ಕಲ್ಲಡ್ಕ ಇಸ್ಮಾಯಿಲ್ ಬೆತ್ತಲೆ ಶವ ನೈಲಾನ್ ಹಗ್ಗದಿಂದ ಸುತ್ತಿತ್ತು!
ಭಾಗ-8
ಕಲ್ಲಡ್ಕ ಇಸ್ಮಾಯಿಲ್ ಅವರು ನಾಪತ್ತೆಯಾಗಿ ಮೂರು ದಿನಗಳ ನಂತರ ನೇತ್ರಾವತಿ ನದಿಯ ಮಧ್ಯದಲ್ಲಿ ಮೃತದೇಹವೊಂದು ಕಲ್ಲಿನ ಕೊರಕಲಿನಲ್ಲಿ ಸಿಲುಕಿದೆ ಎಂದು ಮಾಹಿತಿಯೊಂದು ಕಲ್ಲಡ್ಕಕ್ಕೆ ಬಂದಿತ್ತು. ಈ ಮಾಹಿತಿಯನ್ವಯ ಮೃತದೇಹವನ್ನು ನೋಡಿ ಗುರುತಿಸಲು ಹೋದವರಲ್ಲಿ ಪ್ರಮುಖರಾಗಿದ್ದವರು ಅಬ್ದುಲ್ ಹಮೀದ್. ಇವರು ಇಸ್ಮಾಯಿಲ್ ಅವರ ತಂಗಿಯ ಗಂಡ. ಇವರ ಹೇಳಿಕೆ ಈ ಪ್ರಕರಣದ ವಿಚಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಅವರ ಹೇಳಿಕೆಯ ಪೂರ್ಣ ಪಾಠ ಹೀಗಿದೆ.
ತಾ. 22ರಂದು ಅವರ ತಂಗಿಯ ಗಂಡ ಅಬ್ದುಲ್ ಹಮೀದ್ ಅವರು ತಮ್ಮ ಹೇಳಿಕೆಯಲ್ಲಿ ಸರಪಾಡಿ ಹತ್ತಿರ ಪೆರ್ಲ ಎಂಬ ಸ್ಥಳದಲ್ಲಿ ಹೊಳೆಯಲ್ಲಿ ಕಲ್ಲಿನೆಡೆಯಲ್ಲಿ ಒಂದು ಹೆಣದ ಕಾಲು ಕಾಣುತ್ತಿದೆಯೆಂದು ಪೆರ್ಲ ಸುಲೇಮಾನ್ ಎಂಬವರು ಕಲ್ಲಡ್ಕಕ್ಕೆ ಬಂದು ತಿಳಿಸಿದ ಮೇರೆಗೆ ತಾನು ಇಬ್ರಾಹಿಂನೊoದಿಗೆ ಸ್ಕೂಟರ್ನಲ್ಲಿ ಪೆರ್ಲಕ್ಕೆ ತೆರಳಿ ಅಲ್ಲಿಂದ ಹೊಳೆಯಲ್ಲಿ ಅಬ್ದುಲ್ಲ ಎಂಬವರ ದೋಣಿಯಲ್ಲಿ ಹೆಣವಿದ್ದ ಸ್ಥಳಕ್ಕೆ ಹೋದುದಾಗಿಯೂ, ಅಲ್ಲಿ ಕಲ್ಲಿನ ಮೇಲೆ ಹೆಣವು ಬೆತ್ತಲೆಯಾಗಿ ಕವುಚಿ ಬಿದ್ದುದನ್ನು ತಾನು ನೋಡಿದುದಲ್ಲದೆ ಹೆಣದ ಗಂಟಲಿನ ಸುತ್ತಲೂ ನೈಲಾನ್ ಹಗ್ಗ ಮತ್ತು ಹುರಿ ಹಗ್ಗ ಸುತ್ತಿದ್ದುದನ್ನು ಕಂಡುದಾಗಿಯೂ ತಿಳಿಸಿದರು.
ಅದು ಇಸ್ಮಾಯಿಲ್ ಅವರ ಶವವೆಂದು ಗುರುತು ಸಿಕ್ಕಿದ ಮೇಲೆ ಅವರಿಬ್ಬರೂ ಅದೇ ದೋಣಿಯಲ್ಲಿ ಪುನ: ದಡಕ್ಕೆ ಬಂದು ಕಲ್ಲಡ್ಕಕ್ಕೆ ಮರಳಿ ಮೃತರ ಸಂಬAಧಿಕರಿಗೆ ಈ ವಿಚಾರ ತಿಳಿಸಿದುದಾಗಿ ಹೇಳಿದ ಅಬ್ದುಲ್ ಹಮೀದ್ ಅವರು, ಅನಂತರ ತಾನು ಆ ಸ್ಥಳಕ್ಕೆ ಮರಳಿ ಅದೇ ದೋಣಿಯಲ್ಲಿ ಹೊಳೆಯ ಆಚೆ ದಡಕ್ಕೆ ಹೋದಾಗ ಬಂಟ್ವಾಳ ಸಬ್ ಇನ್ಸ್ಪೆಕ್ಟರ್ ಮತ್ತು ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಕಾಣಸಿಕ್ಕಿದರೆಂದೂ, ಅವರು ಕೂಡಾ ಅದೇ ದೋಣಿಯಲ್ಲಿ ಹೆಣವಿದ್ದಲ್ಲಿಗೆ ಹೋದರೆಂದೂ ವಿವರಿಸಿದರು.
ಆ ಇಬ್ಬರು ಪೊಲೀಸ್ ಕಾನ್ಸ್ಟೇಬಲ್ಗಳು ಪೆಟ್ರೋಮ್ಯಾಕ್ಸ್ ಇರಿಸಿ ಅಲ್ಲಿ ಕಾದು ಕೂತರೆಂದೂ, ಸಬ್ ಇನ್ಸ್ಪೆಕ್ಟರ್ ಮರಳಿ ಹೋಗಿ ಸ್ವಲ್ಪ ಹೊತ್ತಿನಲ್ಲಿ ಪುತ್ತೂರು ಡಿಎಸ್ಪಿ ಪಿ. ಭಾಸ್ಕರ್ ಮತ್ತಿತರರು ಬಂದರೆoದೂ, ಪುತ್ತೂರು ಡಿಎಸ್ಪಿಯವರು ಅಲ್ಲಿಂದ ದಡಕ್ಕೆ ಮರಳಿ ಬೆಳಗಿನ ಜಾವ 5.30 ಗಂಟೆಗೆ ಅಲ್ಲಿಗೆ ಬಂದು ಶವದ ಮೇಲೆ ಪರೀಕ್ಷೆ ನಡೆಸಿದರೆಂದೂ, ಆ ಮೇಲೆ ಮರಣೊತ್ತರ ಶಸ್ತç ಪರಿಕ್ಷೆಯ ನಂತರ ಶವವನ್ನು ತಾ 9-9-76ರಂದು ಪೂರ್ವಾಹ್ನ 11 ಗಂಟೆಗೆ ತಮಗೆ ಬಿಟ್ಟುಕೊಟ್ಟರೆಂದೂ ಅಬ್ದುಲ್ ಹಮೀದ್ ಹೇಳಿದರು.
ಆಮೇಲೆ ಶವವನ್ನು ಪಾಣೆಮಂಗಳೂರಿನವರೆಗೆ ತಂದು, ಅಲ್ಲಿಂದ ಹೆಣದ ಪೆಟ್ಟಿಗೆಯಲ್ಲಿ ಶವವನ್ನು ಇರಿಸಿ ಹೊತ್ತುಕೊಂಡು ಇಸ್ಮಾಯಿಲ್ ಅವರ ಮನೆಗೆ ತಂದರೆoದೂ ತಿಳಿಸಿದ ಅವರು, ಇಸ್ಮಾಯಿಲ್ ಅವರ ಮನೆಯಲ್ಲಿ ಶವದ ಮುಖದ ಬಟ್ಟೆ ತೆಗೆದಾಗ ಇಸ್ಮಾಯಿಲ್ ಅವರ ಮಡದಿ, ತಾಯಿ ಮತ್ತಿತರರು ನೋಡಿ ಇಸ್ಮಾಯಿಲ್ ಅವರ ಹೆಣವೆಂಬುದನ್ನು ಗುರುತಿಸಿದರೆಂದೂ ಅನಂತರ ಶವ ಸಂಸ್ಕಾರ ನಡೆಯಿತೆಂದೂ ಹೇಳಿದರು.
ಕೋರ್ಟಿನಿಂದ ಆಸ್ಪತ್ರೆಗೆ
ಆದರೆ ಇಷ್ಟು ಹೇಳುತ್ತಿರುವಾಗ ಸಾಕ್ಷಿಯು ತಲೆ ತಿರುಗಿ ಬಿದ್ದು ಸ್ಮೃತಿ ತಪ್ಪಿದ ಕಾರಣ ಕೂಡಲೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಕೊಂಡು ಹೋಗಿ ಅಲ್ಲಿ ಒಳರೋಗಿಯಾಗಿ ದಾಖಲು ಮಾಡಲಾಯಿತು. ತಾ. 22ರಂದು ಸಂಜೆ ಈ ಘಟನೆ ನಡೆದಿದ್ದು ಅನಂತರ ವಿಚಾರಣೆಯನ್ನು ಮುಂದುವರಿಸಲಾಯಿತು. ಮುಂದಿನ ವಿಚಾರಣೆ ತಾ, 25ರಿಂದ ನಡೆಯಿತು.
ಆರೋಪಿಗಳ ಪರ ವಕೀಲರು ಪತ್ತೆ ಮಾಡಲ್ಪಟ್ಟ ಶವ ಮೃತ ಇಸ್ಮಾಯಿಲ್ರದ್ದಲ್ಲ. ಇದಕ್ಕೆ ನೀವೇನು ಹೇಳುತ್ತೀರಿ?’ ಎಂದು ಒಂದನೇ ಸಾಕ್ಷಿ ನರಸಿಂಹ ಮಡಿವಾಳರ ವಿಚಾರಣೆಯ ವೇಳೆ ಮರು ಸವಾಲು ಹಾಕಿದಾಗ ಇಸ್ಮಾಯಿಲ್ರವರ ಮನೆಗೆ ತಾ 9-9-76ರಂದು ತಂದ ಶವ ಮೃತ ಇಸ್ಮಾಯಿಲ್ ಅವರದ್ದಲ್ಲವೆಂದು ಹೇಳುವುದುÀ ಸರಿಯಲ್ಲ. ನಾನು ಇಸ್ಮಾಯಿಲ್ ಅವರ ಶವವೇ ಎಂದು ಗುರುತಿಸಿದ್ದೇನೆ’ ಎಂದು ಉತ್ತರ ನೀಡಿದರು.
2ನೇ ಸಾಕ್ಷಿ ಪದ್ಮನಾಭ ರೈಯವರೂ ಆರೋಪಿ ಪರ ವಕೀಲರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಇಸ್ಮಾಯಿಲ್ ಅವರ ಶವವನ್ನು ನಾನು ಗುರುತಿಸಿದ್ದೇನೆ. ಗುರುತಿಸಲಾರದಷ್ಟು ಮುಖ ವಿಕಾರವಾಗಿರಲಿಲ್ಲ' ಎಂದು ಹೇಳಿದರು. ಸದಾನಂದ ಪೈ ಸಾಕ್ಷಿ ಮೃತ ಇಸ್ಮಾಯಿಲ್ ಅವರಿಗೂ ತಮಗೂ ಇದ್ದ ಪರಿಚಯ, ಸಂಬoಧವನ್ನು ವಿವರಿಸಿದ ಮೂರನೇ ಸಾಕ್ಷಿ ಸದಾನಂದ ಪೈ ಅವರು ತಾವು ಮತ್ತು ಇಸ್ಮಾಯಿಲ್ರವರು ಅಡಳಿತ ಕಾಂಗ್ರೆಸ್ನ ಸಕ್ರಿಯ ಸದಸ್ಯರಾಗಿ ಕಾರ್ಯ ನಿರ್ವಹಿಸುತ್ತಿದ್ದುದನ್ನು ತಿಳಿಸಿದರು.
1974ರಲ್ಲಿ ಸಚಿವ ರಂಗನಾಥ ಅವರ ಕಾರಿಗೆ ಕಲ್ಲು ಹೊಡೆದ ಪ್ರಕರಣದಲ್ಲಿ ತಾವು ಮತ್ತು ಇಸ್ಮಾಯಿಲ್ ಇಬ್ಬರೂ ಪ್ರಾಸಿಕ್ಯೂಷನ್ ಪರ ಸಾಕ್ಷಿ ಹೇಳಿದುದಾಗಿ ಪೈಯವರು ತಿಳಿಸಿ ಆ ಪ್ರದರ್ಶನ ಪ್ರಭಾಕರ ಭಟ್ಟರ ಮುಖಂಡತ್ವದಲ್ಲಿ ನಡೆದಿತ್ತೆಂದರು. 1971ರ ಪಾರ್ಲಿಮೆಂಟ್ ಚುನಾವಣೆಯ ಸಂದರ್ಭದಲ್ಲಿ ಪ್ರಬಾಕರ ಭಟ್ ಮತ್ತು ಇಸ್ಮಾಯಿಲ್ರ ನಡುವೆ ನಡೆದಿದ್ದ ಘರ್ಷಣೆಯನ್ನು ವಿವರಿಸಿದ ಸದಾನಂದ ಪೈಯವರು 1975ರಲ್ಲಿ ಕಾಂಗ್ರೆಸ್ ಸರಕಾರ ತುರ್ತು ಪರಿಸ್ಥಿತಿ ಜಾರಿ ಮಾಡಿದ ಬಳಿಕ ತಾವಿಬ್ಬರೂ ಸರಕಾರಕ್ಕೆ ವಿರೋಧವಾದ ಚಟುವಟಿಕೆಗಳ ಕುರಿತು ಪೊಲೀಸರಿಗೆ ವರ್ತಮಾನ ಕೊಡುತ್ತಿದ್ದುದು ನಿಜವೆಂದರು. 1976ರ ಜೂನ್ ಮಧ್ಯದಲ್ಲಿ ಮೃತ ಇಸ್ಮಾಯಿಲ್ ಅವರಿಗೆ ಒಂದು ಅನಾಮಧೇಯ ಬೆದರಿಕೆಯ ಇನ್ಲ್ಯಾಂಡ್ ಲೆಟರ್ ಬಂದಿದ್ದನ್ನು ಅವರು ತಮಗೆ ತೋರಿಸಿದ್ದಾರೆಂದು ಹೇಳಿದ ಪೈಯವರು ಆ ಪತ್ರದಲ್ಲಿ ಶ್ರೀಯುತ ಇಸ್ಮಾಯಿಲ್ ಅವರಿಗೆ, ನಿಮಗೆ ಈ ಮೂಲಕ ತಿಳಿಯಪಡಿಸುವುದೇನೆಂದರೆ ನೀವು ಪ್ರಭಾಕರ ಭಟ್ಟರನ್ನು ಮೀಸಾದಲ್ಲಿ ಕಳುಹಿಸಿರುತ್ತೀರಿ. ಇನ್ನು ಮುಂದೆಯೂ ಜನಸಂಘ ಮತ್ತು ಆರೆಸ್ಸೆಸ್ ಕಾರ್ಯಕರ್ತರಿಗೆ ಇದೇ ರೀತಿ ಉಪದ್ರವ ಕೊಟ್ಟಲ್ಲಿ ನೀವು ಜೀವಂತವಾಗಿ ಉಳಿಯಲಾರಿರಿ.
ನಮ್ಮ ಸಂಘಟನೆಯು ಹಳ್ಳಿಯಿಂದ ದಿಲ್ಲಿಯವರೆಗೆ ಇದೆ. ಇದು ನಿಮಗೆ ಕಡೆಯ ಪತ್ರ. ಜಾಗ್ರತೆ! ಜಾಗ್ರತೆ! ಸ್ವ. ಸು’ ಎಂದು ಬರೆಯಲಾಗಿತ್ತೆಂದು ವಿವರಿಸಿದರು.
ಮುಂದುವರಿಯುವುದು…




































