ಕಾಂಗ್ರೆಸ್ ಕ್ರೀಡೋತ್ಸವ ಹಾಗೂ ಕಿಸಾನ್ ಸಭಾ ಸಭಾಂಗಣ ಲೋಕಾರ್ಪಣೆಗೆ ಪೂರ್ವಭಾವಿ ಸಭೆ
RB NEWS
Bureau Report
ಕಾಂಗ್ರೆಸ್ ಕ್ರೀಡೋತ್ಸವ ಹಾಗೂ ಕಿಸಾನ್ ಸಭಾ ಸಭಾಂಗಣ ಲೋಕಾರ್ಪಣೆಗೆ ಪೂರ್ವಭಾವಿ ಸಭೆ
ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಕಳ–ಹೆಬ್ರಿ ಹಾಗೂ ಯುವ ಕಾಂಗ್ರೆಸ್ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆಯಲಿರುವ ಕಾಂಗ್ರೆಸ್ ಕ್ರೀಡೋತ್ಸವ ಹಾಗೂ ಕಿಸಾನ್ ಸಭಾ ಸಭಾಂಗಣದ ಲೋಕಾರ್ಪಣಾ ಕಾರ್ಯಕ್ರಮದ ಸಿದ್ಧತೆಗಳ ಕುರಿತ ಪೂರ್ವಭಾವಿ ಸಭೆಯು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಸಭೆಯನ್ನುದ್ದೇಶಿಸಿ ಮಾತನಾಡಿದ ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು, ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿಯವರ ಮಾರ್ಗದರ್ಶನದಲ್ಲಿ ಕಿಸಾನ್ ಸಭಾ ಸಭಾಂಗಣದ ಲೋಕಾರ್ಪಣಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು. ಈ ಮಹತ್ವದ ಕಾರ್ಯಕ್ರಮವನ್ನು ಶಿಸ್ತಿನಿಂದ ಹಾಗೂ ಭವ್ಯವಾಗಿ ಯಶಸ್ವಿಗೊಳಿಸಲು ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರೂ ಶಕ್ತಿಮೀರಿ ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಕಾರ್ಕಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಆಯೋಜಿಸಲಾಗುತ್ತಿರುವ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟವೂ ವಿಶೇಷ ಆಕರ್ಷಣೆಯಾಗಿದ್ದು, ಅದರ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕೆಂದು ಹೇಳಿದರು. ರಾಜ್ಯ ನಾರಾಯಣಗುರು ನಿಗಮದ ಅಧ್ಯಕ್ಷ ಮಂಜುನಾಥ ಪೂಜಾರಿ ಮಾತನಾಡಿ, ಕಾಂಗ್ರೆಸ್ ಕ್ರೀಡೋತ್ಸವ ಕೇವಲ ಕ್ರೀಡಾ ಕಾರ್ಯಕ್ರಮವಲ್ಲ, ಯುವಶಕ್ತಿಯನ್ನು ಒಗ್ಗೂಡಿಸಿ ಶಿಸ್ತು ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸುವ ವೇದಿಕೆಯಾಗಲಿದೆ ಎಂದು ಹೇಳಿದರು. ಈ ಕಾರ್ಯಕ್ರಮದ ಯಶಸ್ಸು ನಮ್ಮೆಲ್ಲರ ಜವಾಬ್ದಾರಿಯಾಗಿದ್ದು, ಪ್ರತಿಯೊಬ್ಬ ಕಾರ್ಯಕರ್ತನು ತನ್ನ ಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸಿದಾಗ ಮಾತ್ರ ಗುರಿ ಸಾಧನೆ ಸಾಧ್ಯವೆಂದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ಮಾತನಾಡಿ, ಕಾರ್ಕಳದಲ್ಲಿರುವ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಹಾಗೂ ಅವರನ್ನು ಉನ್ನತ ಮಟ್ಟಕ್ಕೆ ಬೆಳೆಸುವ ಉದ್ದೇಶದಿಂದ ಕಾಂಗ್ರೆಸ್ ಕ್ರೀಡೋತ್ಸವವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಕಳದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಹೊನಲು ಬೆಳಕಿನ ಅಥ್ಲೆಟಿಕ್ ಕ್ರೀಡಾಕೂಟವನ್ನು ಆಯೋಜಿಸುವ ಹೆಗ್ಗಳಿಕೆಗೆ ಕಾರ್ಕಳ ಕಾಂಗ್ರೆಸ್ ಪಾತ್ರವಾಗಲಿದೆ ಎಂದು ಅವರು ಹೇಳಿದರು. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಕಾರ್ಯಕರ್ತರು ಮತ್ತು ಪದಾಧಿಕಾರಿಗಳು ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಬ್ಲಾಕ್ ಉಪಾಧ್ಯಕ್ಷ ಜಾರ್ಜ್ ಕ್ಯಾಸ್ತಲಿನೊ ಮತಪಟ್ಟಿ ಪರಿಷ್ಕರಣೆಯ ಕುರಿತು ವಿವರವಾದ ಮಾಹಿತಿಯನ್ನು ನೀಡಿದರು. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯ ಸುಧಾಕರ ಕೋಟ್ಯಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಬಾಸ್ಕರ ಪೂಜಾರಿ, ಯುವ ಕಾಂಗ್ರೆಸ್ ಅಧ್ಯಕ್ಷ ಸೂರಜ್ ಶೆಟ್ಟಿ ನಕ್ರೆ ಸೇರಿದಂತೆ ಹಲವು ನಾಯಕರು ಸಂದರ್ಭೋಚಿತವಾಗಿ ಮಾತನಾಡಿ ಕಾರ್ಯಕ್ರಮದ ಯಶಸ್ಸಿಗೆ ಶುಭಹಾರೈಸಿದರು. ಸಭೆಯಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಹಾಗೂ ಹೆಬ್ರಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ ಮತ್ತು ಶಂಕರ ಶೇರಿಗಾರ್, ಸದಾಶಿವ ದೇವಾಡಿಗ, ಪ್ರಭಾಕರ ಬಂಗೇರ, ರವಿಶಂಕರ್ ಶೇರಿಗಾರ್, ಉಮೇಶ್ ರಾವ್ ಬಜಗೋಳಿ, ಚಂದ್ರಶೇಖರ ಬಾಯಾರಿ ಸೇರಿದಂತೆ ಗ್ರಾಮೀಣ ಸಮಿತಿಯ ಅಧ್ಯಕ್ಷರು, ವಿವಿಧ ಘಟಕಗಳ ಅಧ್ಯಕ್ಷರು, ರಾಜ್ಯ ಮತ್ತು ಜಿಲ್ಲಾ ಘಟಕದ ಪದಾಧಿಕಾರಿಗಳು, ಚುನಾಯಿತ ಜನಪ್ರತಿನಿಧಿಗಳು, ನಾಮನಿರ್ದೇಶಿತ ಸದಸ್ಯರು ಹಾಗೂ ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಪ್ರಸನ್ನ ಶೆಟ್ಟಿಗಾರ್ ಸ್ವಾಗತಿಸಿದರು. ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮವನ್ನು ಸಮರ್ಥವಾಗಿ ನಿರೂಪಿಸಿದರು. ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಆಚಾರ್ಯ ಇನ್ನಾ ಧನ್ಯವಾದ ಅರ್ಪಿಸಿದರು.