ಕರಾವಳಿಯ ಅಭಿವೃದ್ಧಿ ಮತ್ತು ಜನರ ಬದುಕಿನಲ್ಲಿ ಚಿನ್ನ ಬಿತ್ತಬೇಕೆನ್ನುವ ಶಾಸಕನ ಮಾದರಿ ಬೇಡಿಕೆ

ಯಾವುದೇ ಒಂದು ವಿಚಾರವನ್ನು ಗಮನಿಸಿ,ಅದನ್ನು ಸರಿಯಾಗಿ ಹದಗೊಳಿಸಿ ಅದರಲ್ಲಿ ಸ್ಪಷ್ಟತೆಯನ್ನು ದಾಖಲಿಸಿ ಮಾತನ್ನಾಡುವವರು ಕಾರ್ಕಳದ ಶಾಸಕ ವಿ. ಸುನಿಲ್ ಕುಮಾರ್ ಅವರು.
ಕರಾವಳಿ ಅಭಿವೃದ್ಧಿಯ ಕುರಿತಾಗಿ ಅವರು ಸದನದಲ್ಲಿ ಮಂಡಿಸಿರುವ ವಿಷಯಗಳು ಪುಟಕ್ಕಿರಿಸಿದ್ದ ಕೆಲವೊಂದು ಚಿಂತನೆಗಳು ಅವರಲ್ಲಿ ಇವೆ ಅನ್ನುವುದನ್ನು ತೋರಿಸಿಕೊಡುತ್ತದೆ.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದಂತಹ ಉಂಡು ತಿಂದು ಕರವಸ್ತ್ರಕ್ಕೆ ಕೈ -ಮೂತಿ ಒರೆಸುವ ಸಂಸ್ಥೆಯಿದ್ದರೂ ಸುನಿಲ್ ಕುಮಾರ್ ಚಿಂತನೆಯ ಮನವಿಗಳು ಮಾತ್ರ ಎಲ್ಲ ರೀತಿಯಿಂದಲೂ ಮಹತ್ವಪಡೆದುಕೊಳ್ಳುತ್ತದೆ.
ಕರಾವಳಿಯ ಶಾಸಕರುಗಳಲ್ಲಿ ಇಬ್ಬರು ಕಾಂಗ್ರೆಸ್ಸಿಗರಿದ್ದಾರೆ,ಬಾಕಿಯವರದ್ದು ಭಾರತೀಯ ಜನತಾ ಪಕ್ಷವಾಗಿದೆ. ಶಾಸಕರುಗಳು ತಮ್ಮ ಮನವಿಯಲ್ಲಿ ಸದನಕ್ಕೆ ಮಂಡಿಸಿದ್ದ ಅಭಿಪ್ರಾಯವನ್ನು ಮೂರು ಜಿಲ್ಲೆಗಳ ಸಮಸ್ತ ನಾಗರಿಕರು ಒಪ್ಪಿಕೊಂಡು ಹರ್ಷಪಡಲೇಬೇಕು ಮತ್ತು ಸರಕಾರಕ್ಕೆ ಒತ್ತಾಯ ಹಾಕಬೇಕಾಗುತ್ತದೆ.
ಆ ವಿಚಾರ ಮಂಡನೆಯನ್ನು #ಮಾದರಿ ಎಂದು ಯಾಕೆ ಬರೆಯಬೇಕಾಯಿತೆಂದರೆ, ರಾಜ್ಯದ ವಿಧಾನಸಭಾ ಅಧಿವೇಶನದಲ್ಲಿ ನಮ್ಮ ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಮತ್ತು ಜನಪರ ಕಾನೂನುಗಳ ಅಗತ್ಯದ ಬಗ್ಯೆ ಆ ರೀತಿಯಾದ ಸಮಗ್ರ ಮಾಹಿತಿಯನ್ನು ಸಮಯದ ಮಿತಿಯೊಳಗೆ ಸಂಕ್ಷಿಪ್ತವಾಗಿಯಾದರೂ ಮಂಡಿಸಿರುವದು , ಅಗತ್ಯ ಈಡೇರಿಸಬೇಕಾದ ಮನವಿ ಎಂದು ಮಂಡಿಸಿರುವುದು ಬಹುಶಃ ಇದುವೇ ಪ್ರಥಮವಾಗಿದೆ.
ಕರಾವಳಿ ಜಿಲ್ಲೆಗಳಲ್ಲಿ ಬಹಶಃ ವಿ. ಸುನಿಲ್ ಕುಮಾರ್ ಅವರು ಹಿರಿಯ ಶಾಸಕರಾಗಿರುತ್ತಾರೆ,ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿರುವುದು. ಅದೇನೆ ಇರಲಿ ಅವರ ಅಭಿಪ್ರಾಯಗಳು ಸಹಿತ ಅಭಿವೃದ್ಧಿಗೆ ಪೂರಕವಾಗಬಲ್ಲ ಇನ್ನು ಕೆಲವು ಬೇಡಿಕೆಗಳನ್ನು ಕಾಂಗ್ರೆಸ್ಸಿನ ಶಾಸಕ ಅಶೋಕ ರೈ ಸಹಿತ ಎಲ್ಲ ಶಾಸಕರು ಸಭಾಧ್ಯಕ್ಷರಲ್ಲಿ ಸಮಯ ಪಡೆದುಕೊಂಡು ಅವರವರ ಕ್ಷೇತ್ರದೊಳಗಿನದೆನ್ನುವಂತೆ ಸಭಾಧ್ಯಕ್ಷರ ಮೂಲಕ ಸರಕಾರದ ಗಮನ ಸೆಳೆದಿರುವುದು ಶ್ಲಾಘನೀಯವಾಗಿದೆ.
ಶಾಸಕ ವಿ. ಸುನಿಲ್ ಕುಮಾರ್ ಮನವಿ ಮಾಡಿದ್ದ ಅಗತ್ಯ ಸಂಗತಿಗಳಲ್ಲಿ ಸರಕಾರವು ತಕ್ಷಣ ಮಾಡಬೇಕಾದ ಅಗತ್ಯ ಕೆಲಸವೇನೆಂದರೆ 9/11 ಏಕವಿನ್ಯಾಸ ದಾಖಲೆ ತಯಾರಿ ವಿಚಾರ. ಅದು ಬಡವರ್ಗದವರನ್ನು ಅಕ್ಷರಶಃ ಶೋಷಣೆ ಮಾಡಿದೆ. ಮನೆ ಕಟ್ಟುವುದಕ್ಕೆ,ಮನೆ ಕಟ್ಟಲು ಸರಕಾರದ ನೆರವು ಪಡೆಯುವುದಕ್ಕೆ ಎಲ್ಲ ರೀತಿಯಿಂದಲೂ ಜಟಿಲ ಸಮಸ್ಯೆಯಾಗಿದೆ.
ಶಾಸಕ ವಿ. ಸುನಿಲ್ ಕುಮಾರ್ ಮಾಡಿದ್ದ ಮನವಿಯ ಮತ್ತೊಂದು ಪ್ರಮುಖ ಸಂಗತಿಯನ್ನು ಸರಕಾರ ಗಮನಿಸಬೇಕೇನೆಂದರೆ ಅದು, ಕಾಡಿನ ಕಿರಿಕಿರಿ. ಅಷ್ಟು ಇಷ್ಟಾದರೂ ಕಾಡನ್ನು ಕಾಯುವುದೂ ನಾಗರಿಕರು,ಅದಕ್ಕೆ ಪ್ರತಿಫಲವಾಗಿಯೋ ಎಂಬಂತೆ ಕಿರಿಕ್ ಅನುಭವಿಸುವುದೂ ಅದೇ ನಾಗರಿಕರು.!
ಕುದುರೆಮುಖ ಅಭಯಾರಣ್ಯ,ಸೋಮೇಶ್ವರ ಅಭಯಾರಣ್ಯ ಮತ್ತು ಕೊಲ್ಲೂರು ಅಭಯಾರಣ್ಯಕ್ಕೆ ಸಂಬಂಧಿಸಿದಂತೆ ಮಾಡಿರುವ ಪರಿಸರ ಸೂಕ್ಷ್ಮ ವಲಯದಲ್ಲಿನ ಕನಿಷ್ಟ ದೂರ ಅಳತೆಯು ಮೂರರಿಂದ ಒಂಭತ್ತು ಕಿ. ಮೀ. ತನಕ ಮಾಡಿರುವುದರಿಂದ ನಾಗರಿಕರಿಗೆ ಯಾವುದೇ ವಾಣಿಜ್ಯ ಮತ್ತು ವಾಸಿಸತಕ್ಕ ಕಟ್ಟಡ ನಿವೇಶನ ರಚನೆಗೆ ಭಾರೀ ಅಡಚಣೆ ತಂದಿರುತ್ತದೆ. ಆ ಬಗ್ಯೆ ರಾಜ್ಯ ಸರಕಾರವು ಸಮಿತಿಯನ್ನು ರಚಿಸಿ ಕೇಂದ್ರಕ್ಕೆ ಮನವಿ ಮಾಡಿ ಬದಲಾವಣೆಗೆ ಅವಕಾಶ ತಂದುಕೊಳ್ಳಬೇಕು.
ಇಕೋಸೆನ್ಸ್ಟಿನ್ ಝೋನ್( ಪರಿಸರ ಸೂಕ್ಷ್ಮ ವಲಯ)ದ ದೂರ ಮಿತಿಯ ಹೆಚ್ಚಳದಿಂದಾಗಿ ಉದಾಹರಣೆಗೆ , ಕಾರ್ಕಳ ತಾಲೂಕಿನ ಬಜಗೋಳಿ ಪೇಟೆಯಲ್ಲಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೂ ತೊಂದರೆಯಾಗಿದೆ. ಮುದ್ರಾಡಿಯಲ್ಲೂ ಅದುವೇ ಸಮಸ್ಯೆ. ಅದೇ ಕಾರಣದಿಂದಾಗಿ ಪ್ರತಿಯೊಂದು ಕಟ್ಟಡ ನಿರ್ಮಾಣಗಳಿಗೆ ಗ್ರಾಮ ಪಂಚಾಯತುವಿನಿಂದ ಅನುಮತಿ ದೊರಕುತ್ತಿಲ್ಲ. ಬ್ಯಾಂಕ್ ನೆರವಿನ ಸಾಲ ಪಡೆಯಲಾಗುತ್ತಿಲ್ಲ. ಆ ಮನವಿಯನ್ನು ಸರಕಾರವು ಅಗತ್ಯವಾಗಿ ಸ್ವೀಕರಿಸುವುದರೊಂದಿಗೆ ಒಳನಾಡಿನ ನಾಗರಿಕರು ಪಡುತ್ತಿರುವ ಬವಣೆಯನ್ನು ನೀಗಿಸಬೇಕಾಗಿದೆ.
ಕರಾವಳಿ ಜಿಲ್ಲೆಗಳನ್ನು ಅಭಿವೃದ್ಧಿಗೊಳಿಸುವಾಗ ಭೌಗೋಳಿಕವಾಗಿ ಅಧ್ಯಯನ ಮಾಡುವುದು ಅಗತ್ಯ ಎಂದು ಮಾಡಿರುವ ಮನವಿ ಬಹಳವಾಗಿ ಮೆಚ್ಚಲೇಬೇಕಾಗಿರುವುದು. ಸರಕಾರಿ ಕಟ್ಟಡ ರಚನೆ ನಿರ್ಮಾಣದಲ್ಲಿ ಅನುಸರಿಸುವ ಏಕರೂಪದ ವಿಜ್ಞಾನ,ವಿನ್ಯಾಸಗಳು ಸರಿಯಲ್ಲ. ಇಲ್ಲಿಯ ಪರಿಸರ ಮತ್ತು ಹವಾಮಾನಕ್ಕೆ ಅನುಗುಣವಾಗುವಂತೆ, ಗಾಳಿ ಬೆಳಕುಮಳೆ ಗಾಳಿಯನ್ನು ಸಹಿಸುವುದಕ್ಕೆ ಸಾಧ್ಯವಾಗುವ ರೀತಿಯ ಕಟ್ಟಡ ನಿರ್ಮಾಣ ಮತ್ತು ವಿನ್ಯಾಸ ಮಾಡಬೇಕೆನ್ನುವುದು ತುಂಬಾ ಯೋಗ್ಯವಾದ ಮನವಿಯಾಗಿದೆ. ಕರಾವಳಿ ಭಾಗದಲ್ಲಿನ ಸರಕಾರಿ ಕಟ್ಟಡಗಳ ವಿನ್ಯಾಸ ಮತ್ತು ರಚನೆ ಕಾಣುವಾಗಲೆ ಬೇಸರ ತರುತ್ತದೆ ಮತ್ತು ಅದರ ಸರಿಯಾದ ಆಯುಷ್ಯ ಗಣನೆಗೆ ಬರುತ್ತದೆ! ರಾಜ್ಯಕ್ಕೇ ಅನ್ವಯಿಸುವ ಏಕ ಪದ್ಧತಿಯನ್ನು ಸರಕಾರ ಕೈಬಿಡಬೇಕಾದುದು ಸರಿಯಾದ ಬೇಡಿಕೆ.
ಜೊತೆಗೆ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಆಚರಣೆಗಳಿಗೆ ಸರಕಾರದ ನೆರವು,ಒಲವು ತೋರಿಸಬೇಕಾದುದು.
ಮಂಗಳೂರು,ಮಲ್ಪೆ ಹಾಗೂ ಬೇಲಿಕೇರಿ ಬಂದರುಗಳನ್ನು ಸಮರ್ಪಕವಾಗಿ ಬಳಿಸಿಕೊಳ್ಳದಿರುವ ಸರಕಾರದ ಹೊಂದಾಣಿಕೆಗಳ ಕೊರತೆ. ಕರಾವಳಿ ನಿಯಂತ್ರಣ ವಲಯ(Coastal Regulation Zone)ದಿಂದಾಗಿರುವ ಪ್ರವಾಸೋದ್ಯಮ ಅಭಿವೃದ್ಧಿಯ ತೊಡಕುಗಳನ್ನು ಸಹ ಕರಾವಳಿಯ ಅಭಿವೃದ್ಧಿಯ ದೃಷ್ಠಿಯಲ್ಲಿ ತಿದ್ದುಪಡಿ ಮಾಡುವ ಅಗತ್ಯವಿದೆ. ಅದನ್ನು ಕೇರಳ ಮತ್ತು ಗೋವಾ ರಾಜ್ಯದಲ್ಲಿ ಅದಾಗಲೇ ಮಾಡಿಸಿಕೊಂಡಿದ್ದಾರೆ. ಕರ್ನಾಟಕದಲ್ಲೂ ಅದಕ್ಕೊಂದು ಸಮಿತಿ ರಚಿಸಿ ಸಂಸದರ ನಿಯೋಗವನ್ನು ಕೇಂದ್ರಕ್ಕೆ ಕಳುಹಿಸುವ ಕೆಲಸವನ್ನು ಮಾಡಬೇಕಾಗಿದೆ ಅನ್ನುವ ನಿಷ್ಪಕ್ಷವಾದ ಮನವಿಯನ್ನು ಶಾಸಕ ಸುನಿಲ್ ಕುಮಾರ್ ಮಂಡಿಸಿರುವುದು ಶಾಸಕನೊಬ್ಬ ತನ್ನದೇ ಇತಿಮಿತಿಯಲ್ಲಿ ಚಿಂತಿಸದೆ ಕರಾವಳಿ ಜಿಲ್ಲೆಗಳ ಎಲ್ಲರೀತಿಯ ಅಭಿವೃದ್ಧಿಯ ಬೇಡಿಕೆಯಾಗಿ ಸಮಗ್ರವಾದ ವಿವರಗಳೊಡನೆ ಸದನದಲ್ಲಿ ಮನವಿ ಮಾಡಿರುವುದು ಬಹುಶಃ ಕರಾವಳಿ ಭಾಗದ ಎಲ್ಲ ಶಾಸಕರು,ರಾಜಕೀಯ ಮುಖಂಡರುಗಳು ಖುಷಿಪಟ್ಟಿದ್ದಾರೆ.
ಶಾಸಕ ವಿ. ಸುನಿಲ್ ಕುಮಾರ್ ಅವರು ಸದನದಲ್ಲಿ ಮಂಡಿಸಿದ ಮನವಿಯಲ್ಲಿ ಬಾಕಿ ಉಳಿದಂತೆ ಇತರ ಶಾಸಕರು ಕೂಡಾ ತಮ್ಮ ಕ್ಷೇತ್ರದ ಪರವಾಗಿ ಆಗಬೇಕಾಗಿರುವ,ಕರಾವಳಿ ಅಭಿವೃದ್ಧಿಗೇ ಸೇರಿಕೊಳ್ಳಬಹುದಾದ ಅನೇಕ ವಿಷಯಗಳ ಬಗ್ಯೆ ಸದನದಲ್ಲಿ ಮನವಿ ಮಾಡಿದ್ದಾರೆ.
ಕರಾವಳಿಯ ಶಾಸಕರು ಆ ರೀತಿಯ ಒಂದು ಒಗ್ಗಟ್ಟಿನಲ್ಲಿ ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ಸದನದಲ್ಲಿ ಸರಕಾರದ ಗಮನಸೆಳೆಯುವ ಕೆಲಸ ಮಾಡಿರುವುದು ಆ ಎಲ್ಲ ಶಾಸಕರ ಬಗ್ಯೆ ನಿಜಕ್ಕೂ ಹೆಮ್ಮೆ ಪಡುವಂಥದ್ದು.
ಕರಾವಳಿಯ ದಿಲ್ಲೆಗಳ ಸಮಗ್ರ ಅಭಿವೃದ್ಧಿಗೆ ಸರಿಯಾದ ರೂಪುರೇಷೆಯೊಂದು ರಚನೆಯಾಗುವಲ್ಲಿ ಶಾಸಕ ವಿ. ಸುನಿಲ್ ಕುಮಾರ್ ಅವರು ಬಹುದೊಡ್ಡ ಪಾತ್ರ ವಹಿಸಿದ್ದಾರೆ,ಕರಾವಳಿ ಭಾಗದ ಜನತೆಗೆ ಅದೊಂದು ಹೆಮ್ಮೆಯೇ ಹೌದು.
ಶಾಸಕ ವಿ. ಸುನಿಲ್ ಕುಮಾರ್ ಮತ್ತು ಇತರ ಎಲ್ಲ ಶಾಸಕರುಗಳಿಗೆ ಅಭಿನಂದನೆಗಳು.
–ವಿ. ಕೆ. ವಾಲ್ಪಾಡಿ





































