ಕಾಂಗ್ರೆಸ್ ಪಾಲಿಗೆ ಪಂಚ ಕಾರ್ಯ ಸಿದ್ದಿ
ಬೆಂಗಳೂರು, ಜೂನ್ 18: ವಿಧಾನಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮಹತ್ವದ ಗೆಲುವು ಸಾಧಿಸಿದ್ದು, ಐದನೇ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿನಯ್ ಕಾರ್ತಿಕ್ ಅವರು ಜಯಗಳಿಸಿದ್ದಾರೆ.
ಏಳು ಸ್ಥಾನಗಳಿಗೆ ನಡೆದ ಈ ಚುನಾವಣೆಯಲ್ಲಿ ಒಟ್ಟು ಎಂಟು ಅಭ್ಯರ್ಥಿಗಳು ಕಣಕ್ಕಿಳಿದಿದ್ದರು. ಬೆಳಗ್ಗೆ 9 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4 ಗಂಟೆಗೆ ಅಂತ್ಯಗೊಂಡಿದ್ದು, ಬಳಿಕ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಸಲಾಯಿತು.
ಒಂದು ಸ್ಥಾನಕ್ಕಾಗಿ ಕಾಂಗ್ರೆಸ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಆದರೆ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಕೆಲ ಶಾಸಕರು ಅಡ್ಡಮತದಾನ ಮಾಡಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಚ್ಚರಿ ಲಾಭವಾಗಿದೆ.
ವರದಿಗಳ ಪ್ರಕಾರ, ಜೆಡಿಎಸ್ನ ಏಳು ಶಾಸಕರು ಹಾಗೂ ಬಿಜೆಪಿಯ ನಾಲ್ವರು ಶಾಸಕರು ಅಡ್ಡಮತದಾನ ಮಾಡಿದ್ದಾರೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕಾರ್ತಿಕ್ ಅವರಿಗೆ 32 ಮತಗಳು ಲಭಿಸಿದರೆ, ಮೈತ್ರಿ ಅಭ್ಯರ್ಥಿ ಗೋವಿಂದರಾಜು ಅವರಿಗೆ ಕೇವಲ 14 ಮತಗಳು ಮಾತ್ರ ಸಿಕ್ಕಿವೆ.
ಒಟ್ಟು ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಬಿಜೆಪಿ ಎರಡು ಸ್ಥಾನಗಳಲ್ಲಿ ಜಯಗಳಿಸಿದೆ. ಜೆಡಿಎಸ್ ಅಭ್ಯರ್ಥಿ ಗೋವಿಂದರಾಜು ಸೋಲು ಅನುಭವಿಸಿದ್ದಾರೆ.
ಈ ಚುನಾವಣೆಯಲ್ಲಿ ಚಲಾವಣೆಗೊಂಡ 222 ಮತಗಳ ಪೈಕಿ ಒಂದು ಮತ ಅಸಿಂಧುವಾಗಿದ್ದು, ಸಂಖ್ಯೆ ಸರಿಯಾಗಿ ನಮೂದಿಸದ ಕಾರಣದಿಂದ ಅದನ್ನು ತಿರಸ್ಕರಿಸಲಾಗಿದೆ.
ಗೆದ್ದ ಅಭ್ಯರ್ಥಿಗಳು:
ಬಿಕೆ ಹರಿಪ್ರಸಾದ್ (ಕಾಂಗ್ರೆಸ್) – 30 ಮತಗಳು
ತಿಪ್ಪಣ್ಣಪ್ಪ ಕಾಮಕನೂರ್ (ಕಾಂಗ್ರೆಸ್) – 30 ಮತಗಳು
ಪಿ.ವಿ. ಮೋಹನ್ (ಕಾಂಗ್ರೆಸ್) – 29 ಮತಗಳು
ವಿನಯ್ ಕಾರ್ತಿಕ್ (ಕಾಂಗ್ರೆಸ್) – 32 ಮತಗಳು
ಶಿವಣ್ಣ ಮಳವಳ್ಳಿ (ಕಾಂಗ್ರೆಸ್) – 30 ಮತಗಳು
ರಘು ಕೌಟಿಲ್ಯ (ಬಿಜೆಪಿ) – 29 ಮತಗಳು
ಲಿಂಗರಾಜ್ ಪಾಟೀಲ್ (ಬಿಜೆಪಿ) – 27 ಮತಗಳು



































