ಕಸ್ತೂರಿರಂಗನ್ ಜಾರಿ ಬದಲು ಜನರ ಬದುಕಿನತ್ತ ಸರಕಾರಗಳು ಗಮನ ಹರಿಸಬೇಕು
ಕಾರ್ಕಳ : ಪಶ್ಚಿಮ ಘಟ್ಟದಲ್ಲಿ ಅರಣ್ಯಗಳನ್ನು ಇಲ್ಲಿನ ಅರಣ್ಯ ವಾಸಿಗಳು ಸಂರಕ್ಷಿಸಿದ್ದಾರೆ. ಕಾಡನ್ನು ತಮ್ಮ ಬದುಕಿನ ಒಂದು ಭಾಗವಾಗಿ, ಪ್ರಕೃತಿಗೆ ದೇವರಸ್ಥಾನವನ್ನು ನೀಡಿ ಆರಾಧಿಸಿ ಕೊಂಡು ಭಾವನಾತ್ಮಕ ಸಂಬಂಧವನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಪಶ್ಚಿಮ ಘಟ್ಟ ರಮಣೀಯವಾಗಿ, ಹಚ್ಚ ಹಸುರಿನಿಂದ , ಮನಮೋಹಕವಾಗಿ, ಕಂಗೊಳಿಸುತ್ತಿದೆ.
ವರ್ಷಂಪ್ರತಿ, ಕಸ್ತೂರಿ ರಂಗನ್ ವರದಿ ಜಾರಿ, ಮಾಧವ ಗಾಡ್ಗಿಲ್ ವರದಿ ಜಾರಿ, ಹುಲಿ ಯೋಜನೆ, ಪರಿಸರ ಸೂಕ್ಷ್ಮ ತಾಣ ಇತ್ಯಾದಿ ಯೋಜನೆಗಳನ್ನು ತರುವ ಕುರಿತಾದ ಚರ್ಚೆಗಳನ್ನು ಮಾಡಿ ಪಶ್ಚಿಮ ಘಟ್ಟದಲ್ಲಿರುವ ಮಲೆಕುಡಿಯರು ಸೇರಿದಂತೆ ಅರಣ್ಯಾಧಾರಿತ ಮೂಲ ಬುಡಕಟ್ಟು ಸಮುದಾಯದ, ಹಾಗೂ ಈ ಭಾಗದಲ್ಲಿರುವ, ರೈತರ, ಕೃಷಿ ಕೂಲಿ ಕಾರ್ಮಿಕರಲ್ಲಿ ಮಾನಸಿಕ ನೆಮ್ಮದಿಗೆ ಭಂಗವನ್ನು ಮಾಡಲಾಗುತ್ತದೆ.
ಆ ಮುಖೇನ ಗೊಂದಲ ಉಂಟು ಮಾಡಿ ಮುಗ್ಧ ಜನರ ಬದುಕಿನಲ್ಲಿ ಚೆಲ್ಲಾಟವಾಡುವ ಬದಲು, ಪಶ್ಚಿಮಘಟ್ಟ ಪ್ರದೇಶ ವ್ಯಾಪ್ತಿಯಲ್ಲಿ ತಲತಲಾಂತರಗಳಿಂದ ಬದುಕು ಕಟ್ಟಿಕೊಂಡು ಬಂದಿರುವ ಜನರಿಗೆ ಬೇಕಾದ ಮೂಲಸೌಕರ್ಯಗಳಾದ, ರಸ್ತೆ, ವಿದ್ಯುತ್ ,ವಸತಿ ಹಾಗೂ ಶಿಕ್ಷಣಕ್ಕೆ ಬೇಕಾದ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರಗಳು ಗಮನ ಹರಿಸಿ ಜನರ ಬದುಕನ್ನು ಹಸನಗೊಳಿಸಬೇಕಾಗಿದೆ.
ಈ ನಿಟ್ಟಿನಲ್ಲಿ ಅರಣ್ಯ ಹಕ್ಕು ಕಾಯ್ದೆ ಪರಿಣಾಮಕಾರಿಯಾಗಿ ಜಾರಿಯಾಗ ಬೇಕೆಂದು ಮಲೆಕುಡಿಯ ಸಂಘದ ರಾಜ್ಯಾಧ್ಯಕ್ಷ ಶ್ರೀಧರ ಗೌಡ ಆಗ್ರಹಿಸಿದ್ದಾರೆ.














