್ಠಿಯಲ್ಲಿ ಮೊಗಸಾಲೆ ಕಾದಂಬರಿಗಳಾದ ವಿದ್ಯಾರ್ಥಿಗಳಾದ ಅಜಿತ್ಲಾಲ್ ನನ್ನದಲ್ಲದ್ದು ಕೃತಿಯನ್ನು, ಕು.ದ್ರವ್ಯ ನೀರಿನೊಳಗಣ ಮಂಜು ಕೃತಿಯನ್ನು ,ಗಣೇಶ್ ಬಿ.ಸಿ ಧರ್ಮಯುದ್ಧ ಕೃತಿಯನ್ನು, ಸೌರಭ್ ಶೆಣೈ ಇದ್ದೂಇಲ್ಲದ್ದು ಕೃತಿಯನ್ನು, ಶ್ರೀನಿಧಿ ಶೆಟ್ಟಿ ಭಾರತಕಥಾ ಕೃತಿಯನ್ನು ಹಾಗೂ ಶ್ವೇತಾ ನೀರು ಕೃತಿಯನ್ನು ತುಂಬಾ ಸೊಗಸಾಗಿ ಚರ್ಚಿಸಿದರು. ಕಾದಂಬರಿ ಅನುಸಂಧಾನದ ಕಾರ್ಯಕ್ರಮಕ್ಕೆ ಖ್ಯಾತ ಚಿಂತಕ, ವಿಮರ್ಶಕ ಅರವಿಂದ ಚೊಕ್ಕಾಡಿಯವರು ಅಧ್ಯಕ್ಷತೆ ವಹಿಸಿ ಕಾಲೇಜುಗಳು ಈ ಬಗೆಯ ಪ್ರಬುದ್ಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ವಿದ್ಯಾರ್ಥಿಗಳು ಸಾಹಿತ್ಯಮುಖಿಯಾಗಿ ಬೆಳೆಯುತ್ತಾರೆ ಮಾತ್ರವಲ್ಲ ಅದರಲ್ಲಿ ಇದೊಂದು ಅತ್ಯುತ್ತಮ ಮಾದರಿ ಕಾರ್ಯಕ್ರಮವೆಂದರು.

ಸಮಾರಂಭದಲ್ಲಿ ಸಾಹಿತಿ, ಬರಹಗಾರ ಡಾ. ನಾ ಮೊಗಸಾಲೆಯವರು ಉಪಸ್ಥಿತರಿದ್ದು ಬಹಳ ಪ್ರಬುದ್ಧವಾಗಿ ಕೆಲವು ಕಾದಂಬರಿಗಳ ಕುರಿತು ಮಾತನಾಡಿದ ವಿದ್ಯಾರ್ಥಿಗಳನ್ನು ಶ್ಲಾಘಿಸಿ , ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡರು. ಸಮಾರಂಭದಲ್ಲಿ ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಅರುಣಕುಮಾರ ಎಸ್. ಆರ್. ಅವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶ್ರೀನಿಧಿಶೆಟ್ಟಿ ಸ್ವಾಗತಿಸಿದರು.
ಸಹನಾ ವಾಗ್ಳೆ ಹಾಗೂ ಅಶ್ವಿತಾ ವಂದಿಸಿದರು. ಶ್ರೀರಕ್ಷಾ ಭಟ್ ಹಾಗೂ ವಿಯೋಲಾ ಆರ್ ರೊಸಾರಿಯೋ ನಿರೂಪಿಸಿದರು.





































