ಉಡುಪಿ, ಆ.27: ಪಶ್ಚಿಮ ಘಟ್ಟ ಸಂರಕ್ಷಣೆಯ ಹೆಸರಿನಲ್ಲಿ ಕಳೆದ ಒಂದು ದಶಕದಿಂದ ಚರ್ಚೆಯಲ್ಲಿರುವ ಕಸ್ತೂರಿ ರಂಗನ್ ವರದಿ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಮಲೆಕುಡಿಯ ಹಾಗೂ ಇತರ ಅರಣ್ಯ ಬುಡಕಟ್ಟುಗಳ ಜನಜೀವನಕ್ಕೆ ತೀವ್ರ ಸಮಸ್ಯೆ ಎದುರಾಗುವ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡಲೇ ಸಭೆ ಕರೆದು ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ವಿಸ್ತೃತ ಚರ್ಚೆ ನಡೆಸಿ, ಬಲವಾದ ವಿರೋಧ ನಿರ್ಣಯವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಬೇಕು ಎಂದು ರಾಜ್ಯ ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ ಈದು ಒತ್ತಾಯಿಸಿದ್ದಾರೆ. ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯ ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ ಜುಲೈ 27ರಂದು ಏಳನೇ ಬಾರಿಗೆ ಕರಡು ಅಧಿಸೂಚನೆ ಪ್ರಕಟಿಸಿದೆ. ಇದರನ್ವಯ ಕರ್ನಾಟಕದ ಪಶ್ಚಿಮ ಘಟ್ಟ ವ್ಯಾಪ್ತಿಯ 10 ಜಿಲ್ಲೆಗಳ ಒಟ್ಟು 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ ಎಂದು ತಿಳಿಸಿದರು. ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಅಧಿಸೂಚನೆಗಳಿಗೂ ಪಶ್ಚಿಮ ಘಟ್ಟ ವ್ಯಾಪ್ತಿಯ ಗ್ರಾಮಸ್ಥರಿಂದ ತೀವ್ರ ವಿರೋಧ ಹಾಗೂ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಇದೀಗ ಏಳನೇ ಕರಡು ಅಧಿಸೂಚನೆಯಲ್ಲಿಯೂ ಮೊದಲ ಕರಡು ಅಧಿಸೂಚನೆಯಲ್ಲಿ ಗುರುತಿಸಲಾಗಿದ್ದ ಬಹುತೇಕ ಪ್ರದೇಶವನ್ನೇ ಪರಿಸರ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದೆ. ಯಾವುದೇ ಮಹತ್ವದ ಬದಲಾವಣೆ ಮಾಡದಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ ಎಂದು ಅವರು ಹೇಳಿದರು. ಇದರಿಂದ ಪಶ್ಚಿಮ ಘಟ್ಟ ವ್ಯಾಪ್ತಿಯ 8 ಜಿಲ್ಲೆಗಳ 40 ತಾಲೂಕುಗಳ 1,576 ಗ್ರಾಮಗಳ ಸಾವಿರಾರು ಕುಟುಂಬಗಳು ಸಂಕಷ್ಟಕ್ಕೆ ಸಿಲುಕುವ ಭೀತಿ ಇದೆ. ಹಲವು ವರ್ಷಗಳಿಂದ ಈ ಪ್ರದೇಶಗಳಲ್ಲಿ ಕೃಷಿ, ಕೂಲಿ ಹಾಗೂ ಸಣ್ಣ ವ್ಯಾಪಾರ ಸೇರಿದಂತೆ ವಿವಿಧ ವೃತ್ತಿಗಳನ್ನು ಅವಲಂಬಿಸಿ ಬದುಕು ಕಟ್ಟಿಕೊಂಡಿರುವ ಜನರ ಜೀವನ ಅತಂತ್ರವಾಗುವ ಸಾಧ್ಯತೆಯಿದೆ ಎಂದು ಶ್ರೀಧರ್ ಗೌಡ ಆತಂಕ ವ್ಯಕ್ತಪಡಿಸಿದರು. ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಜುಲೈ 27ರಿಂದ 60 ದಿನಗಳ ಕಾಲಾವಕಾಶ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಜವಾಬ್ದಾರಿ ಹೆಚ್ಚಿದೆ. ಆದರೆ ಈ ವಿಚಾರದಲ್ಲಿ ಮುಖ್ಯಮಂತ್ರಿ ಯಾವುದೇ ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿಲ್ಲ ಹಾಗೂ ಸಂಬಂಧಪಟ್ಟವರ ಸಭೆಯನ್ನೂ ನಡೆಸಿಲ್ಲ ಎಂದು ಅವರು ಆರೋಪಿಸಿದರು. ಮಲೆಕುಡಿಯರು ಪರಿಸರ ಸಂರಕ್ಷಣೆಯ ವಿರೋಧಿಗಳಲ್ಲ. ಜನರ ಬದುಕಿಗೆ ತೊಂದರೆಯಾಗದ ರೀತಿಯಲ್ಲಿ ವೈಜ್ಞಾನಿಕ ಹಾಗೂ ಸಮರ್ಪಕ ಭೌತಿಕ ಸಮೀಕ್ಷೆ ನಡೆಸಿ, ಜನವಸತಿ ಪ್ರದೇಶಗಳನ್ನು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯಿಂದ ಹೊರಗಿಟ್ಟು ಪಶ್ಚಿಮ ಘಟ್ಟದ ಪರಿಸರ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು. ಪಶ್ಚಿಮ ಘಟ್ಟ ಪ್ರದೇಶ ನಕ್ಸಲ್ ಮುಕ್ತವಾಗಿರುವ ಸಂದರ್ಭದಲ್ಲಿ ಜನವಿರೋಧಿ ಯೋಜನೆಗಳನ್ನು ಬಲವಂತವಾಗಿ ಹೇರಿದರೆ ಮತ್ತೆ ಅಸಮಾಧಾನಕ್ಕೆ ಕಾರಣವಾಗಿ ನಕ್ಸಲ್ ಚಳವಳಿ ಸಕ್ರಿಯವಾಗುವ ಆತಂಕ ಜನರಲ್ಲಿ ಇದೆ. ಆದ್ದರಿಂದ ಜನರಲ್ಲಿ ತೀವ್ರ ಅಸಮಾಧಾನ ಉಂಟಾಗುವ ಮೊದಲೇ ಈ ಭಾಗದ ಎಲ್ಲ ಶಾಸಕರು ಹಾಗೂ ಸಂಸದರು ಎಚ್ಚೆತ್ತುಕೊಂಡು ಜನರ ನೆಮ್ಮದಿಯ ಬದುಕಿಗೆ ಅಡ್ಡಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀಧರ್ ಗೌಡ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ರಾಜ್ಯ ಉಪಾಧ್ಯಕ್ಷೆ ವಸಂತಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಎಳನೀರು, ಉಡುಪಿ ಜಿಲ್ಲಾಧ್ಯಕ್ಷ ಗಂಗಾಧರ ಗೌಡ, ಪ್ರಧಾನ ಕಾರ್ಯದರ್ಶಿ ಅಶೋಕ್ ಗೌಡ ಹಾಗೂ ಪ್ರಮುಖರಾದ ನವೀನ್ ಉಪಸ್ಥಿತರಿದ್ದರು.