







ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದ ವಿಚಾರಣೆ ಆರಂಭ
ಭಾಗ-6

1976 ಸೆಪ್ಟಂಬರ್ 4ರಂದು ರಾತ್ರಿ 10.30ರ ವೇಳೆಗೆ ನಿಗೂಢವಾಗಿ ನಾಪತ್ತೆಯಾಗಿ ಮೂರು ದಿನಗಳ ನಂತರ ಕಡೇಶ್ವಾಲ್ಯ ಬಳಿ ನೇತ್ರಾವತಿ ನದಿ ಮಧ್ಯೆ ಇದ್ದ ಕಲ್ಲಿನ ಕೊರಕಲಿನಲ್ಲಿ ಬೆತ್ತಲೆಯಾಗಿ ಪತ್ತೆಯಾಗಿದ್ದ ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದ ಸಿಓಡಿ ತನಿಖೆ ನಡೆದು ನ್ಯಾಯಾಲಯಕ್ಕೆ ಒಟ್ಟು 8 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಕೆಯಾದ ಬಳಿಕ ಪ್ರಕರಣದ ಮುಂದಿನ ವಿಚಾರಣೆಗಾಗಿ 1977 ಜೂನ್ 15ರಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿತ್ತು.
ಆ ಸಂದರ್ಭದಲ್ಲಿ ಆರೋಪಿಗಳಾದ ಶ್ರೀಧರ್ ಭಟ್, ಪುರಂದರ ಭಟ್, ಈಶ್ವರ ಭಟ್, ಮಹಾಬಲ ದೇವಾಡಿಗ ಮತ್ತು ಭೋಜರಾಜ ಸೇಮಿತ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇತರ ಮೂವರು ಆರೋಪಿಗಳಾದ ಬಾಲಕೃಷ್ಣ ಮಲ್ಯ, ನಾರಾವಿ ಶೇಖರ ಪೂಜಾರಿ, ಚಂದ್ರು ಯಾನೆ ಬಾಲಕೃಷ್ಣ ಅವರು ತಲೆಮರೆಸಿಕೊಂಡಿದ್ದರಿOದ ಅವರ ಮೇಲಿದ್ದ ಆರೋಪವನ್ನು ಪ್ರತ್ಯೇಕಿಸಿ ವಿಚಾರಣೆಗೆ ಜುಲೈ 14, 1977ಕ್ಕೆ ಮುಂದುವರಿಸಲಾಗಿತ್ತು. ಅದರಂತೆ ಜುಲೈ 18ರಂದು ವಿಚಾರಣೆ ಆರಂಭಗೊOಡಿತು.
ಸರಕಾರದ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಗಂಗಾಧರ್ ದಾಸ್ ಅವರು ನ್ಯಾಯಾಲಯದಲ್ಲಿ ಹಾಜರಿದ್ದರೆ, ಆರೋಪಿಗಳಾದ ಶ್ರೀಧರ್ ಭಟ್ ಮತ್ತು ಪುರಂದರ ಭಟ್ ಪರವಾಗಿ ನ್ಯಾಯವಾದಿ ಬಿ.ಕೆ. ರಾಮಚಂದ್ರ ರಾವ್, ಮೂರನೇ ಆರೋಪಿ ಈಶ್ವರ ಭಟ್ ಪರವಾಗಿ ಬಿ.ವಿ. ಅಚಾರ್ಯ, ನಾಲ್ಕನೇ ಮತ್ತು ಐದನೇ ಆರೋಪಿಗಳಾದ ಮಹಾಬಲ ದೇವಾಡಿಗ ಮತ್ತು ಭೋಜರಾಜ ಸೇಮಿತ ಅವರ ಪರವಾಗಿ ವೈ.ಟಿ. ಹೆಗ್ಡೆ ಅವರು ನ್ಯಾಯಾಲಯದಲ್ಲಿ ಹಾಜರಿದ್ದರು.
ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದ ಪ್ರಮುಖ ಸಾಕ್ಷಿ ನರಸಿಂಹ ಮಡಿವಾಳ. ಇಸ್ಮಾಯಿಲ್ ಅವರ ಅಂಗಡಿಯ ಪಕ್ಕದಲ್ಲೇ ಇದ್ದ ಕೆ.ಎನ್. ಲಾಂಡ್ರಿಯ ಮಾಲೀಕ. ಇಸ್ಮಾಯಿಲ್ ಅವರನ್ನು ಪೊಲೀಸ್ ಜೀಪಿನಂತೆ ಹೋಲುವ ಜೀಪಿನಲ್ಲಿ ಬಂದು ಪೊಲೀಸ್ ಸಮವಸ್ತç ದಲ್ಲಿದ್ದ ಮೆಳ್ಳೆಗಣ್ಣಿನ ಯುವಕ ಕರೆದದ್ದನ್ನು ನೋಡಿದ್ದವರು. ಇಸ್ಮಾಯಿಲ್ ಅವರ ಹತ್ಯಾ ಪ್ರಕರಣದ ತನಿಖೆಯನ್ನು ಸಿಓಡಿ ಪೊಲೀಸರು ನಡೆಸುತ್ತಿದ್ದಾಗ ಅವರೊಂದಿಗೇ ಇದ್ದು ಆರೋಪಿ ಪತ್ತೆಗೆ ಸಹಕರಿಸಿದವರು. ಬಂಟ್ವಾಳ ಪೊಲೀಸ್ ಠಾಣೆಗೆ ಇಸ್ಮಾಯಿಲ್ ಅವರನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದು ತದನಂತರ ಅವರ ಸುಳಿವು ಪತ್ತೆಯಾಗಿಲ್ಲ ಎಂದು ದೂರು ಕೊಟ್ಟವರು. ಆದ್ದರಿಂದ ಆ ಪ್ರಕರಣದ ವಿಚಾರಣೆಯಲ್ಲಿ ನರಸಿಂಹ ಮಡಿವಾಳ ಅವರ ಸಾಕ್ಷಿ ಪ್ರಮುಖವಾಗಿತ್ತು. ಅವರು ನ್ಯಾಯಾಲಯದಲ್ಲಿ ಸಾಕ್ಷö್ಯ ನುಡಿದರು. ಆ ಸಾಕ್ಷö್ಯದ ಪ್ರಮುಖ ಅಂಶಗಳು ಹೀಗೆ ಇವೆ.
ಕಳೆದ 8 ವರ್ಷಗಳಿಂದ ಮೃತ ಇಸ್ಮಾಯಿಲ್ ಅವರ ಪರಿಚಯ ತನಗಿತ್ತೆಂದು ಹೇಳಿದ ನರಸಿಂಹ ಮಡಿವಾಳರು ಇಸ್ಮಾಯಿಲ್ ಅವರಿಗೆ ಕಳೆದ 8 ವರ್ಷಗಳಿಂದ ಕಲ್ಲಡ್ಕದಲ್ಲಿ ಒಂದು ಅಂಗಡಿಯಿದ್ದು ಕಟ್ಲೇರಿ ಮತ್ತು ಸ್ಟೇಶನರಿ ವ್ಯಾಪಾರ ನಡೆಸುತ್ತಿದ್ದರೆಂದೂ, ತಾನು ಅಲ್ಲೇ ಸಮೀಪ ರಸ್ತೆಯ ಇನ್ನೊಂದು ಬದಿಯಲ್ಲಿ ಲಾಂಡ್ರಿಯೊOದನ್ನು ನಡೆಸುತ್ತಿರುವುದಾಗಿಯೂ, ಮೃತ ಇಸ್ಮಾಯಿಲ್ ಅವರು ಪತ್ರಿಕೆಗಳ ಮಾರಾಟವನ್ನೂ ನಡೆಸುತ್ತಿದ್ದರೆಂದೂ ಕೋರ್ಟಿನಲ್ಲಿ ಹೇಳಿದ್ದಾರೆ.
ತಾ. 4-9-76ರಂದು ರಾತ್ರಿ ಸುಮಾರು 10.30 ಗಂಟೆಯ ಸಮಯ, ಸದಾನಂದ ಪೈ ಎಂಬವರ ಮನೆಯಲ್ಲಿ ಭಜನೆಯಲ್ಲಿ ಭಾವಹಿಸಿ ಅದು ಮುಗಿದ ನಂತರ ಇಸ್ಮಾಯಿಲ್ ಅವರ ಅಂಗಡಿಗೆ ನಾನು ಹೋದೆ. ನಾನು ರಾತ್ರಿ 10.30 ಗಂಟೆಗೆ ಅವರ ಅಂಗಡಿಗೆ ಹೋದಾಗ ಇಸ್ಮಾಯಿಲ್ ಅವರು ಅಂಗಡಿಯೊಳಗೆ ಕಂಡಿದ್ದರು. ನಾನೂ ಅವರ ಅಂಗಡಿಯಲ್ಲಿ ಅವರೆದುರು ಕುಳಿತುಕೊಂಡೆ. ಅವರ ಹತ್ತಿರ ಸ್ವಲ್ಪ ಹೊತ್ತು ಮಾತಾಡಿದ ನಂತರ ನಾನು ಪತ್ರಿಕೆ ಓದುತ್ತಾ ಕುಳಿತೆ. ಅಂಗಡಿಯ ಒಳಗೂ, ಹೊರಗೆ ಜಗಲಿಯಲ್ಲಿಯೂ ಲೈಟ್ನ ಬೆಳಕಿತ್ತು. ಇಸ್ಮಾಯಿಲ್ ಅವರ ಅಂಗಡಿಯ ಸಮೀಪ ರಸ್ತೆಯಲ್ಲಿಯೂ ವಿದ್ಯುತ್ ಬೆಳಕು ಇತ್ತು. ನಾನು ಪತ್ರಿಕೆ ಓದುತ್ತಿದ್ದಾಗ ಮೃತ ಇಸ್ಮಾಯಿಲ್ ಅವರು ಅಂಗಡಿ ಲೆಕ್ಕಗಳನ್ನು ಬರೆಯುತ್ತಿದ್ದರು. ಎಂದು ನರಸಿಂಹ ಮಡಿವಾಳ ವಿವರಿಸಿದರು.
ಸ್ವಲ್ಪ ಹೊತ್ತಿನ ಬಳಿಕ ಪುತ್ತೂರು ಕಡೆಯಿಂದ ಒಂದು ಜೀಪು ಬಂದು ಇಸ್ಮಾಯಿಲ್ ಅವರ ಅಂಗಡಿಯೆದುರು ನಿಂತಿತು. ಆ ಜೀಪಿನಿಂದ ಇಬ್ಬರು ಕಾನ್ಸ್ಟೇಬಲ್ಗಳು ಕೆಳಗಿಳಿದು ಅವರಲ್ಲೊಬ್ಬರು ಇಸ್ಮಾಯಿಲ್ ಅವರ ಅಂಗಡಿಯ ಸಮೀಪ ಬಂದರು. ಇನ್ನೊಬ್ಬರು ಕಾನ್ಸ್ಟೇಬಲ್ರವರು ಮಣ್ಣಿನ ರಸ್ತೆಯಲ್ಲಿ ಸ್ವಲ್ಪ ದೂರದಲ್ಲೇ ನಿಂತಿದ್ದರು. ಅವರು ಖಾಕಿ ಪ್ಯಾಂಟ್ಗಳು, ಖಾಕಿ ಶರ್ಟ್ ಗಳು ಮತ್ತು ಪೊಲೀಸ್ ಟೊಪ್ಪಿ ಧರಿಸಿದ್ದುದಲ್ಲದೆ ಅವೆ ಕೈಯಲ್ಲಿ ಲಾಠಿಗಳಿದ್ದುದರಿಂದ ಅವರು ಪೊಲೀಸ್ ಕಾನ್ಸ್ಟೇಬಲ್ಗಳೆಂದು ಹೇಳುತ್ತಿದ್ದೇನೆ. ಆಂಗಡಿಯ ಸಮೀಪಕ್ಕೆ ಬಂದ ಕಾನ್ಸ್ಟೇಬಲ್ ನನ್ನಲ್ಲಿ ಇಸ್ಮಾಯಿಲ್ ಇದ್ದಾರೆಯೇ ಎಂದು ಕೇಳಿದರು. ಇಸ್ಮಾಯಿಲ್ ಅವರು ಅಂಗಡಿಯಲ್ಲಿ ಇದ್ದಾರೆಂದು ನಾನು ಹೇಳಿದೊಡನೆ ಅವರು ಅಂಗಡಿಯ ಜಗಲಿಯ ಮೇಲೇರಿ ಒಳಗೆ ಇಣುಕಿ ಇನ್ಸ್ಪೆಕ್ಟರ್ ಅವರನ್ನು ಕರೆಯುತ್ತಿದ್ದಾರೆಂದು ಇಸ್ಮಾಯಿಲ್ ಅವರಿಗೆ ತಿಳಿಸಿದರು. ಇಸ್ಮಾಯಿಲ್ ಆಲ್ರೈಟ್ ಎಂದು ಹೇಳುವಷ್ಟರಲ್ಲಿ ಆ ಜೀಪು ಸ್ವಲ್ಪ ಮುಂದೆ ಹೋಗಿ ಅಲ್ಲಿಂದ ತಿರುಗಿ ಪುನ: ಪುತ್ತೂರು ಕಡೆಗೆ ಮುಖಮಾಡಿ ಇಸ್ಮಾಯಿಲ್ ಅವರ ಅಂಗಡಿಯ ಬದಿಯಲ್ಲಿ ನಿಂತಿತು. ಇಸ್ಮಾಯಿಲ್ ಅವರು ಅಂಗಡಿಯ ಲೆಕ್ಕ ಪುಸ್ತಕಗಳನ್ನು ಮಡಚಿಟ್ಟು, ಹಣವನ್ನು ಡ್ರಾವರಿಗೆ ಹಾಕಿ ಹೊರಟು ಹೋದರು.
ಇಸ್ಮಾಯಿಲ್ ಅವರು ಜೀಪಿನ ಮುಂದಿನ ಬಾಗಿಲಿನ ಬಳಿ ಹೋಗಿ ಜೀಪಿನ ಒಳಗಿದ್ದವರೊಡನೆ ಮಾತನಾಡಲಾರಂಭಿಸಿದರು. ನಂತರ ಇಸ್ಮಾಯಿಲ್ ಅವರು ಜೀಪಿನ ಮುಂಬಾಗದ ಸೀಟಿನಲ್ಲಿ ಕುಳಿತರು. ಜೀಪು ಹೊರಡುತ್ತಿದ್ದಂತೆಯೇ ತುಳುವಿನಲ್ಲಿ ತಾನು 5 ನಿಮಿಷಗಳೊಳಗೆ ಬರುವುದಾಗಿ ಹೇಳಿದರು. ಜೀಪು ಪುತ್ತೂರು ಕಡೆಗೆ ಹೋಯಿತು ಎಂದು ನರಸಿಂಹ ಮಡಿವಾಳರು ವಿವರಿಸಿದರು. ಜೀಪಿನಿಂದ ಕೆಳಗಿಳಿದಿದ್ದ ಆ ಇಬ್ಬರು ಕಾನ್ಸ್ಟೇಬಲ್ಗಳೂ ಅದೇ ಜೀಪಿನ ಹಿಂಭಾಗದಲ್ಲೇರಿ ಜೀಪಿನಲ್ಲಿ ಕುಳಿತು ತೆರಳಿದ್ದರೆಂದೂ ಅವರು ತಿಳಿಸಿದರು.
‘ಪೊಲೀಸ್’ ಎಂಬ ಬೋರ್ಡ್ ತೂಗಾಡುತ್ತಿತ್ತೆಂದೂ ಆ ಜೀಪು ಆ ಸ್ಥಳದಿಂದ ರಾತ್ರಿ ಸುಮಾರು 11 ಗಂಟೆಗೆ ಹೊರಟಿತೆಂದೂ ಮಡಿವಾಳರು ತಿಳಿಸಿದರು. ರಾತ್ರಿ ಗಂಟೆ 1 ಆದರೂ ಬರಲಿಲ್ಲ ಅನಂತರ ಇಸ್ಮಾಯಿಲ್ ಅವರು ಬಾರದಿದ್ದುದರಿಂದ ಸುಮಾರು 12.30 ಅಥವಾ 1 ಗಂಟೆ ರಾತ್ರಿಯ ತನಕ ಇಸ್ಮಾಯಿಲ್ ಅವರು ಬರಬಹುದು ಎಂಬ ನಿರೀಕ್ಷಯಿಂದ ಅಂಗಡಿ ಜಗಲಿಯಲ್ಲಿ ತಾನು ಕಾಯುತ್ತಾ ಕುಳಿತಿದ್ದುದಾಗಿ ಹೇಳಿದ ಅವರು ಆ ರಾತ್ರಿ ಅಷ್ಟರಲ್ಲಿ ಇಸ್ಮಾಯಿಲ್ ಅವರ ಅಂಗಡಿಗೆ ಪದ್ಮನಾಭ ರೈ ಎಂಬವರು ಬಂದು ತಮ್ಮ ನೆರೆಕರೆಯವರು ಮೃತರಾದ ವಿಚಾರವನ್ನು ಮಂಗಳೂರಿನವರೊಬ್ಬರಿಗೆ ತಿಳಿಸಲು ಫೋನು ಮಾಡಬೇಕಾಗಿದೆ ಎಂದು ತಿಳಿಸಿದರೆಂದರು.
ಪದ್ಮನಾಭ ರೈ ಅವರು ಮಂಗಳೂರಿಗೆ ಟ್ರಂಕ್ ಕಾಲ್ ಬುಕ್ ಮಾಡಿದರು. ರೈಯವರು ಅಂಗಡಿಗೆ ಬಂದೊಡನೆ 5 ನಿಮಿಷಗಳಲ್ಲಿ ಬರುವುದಾಗಿ ಹೇಳಿಹೋದ ಇಸ್ಮಾಯಿಲ್ ಅವರು ಇನ್ನೂ ಬಾರದಿರುವ ವಿಚಾರವನ್ನು ಅವರಿಗೆ ನಾನು ಹೇಳಿದೆ. ಪದ್ಮನಾಭ ರೈ ಅವರು ಕೂಡಲೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಮ ಶೆಟ್ಟರಿಗೆ ಅವರ ಒಕ್ಕೆತ್ತೂರಿನಲ್ಲಿರುವ ಮನೆಗೆ ಟ್ರಂಕ್ ಕಾಲ್ ಮಾಡಿದರೂ ಫೋನ್ ಸರಿಯಿಲ್ಲದ್ದರಿಂದ ಅದರಲ್ಲಿ ಏನನ್ನೂ ಹೇಳಲಾಗಲಿಲ್ಲ. ನಾವು ಪುತ್ತೂರು ಮತ್ತು ಉಪ್ಪಿನಂಗಡಿ ಪೊಲೀಸ್ ಸ್ಟೇಶನ್ಗಳಿಗೆ ಟ್ರಂಕ್ ಕಾಲ್ ಮಾಡಲು ಬಯಸಿದರೂ ಫೋನ್ ಎಕ್ಸ್ಚೇಂಜ್ನವರು ಕನೆಕ್ಷನ್ ಕೊಡಲಿಲ್ಲ. ಸ್ವಲ್ಪ ಹೊತ್ತಿನ ನಂತರ ನಾನು ಮತ್ತು ಪದ್ಮನಾಭ ರೈ ಅವರು ರಾತ್ರಿ 2.30 ಗಂಟೆ ಸಮಯ ಡ್ರಾವರ್ನ ಸಮೀಪ ಇದ್ದ ಬೀಗ ಮತ್ತು ಕೈಗಳನ್ನು ತೆಗೆದು ಅಂಗಡಿಯನ್ನು ಮುಚ್ಚಿ ನಾವಿಬ್ಬರೂ ಇಸ್ಮಾಯಿಲ್ ಅವರ ಮನೆಗೆ ತೆರಳಿ ಬೀಗದ ಕೈ ಮತ್ತು ಟಾರ್ಚ್ಲೈಟನ್ನು ಇಸ್ಮಾಯಿಲ್ರವರ ಪತ್ನಿಯ ತಂದೆಯವರ ಮತ್ತು ಇಸ್ಮಾಯಿಲ್ರವರ ಪತ್ನಿಯ ಹತ್ತಿರ ಕೊಟ್ಟು ವಿಷಯವನ್ನು ತಿಳಿಸಿದೆವು ಎಂದು ಮಡಿವಾಳರು ಕೋರ್ಟಿನಲ್ಲಿ ಹೇಳಿದರು.
ತಾನು ಮತ್ತು ಪದ್ಮನಾಭ ರೈ ಅವರು ಅನಂತರ ಅಲ್ಲಿಂದ ಇಸ್ಮಾಯಿಲ್ರವರ ಅಂಗಡಿಯಿOದ ಸುಮಾರು ಒಂದು ಅಥವಾ ಒಂದೂಕಾಲು ಫರ್ಲಾಂಗ್ ದೂರದಲ್ಲಿರುವ ಸದಾನಂದ ಪೈಯವರ ಮನೆಗೆ ತೆರಳಿ ವಿಷಯವನ್ನು ತಿಳಿಸಿರುವುದಾಗಿಯೂ, ಅನಂತರ ಮೂವರೂ ಬಿ.ಎ. ಖಾದರ್ ಅವರಲ್ಲಿಗೆ ಹೋಗಿ ಅವರ ಟೆಂಪೊವನ್ನು ಕೇಳಿ ಅದರಲ್ಲಿ ತಾನು ಪದ್ಮನಾಭ ರೈ, ಸದಾನಂದ ಪೈ, ಖಾದರ್, ಚಾಲಕ ಇದಿನಬ್ಬ ಮತ್ತು ಇಬ್ರಾಹಿಂ ಇಷ್ಟು ಜನರು ಪುತ್ತೂರು ಮತ್ತು ವಿಟ್ಲ ಪೊಲೀಸ್ ಠಾಣೆಗಳಿಗೆ ತೆರಳಿ ಇಸ್ಮಾಯಿಲ್ರವರ ಕುರಿತು ವಿಚಾರಿಸಿ ಅಲ್ಲಿಗೆ ಅವರು ಬಂದಿರುವುದಿಲ್ಲವೆಂದು ತಿಳಿದೊಡನೆ ಒಕ್ಕೆತ್ತೂರಿನಲ್ಲಿರುವ ಶಿವರಾಮ ಶೆಟ್ಟರ ಮನೆಗೆ ತೆರಳಿ ವಿಷಯವನ್ನು ತಿಳಿಸಿರುವುದಾಗಿಯೂ ಅವರು ವಿವರಿಸಿದರು.
ಪೊಲೀಸರಿಗೆ ದೂರು ನಾವು ಟೆಂಪೊದಲ್ಲಿಯೂ ಶಿವರಾಮ ಶೆಟ್ಟರು ಅವರ ಕಾರಿನಲ್ಲಿಯೂ ಬಂಟ್ವಾಳ ಪೊಲೀಸ್ ಠಾಣೆಗೆ ತೆರಳಿದೆವು. ಅಲ್ಲಿಗೆ ತಲುಪುವಾಗ 5-9-76ರಂದು ಬೆಳಿಗ್ಗೆ ಸುಮಾರು 8 ಅಥವಾ 8.30 ಗಂಟೆ ಯಾಗಿಬಹುದು. ಅಲ್ಲಿ ಬಂಟ್ವಾಳ ಇನ್ಸ್ಪೆಕ್ಟರ್ ರವರಿಗೆ ನಡೆದ ವಿಚಾರವನ್ನೆಲ್ಲ ವಿವರಿಸಿದಾಗ ಬರಹ ಮೂಲಕ ದೂರು ಸಲ್ಲಿಸುವಂತರ ಸೂಚಿಸಿದರು. ಆಗ ನಮ್ಮೊಂದಿಗಿದ್ದ ಅಬ್ದುಲ್ ರಹಿಮಾನ್ ಅವರಲ್ಲಿ ದೂರೊಂದನ್ನು ಬರೆಯುವಂತೆ ಹೇಳಿದೆ. ನಾನದನ್ನು ಸಬ್ ಇನ್ಸ್ಪೆಕ್ಟರ್ ರಿಗೆ ಒಪ್ಪಿಸಿದೆ ಎಂದು ಹೇಳಿದ ನರಸಿಂಹರು ಕೋರ್ಟಿನಲ್ಲಿ ತಮ್ಮ ದೂರನ್ನು ಗುರುತಿಸಿ ಅದು ಸರಿಯಾಗಿದ್ದು ಅದರಲ್ಲಿ ತನ್ನ ಸಹಿಯಿದೆಯೆಂದರು. ಸಬ್ ಇನ್ಸ್ ಪೆಕರ್ ಅವರು ಸ್ಥಳಕ್ಕೆ ಬಂದು ಯಾದಾಸ್ತು ತಯಾರಿಸಿದ ಬಳಿಕ ತಾನು ಅವರೊಂದಿಗೆ ಇಸ್ಮಾಯಿಲ್ ಅವರನ್ನು ಹುಡುಕಲು ಹೋದುದಾಗಿ ಹೇಳಿದ ಅವರುಅಂಗಡಿಗೆ ಆ ದಿನ ಬಂದಿದ್ದ ಜೀಪು ಹಸುರು ಬಣ್ಣದಾಗಿದ್ದು ಅದನ್ನು ತಾನು ಗುರುತಿಸಬಲ್ಲೆ’ ಎಂದರು.
ಆದಿನ ಜೀಪಿನಿಂದ ಇಳಿದು ಇಸ್ಮಾಯಿಲ್ ಅವರ ಅಂಗಡಿಯ ಬಳಿಗಡ ಬಂದ ಇಬ್ಬರು ಕಾನ್ಸ್ಟೇಬಲ್ಗಳ ಚಹರೆ ವಿವರಗಳನ್ನು ನೀಡಿದ ನರಸಿಂಹ ಮಡಿವಾಳರು ಅವರನ್ನು ನಾನು ಗುರುತಿಸಬಲ್ಲೆ. ಇಸ್ಮಾಯಿಲ್ ಅವರು ಇದ್ದಾರೆಯೇ ಎಂದು ನನ್ನೊಡನೆ ಕೇಳಿದ, ಇಸ್ಮಾಯಿಲ್ರವರನ್ನು ಬರ ಹೇಳಿದ ವ್ಯಕ್ತಿ ನ್ಯಾಯಾಲಯದ ಮುಂದಿಲ್ಲ. ಅಂಗಡಿಯ ಸಮೀಪ ಮಣ್ಣಿನ ರಸ್ತೆಯಲ್ಲಿ ನಿಂತಿದ್ದ ವ್ಯಕ್ತಿ ನ್ಯಾಯಾಲಯದ ಮುಂದಿರು ಐದನೇ ಆರೋಪಿ’ ಎಂದು ಗುರುತಿಸಿದರು.
ಬೆಂಗಳೂರು ಸೆಂಟ್ರಲ್ ಜೈಲಿನಲ್ಲಿ 12-13 ಜನರ ಮಧ್ಯೆ 5 ನೇ ಆರೋಪಿಯನ್ನು ಗುರುತಿಸಿದುದನ್ನು ಕೋರ್ಟಿಗೆ ತಿಳಿಸಿದ ಅವರು ಆ ಸಂದರ್ಭದಲ್ಲಿ ಅಧಿಕಾರಿಗಳು ತಯಾರಿಸಿದ್ದ ದಾಖಲೆಗಳನ್ನು ವೀಕ್ಷಿಸಿ ಒಪ್ಪಿಗೆ ಸೂಚಿಸಿದರು. ತಾ, 9-9-76ರಂದು ಅಪರಾಹ್ನ ಇಸ್ಮಾಯಿಲ್ ಅವರ ಮೃತದೇಹವನ್ನು ಅವರ ಮನೆಯಲ್ಲಿ ಕಂಡು ಅದೇ ಇಸ್ಮಾಯಿಲ್ ಅವರ ಮೃತದೇಹವೆಂಬುದನ್ನು ತಾನು ಗುರುತಿರುವುದಾಗಿಯೂ ಅವರು ತಿಳಿಸಿದರು. ಬಟೆ ಮತ್ತು ವಾಚ್ ವ್ಯಾಪಾರ ಮೃತ ಇಸ್ಮಾಯಿಲ್ರವರ ಗೆಳೆಯ ತಾನೆಂದು ಹೇಳಿದ ಅವರು ತಾನು ಓರ್ವ ಸಕ್ರಿಯ ಆಡಳಿತ ಕಾಂಗೆಸ್ ಸದಸ್ಯನೆಂಬುದನ್ನು ತಿಳಿಸಿದರು. ಮೃತ ಇಸ್ಮಾಯಿಲ್ ಅವರು ಬಟ್ಟೆ ಮತ್ತು ವಾಚ್ಗಳ ವ್ಯವಹಾರವನ್ನು ನಡೆಸುತ್ತಿದ್ದರು. ಅವುಗಳು ಸ್ಮಗಲ್ಡ್’ ವಸ್ತುಗಳ ವ್ಯವಹಾರ ನಡೆಸುತ್ತಿದ್ದರೇ ಎಂಬುದು ನನಗೆ ತಿಳಿದಿಲ್ಲ ಎಂದು ಅವರು ವಿವರಿಸಿದರು.
3ನೇ ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಾನು ಚಿಕ್ಕವನಿದ್ದಾಗ ಇಸ್ಮಾಯಿಲ್ ಅವರು ಮೀನಿನ ವ್ಯಾಪಾರ ಮಾಡುತ್ತಿದ್ದರು. ತಮ್ಮ ವ್ಯಾಪಾರವನ್ನು ಅಭಿವೃದ್ಧಿಗೊಳಿಸಿದ ನಂತರಸ್ಮಗಲ್ಡ್’ ಬಟ್ಟೆ ಮತ್ತು ವಾಚ್ಗಳ ವ್ಯಾಪಾರ ಆರಂಭಿಸಿದರು. ಇಸ್ಮಾಯಿಲ್ ಅವರು ಜಪಾನ್ ತಯಾರಿಯ ಬಟ್ಟೆ ತುಂಡುಗಳನ್ನು ಮಾರುತ್ತಿದ್ದರು. ಈ `ಸ್ಮಗಲ್ಡ್’ ವಸ್ತುಗಳನ್ನು ಅವರು ಎಲ್ಲಿಂದ ಪಡೆಯುತ್ತಿದ್ದಾರೆಂಬುದುದ ನನಗೆ ಗೊತ್ತಿಲ್ಲ. ಶುಕ್ರವಾರಗಳಂದು ತಮ್ಮ ಅಂಗಡಿಯನ್ನು ಮುಚ್ಚಿ ಮಂಗಳೂರಿಗೆ ಹೋಗಿ ವ್ಯಾಪಾರಕ್ಕೆ ಬೇಕಾದ ವಸ್ತುಗಳನ್ನು ತರುತ್ತಿದ್ದರು’ ಎಂದು ನರಸಿಂಹ ಮಡಿವಾಳರು ಹೇಳಿ ಇಸ್ಮಾಯಿಲ್ ಅವರ ಅಣ್ಣ ಪಾಕಿಸ್ತಾನದಲ್ಲಿ ವಾಸವಾಗಿದ್ದಾರೆಂದರು.
ಪದ್ಮನಾಭ ರೈ ಸಾಕ್ಷಿ ತನ್ನ ಮನೆಯ ಸಮೀಪದಲ್ಲಿರುವ ಗೋವಿಂದ ಪ್ರಭು ಎಂಬವರು 4-9-76ರಂದು ಮಧ್ಯ ರಾತ್ರಿಯ ಸುಮಾರಿಗೆ ಮೃತಪಟ್ಟುದರಿಂದ ಈ ಸುದ್ದಿಯನ್ನು ಮಂಗಳೂರಿನಲ್ಲಿರುವ ಅವರ ಸಂಬಂಧಿಕರಿಗೆ ತಿಳಿಸಲು ತಾನು ಆ ರಾತ್ರಿ ಇಸ್ಮಾಯಿಲ್ ಅವರ ಅಂಗಡಿಗೆ ಹೋದುದಾಗಿ ತಿಳಿಸಿದ 2ನೇ ಪ್ರಾಸಿಕ್ಯೂಷನ್ ಸಾಕ್ಷಿ ಗೋಳ್ತಮಜಲಿನ ಪದ್ಮನಾಭ ರೈ ಅವರು ಆಗ ಇಸ್ಮಾಯಿಲ್ ಅವರ ಅಂಗಡಿಯಲ್ಲಿ ಕುಳಿತಿದ್ದ ನರಸಿಂಹ ಮಡಿವಾಳರವರು 5 ನಿಮಿಷಗಳಲ್ಲಿ ಬರುವುದಾಗಿ ರಾತ್ರಿ 11 ಗಂಟೆಗೆ ಪೊಲೀಸ್ ಜೀಪಿನಲ್ಲಿ ಹೋದ ಇಸ್ಮಾಯಿಲ್ ಅವರು ಇನ್ನೂ ಬಾರದಿರುವುದನ್ನು ತನಗೆ ತಿಳಿಸಿದರೆಂದರು.
ಈ ವಿಚಾರವನ್ನು ಫೋನ್ ಮೂಲಕ ಶಿವರಾಮ ಶೆಟ್ಟರಿಗೆ, ಪುತ್ತೂರು ಮತ್ತು ವಿಟ್ಲ ಸ್ಟೇಶನಿಗೆ ತಿಳಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವೆಂದೂ, ಈ ಫೋನಿನ ಪ್ರಯತ್ನ ಮುಗಿದಾಗ ಸುಮಾರು ರಾತ್ರಿ 2.30 ಅಥವಾ 3 ಗಂಟೆಯಾಗಿರಬಹುದು ಎಂದೂ ರೈ ತಿಳಿಸಿದರು.
ಅನಂತರ ತಾನು ಮತ್ತು ನರಸಿಂಹ ಮಡಿವಾಳರು ಅಂಗಡಿಗೆ ಬೀಗ ಹಾಕಿ ಬೀಗದ ಕೈಯನ್ನು ಇಸ್ಮಾಯಿಲ್ ಅವರ ಮನೆಗೆ ಕೊಟ್ಟು ಇಬ್ಬರೂ ಸದಾನಂದ ಪೈ ಯವರ ಮನೆಗೆ ಹೋದುದಾಗಿ ಹೇಳಿದ ಪದ್ಮನಾಭ ರೈಯವರು, ಅವರು ಮೂವರೂ ಬಿ,ಎ, ಖಾದರ್, ಇಬ್ರಾಹಿಂ, ಚಾಲಕ ಇದಿನಬ್ಬ ಅವರು ಒಟ್ಟಾಗಿ ಟೆಂಪೊದಲ್ಲಿ ಪುತ್ತೂರು ಮತ್ತು ವಿಟ್ಲ ಠಾಣೆಗಳಿಗೆ , ಶಿವರಾಮ ಶೆಟ್ಟರ ಮನೆಗೆ ಹೋಗಿ ಇಸ್ಮಾಯಿಲ್ ಅವರ ವಿಷಯ ವಿಚಾರಿಸಿದುದನ್ನು ವಿವರಿಸಿದರು. ತಾ. 5-9-76ರಂದು ಬಂಟ್ವಾಳ ಪೊಲೀಸ್ ಠಾಣೆಗೆ ತೆರಳಿ ಅಲ್ಲಿ ವಿಷಯ ತಿಳಿಸಿದಾಗ ಅವರು ಬರಹ ಮೂಲಕ ದೂರು ಬೇಕೆಂದು ಹೇಳಿದರೆಂದೂ, ನರಸಿಂಹ ಮಡಿವಾಳರು ಈ ದೂರನ್ನು ಸಲ್ಲಿಸಿದರೆಂದೂ ವಿವರಿಸಿದರು.
ತಾ. 9-9-76ರಂದು ನಾನು ಇಸ್ಮಾಯಿಲ್ರವರ ಮೃತ ದೇಹವನ್ನು ಕಂಡು ಅದು ಅವರದೇ ಶವವೆಂಬುದನ್ನು ಗುರುತಿಸಿದ್ದೇನೆ ಎಂದರು.
ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಮೃತ ಇಸ್ಮಾಯಿಲ್ ಅವರು ಮುಷ್ಕರಗಳನ್ನು ನಡೆಸುವವರ ವಿಚಾರದಲ್ಲಿ ಪೊಲೀಸರಿಗೆ ದೂರು ಕೊಡುತ್ತಿದ್ದರೆಂದು ಹೇಳಿದ ರೈಯವರು ತಾ 4-9-76ರಂದು ತಾನು ಇಸ್ಮಾಯಿಲ್ ಅವರ ಅಂಗಡಿಗೆ ಹೋಗಿದ್ದಾಗ ಇಸ್ಮಾಯಿಲ್ ಅವರು ತಮ್ಮ ಅಂಗಡಿಯಲ್ಲಿದ್ದುದಾಗಿಯೂ ತಿಳಿಸಿದರು.
ಮುಂದುವರಿಯುವುದು…



































