ಕಲ್ಲಡ್ಕ ಇಸ್ಮಾಯಿಲ್ ಹಂತಕರನ್ನು ಬಂಧಿಸಿದ ಸಿಓಡಿ ಪೊಲೀಸರು
ಭಾಗ-5
ಕಲ್ಲಡ್ಕ ಇಸ್ಮಾಯಿಲ್ ನಿಗೂಢ ನಾಪತ್ತೆ ಹಾಗೂ ಹತ್ಯೆ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಸಿಓಡಿ ಪೊಲೀಸರ ತಂಡ ಹಲವು ವಿಚಾರಗಳನ್ನು ಕಂಡುಕೊOಡಿತ್ತು.
ಇಸ್ಮಾಯಿಲ್ ಅವರಿಗೂ ಸ್ಥಳೀಯ ಆರೆಸ್ಸೆಸ್ ಕಾರ್ಯಕರ್ತರಿಗೂ ರಾಜಕೀಯ ಕಾರಣದಿಂದ ದ್ವೇಷ ಇರುವುದು ದೃಢಪಟ್ಟಿತ್ತು. ಇಸ್ಮಾಯಿಲ್ ಅವರ ವಿವಿಧ ವ್ಯವಹಾರಗಳ ಹಿನ್ನೆಲೆಯಲ್ಲಿ ಈ ಯೋಜಿತ ರೀತಿಯ ಹತ್ಯೆ ನಡೆದಿಲ್ಲ ಎಂಬ ನಿರ್ಧಾರಕ್ಕೆ ಸಿಓಡಿ ಪೊಲೀಸರ ತಂಡ ಬಂದಿತ್ತು. ಆದ್ದರಿಂದಲೇ ಕಲ್ಲಡ್ಕ, ವಿಟ್ಲ, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಸುಳ್ಯ ಮೊದಲಾದ ಕಡೆಗಳಲ್ಲಿ ಆರೆಸ್ಸೆಸ್ ಸಂಘಟನೆ ಬಲವಾಗಿ ಇದ್ದುದರಿಂದ ತನಿಖೆಯನ್ನು ಆ ಪ್ರದೇಶಗಳಿಗೇ ಸೀಮಿತಗೊಳಿಸಲಾಗಿತ್ತು.
ಇಸ್ಮಾಯಿಲ್ ಅವರನ್ನು ಪೊಲೀಸರ ಸಮವಸ್ತç ಧರಿಸಿ ಕರೆದುಕೊಂಡು ಹೋಗಿದ್ದಂತಹ ಮೆಳ್ಳೆಗಣ್ಣಿನ ಆರೆಸ್ಸೆಸ್ ಕಾರ್ಯಕರ್ತನನ್ನು ಪತ್ತೆ ಹಚ್ಚುವ ಕಾರ್ಯವನ್ನು ಸಿಓಡಿ ಪೊಲೀಸರ ತಂಡ ಆದ್ಯತೆಯ ಮೇರೆಗೆ ಕೈಗೊಂಡಿತ್ತು. ಆದರೆ ವಿವಿಧ ಕಾರಣಗಳಿಂದಾಗಿ ಆರೆಸ್ಸೆಸ್ನೊಂದಿಗೆ ಸಂಪರ್ಕ ಹೊಂದಿದ್ದ ಹಲವಾರು ಮಂದಿಯನ್ನು ವಿಚಾರಣೆಗೆ ಒಳಪಡಿಸಿದರೂ ಮೆಳ್ಳೆಗಣ್ಣಿನ ಕಾರ್ಯಕರ್ತ ಯಾರು ಎಂಬುದು ಸಿಓಡಿ ಪೊಲೀಸರಿಗೆ ಬಿಡಿಸಲಾರದ ಕಗ್ಗಂಟಾಗಿತ್ತು. ಈ ಸಂದರ್ಭದಲ್ಲಿಯೇ ಸಿಓಡಿ ಪೊಲೀಸರಿಗೆ ಒಂದು ಮಹತ್ವದ ಮಾಹಿತಿ ಲಭ್ಯವಾಯಿತು.
ರಾಷ್ಟ್ರದಾದ್ಯಂತ ಆರೆಸ್ಸೆಸ್ ಸಂಪರ್ಕ ಜಾಲವನ್ನು ಹೊಂದಿತ್ತು. ಈ ಸಂಘಟನೆಯನ್ನು ಕೇಂದ್ರ ಸರಕಾರ ನಿಷೇಧಿಸಿತ್ತು. ಅದರ ಪ್ರಮುಖ ಕಾರ್ಯಕರ್ತರನ್ನು ಮೀಸಾ ಕಾಯ್ದೆಯಡಿಯಲ್ಲಿ ಬಂಧಿಸಿ ಜೈಲಿಗಟ್ಟಿತ್ತು. ಆದರೂ ಈ ಸಂಘಟನೆಯ ಅಡಿಯಲ್ಲಿ ವಿವಿಧ ಹೆಸರುಗಳ ಸಂಘಟನೆಗಳು ತುರ್ತು ಪರಿಸ್ಥಿತಿಯ ವಿರುದ್ಧ ವಿವಿಧ ರೀತಿಯಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿತ್ತು. ಪೊಲೀಸರು ಈ ಸಂಘಟನೆಯಲ್ಲಿ ಗುರುತಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರೂ ಅದರ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿರಲಿಲ್ಲ. ಇಂತಹ ಸಂದರ್ಭದಲ್ಲಿ ಆರೆಸ್ಸೆಸ್ ತನ್ನ ದೈನಂದಿನ ಚಟುವಟಿಕೆಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ನಡೆಸುತ್ತಿತ್ತು. ಅಂತಹ ಚಟುವಟಿಕೆಗಳಲ್ಲಿ ಒಂದಾದ ಅದರ ಪ್ರತಿನಿಧಿ ಸಭಾ ಮೀಟಿಂಗ್ ಶಿವಮೊಗ್ಗದಲ್ಲಿ ಆಯೋಜನೆಗೊಂಡಿತ್ತು. ಆ ಜಿಲ್ಲೆಯಲ್ಲಿ ಆರೆಸ್ಸೆಸ್ ತಳಮಟ್ಟದಲ್ಲಿ ಪ್ರಬಲವಾಗಿತ್ತು. ಬಿ.ಎಸ್. ಯಡಿಯೂರಪ್ಪ, ಈಶ್ವರಪ್ಪ, ಡಿ.ಎಚ್. ಶಂಕರಮೂರ್ತಿ ಮೊದಲಾದವರು ಈ ಸಂಘಟನೆಯಲ್ಲಿ ಸಕ್ರಿಯರಾಗಿದ್ದು ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ಮೀಸಾ ಕಾಯ್ದೆಯಡಿ ಬಂಧಿತರಾಗಿದ್ದರು.
ಶಿವಮೊಗ್ಗದಲ್ಲಿ 1977 ಜನವರಿ 1ರಂದು ಆರೆಸ್ಸೆಸ್ ತನ್ನ ಕಾರ್ಯಕರ್ತರಿಗೆ ಮುಂದಿನ ಕಾರ್ಯ ಯೋಜನೆಯ ಬಗ್ಗೆ ಮಾಹಿತಿ ನೀಡಲು ಮತ್ತು ಕಾರ್ಯ ಯೋಜನೆಯನ್ನು ಸಿದ್ಧಪಡಿಸಲು ಸಭೆ ಸೇರಲು ನಿರ್ಧರಿಸಿತ್ತು. ಈ ಸಭೆಯಲ್ಲಿ ಆರೆಸ್ಸೆಸ್ನ ರಾಜ್ಯವ್ಯಾಪಿ ಕಾರ್ಯಕರ್ತರು ಭಾಗವಹಿಸಲು ನಿರ್ಧರಿಸಲಾಗಿತ್ತು. ಅದರಂತೆ ಕಾರ್ಯಕರ್ತರಿಗೆ ಸೂಚನೆಯನ್ನೂ ನೀಡಲಾಗಿತ್ತು. ಈ ಸಭೆಯನ್ನು ಯಶಸ್ವಿಗೊಳಿಸಲು ಆರೆಸ್ಸೆಸ್ನ ಪ್ರಮುಖರು ರಾಜ್ಯದಾದ್ಯಂತ ಗುಪ್ತ ಸಭೆಗಳನ್ನು ನಡೆಸಿ ವ್ಯಾಪಕ ಆಂತರಿಕ ಪ್ರಚಾರ ಮಾಡಿದ್ದರು. ಈ ವಿಚಾರ ಸಿಓಡಿ ಪೊಲೀಸರ ಗಮನಕ್ಕೆ ಬಂದಿತ್ತು. ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಈ ಸಭೆಗೆ ಆರೆಸ್ಸೆಸ್ ಕನ್ನಡ ಸಾಹಿತ್ಯ ಸಮ್ಮೇಳನ ಎಂಬ ಹೆಸರನ್ನು ಕೊಟ್ಟಿತ್ತು. ಆರೆಸ್ಸೆಸ್ನೊಂದಿಗೆ ಆಂತರಿಕವಾಗಿ ಸಂಪರ್ಕದಲ್ಲಿದ್ದOತಹ ಸಾಹಿತಿಯೊಬ್ಬರನ್ನು ಈ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಮೇಲ್ನೋಟಕ್ಕೆ ಈ ಸಮ್ಮೇಳನಕ್ಕೂ ನಿಷೇಧಿತ ಸಂಘಟನೆಯಾದ ಆರೆಸ್ಸೆಸ್ಗೂ ಯಾವುದೇ ಸಂಬOಧ ಇದ್ದಂತೆ ಗೋಚರವಾಗುತ್ತಿರಲಿಲ್ಲ. ಎಲ್ಲಾ ವ್ಯವಸ್ಥೆಗಳು ಗೌಪ್ಯವಾಗಿಯೇ ನಡೆಯುತ್ತಿದ್ದರೂ ಇದರ ಮಾಹಿತಿ ಸಿಓಡಿ ಪೊಲೀಸರ ಗಮನಕ್ಕೆ ಬಂದಿತ್ತು. ಸಿಓಡಿ ಪೊಲೀಸರ ತಂಡ ಹಲವಾರು ಮಂದಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಭಾಗವಹಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು.
ಈ ಹಿನ್ನೆಲೆಯಲ್ಲಿ ಸಿಓಡಿ ಪೊಲೀಸರ ತಂಡವು ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ನಿರ್ಧರಿಸಿತ್ತು. ವಿಚಾರವನ್ನು ಸಿಓಡಿ ಪೊಲೀಸರು ಗೌಪ್ಯವಾಗಿ ಇಟ್ಟಿದ್ದರು. ಯಾಕೆಂದರೆ ಸಿಓಡಿ ಪೊಲೀಸರ ಪ್ರತಿಯೊಂದು ನಡೆಯೂ ಸಹ ಆರೆಸ್ಸೆಸ್ ಕಾರ್ಯಕರ್ತರ ಗಮನಕ್ಕೆ ಬರುತ್ತಿತ್ತು. ಇದರಿಂದಾಗಿ ಇಸ್ಮಾಯಿಲ್ ಹತ್ಯಾ ಪ್ರಕರಣದ ತನಿಖೆಯಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಲು ಸಿಓಡಿ ಪೊಲೀಸರಿಗೆ ಸಾಧ್ಯವಾಗಿರಲಿಲ್ಲ. ಸಿಓಡಿ ಪೊಲೀಸರು ಸಾಧ್ಯವಾದಷ್ಟೂ ಸ್ಥಳೀಯ ಪೊಲೀಸರನ್ನು ಇಸ್ಮಾಯಿಲ್ ಹತ್ಯಾ ಪ್ರಕರಣದ ತನಿಖೆಯಿಂದ ದೂರ ಇಟ್ಟಿದ್ದರು. ಇದರಿಂದಾಗಿ ಸ್ಥಳೀಯ ಪೊಲೀಸರೂ ಸಹ ಕೆಲವೊಂದು ಮಾಹಿತಿಗಳನ್ನು ಸಿಓಡಿ ಪೊಲೀಸರೊಂದಿಗೆ ಹಂಚಿಕೊಳ್ಳುತ್ತಿರಲಿಲ್ಲ.
ಸಿಓಡಿ ಪೊಲೀಸರು ಹಲವಾರು ಮಾಹಿತಿಗಳನ್ನು ಕಲೆಹಾಕಿ ಶಿವಮೊಗ್ಗದಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಒಟ್ಟು ಸೇರುತ್ತಿದ್ದಾರೆ. ಅದರಲ್ಲಿ ಕಲ್ಲಡ್ಕ ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ನೇರವಾಗಿ ಭಾಗಿಯಾದಂತಹ ಆರೋಪಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂಬ ಕಾರಣಕ್ಕಾಗಿ ಇಡೀ ಸಿಓಡಿ ಪೊಲೀಸರ ತಂಡ ಶಿವಮೊಗ್ಗಕ್ಕೆ ಹೋಗಿ ಬೀಡುಬಿಟ್ಟಿತ್ತು. ಈ ಸಮ್ಮೇಳನದಲ್ಲಿ ಭಾಗವಹಿಸುವ ಬಹುತೇಕ ಮಂದಿ ಆರೆಸ್ಸೆಸ್ ಕಾರ್ಯಕರ್ತರೇ ಆಗಿದ್ದರೂ ಸಹ ಅರ್ಯಾರೂ ಆರೆಸ್ಸೆಸ್ನ ಸಮವಸ್ತçವನ್ನು ಧರಿಸುವಂತಿರಲಿಲ್ಲ. ಬದಲಾಗಿ ಸಾಮಾನ್ಯ ಧಿರಿಸುಗಳನ್ನೇ ಧರಿಸಬೇಕಿತ್ತು. ಆದ್ದರಿಂದ ಸಿಓಡಿ ಪೊಲೀಸರೂ ಸಹ ಸಾಮಾನ್ಯರಂತೆ ಧಿರಿಸುಗಳನ್ನು ಧರಿಸಿ ಆ ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಸಿಓಡಿ ಪೊಲೀಸರ ಮುಖ ಪರಿಚಯ ಬಹುತೇಕ ಮಂದಿಗೆ ಇರಲಿಲ್ಲ. ಇದು ಅವರಿಗೆ ಸಹಕಾರಿಯಾಗಿತ್ತು. ಸಮ್ಮೇಳನದಲ್ಲಿ ಭಾಗವಹಿಸಿದ್ದಂತಹ ಆರೆಸ್ಸೆಸ್ ಕಾರ್ಯಕರ್ತರಿಗೆ ಪರಸ್ಪರ ಪರಿಚಯ ಇತ್ತು. ಆದರೆ ರಾಜ್ಯ ಮಟ್ಟದಿಂದ ಕಾರ್ಯಕರ್ತರು ಬಂದಿದ್ದರಿOದ ಪರಸ್ಪರ ಪರಿಚಯ ಮಾಡಿಕೊಳ್ಳುವ ಅವಕಾಶವೂ ಇತ್ತು. ಇಂತಹ ಸಂದರ್ಭದಲ್ಲಿ ಸಿಓಡಿ ಪೊಲೀಸರೂ ಸಹ ಮಾರು ವೇಷದಲ್ಲಿ ಸಮ್ಮೇಳನದ ಸಭಾಂಗಣವನ್ನು ಆವರಿಸಿಕೊಂಡು ಆರೆಸ್ಸೆಸ್ ಕಾರ್ಯಕರ್ತರ ಪರಿಚಯ ಮಾಡಿಕೊಳ್ಳುತ್ತಿದ್ದರು. ಬಹುತೇಕ ಮಂದಿ ಕಾರ್ಯಕರ್ತರಿಗೆ ಪೊಲೀಸರ ಈ ನಿಗೂಢ ಕಾರ್ಯಾಚರಣೆ ಅರಿವಿಗೆ ಬಂದಿರಲೇ ಇಲ್ಲ.
ಆದರೆ ಆರೆಸ್ಸೆಸ್ ಪ್ರಮುಖರಿಗೆ ತಮ್ಮ ಸಂಘಟನೆಗೆ ಸೇರದಂತಹ ಹಲವು ಮುಖಗಳು ಕಾಣಿಸಿಕೊಳ್ಳತೊಡಗಿದಾಗ ಸಂಶಯಗಳು ಮೂಡಿದ್ದರೂ ಸಹ ಅದನ್ನು ಪ್ರಶ್ನಿಸುವಂತಿರಲಿಲ್ಲ. ಯಾಕೆಂದರೆ ರಾಷ್ಟ್ರ ಮಟ್ಟದಲ್ಲಿ ನಿಷೇಧಿತವಾಗಿದ್ದಂತಹ ಸಂಘಟನೆಯ ಅಡಿಯಲ್ಲಿ ಒಟ್ಟು ಸೇರಿ ವಿಚಾರ ವಿಮರ್ಶೆ ಮಾಡುವಂತಹ ಕಾರ್ಯಕ್ರಮವಾಗಿದ್ದರಿಂದ ಎಲ್ಲವನ್ನೂ ನಾಜೂಕಾಗಿ ನಿರ್ವಹಿಸಬೇಕಿತ್ತು. ಸಂಘಟನೆಯಲ್ಲಿ ಸೇರಿದವರು ಯಾರೂ ಸಹ ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಗಳಾಗದೆ ಇದ್ದುದರಿಂದ ಅವರ ಯಾವುದೇ ದಾಖಲೆಗಳು ಪೊಲೀಸರ ಬಳಿ ಇರಲಿಲ್ಲ.
ಆದ್ದರಿಂದ ಅಲ್ಲಿ ಸೇರಿದ್ದಂತಹ ಕಾರ್ಯಕರ್ತರನ್ನು ಕೂಲಂಕಷವಾಗಿ ಪ್ರಶ್ನೆ ಮಾಡುವಂತಿರಲಿಲ್ಲ. ಆ ಸಭೆಯಲ್ಲಿ ಸಿಓಡಿ ಪೊಲೀಸರು ಮಾರುವೇಷದಲ್ಲಿ ಇದ್ದಾರೆ ಎಂಬ ಮಾಹಿತಿ ಹರಡಿದರೆ ಒಟ್ಟು ಪ್ರಯತ್ನವು ವಿಫಲವಾಗಬಹುದು ಎಂಬ ಆತಂಕ ಪೊಲೀಸರಿಗೆ ಕಾಡುತ್ತಿತ್ತು. ಅವರಿಗೆ ಇದ್ದ ಉದ್ದೇಶ ಏನೆಂದರೆ ಆ ಗುಂಪಿನಲ್ಲಿ ಮೆಳ್ಳೆಗಣ್ಣಿನ ಆರೆಸ್ಸೆಸ್ ಕಾರ್ಯಕರ್ತನನ್ನು ಪತ್ತೆ ಹಚ್ಚುವುದು. ಅದಕ್ಕಾಗಿ ಅವರು ಇಡೀ ಸಮ್ಮೇಳನದ ಪರಿಸರದಲ್ಲಿ ಹದ್ದಿನ ಕಣ್ಣು ಇಟ್ಟು ಕಾಯುತ್ತಿದ್ದರು. ಎಲ್ಲಿಯೂ ಸಹ ಅತಿರೇಕದ ವರ್ತನೆಯನ್ನು ತೋರದೆ ಸಂಯಮವನ್ನು ಕಾಪಾಡಿದ್ದರು.
ತಾವು ಪೊಲೀಸರೆಂದು ತೋರ್ಪಡಿಸದೆ ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ನಿರ್ಧಾರ ಕೈಗೊಂಡಿದ್ದರು. ಇಂತಹ ಸಂದರ್ಭದಲ್ಲಿಯೇ ಸಿಓಡಿ ಇನ್ಸ್ಪೆಕ್ಟರ್ ದಕ್ಷಿಣಾ ಮೂರ್ತಿ ಅವರಿಗೆ ಆ ಸಭೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತನೊಬ್ಬನ ಮೇಲೆ ಸಂಶಯ ಬಂದಿತ್ತು. ಯಾಕೆಂದರೆ ಅವನ ಕಣ್ಣು ಮೆಳ್ಳೆಗಣ್ಣಾಗಿತ್ತು. ಆ ವ್ಯಕ್ತಿಯ ಮೇಲೆ ಗಮನವನ್ನು ಕೇಂದ್ರೀಕರಿಸಿದ ಇನ್ಸ್ಪೆಕ್ಟರ್ ದಕ್ಷಿಣಾ ಮೂರ್ತಿ ಅವರು ಇಸ್ಮಾಯಿಲ್ ಅವರನ್ನು ನಾಲ್ಕು ತಿಂಗಳ ಹಿಂದೆ ಅಂದರೆ 1976 ಸೆ. 4ರಂದು ರಾತ್ರಿ 10.30ರ ವೇಳೆಗೆ ಕರೆದುಕೊಂಡು ಹೋಗಿದ್ದ ಮೆಳ್ಳೆಗಣ್ಣಿನ ಪೊಲೀಸ್ ಪಾತ್ರಧಾರಿಯನ್ನು ಕಂಡಿದ್ದ ಕಲ್ಲಡ್ಕದ ಕೆ.ಎನ್. ಲಾಂಡ್ರಿಯ ನರಸಿಂಹ ಮಡಿವಾಳ ಅವರನ್ನು ಹತ್ತಿರಕ್ಕೆ ಕರೆಸಿಕೊಂಡಿದ್ದರು.
ನರಸಿಂಹ ಅವರು ಇಸ್ಮಾಯಿಲ್ ಕೊಲೆ ಪ್ರಕರಣವನ್ನು ಸಿಓಡಿ ಪೊಲೀಸರು ತನಿಖೆಗೆ ಕೈಗೆತ್ತಿಕೊಂಡ ದಿನದಿಂದಲೇ ಅವರೊಂದಿಗೆ ಇದ್ದರು. ಆದ್ದರಿಂದ ನರಸಿಂಹ ಅವರು ಇನ್ಸ್ ಪೆಕ್ಟರ್ ದಕ್ಷಿಣಾ ಮೂರ್ತಿ ಅವರು ಆ ಗುಂಪಿನಲ್ಲಿ ಗುರುತಿಸಿದ್ದ ಮೆಳ್ಳೆಗಣ್ಣಿನ ಕಾರ್ಯಕರ್ತನ ಗುರುತು ಪರಿಚಯ ಹಿಡಿದರೆ ಪ್ರಕರಣದ ತನಿಖೆಯಲ್ಲಿ ಸೀಮೋಲ್ಲಂಘನ ಸಾಧಿಸಿದಂತಾಗುತ್ತದೆ ಎಂದು ಭಾವಿಸಿದ್ದರು. ಇನ್ಸ್ಪೆಕ್ಟರ್ ದಕ್ಷಿಣಾ ಮೂರ್ತಿ ಅವರ ಬಳಿಗೆ ನರಸಿಂಹ ಬಂದಾಗ ಅವರು ಮೆಳ್ಳೆಗಣ್ಣಿನ ಕಾರ್ಯಕರ್ತನನ್ನು ತೋರಿಸಿದರು. ಆಗ ನರಸಿಂಹ ಆತನ ಗುರುತು ಹಿಡಿದರು. ಆತನೇ ಮಹಾಬಲ ದೇವಾಡಿಗ.
ಮಹಾಬಲ ದೇವಾಡಿಗನನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಉಪಾಯದಿಂದ ಗುಂಪಿನಿOದ ಹೊರಗೆ ಕರೆದುಕೊಂಡು ಬಂದು ಅಲ್ಲಿಂದ ನೇರವಾಗಿ ಮಂಗಳೂರಿಗೆ ತಂದರು. ಆತನನ್ನು ವಿಚಾರಣೆಗೊಳಪಡಿಸಿದಾಗ ಇಸ್ಮಾಯಿಲ್ ಹತ್ಯಾ ಪ್ರಕರಣದಲ್ಲಿ ಯರ್ಯಾರು ನೇರವಾಗಿ ಭಾಗಿಗಳಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರೆಂದರೆ ಶ್ರೀಧರ್ ಭಟ್, ಪುರಂದರ ಭಟ್, ಈಶ್ವರ ಭಟ್, ಭೋಜರಾಜ ಸೇಮಿತ. ಇವರಿಗೆ ಸಹಕರಿಸಿದವರೆಂದರೆ ಬಾಲಕೃಷ್ಣ ಮಲ್ಯ, ನಾರಾವಿ ಶೇಖರ ಪೂಜಾರಿ, ಚಂದ್ರು ಯಾನೆ ಬಾಲಕೃಷ್ಣ.
ಈ ಮಾಹಿತಿಗಳು ಲಭ್ಯವಾಗುತ್ತಿದ್ದಂತೆಯೇ ಸಿಓಡಿ ಪೊಲೀಸರು ಐವರನ್ನು ವಿವಿಧ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಿ ವಶಕ್ಕೆ ತೆಗೆದುಕೊಂಡು ಸಾಕ್ಷ್ಯಗಳನ್ನು ಸಂಗ್ರಹಿಸುವ ಕಾರ್ಯಗಳನ್ನು ನಡೆಸಿದರು. ಸಾಕ್ಷ್ಯಗಳ ಸಂಗ್ರಹ ಕಾರ್ಯ ಅಂತಿಮ ಹಂತಕ್ಕೆ ಬರುತ್ತಿದ್ದಂತೆಯೇ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆದವು.

ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಯ ವಿರುದ್ಧ ಪ್ರತಿಪಕ್ಷಗಳೆಲ್ಲ ಒಂದಾದವು. ಭೂದಾನ ಚಳುವಳಿಯ ನೇತಾರ ವಿನೋದ ಭಾವೆ ಅವರು ತುರ್ತು ಪರಿಸ್ಥಿತಿ ವಿರುದ್ಧ ಧ್ವನಿ ಎತ್ತಿದರು. ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ನೇತೃತ್ವದಲ್ಲಿ ಚಳವಳಿಗಳು ಆರಂಭವಾದವು. ಇದರಿಂದ ಕಂಗೆಟ್ಟOತಹ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿಯನ್ನು ಹಿಂತೆಗೆದುಕೊOಡು ಲೋಕಸಭೆಗೆ ಚುನಾವಣೆ ನಡೆಸಲು ನಿರ್ಧರಿಸಿದರು. ಸರಕಾರದ ತೀರ್ಮಾನದಂತೆ ಕೇಂದ್ರ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ನಿಗದಿಪಡಿಸಿತ್ತು. ಆ ಸಂದರ್ಭದಲ್ಲಿ ಮೀಸಾ ಕಾಯ್ದೆಯಡಿಯಲ್ಲಿ ವಿಚಾರಣೆ ಇಲ್ಲದೆ ಬಂಧಿತರಾಗಿದ್ದOತಹ ವಿರೋಧ ಪಕ್ಷದ ನಾಯಕರು ಮತ್ತು ಕಾರ್ಯಕರ್ತರನ್ನು ಬಿಡುಗಡೆಗೊಳಿಸಲಾಯಿತು. ಅವರನ್ನು ಮೆರವಣಿಗೆಯ ಮೂಲಕ ಸ್ವಾಗತಿಸಲಾಯಿತು.

1977ರಲ್ಲಿ ನಡೆದಂತಹ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಸ್ವತ: ಪ್ರಧಾನಿ ಇಂದಿರಾ ಗಾಂಧಿ ಅವರು ಉತ್ತರ ಪ್ರದೇಶದ ರಾಯ್ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಜನತಾ ಪಕ್ಷದ ಅಭ್ಯರ್ಥಿ ರಾಜ್ ನಾರಾಯಣ್ ವಿರುದ್ಧ ಸೋಲನ್ನು ಅನುಭವಿಸಿದರು. ಕೇಂದ್ರದಲ್ಲಿ ಜನತಾ ಪಕ್ಷದ ಸರಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆಯೇ ಬಂಟ್ವಾಳದಲ್ಲಿ ಬೀಡು ಬಿಟ್ಟಿದ್ದಂತಹ ಸಿಓಡಿ ಅಧಿಕಾರಿಗಳು ಬೆಂಗಳೂರಿಗೆ ಪಲಾಯನ ಮಾಡಿದ್ದರು.
ಕೊನೆಗೆ ಉಳಕೊಂಡಿದ್ದ ಸಿಓಡಿ ಇನ್ಸ್ಪೆಕ್ಟರ್ ಕಿಶನ್ ಪ್ರಸಾದ್ ಅವರು ಇಸ್ಮಾಯಿಲ್ ಹತ್ಯಾ ಪ್ರಕರಣದ ಆರೋಪ ಪಟ್ಟಿಯನ್ನು ಸಿದ್ಧಪಡಿಸಿದರು. ಆ ಆರೋಪ ಪಟ್ಟಿಯನ್ನು ಸಿಓಡಿ ಡಿವೈಎಸ್ಪಿ ಸಿದ್ದಲಿಂಗಪ್ಪ ಅವರು 1977 ಎಪ್ರಿಲ್ 14ರಂದು ಸಲ್ಲಿಸಿದರು. ಆರೋಪ ಪಟ್ಟಿಯಲ್ಲಿ ಮೊದಲನೇ ಆರೋಪಿಯಾಗಿ ಶ್ರೀಧರ್ ಭಟ್ ಅವರನ್ನು 14-2-77ರಂದು ಕರ್ನಂಗಡಿ ಜೆ.ಕೆ. ಎಸ್ಟೇಟ್ನಲ್ಲಿಯೂ, ಎರಡನೇ ಆರೋಪಿ ಪುರಂದರ ಭಟ್ ಅವರನ್ನು 19-2-77ರಂದು ಬೆಳಗಾಂನಲ್ಲಿಯೂ, ಮೂರನೇ ಆರೋಪಿ ಈಶ್ವರ ಭಟ್ ಅವರನ್ನು 15-3-77ರಂದು ಬೆಂಗಳೂರಿನಲ್ಲಿಯೂ, ನಾಲ್ಕನೇ ಆರೋಪಿ ಮಹಾಬಲ ದೇವಾಡಿಗರನ್ನು 27-3-77ರಂದು ಮೈಸೂರಿನಲ್ಲಿಯೂ, ಐದನೇ ಆರೋಪಿ ಭೋಜರಾಜ ಸೇಮಿತ ಅವರನ್ನು 15-3-77ರಂದು ಬೆಂಗಳೂರಿನಲ್ಲಿಯೂ ಬಂಧಿಸಲಾಗಿದ್ದು, ಇತರ ಮೂರು ಆರೋಪಿಗಳಾದ ಬಾಲಕೃಷ್ಣ ಮಲ್ಯ, ನಾರಾವಿ ಶೇಖರ ಪೂಜಾರಿ, ಚಂದ್ರು ಯಾನೆ ಬಾಲಕೃಷ್ಣ ಅವರು ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಈ ಪ್ರಕರಣವನ್ನು 1977 ಜೂನ್ 15ರಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ತದನಂತರ ಈ ಪ್ರಕರಣದ ವಿಚಾರಣೆ 1977 ಜುಲೈ 8ರಂದು ಆರಂಭಗೊOಡಿತು.
ಮುOದುವರಿಯುವುದು…































