
ಕಾಂಗ್ರೆಸ್ ಕ್ರೀಡೋತ್ಸವಕ್ಕೆ ಭರ್ಜರಿ ಸ್ಪಂದನೆ
ದಾಖಲೆ ಮಟ್ಟದ 135 ತಂಡಗಳ ನೋಂದಣಿ
ಅಥ್ಲೆಟಿಕ್ ಸ್ಪರ್ಧೆಗೆ ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳ ನಿರೀಕ್ಷೆ

ಕಾರ್ಕಳ ಕಾಂಗ್ರೆಸ್ ವತಿಯಿಂದ ಜನವರಿ 25 ಮತ್ತು 26ರಂದು ಸ್ವರಾಜ್ಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಕಾಂಗ್ರೆಸ್ ಕ್ರೀಡೋತ್ಸವಕ್ಕೆ ಕ್ರೀಡಾಪಟುಗಳಿಂದ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಕ್ರೀಡೋತ್ಸವದ ವಿವಿಧ ವಿಭಾಗಗಳಲ್ಲಿ ಒಟ್ಟು 135 ತಂಡಗಳು ದಾಖಲೆ ಮಟ್ಟದಲ್ಲಿ ನೋಂದಣಿ ಮಾಡಿಕೊಂಡಿವೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಅವರು ತಿಳಿಸಿದ್ದಾರೆ.
ಜನವರಿ 26ರಂದು ಸಂಜೆ 3.30ರಿಂದ ನಡೆಯಲಿರುವ ತಂಡ ಕ್ರೀಡಾಪಂದ್ಯಗಳಲ್ಲಿ ವಾಲಿಬಾಲ್ ವಿಭಾಗದಲ್ಲಿ 44 ತಂಡಗಳು, ತ್ರೋಬಾಲ್ನಲ್ಲಿ 25 ತಂಡಗಳು, ಹಗ್ಗಜಗ್ಗಾಟದಲ್ಲಿ ಪುರುಷರ 30 ಹಾಗೂ ಮಹಿಳೆಯರ 20 ತಂಡಗಳು, ಖೋಖೋ ವಿಭಾಗದಲ್ಲಿ ಪುರುಷರ 10 ಮತ್ತು ಮಹಿಳೆಯರ 7 ತಂಡಗಳು ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿವೆ.
ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಪಂದ್ಯಕೂಟವನ್ನು ಸುಗಮವಾಗಿ ಹಾಗೂ ವೇಗವಾಗಿ ನಡೆಸುವ ಉದ್ದೇಶದಿಂದ ವಾಲಿಬಾಲ್ ಮತ್ತು ತ್ರೋಬಾಲ್ ಪಂದ್ಯಗಳನ್ನು ಎರಡು ಅಂಕಣಗಳಲ್ಲಿ ಆಯೋಜಿಸಲಾಗಿದ್ದು, ಖೋಖೋ ಮತ್ತು ಹಗ್ಗಜಗ್ಗಾಟ ಸ್ಪರ್ಧೆಗಳು ನಿಗದಿಯಂತೆ ಒಂದೇ ಅಂಕಣದಲ್ಲಿ ನಿರಂತರವಾಗಿ ನಡೆಯಲಿವೆ.
ಜನವರಿ 25ರಂದು ಸಂಜೆ ನಡೆಯುವ ಅಥ್ಲೆಟಿಕ್ ಸ್ಪರ್ಧೆಗೂ ಭಾರೀ ಆಸಕ್ತಿ ವ್ಯಕ್ತವಾಗಿದ್ದು, ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ನೋಂದಣಿ ಪ್ರಕ್ರಿಯೆ ಸಂಜೆ 3.30ರಿಂದ ಆರಂಭವಾಗಲಿದ್ದು, ಪಥಸಂಚಲನ ಮತ್ತು ಉದ್ಘಾಟನೆಯ ತಕ್ಷಣವೇ ಆರು ವಿಭಾಗಗಳ ಐದು ಸ್ಪರ್ಧೆಗಳು ಪ್ರಾರಂಭಗೊಳ್ಳಲಿವೆ.
ಬಹುಮಾನ ವಿವರ:
ಅಥ್ಲೆಟಿಕ್ ಸ್ಪರ್ಧೆಗಳ ವಿಜೇತರಿಗೆ ಪ್ರಥಮ ಬಹುಮಾನವಾಗಿ ನಗದು ರೂ.1,000, ದ್ವಿತೀಯ ರೂ.750, ತೃತೀಯ ರೂ.500 ಜೊತೆಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ತಂಡ ಕ್ರೀಡಾಪಂದ್ಯಗಳ ವಿಜೇತರಿಗೆ ಪ್ರಥಮ ನಗದು ರೂ.15,000, ದ್ವಿತೀಯ ರೂ.10,000, ತೃತೀಯ ರೂ.6,000 ಮತ್ತು ಚತುರ್ಥ ರೂ.4,000 ಜೊತೆಗೆ ಶಾಶ್ವತ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಪಥಸಂಚಲನ ಸ್ಪರ್ಧೆಯ ವಿಜೇತರಿಗೆ ಸಹ ಪ್ರಥಮ ನಗದು ರೂ.15,000, ದ್ವಿತೀಯ ರೂ.10,000, ತೃತೀಯ ರೂ.6,000 ಹಾಗೂ ಚತುರ್ಥ ರೂ.4,000 ಬಹುಮಾನ ನೀಡಲಾಗುವುದು. ಕ್ರೀಡೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಸ್ಪರ್ಧಿಗಳಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಗುವುದು.
ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿಯೂ ಅನುಭವಿ ಹಿರಿಯ ತೀರ್ಪುಗಾರರು ಕಾರ್ಯನಿರ್ವಹಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡೋತ್ಸವವನ್ನು ಯಶಸ್ವಿಗೊಳಿಸುವಂತೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.


j




































