ಕರಾವಳಿ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ
RB NEWS
Bureau Report
ಕರಾವಳಿ ಸಮಸ್ಯೆಗಳ ಕುರಿತು ಸರ್ಕಾರದ ವಿರುದ್ಧ ಸುನಿಲ್ ಕುಮಾರ್ ವಾಗ್ದಾಳಿ
ಮಹಾಮಸ್ತಕಾಭಿಷೇಕದಂತಹ ಧಾರ್ಮಿಕ ಕಾರ್ಯಕ್ರಮಕ್ಕೆ ಸರ್ಕಾರ ಕೇವಲ ಬಾಯಿಮಾತಿನ ಸಹಕಾರ
ಕಾರ್ಕಳ: ಕರಾವಳಿ ಭಾಗದ ಪ್ರಮುಖ ಸಮಸ್ಯೆಗಳಾದ ಮರಳು, ಕೆಂಪುಕಲ್ಲು ಮತ್ತು ಮಣ್ಣು ಸಾಗಾಟದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ರಾಜ್ಯ ಸರ್ಕಾರದ ಧೋರಣೆಯಿಂದ ಸಾವಿರಾರು ಕಾರ್ಮಿಕರು ಹಾಗೂ ಉದ್ಯಮಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂದು ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಆರೋಪಿಸಿದರು. ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು. ಕರಾವಳಿಯ ಜೀವನಾಡಿಯಾಗಿರುವ ಮರಳುಗಾರಿಕೆ ಮತ್ತು ಕೆಂಪುಕಲ್ಲು ಸಾಗಾಟ ಸ್ಥಗಿತಗೊಂಡ ಪರಿಣಾಮ ಲಾರಿ ಮಾಲೀಕರು, ಚಾಲಕರು, ಕೂಲಿ ಕಾರ್ಮಿಕರು ಹಾಗೂ ಹೋಟೆಲ್ ಉದ್ಯಮಿಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು. ಈ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದರೂ ಸ್ಪಷ್ಟ ಪರಿಹಾರ ಸಿಗದೇ ಮೌನ ವಹಿಸಿರುವುದು ಕರಾವಳಿ ಜನರ ಬದುಕಿನ ಬಗ್ಗೆ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಕರಾವಳಿಯ ಎರಡು ಜಿಲ್ಲೆಗಳಲ್ಲಿ ಬಿಜೆಪಿ ಶಾಸಕರು ಇರುವುದರಿಂದ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಬಿಜೆಪಿ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಅನುದಾನ ನೀಡಬಾರದು ಎಂಬ ದ್ವೇಷದ ರಾಜಕಾರಣದಿಂದ ಕಾರ್ಕಳ ಸೇರಿದಂತೆ ಕರಾವಳಿ ಭಾಗದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ದೂರಿದರು. ಸಾಂಪ್ರದಾಯಿಕ ಕಲೆಗಳಾದ ಕಂಬಳ ಮತ್ತು ಯಕ್ಷಗಾನಗಳಿಗೆ ಸರ್ಕಾರ ಅಡ್ಡಿಪಡಿಸಿದೆ. ಮುಖ್ಯಮಂತ್ರಿಗಳು ಕರಾವಳಿಯಲ್ಲಿ ಯಾವುದೇ ಹೊಸ ಯೋಜನೆಗಳಿಗೆ ಚಾಲನೆ ನೀಡಿಲ್ಲ ಎಂದು ಅವರು ಆರೋಪಿಸಿದರು. ಅಂಬೇಡ್ಕರ್ ಭವನದಂತಹ ದಲಿತಪರ ಯೋಜನೆಗಳಿಗೂ ಅನುದಾನ ನೀಡದೇ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಿದರು. ಮಹಾಮಸ್ತಕಾಭಿಷೇಕದಂತಹ ಧಾರ್ಮಿಕ ಕಾರ್ಯಕ್ರಮಕ್ಕೂ ಸರ್ಕಾರ ಕೇವಲ ಬಾಯಿಮಾತಿನ ಸಹಕಾರ ನೀಡಿದೆ ಎಂದು ಟೀಕಿಸಿದ ಅವರು, ಜನರ ಮೂಲಭೂತ ಸಮಸ್ಯೆಗಳ ಬಗ್ಗೆ ಮಾತನಾಡುವ ಬದಲು ಸರ್ಕಾರ ಗ್ಯಾರಂಟಿ ಯೋಜನೆಗಳ ಪ್ರಚಾರದಲ್ಲೇ ತೊಡಗಿದೆ ಎಂದು ಕಿಡಿಕಾರಿದರು. ಮರಳು ಲಭ್ಯವಿಲ್ಲ, ಕಲ್ಲು ಸಾಗಾಟಕ್ಕೆ ಅವಕಾಶವಿಲ್ಲ, ಅಭಿವೃದ್ಧಿಗೆ ಅನುದಾನವಿಲ್ಲ. ಇದು ಕರಾವಳಿ ಭಾಗಕ್ಕೆ ಸರ್ಕಾರ ನೀಡಿದ ಕೊಡುಗೆಯೇ ಅಥವಾ ದ್ವೇಷದ ರಾಜಕಾರಣದ ಫಲವೇ ಎಂದು ಪ್ರಶ್ನಿಸಿದರು. ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಕರಾವಳಿಯ ಶಾಸಕರು ಅವಿಭಜಿತ ಜಿಲ್ಲೆಗೆ ಆಗಿರುವ ಅನ್ಯಾಯದ ವಿರುದ್ಧ ಸದನದೊಳಗೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ಸಭೆಯಲ್ಲಿ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ರಾಜ್ಯ ಯುವಮೋರ್ಚಾ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಕಾರ್ಕಳ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ಮತ್ತು ಸುರೇಶ್ ಶೆಟ್ಟಿ ಸೇರಿದಂತೆ ಹಲವು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮುಖಂಡರು ಉಪಸ್ಥಿತರಿದ್ದರು.